ನವ-ಉದಾರವಾದವು ಹಾಲಿನ ಹೊಳೆ-ಜೇನಿನ ಮಳೆ ಸುರಿಸಿದೆಯೇ?

ಪ್ರೊ.ಪ್ರಭಾತ್ ಪಟ್ನಾಯಕ್ ಅನು:ಕೆ.ಎಂ.ನಾಗರಾಜ್
ಆರ್ಥಿಕ ನಿಯಂತ್ರಣಗಳಿದ್ದ ಕಾಲಕ್ಕೆ ಹೋಲಿಸಿದರೆ, ನಿಯಂತ್ರಣ-ಮುಕ್ತ ನವ-ಉದಾರವಾದಿ ಆಳ್ವಿಕೆಯ ಅಡಿಯಲ್ಲಿ ಜಿಡಿಪಿ ಬೆಳವಣಿಗೆ ದರ ಏರಿದ್ದರಿಂದ ಇದು ಎಲ್ಲರಿಗೂ ಹಾಲು-ಜೇನಿನ ಅವಧಿಯಾಗಿದೆ ಎಂದು ಸಾಬೀತುಪಡಿಸಲು ನವ-ಉದಾರವಾದದ ಪ್ರಚಾರಕರು ಹೆಣಗುತ್ತಿದ್ದಾರೆ. ಅದಕ್ಕಾಗಿ ಅಪ್ರಾಮಾಣಿಕವಾಗಿ, ಹಲವಾರು ಕುತಂತ್ರಗಳನ್ನೂ ಬಳಸುತ್ತಾರೆ. ಏಕೆಂದರೆ ಜನರ ಜೀವನಮಟ್ಟ ಸಂಬಂಧವಾಗಿ ಹೇಳುವುದಾದರೆ, ಆ ಅವಧಿಗೆ ಹೋಲಿಸಿದರೆ, ನವ-ಉದಾರವಾದವು ಪ್ರಗತಿಯತ್ತ ಸಾಗಿದೆ ಎಂದು ಹೇಳುವುದು ಶುದ್ಧ ಅವಿವೇಕವಾಗುತ್ತದೆ. ಸ್ಥೂಲ ಚಿತ್ರವನ್ನು ತೆಗೆದುಕೊಳ್ಳಲಿ ಅಥವಾ ಎನ್‌ಎಸ್‌ಎಸ್ ನಡೆಸಿದ ಗ್ರಾಹಕ ವೆಚ್ಚ ಸಮೀಕ್ಷೆಯ ಫಲಿತಾಂಶಗಳನ್ನು ತೆಗೆದುಕೊಳ್ಳಲಿ, ಸಂಪೂರ್ಣ ಬಡತನದಲ್ಲಿರುವವರ ಪ್ರಮಾಣವು ಏರಿಕೆಯಾಗಿದೆ ಎಂಬ ಸಂಗತಿ ಅದರಿಂದ ಹೊರಹೊಮ್ಮುತ್ತದೆ. ಈ ಸತ್ಯಾಂಶವನ್ನು ಸರಕಾರ ಮತ್ತು ನವ-ಉದಾರವಾದದ ಸಮರ್ಥಕರು ಬಚ್ಚಿಡಲು ಪ್ರಯತ್ನಿಸುತ್ತಿದ್ದಾರೆ.

ಭಾರತದ ಹಿಂದಿನ ನಿಯಂತ್ರಣ ನೀತಿಯ(ಡಿರಿಜಿಸ್ಟ್) ಆಳ್ವಿಕೆಯೊಂದಿಗೆ ಹೋಲಿಸಿದರೆ, ತನ್ನ ಆಳ್ವಿಕೆಯೇ ಉತ್ತಮವಾದದ್ದು ಎಂದು ಬಿಂಬಿಸಲು ನವ-ಉದಾರವಾದವು ಒಂದು ಸುಳ್ಳಿನ ಕಂತೆಯನ್ನು ಮುಚ್ಚುಮರೆಯಿಲ್ಲದೆ ಪ್ರಚುರಪಡಿಸುತ್ತದೆ. ಅದರ ಉದ್ದೇಶವೆಂದರೆ, ನವ-ಉದಾರವಾದದ ಅಡಿಯಲ್ಲಿ ವೇಗವಾಗಿ ಬೆಳೆಯುತ್ತಿರುವ ಜಿಡಿಪಿಯಿಂದಾಗಿ ಇಡೀ ಜನತೆಯ ಜೀವನ ಮಟ್ಟ ಸುಧಾರಿಸಿದೆ ಮತ್ತು ಅವರಲ್ಲಿ ಬಹು ದೊಡ್ಡ ಸಂಖ್ಯೆಯ ಜನರು ಬಡತನದಿಂದ ಹೊರಬಂದಿದ್ದಾರೆ ಎಂಬ ಅಭಿಪ್ರಾಯವನ್ನು ಮೂಡಿಸುವುದೇ ಆಗಿದೆ(ನವ-ಉದಾರವಾದದ ಒಬ್ಬ ಭ್ರಮಾಧೀನ ಉತ್ಸಾಹಿಯಂತೂ ಬಡತನವು ಈಗ ಕೇವಲ ಶೇ. 2ರಷ್ಟು ಜನರನ್ನು ಮಾತ್ರ ಬಾಧಿಸುತ್ತಿದೆ ಎಂದು ಹೇಳಿದ್ದಾನೆ). ಆದರೆ, ಜನರ ಜೀವನಮಟ್ಟಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ, ಆ ಅವಧಿಗೆ ಹೋಲಿಸಿದರೆ, ನವ-ಉದಾರವಾದವು ಪ್ರಗತಿಯತ್ತ ಸಾಗಿದೆ ಎಂದು ಹೇಳುವುದು ಶುದ್ಧ ಅವಿವೇಕವಾಗುತ್ತದೆ. ಹಾಗೆ ನೋಡಿದರೆ, ಡಿರಿಜಿಸ್ಟ್ ಆಳ್ವಿಕೆಯಲ್ಲಿ ಹಾಲು-ಜೇನು ಹರಿಯುತ್ತಿತ್ತು ಎಂದಲ್ಲ ಎಂಬುದನ್ನು ಮತ್ತು ಅದನ್ನು ಎಡಪಕ್ಷಗಳಿಗಿಂತ ಹೆಚ್ಚು ಕಟುವಾಗಿ ಯಾರೂ ಟೀಕಿಸಿಲ್ಲ ಎಂಬುದನ್ನು ಸಾಂದರ್ಭಿಕವಾಗಿ ಹೇಳಬೇಕಾಗುತ್ತದೆ. ನವ-ಉದಾರವಾದ

ನವ-ಉದಾರವಾದ ಪ್ರಸಕ್ತ ಫ್ಯಾಸಿಸ್ಟ್-ತೆರನ ಆಳ್ವಿಕೆ ಬರುವ ಮೊದಲು ಕೂಡ ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುವ ಮೂಲಕ, ಲಂಗುಲಗಾಮಿಲ್ಲದ ಬಂಡವಾಳಶಾಹಿಯ ಅಡಿಯಲ್ಲಿ ನಿರೀಕ್ಷಿಸಬಹುದಾದಂತೆ, ಸಮಾಜದಲ್ಲಿ ಸ್ವಾರ್ಥಪರತೆ ಮತ್ತು ಸ್ವಹಿತಾಸಕ್ತಿಯನ್ನು ಮೊದಲಿಗಿಂತಲೂ ಹೆಚ್ಚು ವ್ಯಾಪಕಗೊಳಿಸುವ ಮೂಲಕ, ತಮ್ಮನ್ನು ತಾವೇ ಶ್ರೇಷ್ಠರೆಂದು ಹೇಳಿಕೊಳ್ಳುವ ಮತ್ತು ಬಡವರ ಬಗ್ಗೆ ತಿರಸ್ಕಾರವನ್ನಲ್ಲದೆ ಬೇರೆ ಯಾವ ಭಾವನೆಯನ್ನೂ ಹೊಂದಿರದ ಒಂದು ವಿಭಾಗ ಎದ್ದು ಬರುವಂತೆ ಮಾಡುವ ಮೂಲಕ ಭೀಕರ ಪರಿಣಾಮವನ್ನು ಉಂಟು ಮಾಡಿದೆ. ಅದು ರಾಷ್ಟ್ರದ ನೈತಿಕತೆಯನ್ನು ಎಷ್ಟೊಂದು ಮಟ್ಟದ ವರೆಗೆ ಧ್ವಂಸಮಾಡಿದೆಯೆಂದರೆ, ಇತ್ತೀಚಿನ ವರ್ಷಗಳಲ್ಲೇ ಕಾಣದಂತಹ ನರಸಂಹಾರ ನಡೆಯುತ್ತಿದ್ದು, ಅದರ ವಿರುದ್ಧ ಯಾವುದೇ ಸಾರ್ವಜನಿಕ ಕ್ರೋಧದ ಪ್ರದರ್ಶನಕ್ಕೆ ಸರಕಾರ ಅವಕಾಶ ನಿರಾಕರಿಸಿದರೂ, ಅದರ ವಿರುದ್ಧ ಮಾಧ್ಯಮಗಳಲ್ಲಿ ಯಾವುದೇ ಆಕ್ರೋಶ ವ್ಯಕ್ತವಾಗುತ್ತಿಲ್ಲ. ಆದರೆ ನಾನಿಲ್ಲಿ ಅವನ್ನೆಲ್ಲ ಪರಿಶೀಲಿಸುತ್ತಿಲ್ಲ. ನನ್ನನ್ನು ಕೇವಲ ನವ-ಉದಾರವಾದದ ಕೆಲವು ಆರ್ಥಿಕ ಸೂಚಕಗಳಿಗೆ ಮಾತ್ರ ಸೀಮಿತಗೊಳಿಸಿಕೊಳ್ಳುತ್ತೇನೆ.

ರೈತರ ಆತ್ಮಹತ್ಯೆಗಳು-ಅತ್ಯಂತ ಸ್ಪಷ್ಟ ಸೂಚಕ

ನವ-ಉದಾರವಾದದ ಒಂದು ಅತ್ಯಂತ ಸ್ಪಷ್ಟವೂ ಮತ್ತು ದುರಂತಮಯವೂ ಆದ ಆರ್ಥಿಕ ಸೂಚಕವೆಂದರೆ, ಕಳೆದ ಮೂರು ದಶಕಗಳಲ್ಲಿ ಮೂರು ಲಕ್ಷಕ್ಕೂ ಹೆಚ್ಚು ಮಂದಿ ರೈತರ ಮತ್ತು ಕೃಷಿ ಕಾರ್ಮಿಕರ ಆತ್ಮಹತ್ಯೆ. ಇಂಥಹ ಆತ್ಮಹತ್ಯಾ ಪ್ರಕರಣಗಳಿಗೆ ಸ್ವಾತಂತ್ರೋತ್ತರ ಭಾರತದಲ್ಲಿ ಪೂರ್ವನಿದರ್ಶನಗಳಿಲ್ಲ. ಈ ಆತ್ಮಹತ್ಯೆಗಳ ಬೇರುಗಳನ್ನು ನವ-ಉದಾರವಾದದ ಆಳ್ವಿಕೆಯಲ್ಲಿ ಬೆಲೆ-ಬೆಂಬಲವನ್ನು ಸರ್ಕಾರವು ನಿಲ್ಲಿಸಿದ ಪರಿಣಾಮವಾಗಿ ಉಂಟಾದ ಕೃಷಿ ಸಂಕಷ್ಟಗಳೊಂದಿಗೆ ಗುರುತಿಸಬಹುದು. ವಿಶೇಷವಾಗಿ, ರೊಕ್ಕದ ಬೆಳೆಗಳಿಗೆ ಹಿಂದೆ ಲಭ್ಯವಿದ್ದ ಬೆಲೆ-ಬೆಂಬಲವನ್ನು ನಿಲ್ಲಿಸಿದ ಪರಿಣಾಮವಾಗಿ ಈ ಬೆಳೆಗಳ ದೇಶೀಯ ಬೆಲೆಗಳು ವಿಶ್ವ ಮಾರುಕಟ್ಟೆ ಬೆಲೆಗಳಿಗೆ ಅನುಸಾರವಾಗಿ ಹುಚ್ಚಾಬಟ್ಟೆ ಏರಿಳಿತಗಳಿಗೆ ಒಳಗಾದವು. ಪರಿಣಾಮವಾಗಿ ರೈತರ ಸಂಕಷ್ಟಗಳು ಹೆಚ್ಚುತ್ತಾ ಹೋದವು.

ಈ ಕೃಷಿ ಸಂಕಷ್ಟದಿಂದಾಗಿ, 1991ರ ಮತ್ತು 2011ರ ಜನಗಣತಿಗಳ ನಡುವಿನ ಅವಧಿಯಲ್ಲಿ, ಒಂದೂವರೆ ಕೋಟಿ ಸಂಖ್ಯೆಯ “ಬೇಸಾಯಗಾರರು” ಕೃಷಿ ಚಟುವಟಿಕೆಗಳಿಂದ ಹೊರದಬ್ಬಲ್ಪಟ್ಟರು. ಅವರಲ್ಲಿ ಕೆಲವರು ಕೃಷಿ ಕೂಲಿಕಾರರ ದರ್ಜೆಗೆ ಇಳಿದರು ಮತ್ತು ಇನ್ನೂ ಕೆಲವರು ಉದ್ಯೋಗಗಳನ್ನು ಅರಸಿ ನಗರಗಳಿಗೆ ವಲಸೆ ಹೋದರು. ಡಿರಿಜಿಸ್ಟ್ ಅವಧಿಗೆ ಹೋಲಿಸಿದರೆ, ನವ-ಉದಾರವಾದದ ಅಡಿಯಲ್ಲಿ ಉದ್ಯೋಗಗಳ ಬೆಳವಣಿಗೆ ಅಲ್ಪವೇ. ಅಲ್ಪ-ಜಿಡಿಪಿ-ಬೆಳವಣಿಗೆಯ ಡಿರಿಜಿಸ್ಟ್ ಯುಗದಲ್ಲಿ ಉದ್ಯೋಗ ಬೆಳವಣಿಗೆಯ ವಾರ್ಷಿಕ ದರ ಸರಿಸುಮಾರು ಶೇ.2 ಎಂದು ಅಂದಾಜಿಸಲಾಗಿದೆ. ಉದ್ಯೋಗಗಳ ಈ ಅಲ್ಪ ಬೆಳವಣಿಗೆಯು, ವಸಾಹತುಶಾಹಿಯ ಬಳುವಳಿಯಾಗಿ ಅಸ್ತಿತ್ವದಲ್ಲಿದ್ದ ಶ್ರಮ ಮೀಸಲುಗಳ ಗಾತ್ರವನ್ನು ಸ್ವಲ್ಪವೂ ಕಡಿಮೆ ಮಾಡಿರಲಿಲ್ಲ. ನವ-ಉದಾರವಾದಿ ಆಳ್ವಿಕೆಯಲ್ಲಿ ಪರಿಸ್ಥಿತಿ ಉತ್ತಮಗೊಳ್ಳುವ ಬದಲು ಉದ್ಯೋಗಗಳ ಬೆಳವಣಿಗೆಯು ಮತ್ತಷ್ಟು ಕುಂಠಿತಗೊಂಡು ವಾರ್ಷಿಕ ಕೇವಲ ಶೇ. 1ರ ಮಟ್ಟಕ್ಕೆ ಇಳಿದಿದೆ. ಇದು, ಈ ಅವಧಿಯ ಜನಸಂಖ್ಯೆಯ ಬೆಳವಣಿಗೆಯ ಸರಾಸರಿ ದರಕ್ಕಿಂತಲೂ ಕಡಿಮೆ. ಹಾಗಾಗಿ, ಶ್ರಮ ಮೀಸಲುಗಳ ಗಾತ್ರ ಹೆಚ್ಚಿತು. ಅಷ್ಟೇ ಅಲ್ಲ, ಸಿಎಂಐಇ ಅಂದಾಜಿನ ಪ್ರಕಾರ, ಉದ್ಯೋಗಿಗಳ ಒಟ್ಟು ಸಂಖ್ಯೆಯು ಕಳೆದ ಐದು ವರ್ಷಗಳಲ್ಲಿ ಹೆಚ್ಚು ಕಡಿಮೆ ಬದಲಾಗದೇ ಉಳಿದಿದೆ. ನವ-ಉದಾರವಾದ

ಇದನ್ನು ಓದಿ: ಭಾರತದಲ್ಲಿ ನಿರುದ್ಯೋಗ: ಸಂಖ್ಯೆ 5.1 ಕೋಟಿ, ದರ 8.9%

ಜಿಡಿಪಿಯೊಂದಿಗೇ ಅಸಮಾನತೆಯ ವೇಗದ ಬೆಳವಣಿಗೆ

ಜಿಡಿಪಿ ವೇಗವಾಗಿ ಬೆಳೆಯುತ್ತಿದ್ದ ಸನ್ನಿವೇಶದಲ್ಲಿ, ಉದ್ಯೋಗ ಬೆಳವಣಿಗೆಯ ದರ ಇಳಿಕೆಯ ವಿದ್ಯಮಾನಕ್ಕೆ ಶ್ರಮ ಉತ್ಪಾದಕತಾ ಬೆಳವಣಿಗೆಯ ದರ ಹಠಾತ್ತನೆ ಏರಿದ್ದು ಕಾರಣ ಎಂದು ವಿವರಿಸಬಹುದು. ನವ-ಉದಾರವಾದವು ದೇಶದ ಅರ್ಥವ್ಯವಸ್ಥೆಯನ್ನು ಒಂದು ತೀವ್ರ ಸ್ವರೂಪದ ವಿದೇಶಿ ಸ್ಪರ್ಧೆಗೆ ಒಡ್ಡಿದ್ದರಿಂದಾಗಿ, ಶ್ರಮ ಉತ್ಪಾದಕತಾ ಬೆಳವಣಿಗೆಯ ದರ ಹಠಾತ್ತನೆ ಏರಿತು. ಪರಿಣಾಮವಾಗಿ ಹೆಚ್ಚಿದ ಶ್ರಮ ಮೀಸಲುಗಳ ಗಾತ್ರವು, ಕಾರ್ಮಿಕ-ಪಡೆಯ ತಲಾವಾರು ನೈಜ ವರಮಾನವನ್ನು ಜೀವನಾಧಾರ ಮಟ್ಟಕ್ಕೆ ಕಟ್ಟಿಹಾಕಿತು. ಏರಿಕೆಯಾಗದ ಕಾರ್ಮಿಕರ ನೈಜ ವೇತನ ಮತ್ತು ಶ್ರಮ ಉತ್ಪಾದಕತೆ ಉನ್ನತವಾಗಿದ್ದ ಸನ್ನಿವೇಶದಲ್ಲಿ, ಜಿಡಿಪಿಯಲ್ಲಿ ಆರ್ಥಿಕ ಮಿಗುತಾಯದ ಪಾಲು ಹೆಚ್ಚಿತು. ಈ ರೀತಿಯಲ್ಲಿ ನವ-ಉದಾರವಾದಿ ಅವಧಿಯಲ್ಲಿ ಹೆಚ್ಚಿದ ಮಿಗುತಾಯವು ವರಮಾನದ ಅಸಮಾನತೆಗಳನ್ನು ಹೆಚ್ಚಿಸಿತು ಮತ್ತು ದೊಡ್ಡ ಬಂಡವಾಳಗಾರರು ಮಾತ್ರವಲ್ಲದೆ ನವ-ಉದಾರವಾದದ “ಬೆಂಬಲಿಗರ” ಮೇಲುಸ್ತರದ ಒಂದು ಸಣ್ಣ ಗುಂಪಿನ ಜನರು ಒಂದು ಅಭೂತಪೂರ್ವ ಮಟ್ಟದ ಐಶ್ವರ್ಯವನ್ನು ಬಾಚಿಕೊಂಡರು.

ವರಮಾನಗಳ ಅಸಮಾನತೆಯನ್ನು ಥಾಮಸ್ ಪಿಕೆಟ್ಟಿ ಮತ್ತು ಲ್ಯೂಕಾಸ್ ಚಾನ್ಸೆಲ್ ಎಂಬ ಇಬ್ಬರು ಫ್ರೆಂಚ್ ಅರ್ಥಶಾಸ್ತ್ರಜ್ಞರು ಅಧ್ಯಯನಕ್ಕೊಳಪಡಿಸಿದ್ದಾರೆ. ಈ ಉದ್ದೇಶಕ್ಕಾಗಿ ಅವರು ಭಾರತದ ಆದಾಯ ತೆರಿಗೆ ಇಲಾಖೆಯ ದತ್ತಾಂಶಗಳನ್ನು ಬಳಕೆ ಮಾಡಿಕೊಂಡಿದ್ದಾರೆ. ವರಮಾನಗಳ ಅಸಮಾನತೆಗಳು ಹೆಚ್ಚಿವೆ ಎಂಬುದನ್ನು ಅವರ ಅಂದಾಜುಗಳು ಹೇಳುತ್ತವೆ. ದೇಶದ ಒಟ್ಟು ಆದಾಯದಲ್ಲಿ ಎಷ್ಟು ಪಾಲನ್ನು ಮೇಲ್ತುದಿಯ ಶೇ. 1ರಷ್ಟು ಮಂದಿ ಹೊಂದಿದ್ದಾರೆ ಎಂಬುದನ್ನು ಅವರು ಗಮನಿಸುತ್ತಾರೆ. ಸ್ವಾತಂತ್ರ‍್ಯಾನಂತರದ ಅವಧಿಯಲ್ಲಿ, 1982 ರಲ್ಲಿ, ಈ ಮಂದಿಯು ಹೊಂದಿದ್ದ ಪಾಲು ಶೇ. 6ರಷ್ಟು ಇಳಿಕೆಯಾಗಿತ್ತು. ಆನಂತರ, ವಿಶೇಷವಾಗಿ ನವ-ಉದಾರವಾದಿ ಅವಧಿಯಲ್ಲಿ, ಲಭ್ಯವಿರುವ ಇತ್ತೀಚಿನ 2014-15 ವರ್ಷದ ದತ್ತಾಂಶಗಳ ಪ್ರಕಾರ, 2013-14ರಲ್ಲಿ ಅವರು ಹೊಂದಿದ ಪಾಲು ಸುಮಾರು ಶೇ. 22ರ ಗರಿಷ್ಠ ಮಟ್ಟವನ್ನು ತಲುಪಿದೆ. ಈ ಪಾಲು, 1922ರಲ್ಲಿ ಭಾರತದಲ್ಲಿ ಮೊದಲ ಬಾರಿಗೆ ಆದಾಯ ತೆರಿಗೆಯನ್ನು ಜಾರಿ ಮಾಡಿದ ಸಮಯದಿಂದ ಹಿಡಿದು 2013-14ರವರೆಗಿನ ಅವಧಿಯಲ್ಲಿ ಈ ಮಂದಿಯು ಹೊಂದಿದ ಪಾಲಿನಲ್ಲಿ ಅತಿ ಹೆಚ್ಚಿನದು. ಆರ್ಥಿಕ ಮಿಗುತಾಯದ ಪಾಲಿನ ಏರಿಕೆಯು ಭಾರತದಲ್ಲಿ ಮಾತ್ರವಲ್ಲದೆ ಇಡೀ ವಿಶ್ವದಲ್ಲಿ ಒಂದು ಅತಿ-ಉತ್ಪಾದನೆಯ ಬಿಕ್ಕಟ್ಟು ಸೃಷ್ಟಿಯಾಗಲು ಕಾರಣವಾಗಿದೆ ಮತ್ತು ನವ-ಉದಾರವಾದಿ ಆಳ್ವಿಕೆಯನ್ನು ಮುಂದಿನ ದಾರಿ ಕಾಣದ ಒಂದು ಹಂತಕ್ಕೆ ತಂದು ನಿಲ್ಲಿಸಿದೆ.

ಉದ್ಯೋಗಿ-ಪಡೆಯ (work-force) ನೈಜ ತಲಾ ಆದಾಯವು ವೃದ್ಧಿಸದಿರುವ ಪರಿಸ್ಥಿತಿಯಲ್ಲಿ, ಶ್ರಮ ಮೀಸಲು ಪಡೆಯ ಹೆಚ್ಚಳದಿಂದಾಗಿ, ಉದ್ಯೋಗಿ-ಪಡೆಯ (ಅಂದರೆ. ಉದ್ಯೋಗಿಗಳು, ಅರೆ-ಕಾಲಿಕ ಉದ್ಯೋಗಿಗಳು, ನಿರುದ್ಯೋಗಿಗಳು ಮತ್ತು ಅರೆ-ಉದ್ಯೋಗಿಗಳು ಇವರೆಲ್ಲರನ್ನೂ ಒಳಗೊಂಡ ಪಡೆ) ನೈಜ ತಲಾ ಆದಾಯವು ಒಟ್ಟಾರೆಯಾಗಿ ಕುಸಿದಿದೆ. ಹಾಗಾಗಿ, ಬಡತನಕ್ಕೆ ಜಾರಿದವರ ಸಂಖ್ಯೆ ಹೆಚ್ಚಿರುವುದರಲ್ಲಿ ಆಶ್ಚರ್ಯವೇನಿಲ್ಲ. ಖಚಿತವಾಗಿ ಹೇಳುವುದಾದರೆ, ರಸ್ತೆಗಳ ಮತ್ತು ಬೀದಿದೀಪಗಳ ರೂಪದಲ್ಲಿ ಉತ್ತಮವಾದ ಮೂಲಸೌಕರ್ಯ-ಸೌಲಭ್ಯಗಳು ಅವರಿಗೆ ಈಗ ಲಭಿಸಿವೆ, ನಿಜ. ಆದರೆ, ಅವರ ಅತ್ಯಂತ ಮೂಲಭೂತ ಅವಶ್ಯಕತೆಯಾದ ಆಹಾರಧಾನ್ಯಗಳ ತಲಾ ಸೇವನೆ ಇಳಿಕೆಯಾಗಿರುವುದೂ ನಿಜ. ನವ-ಉದಾರವಾದ

ಇದನ್ನೂ ಓದಿನವ ಉದಾರೀಕರಣದಿಂದ ನಿರುದ್ಯೋಗ – ಖಾಲಿ ಹುದ್ದೆ – ಆಡಳಿತ ಯಂತ್ರದ ಕುಸಿತ

 

ಬಡತನದ ಪ್ರಮಾಣ -ಕ್ಯಾಲೊರಿ ಲೆಕ್ಕಾಚಾರದಲ್ಲಿ

ಭಾರತದಲ್ಲಿ ಬಡತನ ಕುರಿತ ಅಧ್ಯಯನವು, 1973-74ಅನ್ನು ಮೂಲ ವರ್ಷವಾಗಿ ಪರಿಗಣಿಸುವುದರೊಂದಿಗೆ ಮತ್ತು ಗ್ರಾಮೀಣ ಭಾರತದಲ್ಲಿ ಪ್ರತಿ ವ್ಯಕ್ತಿಯ ದೈನಿಕ 2200 ಕ್ಯಾಲೊರಿಗಳಿಗಿಂತ ಕಡಿಮೆ ಮಟ್ಟದ ಆಹಾರ ಸೇವನೆಯನ್ನು ಮತ್ತು ನಗರ ಭಾರತದಲ್ಲಿ ದೈನಿಕ 2100 ಕ್ಯಾಲೊರಿಗಳ ಆಹಾರ ಸೇವನೆಯನ್ನು, ಯೋಜನಾ ಆಯೋಗವು ಬಡತನವನ್ನು ವ್ಯಾಖ್ಯಾನಿಸುವ ಒಂದು ಮಾನದಂಡವಾಗಿ ಒಪ್ಪಿಕೊಳ್ಳುವ ಮೂಲಕ ಆರಂಭವಾಯಿತು. ಅಂದಿನಿಂದಲೂ ಈ ವ್ಯಾಖ್ಯಾನವನ್ನು ಬದಲಿಸಲು ಮತ್ತು ಬಡತನ ಇಳಿಕೆಯಾಗಿದೆ ಎಂಬುದನ್ನು ಬಿಂಬಿಸಲು, ಸರ್ಕಾರ ಮತ್ತು ವಿಶ್ವಬ್ಯಾಂಕ್‌ನಂತಹ ಸಂಸ್ಥೆಗಳು ಎಲ್ಲಾ ರೀತಿಯ ಕುತಂತ್ರಗಳನ್ನು ಅಳವಡಿಸಿಕೊಂಡಿವೆ. ಆದರೆ, ಯೋಜನಾ ಆಯೋಗವು ಒಪ್ಪಿರುವ ಈ ಮೂಲಭೂತ ಮತ್ತು ಸ್ಪಷ್ಟವಾದ ವ್ಯಾಖ್ಯಾನವನ್ನೇ ನಾವು ಅನುಸರಿಸೋಣ.

1973-74ರಲ್ಲಿ 2200 ಕ್ಯಾಲೋರಿಗಳಿಗಿಂತ ಕಡಿಮೆ ಆಹಾರ ಸೇವನೆಯ ಗ್ರಾಮೀಣ ಜನಸಂಖ್ಯೆಯ ಅನುಪಾತವು ಶೇ. 56.4ರಷ್ಟಿತ್ತು ಮತ್ತು 2100 ಕ್ಯಾಲೋರಿಗಳಿಗಿಂತ ಕಡಿಮೆ ಆಹಾರ ಸೇವನೆಯ ನಗರ ಜನಸಂಖ್ಯೆಯ ಅನುಪಾತವು ಶೇ. 49.2ರಷ್ಟಿತ್ತು. 1993-94ರ ವೇಳೆಗೆ ಗ್ರಾಮೀಣ ಭಾರತದಲ್ಲಿ ಈ ಅನುಪಾತವು ಶೇ. 58ಕ್ಕೆ ಏರಿತು ಮತ್ತು ನಗರ ಭಾರತದಲ್ಲಿ ಶೇ. 57ಕ್ಕೆ ಏರಿತು. ಆ ವೇಳೆಗೆ ನವ-ಉದಾರವಾದಿ ನೀತಿಗಳನ್ನು ಅದಾಗಲೇ ಅಳವಡಿಸಿಕೊಳ್ಳಲಾಗಿತ್ತು (ಈ ಅಳವಡಿಕೆಯು ಎಂಭತ್ತರ ದಶಕದ ಮಧ್ಯಭಾಗದಲ್ಲೇ ಆಗಿತ್ತು ಎಂದು ಕೆಲವರು ಹೇಳುತ್ತಾರೆ). ಆನಂತರ, 2011-12ರ ಹೊತ್ತಿಗೆ, ಎನ್‌ಎಸ್‌ಎಸ್ ಬಳಕೆ ಸಮೀಕ್ಷೆಯ (ರಾಷ್ಟ್ರೀಯ ಮಾದರಿ ಬಳಕೆ ಸಮೀಕ್ಷೆ) ಪ್ರಕಾರ, ಈ ಎರಡೂ ಪ್ರದೇಶಗಳಲ್ಲಿ ಏರಿಕೆಯಾದ ಬಡತನವು ಗಮನಾರ್ಹವಾಗಿತ್ತು – ಬಡವರ ಸಂಖ್ಯೆಯು ಗ್ರಾಮೀಣ ಭಾರತದಲ್ಲಿ ಶೇ. 68ಕ್ಕೆ ಮತ್ತು ನಗರ ಭಾರತದಲ್ಲಿ ಶೇ. 65ಕ್ಕೆ ಏರಿಕೆಯಾಗಿತ್ತು.

ಬಳಕೆ ವೆಚ್ಚ ಸಮೀಕ್ಷೆಯಲ್ಲಿ

ಮುಂದಿನ ಎನ್‌ಎಸ್‌ಎಸ್ ಬಳಕೆ ಸಮೀಕ್ಷೆಯನ್ನು 2017-18ರಲ್ಲಿ ನಡೆಸಲಾಯಿತು. ಆದರೆ, ಈ ಸಮೀಕ್ಷೆಯ ಅಂಕಿಅಂಶಗಳು, 2011ರ ಸಮೀಕ್ಷೆಗೆ ಹೋಲಿಸಿದರೆ, ತೋರಿಸಿದ ಪರಿಸ್ಥಿತಿ ಎಷ್ಟು ಭಯಾನಕವಾಗಿತ್ತು ಎಂದರೆ, ಮೋದಿ ಸರ್ಕಾರವು ಈ ಸಮೀಕ್ಷೆಯ ವರದಿಯನ್ನೇ ಬಚ್ಚಿಟ್ಟಿತು. ಅದನ್ನು ಬಚ್ಚಿಡುವ ಮೊದಲು ಸೋರಿಕೆಯಾದ ಅಂಕಿ ಅಂಶಗಳು 2011-12 ಮತ್ತು 2017-18ರ ನಡುವೆ ಗ್ರಾಮೀಣ ಭಾರತದಲ್ಲಿ ಸರಕು ಮತ್ತು ಸೇವೆಗಳ ನೈಜ ತಲಾ ಬಳಕೆಯ ವೆಚ್ಚಗಳು ಶೇ. 9ರಷ್ಟು ಅಭೂತಪೂರ್ವ ಕುಸಿತವನ್ನು ತೋರಿಸಿದವು. 2200 ಕ್ಯಾಲೊರಿಗಳಿಗಿಂತ ಕಡಿಮೆ ಆಹಾರ ಸೇವನೆಯ ಗ್ರಾಮೀಣ ಜನಸಂಖ್ಯೆಯ ಅಂದಾಜು ಅನುಪಾತವು 2017-18ರ ವರ್ಷದಲ್ಲಿ ಶೇ. 80ಕ್ಕೆ ಬರುತ್ತದೆ ಎಂದು ತೋರಿಸಿದವು. (ಈ ಅಂಕಿ ಅಂಶಗಳನ್ನು ಉತ್ಸಾ ಪಟ್ನಾಯಕ್ ಅವರ ʼಬಡತನ ಪ್ರಶ್ನೆಯ ಅನ್ವೇಷಣೆʼ ಎಂಬ ಈ ಹಿಂದೆ ಐಸಿಎಸ್‌ಎಸ್‌ಆರ್‌ಗೆ ಸಲ್ಲಿಸಿದ, ನಂತರ ನವೀಕರಿಸಿದ ವರದಿಯಿಂದ ತೆಗೆದುಕೊಳ್ಳಲಾಗಿದೆ).

ಜಾಗತಿಕ ಹಸಿವಿನ ಸೂಚ್ಯಂಕದಲ್ಲಿ ಭಾರತದ ಶ್ರೇಯಾಂಕವು, ಈ ಸೂಚ್ಯಂಕದಲ್ಲಿರುವ 125 ದೇಶಗಳಲ್ಲಿ, 111ನೇ ಸ್ಥಾನದಲ್ಲಿದೆ. ಭಾರತದ ಈ ಶ್ರೇಯಾಂಕವು ನೆರೆಯ ಪಾಕಿಸ್ತಾನ, ಬಾಂಗ್ಲಾದೇಶ, ಶ್ರೀಲಂಕಾ ಮತ್ತು ನೇಪಾಳಗಳಿಗಿಂತ ಕೆಳಗಿದೆ ಎಂಬುದು ಆಶ್ಚರ್ಯವಲ್ಲ.

ಆಹಾರಧಾನ್ಯಗಳ ತಲಾ ಲಭ್ಯತೆಯಲ್ಲಿ

ಬಡತನದ ಈ ಅಂಕಿಅಂಶಗಳು, ಆಹಾರಧಾನ್ಯಗಳ ತಲಾ ಲಭ್ಯತೆಯ ಅಂಕಿ ಅಂಶಗಳು ಒಟ್ಟಾರೆಯಾಗಿ ಏನನ್ನು ಸೂಚಿಸುತ್ತವೆಯೊ ಅದನ್ನು ಸಮರ್ಥಿಸುತ್ತವೆ. ಇಪ್ಪತ್ತನೇ ಶತಮಾನದ ಆರಂಭದಲ್ಲಿ ಬ್ರಿಟಿಷ್ ಭಾರತದಲ್ಲಿ ಆಹಾರಧಾನ್ಯಗಳ ತಲಾ ಲಭ್ಯತೆಯು ವಾರ್ಷಿಕ ಸುಮಾರು 200 ಕೆಜಿಯಷ್ಟಿತ್ತು. ಇದು ಸ್ವಾತಂತ್ರ‍್ಯದ ಸಮಯದ ವೇಳೆಗೆ ಸುಮಾರು 138 ಕೆಜಿಗೆ ಒಂದೇ ಸಮನಾಗಿ ಇಳಿಯಿತು. ಅಥವಾ, 1946-47ಕ್ಕೆ ಅಂತ್ಯಗೊಂಡ ಐದು ವರ್ಷಗಳ ಸರಾಸರಿಯನ್ನು ತೆಗೆದುಕೊಂಡರೆ, ತಲಾ ಲಭ್ಯತೆಯು ವಾರ್ಷಿಕ 150 ಕೆಜಿಗಿಂತ ತುಸು ಕಡಿಮೆ ಇತ್ತು. ಸ್ವಾತಂತ್ರ‍್ಯಾನಂತರದಲ್ಲಿ, ಈ ಇಳಿಮುಖ ಪ್ರವೃತ್ತಿಯನ್ನು ಸುಮಾರು 1980ರ ದಶಕದ ಅಂತ್ಯದ ವೇಳೆಗೆ ತಿರುಗುಮುರುಗು ಮಾಡಲಾಯಿತು. ಅಂದಿನಿಂದ ತಲಾ ಆಹಾರಧಾನ್ಯದ ಲಭ್ಯತೆಯು ಹೆಚ್ಚು ಕಡಿಮೆ (ಒಂದು ಇಳಿಕೆಯ ನಂತರದ ಚೇತರಿಕೆಯೊಂದಿಗೆ) ಸ್ಥಿರವಾಗಿಯೇ ಉಳಿದಿದೆ. ಆದರೆ, ಜನಸಂಖ್ಯೆಯ ಮೇಲ್ತುದಿಯ ಶೇ. 10ರಷ್ಟು ಮಂದಿ (ಶ್ರೀಮಂತರು ಮತ್ತು ಅವರ ಶ್ರೀಮಂತಿಕೆ ಹೆಚ್ಚುತ್ತಾ ಹೋದದ್ದನ್ನು ನಾವು ಗಮನಿಸಿದ್ದೇವೆ) ಬಳಸುವ ಸಂಸ್ಕರಿತ ಆಹಾರಗಳಿಗೆ ಮತ್ತು ಧಾನ್ಯ-ರೂಪದ ಪಶು ಆಹಾರ ಉತ್ಪನ್ನಗಳಿಗೆ ಬೇಕಾಗುವ ಧಾನ್ಯಗಳ ಪರೋಕ್ಷ ಬಳಕೆಯ ಪ್ರಮಾಣವನ್ನು ನಾವು ಸರಿಯಾಗಿ ಊಹಿಸಿ ಲೆಕ್ಕಹಾಕಿದರೆ, ಆಗ ಧಾನ್ಯಗಳ ತಲಾ ಬಳಕೆಯ ಮಟ್ಟದಲ್ಲಿ ಏರಿಕೆ ಕಂಡುಬರುತ್ತದೆ. ಆಗ, ಉಳಿದ ಜನರ ತಲಾ ಲಭ್ಯತೆ ಕಡಿಮೆಯಾಗಿರಲೇಬೇಕು.

ಹಾಗಾಗಿ, ನಾವು ಸ್ಥೂಲ ಚಿತ್ರವನ್ನು ತೆಗೆದುಕೊಳ್ಳಲಿ ಅಥವಾ ಎನ್‌ಎಸ್‌ಎಸ್ ನಡೆಸಿದ ಗ್ರಾಹಕ ವೆಚ್ಚ ಸಮೀಕ್ಷೆಯ ಫಲಿತಾಂಶಗಳನ್ನು ತೆಗೆದುಕೊಳ್ಳಲಿ, ಅದರಿಂದ ಸುಸಂಗತವಾಗಿ ಹೊರಹೊಮ್ಮುವ ಸಂಗತಿ ಏನೆಂದರೆ, ಸಂಪೂರ್ಣ ಬಡತನದಲ್ಲಿರುವವರ ಅನುಪಾತವು ಏರಿಕೆಯಾಗಿದೆ ಎಂಬುದು. ಡಿರಿಜಿಸ್ಟ್ ಅವಧಿಯಲ್ಲಿ ಬಹುಶಃ ಇಳಿಯುತ್ತಿದ್ದಿರಬಹುದಾದ ಈ ಪ್ರಮಾಣವು ನವ-ಉದಾರವಾದದ ಅಡಿಯಲ್ಲಿ ಏರಿಕೆಯಾಗಿದೆ.

ಈ ಸತ್ಯಾಂಶವನ್ನು ನವ-ಉದಾರವಾದದ ಪ್ರಚಾರಕರು ಅಡಗಿಸುವುದು ಮಾತ್ರವಲ್ಲದೆ, ನವ-ಉದಾರವಾದಿ ಯುಗವು ಎಲ್ಲರಿಗೂ ಹಾಲು-ಜೇನಿನ ಅವಧಿಯಾಗಿದೆ ಎಂದು ಸಾಬೀತುಪಡಿಸಲು, ಅಪ್ರಾಮಾಣಿಕವಾಗಿ, ಹಲವಾರು ಕುತಂತ್ರಗಳನ್ನು ಬಳಸುತ್ತಾರೆ.

ವಿಡಿಯೊ ನೋಡಿ: ಕುವೆಂಪು ಚಿಂತನೆಯಲ್ಲಿ ಮಹಿಳೆ – ಪಿ. ಭಾರತೀದೇವಿ ಅಭಿಮತ Janashakthi Media

 

Donate Janashakthi Media

Leave a Reply

Your email address will not be published. Required fields are marked *