ಹೊಸ ಶಿಕ್ಷಣ ನೀತಿ : ಶಿಕ್ಷಣದ ಸಂಪೂರ್ಣ ಮಾರಾಟದ ನೀಲಿ ನಕ್ಷೆ! – ಎಐಡಿಎಸ್ಓ ಖಂಡನೆ

ಬೆಂಗಳೂರು : ಇಡೀ ದೇಶದಾದ್ಯಂತ ಪ್ರತಿರೋಧ ವ್ಯಕ್ತವಾಗುತ್ತಿದ್ದ ಹಿನ್ನಲೆಯಲ್ಲೇ ಶಿಕ್ಷಣ ತಜ್ಞರು, ಶಿಕ್ಷಕರು, ವಿದ್ಯಾರ್ಥಿ ಸಂಘಟನೆಗಳ ವಿರೋಧವನ್ನು ಕಿಂಚಿತ್ತು ಲೆಕ್ಕಿಸದೇ ಅಧಿಕಾರ ಪದಗ್ರಹಿಸಿದ ಕೂಡಲೇ ರಾಜ್ಯ ಬಿಜೆಪಿ ಸರ್ಕಾರವು ಏಕಾಯೇಕಿಯಾಗಿ ಹೊಸ ಶಿಕ್ಷಣ ನೀತಿಯನ್ನು ಜಾರಿಗೆ ತಂದು ಜ್ಞಾನಾರ್ಜನೆಯ ಕೇಂದ್ರಗಳಾಗಿದ್ದ ವಿಶ್ವವಿದ್ಯಾಲಯಗಳನ್ನು ಸರ್ಟಿಫಿಕೇಟ್ ಗಳನ್ನು ಮಾರಾಟಮಾಡುವ ವ್ಯಾಪಾರಿ ಕೇಂದ್ರಗಳನ್ನಾಗಿ ಮಾಡುವ ಮೂಲಕ ಕಾರ್ಪೋರೇಟ್ ಮನೆತನಗಳು ಶೈಕ್ಷಣಿಕ ರಂಗದಲ್ಲಿ ವಿಪರೀತದ ಲಾಭಗಳಿಸಲು ಸರ್ಕಾರವೇ ಮಣೆಹಾಕಿದೆ ಎಂದು ಎಐಡಿಎಸ್ಓ ಕರ್ನಾಟಕ ರಾಜ್ಯ ಸಮಿತಿ ಆರೋಪಿಸಿದೆ.

ಸಾಂಕ್ರಾಮಿಕದ ಸಂಕಷ್ಟಗಳ ನಡುವೆ ಶಿಕ್ಷಣ ತಜ್ಞರು, ವಿದ್ಯಾರ್ಥಿಗಳೊಂದಿಗೆ ಯಾವುದೇ ಪ್ರಜಾತಾಂತ್ರಿಕ ಚರ್ಚೆಯನ್ನು ನಡೆಸದೇ ಈ ಪ್ರಮಾಣದ ಆಮೂಲಾಗ್ರ ಬದಲಾವಣೆ ತಂದಿರುವುದನ್ನು ಎಐಡಿಎಸ್ಓ ಖಂಡಿಸಿದ್ದು,  ಉನ್ನತ ಶಿಕ್ಷಣ ಪರಿಷತ್ ಆಗಲಿ ಅಥವಾ ಸರ್ಕಾರವಾಗಲಿ ಶೈಕ್ಷಣಿಕ ವಿಷಯಗಳ ಕುರಿತು ವಿಶ್ವವಿದ್ಯಾಲಯಗಳಿಗೆ ನಿರ್ದೇಶನ ನೀಡುವುದು ಪ್ರಜಾತಾಂತ್ರಿಕ ಮೌಲ್ಯಗಳ ಆಧಾರದಲ್ಲಿ ತರವಲ್ಲ ! ಈ ಮೂಲಕ ಸರ್ಕಾರ ವಿಶ್ವವಿದ್ಯಾಲಯಗಳ ಶೈಕ್ಷಣಿಕ ಸ್ವಾಯತ್ತತೆಯ ಹರಣ ಮಾಡಿದೆ‌ ಎಂದು ಆರೋಪಿಸಿದೆ.

ಪದವಿ ಕೋರ್ಸ್ಗಳನ್ನು ಕ್ರೆಡಿಟ್ ಗಳಿಕೆಯ ಗೋಜಲಿಗೆ ತಳ್ಳಲಾಗಿದೆ. ಮೂರು ವಿಷಯಗಳನ್ನು ಓದುವ ಬದಲು ಒಂದು ಅಥವಾ ಎರಡು ವಿಷಯಗಳಿಗೆ ಮಾತ್ರವೇ ಪದವಿ ಕೋರ್ಸನ್ನು ಸೀಮಿತಗೊಳಿಸಲಾಗಿದೆ, ಇದರಿಂದಾಗಿ ಉಪನ್ಯಾಸಕರು ಹಾಗೂ ಅತಿಥಿ ಉಪನ್ಯಾಸಕರು ದೊಡ್ಡ ಪ್ರಮಾಣದಲ್ಲಿ ಕೆಲಸ ಕಳೆದುಕೊಳ್ಳಲಿದ್ದಾರೆ. ಕನ್ನಡ ಭಾಷೆಯ ಕಲಿಕೆಯನ್ನು ಒಂದು/ಎರಡು ವರ್ಷಕ್ಕೆ ಸೀಮಿತಗೊಳಿಸಿರುವುದರಿಂದ ಭಾಷಾ ಕಲಿಕೆ, ಬೆಳವಣಿಗೆ ಕುಂಟಿತಗೊಳ್ಳಲಿದೆ. 4ನೇ ವರ್ಷದ ಹಾನಸ್೯ ಪದವಿಯನ್ನು ಎಲ್ಲಾ ವಿಶ್ವವಿದ್ಯಾಲಯಗಳು ನಡೆಸಲೇಬೆಕಂತಿಲ್ಲ. 4ನೇ ವರ್ಷದ ಪದವಿ ಕೋಸ್೯ ನ ಸೌಲಭ್ಯ ಇದ್ದಲ್ಲಿ ವಿದ್ಯಾರ್ಥಿಗಳು ಪದವಿ ಪಡೆಯಬಹುದಂತೆ. ಅಂದರೆ ಸರ್ಕಾರವೇ ವಿದ್ಯಾರ್ಥಿಗಳನ್ನು ಖಾಸಗಿ ವಿಶ್ವವಿದ್ಯಾಲಯಗಳತ್ತ ತಳ್ಳುತ್ತಿದೆ. ಶೇಖಡ 40 ರಷ್ಟು ಕ್ರೆಡಿಟ್ ಗಳನ್ನು ಆನ್ಲೈನ್ ಮೂಲಕ ಪಡೆದುಕೊಳ್ಳಬಹುದು ಎಂದು ಹೇಳುವ ಮೂಲಕ ಜ್ಞಾನಾರ್ಜನೆಯ ಪ್ರಕ್ರಿಯೆಯನ್ನು ನಾಶಗೊಳಿಸಲಾಗುತ್ತಿದೆ.‌

ಆನ್ ಲೈನ್ ಶಿಕ್ಷಣ ಜ್ಞಾನಾರ್ಜನೆಗೆ ಪೂರಕವಾಗಿಲ್ಲ ಹಾಗೂ ಬಡ ವಿದ್ಯಾರ್ಥಿ ವಿರೋಧಿ ಎಂಬುದು ಲಾಕ್ ಡೌನ್ ಸಂದರ್ಭದಲ್ಲಿ ಸಾಬೀತಾದರೂ ಶಿಕ್ಷಣ ತಜ್ಞರ, ವಿದ್ಯಾರ್ಥಿ ಸಂಘಟನೆಗಳ ಆಂತಕವನ್ನು ಸಾರಾಸಗಟಾಗಿ ತಳ್ಳಿ ಹಾಕಿ ಸರ್ಕಾರ ಆನ್ ಲೈನ್ ಶಿಕ್ಷಣಕ್ಕೆ ಅಧಿಕೃತ ಹಸಿರು ನಿಶಾನೆ ತೋರಿಸಿರುವುದು ಅತ್ಯಂತ ಖಂಡನೀಯ. ಈ ನಡೆಯು ದೇಶದ ವಿಜ್ಞಾನ ಹಾಗೂ ಸಂಶೋಧನಾ ಬೆಳವಣಿಗೆಗೆ ಮಾರಕವಾಗಲಿದೆ. ಆನ್ ಲೈನ್ ಮೂಲಕ ಕ್ರೆಡಿಟ್ ಗಳಿಸುವ ಕುರಿತು ‘ಶೈಕ್ಷಣಿಕ ಖಾತೆ’, ‘ಜಮಾ’ ಎಂಬ ಪದಬಳಿಕೆ ಶೈಕ್ಷಣಿಕ ಸುತ್ತೋಲೆಯಲ್ಲಿ ಕಂಡುಬಂದಿರುವುದು ಸರ್ಕಾರದ ಒಳ ಉದ್ದೇಶವನ್ನು ಬಯಲುಗೊಳಿಸಿದೆ. ಹೊಸ ಶಿಕ್ಷಣ ನೀತಿಯನ್ನು ಕರ್ನಾಟಕದಲ್ಲಿ ಜಾರಿಗೊಳಿಸುತ್ತಿರುವ ಪರಿ ಶಿಕ್ಷಣದ ಸಂಪೂರ್ಣ ಮಾರಾಟದ ನೀಲಿನಕ್ಷೆಯಾಗಿದೆ ಎಂಬುದು ಎಐಡಿಎಸ್ಒನ ವಾದವಾಗಿದೆ.

ಅತ್ಯಂತ ವಿದ್ಯಾರ್ಥಿ ವಿರೋಧಿ, ವೈಜ್ಞಾನಿಕ- ಪ್ರಜಾತಾಂತ್ರಿಕ ಶಿಕ್ಷಣಕ್ಕೆ ಮಾರಕವಾಗಿರುವ, ಕಾರ್ಪೋರೇಟ್ ಪರ-ಹೊಸ ಶಿಕ್ಷಣ ನೀತಿಯನ್ನು ರಾಜ್ಯದ ವಿದ್ಯಾರ್ಥಿ ಸಮೂಹ, ಶಿಕ್ಷಣ ಪ್ರಿಯರು ಅತ್ಯುಗ್ರವಾಗಿ ಖಂಡಿಸಬೇಕು. ಸರ್ಕಾರದ ಅಪ್ರಜತಾಂತ್ರಿಕ ವಿದ್ಯಾರ್ಥಿ ವಿರೋಧಿ ನಡೆಯ ವಿರುದ್ಧ ಹೋರಾಟಕ್ಕೆ ವಿದ್ಯಾರ್ಥಿ ಸಮೂಹ ಸನ್ನದ್ಧರಾಗಬೇಕು ಎಂದು ಎಐಡಿಎಸ್ಓ ಕರೆ‌ನೀಡಿದೆ.

Donate Janashakthi Media

Leave a Reply

Your email address will not be published. Required fields are marked *