ನವ ಉದಾರವಾದ ಮತ್ತು ಅದರ ಮೊದಲು – ಜಿಡಿಪಿ ದತ್ತಾಂಶ ಮರೆಮಾಚುವ ಸತ್ಯಾಂಶ

ನವ ಉದಾರವಾದವು ಪ್ರವರ್ಧಮಾನಕ್ಕೆ ಬರುವ ಮೊದಲು ಕಳಾಹೀನವಾಗಿದ್ದ ಸ್ವತಂತ್ರ ಭಾರತದ ಅರ್ಥವ್ಯವಸ್ಥೆಯು ಪ್ರಸಕ್ತ ನವ ಉದಾರವಾದಿ ಆಳ್ವಿಕೆಯಲ್ಲಿ ಪ್ರಕಾಶಮಾನವಾಗಿ ಹೊರಹೊಮ್ಮಿದೆ ಎನ್ನುತ್ತಾರೆ ಜಿಡಿಪಿ-ಪ್ರತಿಪಾದಕರು. ಆದರೆ ನವ ಉದಾರವಾದಿ ಆಳ್ವಿಕೆಯಲ್ಲಿ ವರಮಾನಗಳ ಹಂಚಿಕೆಯು ಬಹಳವಾಗಿ ಹದಗೆಟ್ಟಿದೆ ಎಂಬುದರ ಹಿನ್ನೆಲೆಯಲ್ಲಿ ಬಹು ಮುಖ್ಯವಾದ ಒಂದು ಪ್ರಶ್ನೆಯೆಂದರೆ, ಇಂತಹ ಆಳ್ವಿಕೆಯಲ್ಲಿ ಬಹುಪಾಲು ಜನರ ಸ್ಥಿತಿ-ಗತಿಯು ಒಂದರ್ಥದಲ್ಲಿ ಸಂಪೂರ್ಣವಾಗಿ ಕೆಟ್ಟಿದೆಯಲ್ಲವೇ ಎಂಬುದು. ನವ ಉದಾರವಾದಿ ಅವಧಿಯಲ್ಲಿ ಪೌಷ್ಟಿಕಾಂಶದ ಕೊರತೆ ಹೆಚ್ಚಿರುವುದು ಕಾಣ ಬರುತ್ತದೆ, ಆಮೂಲಕ ಸಾಮಾನ್ಯ ಜನರ ಜೀವನ ಪರಿಸ್ಥಿತಿ ಉತ್ತಮಗೊಂಡಿಲ್ಲ ಎಂಬುದೂ ಕಾಣಬರುತ್ತದೆ. ಜಿಡಿಪಿಯ ದತ್ತಾಂಶವನ್ನು ಉಲ್ಲೇಖಿಸುವ ಮೂಲಕ ಈ ಪ್ರಾಥಮಿಕ ಸಂಗತಿಯನ್ನು ಅಲ್ಲಗಳೆಯುವುದು ಸಾಧ್ಯವಿಲ್ಲ.

-ಪ್ರೊ.ಪ್ರಭಾತ್ ಪಟ್ನಾಯಕ್
-ಅನು: ಕೆ.ಎಂ.ನಾಗರಾಜ್

ಎಲ್ಲ ಟೀಕೆಗಳೂ ಮತ-ಧರ್ಮದ ಟೀಕೆಯೊಂದಿಗೆ ಪ್ರಾರಂಭವಾಗಬೇಕು ಎಂದು ಕಾರ್ಲ್ ಮಾರ್ಕ್ಸ್ ಒಮ್ಮೆ ಹೇಳಿದ್ದರು. ಅವರ ಈ ಹೇಳಿಕೆಯನ್ನು ಪ್ರಸ್ತುತ ಆರ್ಥಿಕ ಸಂದರ್ಭದಲ್ಲಿ ಅನ್ವಯಿಸುವುದಾದರೆ, ಎಲ್ಲ ಟೀಕೆಗಳೂ ಜಿಡಿಪಿಯ ಟೀಕೆಯೊಂದಿಗೆ ಪ್ರಾರಂಭವಾಗಬೇಕು ಎಂದು ಹೇಳಬಹುದು. ಪರಿಕಲ್ಪನೆಯಲ್ಲಿ ಮತ್ತು ಸಂಖ್ಯಾಶಾಸ್ತ್ರೀಯವಾಗಿ ಸಂಶಯಾಸ್ಪದವಾದ ಜಿಡಿಪಿಯ ಈ ಮಾಪನವು ಶೋಷಣೆಯ ವಿದ್ಯಮಾನವನ್ನಂತೂ ಗ್ರಹಿಸಲಾರದು. ಉದಾಹರಣೆಗೆ, ಒಬ್ಬ ಮೊಘಲ್ ಚಕ್ರವರ್ತಿಯ ಮತ್ತು ಅವನ ಆಸ್ಥಾನದ ಶ್ರೀಮಂತ ವರ್ಗದವರ ವರಮಾನವನ್ನು ಅವರು ಸಲ್ಲಿಸಿದ ಸೇವೆಗಳಿಗಾಗಿ ಸಂದ ಪ್ರತಿಫಲ ಎಂದು ಪರಿಗಣಿಸಿ ಅದನ್ನು ದೇಶದ ಒಟ್ಟು ಉತ್ಪಾದನೆಗೆ ಸೇರಿಸಿ ಅದನ್ನು ನಿರ್ಲಜ್ಜವಾಗಿ ಎರಡೆರಡು ಬಾರಿ ಎಣಿಸಿದರೆ ಹೇಗಿರುತ್ತದೆ? ಆದಾಗ್ಯೂ, ನವ ಉದಾರವಾದದ ಸಮರ್ಥಕರು ಈ ಹಂತದ ಅಭಿವೃದ್ಧಿಯ ಚಿತ್ರಣವನ್ನು ಸುಂದರಗೊಳಿಸಲು ಈ ಪರಿಯ ಲೆಕ್ಕಾಚಾರವನ್ನೇ ಅನುಸರಿಸುತ್ತಾರೆ.

ನವ ಉದಾರವಾದದ ಆಳ್ವಿಕೆಯಲ್ಲಿ ಜಿಡಿಪಿಯ ಬೆಳವಣಿಗೆ ದರವು ಮೊದಲಿದ್ದ ‘ಡಿರಿಜಿಸ್ಟೆ(ನಿಯಂತ್ರಣ) ನೀತಿಗಳ ಆಳ್ವಿಕೆಯಲ್ಲಿ ಇದ್ದುದಕ್ಕಿಂತ ಹೆಚ್ಚು ಉನ್ನತವಾಗಿದೆ ಎಂಬುದು ಅವರ ದಾವೆ. ಅಂದರೆ, ನವ ಉದಾರವಾದವು ಪ್ರವರ್ಧಮಾನಕ್ಕೆ ಬರುವ ಮೊದಲು ಕಳಾಹೀನವಾಗಿದ್ದ ಸ್ವತಂತ್ರ ಭಾರತದ ಅರ್ಥವ್ಯವಸ್ಥೆಯು ಈ ಹಿಂದಿನ ನಾಲ್ಕು ದಶಕಗಳ ನವ ಉದಾರವಾದಿ ಆಳ್ವಿಕೆಯಲ್ಲಿ ಪ್ರಕಾಶಮಾನವಾಗಿ ಹೊರಹೊಮ್ಮಿದೆ ಎನ್ನುತ್ತಾರೆ.

ಒಮ್ಮೆ ನಾನು ಭಾಗವಹಿಸಿದ ಸಮ್ಮೇಳನ ಒಂದರಲ್ಲಿ ಐಎಂಎಫ್‌ನ ಆಗಿನ ವ್ಯವಸ್ಥಾಪಕ ನಿರ್ದೇಶಕರು, ನಾನು ಮತ್ತು ನನ್ನ ಒಬ್ಬ ಸಹೋದ್ಯೋಗಿ ಜಂಟಿಯಾಗಿ ಬರೆದ ಒಂದು ಲೇಖನವನ್ನು ಟೀಕಿಸುತ್ತಾ ಜಿಡಿಪಿಯ ವಿಷಯವನ್ನು ಪ್ರಸ್ತಾಪಿಸದೆ ಅದೇ ದಾವೆಯನ್ನು ಮಂಡಿಸಿದರು. ಅರವತ್ತು ಮತ್ತು ಎಪ್ಪತ್ತರ ದಶಕದಲ್ಲಿ ಭಾರತದ ರಸ್ತೆಗಳಲ್ಲಿ ಬೇಸರ ತರುವ ಅಂಬಾಸಿಡರ್ ಮತ್ತು ಫಿಯೆಟ್ ಕಾರುಗಳ ಮಂಕಾದ ಒಂದು ನೋಟ ಮಾತ್ರ ಲಭ್ಯವಿತ್ತು. ಆದರೆ, ನವ ಉದಾರವಾದಿ ಆರ್ಥಿಕ ನೀತಿಗಳು ಜಾರಿಗೆ ಬಂದ ನಂತರ ಮನಸೆಳೆಯುವ ಕಾರುಗಳಿಂದ ರಸ್ತೆಗಳು ತುಂಬಿವೆ ಎಂಬುದು ಅವರ ವಾದವಾಗಿತ್ತು! ಒಬ್ಬ ಸುಪ್ರಸಿದ್ಧ ಅರ್ಥಶಾಸ್ತ್ರಜ್ಞ ರಾಗಿದ್ದರೂ ಸಹ, ಸಮಾಜ ಕಲ್ಯಾಣ ಎಂದರೇನು ಎಂಬುದನ್ನೇ ಅವರು ಅರ್ಥಮಾಡಿಕೊಂಡಂತಿರಲಿಲ್ಲ.

ಇದನ್ನೂ ಓದಿ: ಅಂಗನವಾಡಿ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಿ ICDS ಪ್ರತ್ಯೇಕ ನಿರ್ದೇಶನಾಲಯ ಮಾಡಲು ಒತ್ತಾಯಿಸಿ ಪ್ರತಿಭಟನಾ ಪ್ರದರ್ಶನ

ಆದರೆ ಈ ಜಿಡಿಪಿ-ಪ್ರತಿಪಾದಕರನ್ನು ಹೆಚ್ಚು ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ. ವರಮಾನದ ಹಂಚಿಕೆಯನ್ನು ಗಣನೆಗೆ ತೆಗೆದುಕೊಳ್ಳದೆ ಜಿಡಿಪಿಯು ಸಮಾಜದ ಕಲ್ಯಾಣವನ್ನು ಸೂಚಿಸುವುದಿಲ್ಲ ಎಂಬುದಷ್ಟೇ ಇಲ್ಲಿ ವಿಷಯವಲ್ಲ. ನವ ಉದಾರವಾದಿ ಆಳ್ವಿಕೆಯಲ್ಲಿ ವರಮಾನಗಳ ಹಂಚಿಕೆಯು ಬಹಳವಾಗಿ ಹದಗೆಟ್ಟಿದೆ ಎಂದು ನಮಗೆ ತಿಳಿದ ವಿಷಯವೇ. ಆದರೆ, ಬಹು ಮುಖ್ಯವಾದ ಒಂದು ವಿಷಯವೆಂದರೆ, ನವ ಉದಾರವಾದಿ ಆಳ್ವಿಕೆಯಲ್ಲಿ ಬಹುಪಾಲು ಜನರ ಸ್ಥಿತಿ-ಗತಿಯು ಒಂದರ್ಥದಲ್ಲಿ ಸಂಪೂರ್ಣವಾಗಿ ಕೆಟ್ಟಿಲ್ಲವೇ ಎಂಬುದು. ಕೆಟ್ಟಿದೆ ಎಂಬುದೇ ನನ್ನ ವಾದ.

ಹೇಳಿಕೊಳ್ಳುವ ಸಾಧನೆಯೇ ಅಲ್ಲ

ನವ-ಉದಾರವಾದೀ ವರ್ಷಗಳಲ್ಲಿ ಜಿಡಿಪಿಯ ಬೆಳವಣಿಗೆಯ ವೇಗವನ್ನೂ ಕೂಡ ಬಹಳವಾಗಿ ಉತ್ಪ್ರೇಕ್ಷಿಸಲಾಗಿದೆ. ಅದರಿಂದಾಗಿಯೇ ಬೆಳವಣಿಗೆಯ ದರವನ್ನೂ ಉತ್ಪ್ರೇಕ್ಷಿಸಲಾಗುತ್ತಿದೆ ಎಂದು ಹಲವು ಸಂಶೋಧಕರು ವಾದಿಸಿದ್ದಾರೆ. ಭಾರತ ಸರ್ಕಾರದ ಮಾಜಿ ಮುಖ್ಯ ಆರ್ಥಿಕ ಸಲಹೆಗಾರರಾದ ಅರವಿಂದ್ ಸುಬ್ರಮಣಿಯನ್ ಅವರು 2011-12 ಮತ್ತು 2016-17ರ ನಡುವೆ ಭಾರತದ ಬೆಳವಣಿಗೆಯ ವಾರ್ಷಿಕ ದರವನ್ನು ಶೇ. 2.5ರಷ್ಟು ಅತಿ-ಅಂದಾಜು ಮಾಡಲಾಗಿದೆ ಎಂದು ವಾದಿಸಿದ್ದಾರೆ. ಏಕೆಂದರೆ 2011-12ರಲ್ಲಿ ಪರಿಚಯಿಸಲಾದ ಜಿಡಿಪಿಯ ಹೊಸ ಸರಣಿಗೆ ಬಳಸಲಾದ ಅಂದಾಜಿನ ವಿಧಾನವು ದೋಷಪೂರಿತವಾಗಿದೆ.

ಆದ್ದರಿಂದ, ಈವರೆಗೆ ನಿರಂತರವಾಗಿ ಕೊಟ್ಟಿರುವ ಅಂಕಿ ಅಂಶಗಳು ಅತಿ- ಅಂದಾಜಿನಿಂದ ಕೂಡಿವೆ. ಹಾಗಾಗಿ, ನವ ಉದಾರವಾದಿ ಯುಗದ ಜಿಡಿಪಿ ಬೆಳವಣಿಗೆಯ ದರವು, ಅದರ ಹಿಂದಿನ ನಿಯಂತ್ರಣ ನೀತಿಗಳ ಅವಧಿಗೆ ಹೋಲಿಸಿದರೆ, ಶೇ. 1-ಶೇ.1.5 ಗಿಂತ ಹೆಚ್ಚಿಲ್ಲ ಎಂದು ಹೇಳಬಹುದು. ಅಂದರೆ ಈ ಮಟ್ಟದ ಬೆಳವಣಿಗೆಯಲ್ಲಿ, ನವ ಉದಾರವಾದೀ ಅವಧಿಯಲ್ಲಿ ನಿರ್ವಿವಾದವಾಗಿ ಹೆಚ್ಚುತ್ತಿರುವ ವರಮಾನದ ಅಸಮಾನತೆಯನ್ನು ಗಣನೆಗೆ ತಗೊಂಡರೆ, ಜನ ಸಾಮಾನ್ಯರ ವರಮಾನವು
ವೃದ್ಧಿಸಿಯೇ ಇಲ್ಲ ಎಂದೇ ಅರ್ಥ. ಜಿಡಿಪಿಯ ಲೆಕ್ಕದಲ್ಲಿ ನೋಡಿದರೂ ಸಹ, ಈ ಅವಧಿಯಲ್ಲಿ ಸಾಮಾನ್ಯ ಜನರಿಗೆ ಸಂಬಂಧಿಸಿದಂತೆ ಹೇಳುವುದಾದರೆ, ಅದು ಹೇಳಿಕೊಳ್ಳುವ ಸಾಧನೆಯೇ ಅಲ್ಲ. ಇನ್ನೊಂದೆಡೆಯಲ್ಲಿ, ವರಮಾನಗಳ ಅಸಮತೆಯ ಏರಿಕೆಯು ದೇಶದ ಪ್ರಜಾಪ್ರಭುತ್ವ ಸಂಸ್ಥೆಗಳು ಮತ್ತು ಸಮತ್ವದ ಮೌಲ್ಯಗಳನ್ನು ಕೂಡ ದುರ್ಬಲಗೊಳಿಸಿದೆ.

ಜೊತೆಗೆ, ಜನ ಜೀವನವು ಸಂಪೂರ್ಣವಾಗಿ ಹದಗೆಟ್ಟಿರುವ ಬಗ್ಗೆ ನೇರ ಪುರಾವೆಗಳೂ ನಮ್ಮ ಮುಂದಿವೆ. ಇಪ್ಪತ್ತನೇ ಶತಮಾನದ ಆರಂಭದಲ್ಲಿ, ಬ್ರಿಟಿಷ್ ಭಾರತದಲ್ಲಿ ಆಹಾರ ಧಾನ್ಯದ ವಾರ್ಷಿಕ ತಲಾ ಲಭ್ಯತೆಯು ಸುಮಾರು 200 ಕೆ.ಜಿಯಷ್ಟಿತ್ತು. ಇದು ಸ್ವಾತಂತ್ರ‍್ಯದ ವೇಳೆಗೆ ಸುಮಾರು 137 ಕೆಜಿಗೆ ಕುಸಿಯಿತು. ಅಂದರೆ, ವಸಾಹತುಶಾಹಿ ಆಳ್ವಿಕೆಯ ಕೇವಲ ಅರ್ಧ ಶತಮಾನದ ಅವಧಿಯಲ್ಲಿ ಶೇ. 31ರಷ್ಟು ಕುಸಿಯಿತು. ಸ್ವಾತಂತ್ರ‍್ಯ ಬಂದ ನಂತರದ ಆರಂಭದ ನಿಯಂತ್ರಣ ನೀತಿಗಳ(ಡಿರಿಜಿಸ್ಟ್) ಅವಧಿ ಬಹಳ ಅಪಹಾಸ್ಯಕ್ಕೆ ಒಳಗಾಗಿದೆ. ಆದರೆ ಈ ಅವಧಿಯಲ್ಲಿ ಸರ್ಕಾರದ ದೃಢ ಪ್ರಯತ್ನದಿಂದ, ವಾರ್ಷಿಕ ತಲಾ ಲಭ್ಯತೆಯನ್ನು 1991ರ ವೇಳೆಗೆ 186.2 ಕೆಜಿಗೆ ಏರಿಸಲಾಯಿತು. ಈ ಹೆಚ್ಚಳವು ಗಣನೀಯವಾಗಿದ್ದರೂ ಸಹ, ಶತಮಾನದ ಆರಂಭದಲ್ಲಿದ್ದ ಮಟ್ಟಕ್ಕೆ ಏರಲಿಲ್ಲ.

ನವ ಉದಾರವಾದಿ ನೀತಿಗಳನ್ನು ಅಳವಡಿಸಿಕೊಂಡ ನಂತರ, ಆರಂಭಿಕವಾಗಿ 2008ರವರೆಗಿನ ಒಂದು ದೀರ್ಘಾವಧಿಯ ಕುಸಿತದ ನಂತರ ತಲಾವಾರು ಲಭ್ಯತೆಯು 2019-20ರ ವೇಳೆಗೆ 183.14 ಕೆಜಿಗೆ ಏರಿತು. 1991ರಲ್ಲಿ ತಲುಪಿದ ಮಟ್ಟವನ್ನು (186.2 ಕೆಜಿ) ಮೂರು ದಶಕಗಳ ನಂತರವೇ ದಾಟಲಾಯಿತು. 2020-21ರಲ್ಲಿ 186.77 ಕೆಜಿ ಮಟ್ಟವನ್ನು ತಲುಪಿ, 2021-22ರಲ್ಲಿ 187.83 ಕೆಜಿಗೆ ತಲುಪಿ ಒಂದು ಸಣ್ಣ ಪ್ರಮಾಣದ ಏರಿಕೆಯನ್ನು ಕಂಡಿತು. ಆದ್ದರಿಂದ, ಜನ ಕಲ್ಯಾಣದ ಒಂದು ಪ್ರಮುಖ ಸೂಚ್ಯಂಕದ ಪರಿಭಾಷೆಯಲ್ಲಿ ಹೇಳುವುದಾದರೆ, ನವ ಉದಾರವಾದಿ ಅವಧಿಯು ಸಂಪೂರ್ಣ ಸ್ಥಗಿತತೆಯ ಅವಧಿ ಎಂದು ಹೇಳಬಹುದು. 2022-23ರಲ್ಲಿ ತಲಾವಾರು ಲಭ್ಯತೆಯಲ್ಲಿ ಸ್ವಲ್ಪ ಸುಧಾರಣೆಯಾಗಿದೆ, ನಿಜ. ಅದಕ್ಕೆ ಪ್ರಮುಖ ಕಾರಣವೆಂದರೆ ಸರ್ಕಾರಿ ದಾಸ್ತಾನುಗಳ ಇಳಿಕೆಯೇ (ಬಹುಶಃ 5 ಕೆಜಿ ಧಾನ್ಯಗಳನ್ನು ಕೋವಿಡ್ ಪರಿಹಾರವಾಗಿ ಉಚಿತವಾಗಿ ಒದಗಿಸಿದ್ದರಿಂದಾಗಿ; ಅದರಲ್ಲಿ ಸಾಮಾನ್ಯ ಜನರನ್ನು ತಲುಪಿದ್ದು ನಿಜಕ್ಕೂ ಎಷ್ಟು ಎಂಬುದು ಅಸ್ಪಷ್ಟವಾಗಿಯೇ ಉಳಿದಿದೆ ಎಂಬುದು ಬೇರೆ ಮಾತು). ಅದೇನೇ ಇರಲಿ, ಈ ಪರಿಹಾರವು ಸ್ವಾಗತಾರ್ಹವೇ. ಆದರೆ, ಅದೊಂದು ಆರ್ಥಿಕ ಸಾಧನೆಯೇನಲ್ಲ.

ಇಲ್ಲಿಯವರೆಗೆ ನಾವು ವಿವಿಧ ಜನ ವಿಭಾಗಗಳಿಗೆ ಎಷ್ಟೆಷ್ಟು ಆಹಾರ ಧಾನ್ಯಗಳ ಹಂಚಿಕೆಯಾಯಿತು ಎಂಬುದರ ವಿವರಗಳ ಗೋಜಿಗೆ ಹೋಗದೆ, ಇಡೀ ಜನಸಂಖ್ಯೆಗೆ ಒಟ್ಟಾರೆಯಾಗಿ ಲಭಿಸಿದ ಅಥವಾ ಒಂದು ಸರಾಸರಿಯ ಚಿತ್ರಣವನ್ನು ನೋಡಿದೆವು. ಇಡೀ ಜನಸಂಖ್ಯೆಯು ಬಳಸುತ್ತಿದ್ದ ಆಹಾರ ಧಾನ್ಯದ ತಲಾವಾರು ಪ್ರಮಾಣವೇ ಸ್ಥಗಿತವಾಗಿದ್ದ ಸನ್ನಿವೇಶದಲ್ಲಿ ಮತ್ತು ವರಮಾನದ ಹಂಚಿಕೆಯು ಹದಗೆಡುತ್ತಾ ಹೋದ ಸನ್ನಿವೇಶದಲ್ಲಿ, ಉನ್ನತ ವರಮಾನದ ಜನರ ತಲಾವಾರು ಆಹಾರ ಧಾನ್ಯಗಳ ನೇರ ಮತ್ತು ಪರೋಕ್ಷ ಬಳಕೆಯು ಏರಿಕೆಯಾಗಿ, ಬಡ ಜನರ ಆಹಾರ ಧಾನ್ಯಗಳ ತಲಾವಾರು ಬಳಕೆಯು ಇಳಿದಿರಲೇಬೇಕು. ಅಂದರೆ, ಬಡವರು ಪೌಷ್ಟಿಕಾಂಶದ ಅಭಾವದಿಂದ ಬಳಲುತ್ತಿದ್ದರು.

ಗ್ರಾಮೀಣ ಬಡತನದ ಗಾತ್ರದಲ್ಲಿ ಹೆಚ್ಚಳ

ಇದನ್ನು ದೃಢೀಕರಿಸಲು ಪುರಾವೆಗಳು ಸಿಗುತ್ತವೆ. ಹಿಂದಿನ ಯೋಜನಾ ಆಯೋಗವು 1970ರ ದಶಕದಲ್ಲಿ ಬಡತನವನ್ನು ವ್ಯಾಖ್ಯಾನಿಸುವ ಮಾನದಂಡವಾಗಿ ಗ್ರಾಮೀಣ ಭಾರತದ ಪ್ರತಿ ವ್ಯಕ್ತಿಗೆ ದಿನಕ್ಕೆ 2200 ಕ್ಯಾಲೊರಿಗಳ ಸೇವನೆಯ ಕನಿಷ್ಟ ಬಳಕೆಯನ್ನು ಮತ್ತು ನಗರ ಭಾರತದ ಪ್ರತಿ ವ್ಯಕ್ತಿಗೆ ದಿನಕ್ಕೆ 2100 ಕ್ಯಾಲೊರಿಗಳ ಸೇವನೆಯ ಕನಿಷ್ಟ ಬಳಕೆಯನ್ನು ನಿಗದಿಪಡಿಸಿತ್ತು. ಈ ವ್ಯಾಖ್ಯಾನದ ಪ್ರಕಾರವಾಗಿ ನಾವು ಗ್ರಾಮೀಣ ಭಾರತದ ಪರಿಸ್ಥಿತಿಯನ್ನು ಪರಿಗಣಿಸೋಣ: ದೈನಂದಿನ 2200 ಕ್ಯಾಲೊರಿಗಳಿಗಿಂತ ಕಡಿಮೆ ಸೇವಿಸುತ್ತಿದ್ದವರ ಸಂಖ್ಯೆಯು 1973-74ರಲ್ಲಿ ಶೇ. 56.4ರಷ್ಟಿತ್ತು ಮತ್ತು 1993-94ರಲ್ಲಿ ಇದೇ ಸಂಖ್ಯೆಯು ಶೇ. 58ರಷ್ಟಿತ್ತು. ಅಂದರೆ, 1991ರಲ್ಲಿ ನವ ಉದಾರವಾದ ನೀತಿಗಳು ಜಾರಿಗೆ ಬರುವ ಹಿಂದಿನ ಎರಡು ದಶಕಗಳ ಅವಧಿಯಲ್ಲಿ ಬಡತನದ ಅನುಪಾತವು ಸ್ಥಿರವಾಗಿತ್ತು. ಇದೊಂದು ಹೇಳಿಕೊಳ್ಳುವಂತಹ ವಿಷಯವೇನಲ್ಲ. ಆದರೆ, ಕೊನೆಯ ಪಕ್ಷ ಬಡತನ ಹದಗೆಡಲಿಲ್ಲ ಎಂದೇನೋ ಹೇಳಬಹುದು.

ಇದಕ್ಕೆ ವ್ಯತಿರಿಕ್ತವಾಗಿ, 1993-94 ಮತ್ತು 2017-18ರ ನಡುವೆ (ಇವೆರಡೂ ದೊಡ್ಡ ಮಾದರಿ ಎನ್‌ಎಸ್‌ಎಸ್ ಸಮೀಕ್ಷೆಯ ವರ್ಷಗಳು) ಆಹಾರದ ಮೇಲಿನ ತಲಾವಾರು ನೈಜ ಖರ್ಚು ಇಳಿಯಿತು ಮತ್ತು ಗ್ರಾಮೀಣ ಭಾರತದಲ್ಲಿ ದಿನಕ್ಕೆ 2200 ಕ್ಯಾಲೊರಿಗಳಿಗಿಂತ ಕಡಿಮೆ ಸೇವಿಸುವವರ ಸಂಖ್ಯೆಯು ಶೇ. 58ರಿಂದ ಶೇ. 80ಕ್ಕಿಂತಲೂ ಹೆಚ್ಚಿನ ಪ್ರಮಾಣಕ್ಕೆ ಏರಿತು (ಇಲ್ಲಿ ಲಭ್ಯವಿರುವ ಪೌಷ್ಟಿಕಾಂಶದ ಸೇವನೆಯ ಅಂಕಿ ಅಂಶವನ್ನು ಬಿಡುಗಡೆ ಮಾಡಲು ಸರ್ಕಾರ ನಿರಾಕರಿಸಿರುವುದರಿಂದ, 2017-18ರ ಸಮೀಕ್ಷೆಯ ಬಗ್ಗೆ ಒಂದು ವಿಶ್ವಾಸಾರ್ಹ ಅಂದಾಜನ್ನು ಬಳಸಿಕೊಳ್ಳಲಾಗಿದೆ).

2017-18ರ ಸಮೀಕ್ಷೆಯ ಫಲಿತಾಂಶವು ಎಷ್ಟು ನಿರಾಶಾದಾಯಕವಾಗಿತ್ತು ಎಂದರೆ, ಸರ್ಕಾರವು ಸಾರ್ವಜನಿಕ ಅವಗಾಹನೆಯಿಂದ ಸಂಬಂಧಿಸಿದ ಅಂಕಿ ಅಂಶಗಳನ್ನು ಹಿಂಪಡೆಯಿತು ಮಾತ್ರವಲ್ಲ, ಅಂಕಿ ಅಂಶಗಳ ಸಂಗ್ರಹಣೆಯ ವಿಧಾನವನ್ನೇ ಬದಲಿಸಿತು. ಹಾಗಾಗಿ, ತದನಂತರದ ಎನ್‌ಎಸ್‌ಎಸ್ ಸಮೀಕ್ಷೆಯ ಫಲಿತಾಂಶಗಳನ್ನು ಹಿಂದಿನ ಎನ್‌ಎಸ್‌ಎಸ್ ಸಮೀಕ್ಷೆಗಳೊಂದಿಗೆ ಹೋಲಿಸಲಾಗದು. ಈ ರೀತಿಯಲ್ಲಿ, ಜಿಡಿಪಿ- ಪ್ರತಿಪಾದಕರ ದಾವೆಗಳಿಗೆ ವ್ಯತಿರಿಕ್ತವಾಗಿ, ನವ ಉದಾರವಾದೀ ಅವಧಿಯು ಹಿಂದಿನ ಯೋಜನಾ ಆಯೋಗದ ವ್ಯಾಖ್ಯಾನದ ಪ್ರಕಾರ ಗ್ರಾಮೀಣ ಬಡತನದ ಗಾತ್ರದಲ್ಲಿ ಹೆಚ್ಚಳವನ್ನು ಕಂಡಿದೆ.

ಈ ವಾದಕ್ಕೆ ಎದುರಾಗಿ, ನವ ಉದಾರವಾದಿ ಸಮರ್ಥಕರ ವಾದ ಹೀಗಿದೆ: ಬಹಳಷ್ಟು ಗ್ರಾಮೀಣ ಮಂದಿ ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುತ್ತಿದ್ದಾರೆ. ಆಧುನಿಕ ಆಸ್ಪತ್ರೆಗಳ ಸೌಲಭ್ಯಗಳನ್ನು ಪಡೆಯುತ್ತಿದ್ದಾರೆ. ಸೆಲ್ ಫೋನ್‌ಗಳನ್ನು ಬಳಸುತ್ತಿದ್ದಾರೆ. ಹಾಗಾಗಿ ಅವರು ಆಹಾರ ಧಾನ್ಯಗಳ ಬಗ್ಗೆ ಕಾಳಜಿ ವಹಿಸುವುದಿಲ್ಲ. ಇವೆಲ್ಲವೂ ಅವರ ಅಭಿರುಚಿ ಬದಲಾಗಿದೆ ಮತ್ತು ಅವರು ಆಧುನಿಕ ಜೀವನಶೈಲಿಯನ್ನು ಬಯಸುತ್ತಾರೆ ಎಂಬುದನ್ನು ತೋರಿಸುತ್ತದೆ. ಆದ್ದರಿಂದ ಕ್ಯಾಲೋರಿಗಳ ಕಡಿಮೆ ಸೇವನೆಯು ಅವರ ಸ್ವಯಂಪ್ರೇರಿತ ನಿರ್ಧಾರವಾಗಿದೆ, ಇದು ಅವರ ಜೀವನ ಮಟ್ಟ ಉತ್ತಮಗೊಂಡಿದೆ ಎಂಬ ಸಂಗತಿಯಿಂದ ನಮ್ಮ ಗಮನವನ್ನು ಬೇರೆಡೆಗೆ ತಿರುಗಿಸಬಾರದು ಎಂದು ಅವರು ಹೇಳುತ್ತಾರೆ.

ಆಹಾರ ಧಾನ್ಯಗಳು ಸ್ಥಿತಿ-ಸೂಚಕ ವಸ್ತುಗಳು

ಅವರ ಈ ವಾದವನ್ನು ಈ ಕೆಲವು ಅಂಶಗಳ ಕಾರಣದಿಂದ ಒಪ್ಪಲಾಗದು: ಜನರ ಬಳಕೆಯ ಬುಟ್ಟಿಯಲ್ಲಿ ಸಾಮಾನ್ಯವಾಗಿ ಬಳಕೆಯನ್ನು ಕಡಿಮೆ ಮಾಡಲು ಸಾಧ್ಯವಿಲ್ಲದ ಸರಕುಗಳಿರುತ್ತವೆ. ಮತ್ತು ಬಳಕೆಯನ್ನು ಕಡಿಮೆ ಮಾಡಿದರೆ ತಕ್ಷಣವೇ ದುಷ್ಪರಿಣಾಮಗಳನ್ನು ಬೀರದ ಸರಕುಗಳು ಇರುತ್ತವೆ (ದೀರ್ಘಾವಧಿಯಲ್ಲಿ, ಇವು ಹಾನಿ ಉಂಟುಮಾಡುವಂತವುಗಳೇ). ಅವುಗಳ ಬಳಕೆಯನ್ನು ಕಡಿಮೆ ಮಾಡಬಹುದು. ಆಹಾರದ ಬಳಕೆ ಈ ವಿಧಕ್ಕೆ ಸೇರಿದ್ದು. ಆದರೆ ಕ್ಯಾನ್ಸರ್ ಶಸ್ತ್ರಚಿಕಿತ್ಸೆಯನ್ನು ಅಥವಾ ಚಿಕಿತ್ಸೆಯನ್ನು ಮುಂದೂಡಲಾಗದು. ಇದು ಮೊದಲನೇ ವಿಧಕ್ಕೆ ಸೇರುತ್ತದೆ. ಇಷ್ಟೇ ಅಲ್ಲ, ವೆಚ್ಚವನ್ನು ಕಡಿಮೆ ಮಾಡಲಾಗದ ಅಥವಾ ಮುಂದೂಡಲಾಗದ ಐಟಂಗಳು ಸದಾ ಒಂದು ನಿರ್ದಿಷ್ಟ ವಿಧಕ್ಕೇ ಸೇರಿರುವುದಿಲ್ಲ, ವೈಜ್ಞಾನಿಕ ಮುನ್ನಡೆ ಇತ್ಯಾದಿಗಳಿಂದಾಗಿ ಹಳೆಯ ಸರಕುಗಳ ಜಾಗದಲ್ಲಿ ಹೊಸ ಸರಕುಗಳು ಬಳಕೆಗೆ ಬರುವುದರಿಂದ ಬದಲಾಗುತ್ತಲೇ ಇರುತ್ತವೆ.

ಹೀಗೆ, ಒಬ್ಬ ವ್ಯಕ್ತಿಯು ಆಧುನಿಕ ಔಷಧವೋ ಅಥವ ಹಳೆಯ ಕಾಲದ ಹಳ್ಳಿಯ ಮಾಟ-ಮಂತ್ರ -ಅಳಲೆಕಾಯಿ ಪಂಡಿತರ ಮದ್ದೋ ಎಂದೇನೂ ಆಯ್ಕೆ ಮಾಡುವುದಿಲ್ಲ. ಒಂದು ನಿರ್ದಿಷ್ಟ ಹಂತದಲ್ಲಿ ಆಧುನಿಕ ಔಷಧಕ್ಕೇ ಹೋಗಲೇಬೇಕು ಎಂಬುದು ಆತನಿಗೆ ಗೊತ್ತಿದೆ. ಅದಕ್ಕಾಗಿ ಆಹಾರವನ್ನು ಸೇವನೆಯ ಪ್ರಮಾಣವನ್ನು ಇಳಿಸಬೇಕಾಗಿ ಬಂದರೆ, ಅಂದರೆ ಹೊಟ್ಟೆ ಕಟ್ಟಿದರೆ, ಅವನ ಪರಿಸ್ಥಿತಿ ಉತ್ತಮಗೊಂಡಿದೆ ಎಂದು ಪರಿಗಣಿಸಲಾಗದು. ಆಧುನಿಕ ಚಿಕಿತ್ಸೆಯ ವೆಚ್ಚವು ಒಂದು ವೇಳೆ ಅತಿ ದುಬಾರಿಯಾಗಿ ಪರಿಣಮಿಸಿದರೆ ಅವನ ಆರ್ಥಿಕ ಪರಿಸ್ಥಿತಿಯು ಸಂಪೂರ್ಣವಾಗಿ ನೆಲ ಕಚ್ಚುತ್ತದೆ. ಹಾಗಾಗಿ ಅವನು ಆಧುನಿಕ ಚಿಕಿತ್ಸೆ ಪಡೆಯುತ್ತಾನೆ ಎಂದ ಮಾತ್ರಕ್ಕೆ ಅವನ ಸ್ಥಿತಿ-ಗತಿ ಉತ್ತಮವಾಗಿದೆ ಎಂದು ಪರಿಗಣಿಸಲಾಗದು.

 

ಹಾಗೆ ನೋಡಿದರೆ, ಇಂದು ಪ್ರತಿಜೀವಕಗಳನ್ನು (ಆಂಟಿ-ಬಯೊಟಿಕ್ಸ್) ಬಳಸಬಹುದಾಗಿರುವ ಒಬ್ಬ ಬಡ ವ್ಯಕ್ತಿ ಕೂಡ, ಒಂದರ್ಥದಲ್ಲಿ, ಗಾಯದ ಹುಣ್ಣಿನಿಂದ ಸತ್ತ ಇಂಗ್ಲೆಂಡಿನ ದೊರೆ ಎಂಟನೆಯ ಹೆನ್ರಿಗಿಂತ ಉತ್ತಮವಾಗಿ ಬದುಕುತ್ತಿದ್ದಾನೆ ಎನ್ನಬೇಕಾಗುತ್ತದೆ. ಆದರೆ, ವ್ಯಕ್ತಿಯ ಬದುಕಿನ ಪರಿಸ್ಥಿತಿಯು ಒಟ್ಟಾರೆಯಾಗಿ ಉತ್ತಮಗೊಳ್ಳುತ್ತದೆಯೇ ಎಂಬುದು ಒಂದೆಡೆಯಲ್ಲಿ ಬಳಕೆಯ ಬುಟ್ಟಿಯಲ್ಲಿನ ಬಳಕೆಯ ಪ್ರಮಾಣವನ್ನು ಇಳಿಸಲಾಗದ ವಸ್ತುಗಳನ್ನು ಒಂದು ಕನಿಷ್ಠ ಅಗತ್ಯ ಪ್ರಮಾಣದಲ್ಲಿ ಪಡೆಯುತ್ತಿರುವಾಗಲೇ, ಇನ್ನೊಂದೆಡೆಯಲ್ಲಿ ಆತನು ಯಾವ ವಸ್ತುಗಳ ಬಳಕೆಯನ್ನು ಇಳಿಸಬಹುದು ಎಂದು ಭಾವಿಸುತ್ತಾನೋ ಅಂತಹ ವಸ್ತುಗಳ, ವಿಶೇಷವಾಗಿ ಆಹಾರಧಾನ್ಯಗಳ, ಬಳಕೆಯನ್ನು, ಕಡಿಮೆ ಮಾಡಿಕೊಳ್ಳಲೇ ಬೇಕಾಗುತ್ತದೆಯೇ ಎಂಬುದನ್ನು ಅವಲಂಬಿಸಿರುತ್ತದೆ.

ಹಾಗಾಗಿ, ಆಹಾರ ಧಾನ್ಯಗಳು ಸ್ಥಿತಿ-ಸೂಚಕ ವಸ್ತುಗಳಾಗುತ್ತವೆ. ಆದ್ದರಿಂದ, ಭಾರತದಂತಹ ಒಂದು ದೇಶದಲ್ಲಿ ಆಹಾರ ಧಾನ್ಯಗಳ ಸೇವನೆಯ (ಆಹಾರ ಸೇವನೆಯ ಪ್ರಸ್ತುತ ಮಟ್ಟದಲ್ಲಿ) ಕಡಿತವು ಪೌಷ್ಟಿಕಾಂಶಗಳ ಕೊರತೆಯನ್ನು ಹೆಚ್ಚಿಸುತ್ತವೆ ಮತ್ತು ಆಮೂಲಕ ಜನಸಾಮಾನ್ಯರ ಜೀವನ ಪರಿಸ್ಥಿತಿಗಳು ಉತ್ತಮಗೊಳ್ಳುತ್ತಿಲ್ಲ ಎಂಬುದನ್ನು ಸೂಚಿಸುತ್ತವೆ.

ಸಂಕ್ಷಿಪ್ತವಾಗಿ ಹೇಳುವುದಾದರೆ, ನಿಯಂತ್ರಣ ನೀತಿಗಳ ಅವಧಿಯಲ್ಲಿ ಸಾಮಾನ್ಯ ಜನರ ಜೀವನ ಸ್ಥಿತಿಗಳು ಸ್ವಲ್ಪ ಮಟ್ಟಿಗೆ ಉತ್ತಮಗೊಂಡಿದ್ದವು. ಆಗ ಜನರು ಆಹಾರ ಸೇವನೆಯನ್ನು (ಸ್ವಾತಂತ್ರ‍್ಯ ಬಂದ ಸಮಯದಲ್ಲಿದ್ದ ಕೆಳ ಮಟ್ಟದಿಂದ) ಹೆಚ್ಚಿನ ಮಟ್ಟದಲ್ಲಿ ಆಹಾರ ಸೇವನೆ ಮತ್ತು ಹೆಚ್ಚೆಚ್ಚು ಆಧುನಿಕ ಜೀವನ ಪರಿಸ್ಥಿತಿಗಳನ್ನು ಹೊಂದುತ್ತಿದ್ದರು. ಇದು ನಿಸ್ಸಂದೇಹವಾಗಿ ಇನ್ನೂ ಹೆಚ್ಚು ಉತ್ತಮಮಟ್ಟದ್ದಾಗಿರಬಹುದಿತ್ತು ಮತ್ತು ಇರಬೇಕಿತ್ತು, ಹೌದು. ಆದರೆ, ನವ ಉದಾರವಾದಿ ಅವಧಿಯಲ್ಲಿ ಪೌಷ್ಟಿಕಾಂಶದ ಕೊರತೆ ಹೆಚ್ಚಿರುವುದು ಕಾಣ ಬರುತ್ತದೆ, ಆಮೂಲಕ ಸಾಮಾನ್ಯ ಜನರ ಜೀವನ ಪರಿಸ್ಥಿತಿ ಅಂತಹ ಮಟ್ಟದಲ್ಲಿ ಉತ್ತಮಗೊಂಡಿರದಿರುವುದು ಕಾಣಬರುತ್ತದೆ. ಜಿಡಿಪಿಯ ದತ್ತಾಂಶವನ್ನು ಉಲ್ಲೇಖಿಸುವ ಮೂಲಕ ಈ ಪ್ರಾಥಮಿಕ ಸಂಗತಿಯನ್ನು ಅಲ್ಲಗಳೆಯುವುದು ಸಾಧ್ಯವಿಲ್ಲ.

ಇದನ್ನೂ ನೋಡಿ: Karnataka legislative assembly Day 07 Live. 16ನೇ ವಿಧಾನಸಭೆಯ ಚಳಿಗಾಲದ ಅಧಿವೇಶನದ ನೇರ ಪ್ರಸಾರ

Donate Janashakthi Media

Leave a Reply

Your email address will not be published. Required fields are marked *