ನೆಲ್ಸನ್ ಮಂಡೇಲಾ 20ನೇ ಶತಮಾನ ಕಂಡ ಮಹಾನ್ ನಾಯಕ. ದಕ್ಷಿಣ ಆಫ್ರಿಕಾದಲ್ಲಿನ ವರ್ಣಬೇದ ನೀತಿಯ ವಿರುದ್ದ ಚಳುವಳಿಯನ್ನು ಕೈಗೊಂಡ ಇವರನ್ನು ಆಫ್ರಿಕಾದ ಗಾಂಧಿ ಎಂದೇ ಕರೆಯುತ್ತಾರೆ. ಇಂತಹ ಮಹಾನ್ ನಾಯಕನಿಗೆ ಇಂದು 103 ನೇ ಜನ್ಮ ದಿನ.
ದಕ್ಷಿಣ ಆಫ್ರಿಕಾದ ಟೆಂಬೂ ರಾಯಲ್ ಕುಟುಂಬದಲ್ಲಿ ಜುಲೈ 18, 1918 ರಂದು ಜನಿಸಿದ ಮಂಡೇಲಾ. ಮೂಲತಃ ಕಾನೂನು ಪದವಿಧರ. 1943 ರಲ್ಲಿ ಆಫ್ರಿಕನ್ ನ್ಯಾಷನಲ್ ಕಾಂಗ್ರೆಸ್ (ಎ ಎನ್ ಸಿ) ಪಕ್ಷವನ್ನು ಸೇರಿದ ಇವರು ಮುಂದೆ 1944ರಲ್ಲಿ ಯೂತ್ ಲೀಗ್ ನ್ನು ಸ್ಥಾಪಿಸಿದರು. ಆಫ್ರಿಕಾದಲ್ಲಿ ನಾಷನಲ್ ಪಾರ್ಟಿ ಅಧಿಕಾರಕ್ಕೆ ಬಂದ ನಂತರ ಆಡಳಿತದಲ್ಲಿ ಹೆಚ್ಚಾಗಿ ಕೇವಲ ಬಿಳಿಯರಿಗೆ ಅನೂಕೂಲತೆಯನ್ನು ನೀಡಿತು. ಇದರಿಂದ ಮಂಡೇಲಾ ಈ ವ್ಯವಸ್ಥೆಯನ್ನು ಕಿತ್ತೊಗೆಯಲು ಎ.ಎನ್.ಸಿ ಪಕ್ಷದ ಮೂಲಕ ಶ್ರಮಿಸಿದರು. ಮುಂದೆ ಅವರು ಎ.ಎನ್.ಸಿ ಯ ಟ್ರಾನ್ಸಾವಲ್ ಶಾಖೆಯ ಅಧ್ಯಕ್ಷರಾಗಿ ಮುಂದೆ ಸರ್ಕಾರದ ಕಾನೂನುಗಳನ್ನು ಉಲ್ಲಂಘಿಸಿದರು. ಇದರಿಂದಾಗಿ ಅವರು ಹಲವು ಬಾರಿ ಬಂಧನಕ್ಕೆ ಕೂಡ ಒಳಗಾಗಬೇಕಾಯಿತು.
ಮಾರ್ಕ್ಸವಾದಿ ವಿಚಾರಗಳಿಂದ ಪ್ರಭಾವಿತರಾದ ಮಂಡೇಲಾ ಮುಂದೆ ರಹಸ್ಯವಾಗಿ ನಿಷೇದಕ್ಕೆ ಒಳಗಾಗಿದ್ದ ದಕ್ಷಿಣ ಆಫ್ರಿಕಾದ ಕಮುನಿಸ್ಟ್ ಪಕ್ಷವನ್ನು ಸೇರಿದ ಮೇಲೆ ಉಮ್ಕಾಂತೋ ವೀ ಸಿಜ್ವೆ ಎನ್ನುವ ಸಂಘಟನೆಯನ್ನು 1961ರಲ್ಲಿ ಹುಟ್ಟುಹಾಕಿ ಸರ್ಕಾರದ ವಿರುದ್ದ ಚಳುವಳಿಯನ್ನು ತೀವ್ರಗೊಳಿಸಿದರು.
ಇದರ ಪರಿಣಾಮವಾಗಿ ಅವರನ್ನು ರಿವೊನಿಯಾ ಪ್ರಕರಣದಲ್ಲಿ ಬಂಧಿಸಲಾಯಿತು. ಮಂಡೇಲಾ ಸುಮಾರು 27 ವರ್ಷಗಳ ಕಾಲ ಜೈಲು ವಾಸವನ್ನು ಅನುಭವಿಸಬೇಕಾಯಿತು. ಮುಂದೆ ಅಂತರಾಷ್ಟ್ರೀಯ ಮಟ್ಟದಲ್ಲಿ ಮಂಡೇಲಾ ಬಿಡುಗಡೆ ತೀವ್ರ ಒತ್ತಡ ಹೆಚ್ಚಿದ್ದರ ಪರಿಣಾಮವಾಗಿ ಅಧ್ಯಕ್ಷ ಎಫ್ ಡಬ್ಲ್ಯೂ ಕ್ಲರ್ಕ್ 1990 ರಲ್ಲಿ ಮಂಡೇಲಾರನ್ನು ಬಿಡುಗಡೆಗೊಳಿಸಿದರು. ಮುಂದೆ 1994 ರಲ್ಲಿನ ಸಾರ್ವತ್ರಿಕ ಚುನಾವಣೆಯಲ್ಲಿ ಭರ್ಜರಿ ವಿಜಯಸಾಧಿಸುವುದರ ಮೂಲಕ ದಕ್ಷಿಣ ಆಫ್ರಿಕಾದ ಅಧ್ಯಕ್ಷರಾಗಿ ಆಯ್ಕೆಯಾದರು. ಆದರೆ ಅವರು ಎರಡನೇ ಬಾರಿಗೆ ಅಧ್ಯಕ್ಷರಾಗಿ ಮುಂದುವರೆಯಲು ನಿರಾಕರಿಸಿದರು. ಇಂತಹ ಮಂಡೇಲಾ ಮುಂದೆ ತಮ್ಮ 95 ವಯಸ್ಸಿನಲ್ಲಿ ಡಿಸೆಂಬರ್ 5 2013 ರಂದು ನಿಧನರಾದರು.
ಇಡೀ ಜಗತ್ತಿನಾದ್ಯಂತ ಮಂಡೇಲಾರನ್ನು ಸಾಮಾಜಿಕ ನ್ಯಾಯ ಮತ್ತು ಪ್ರಜಾಪ್ರಭುತ್ವದ ಹರಿಕಾರ ಎಂದು ಕರೆಯಲಾಗುತ್ತದೆ. ಇವರ ಕಾರ್ಯವನ್ನು ಮೆಚ್ಚಿ ನೊಬೆಲ್ ಶಾಂತಿ ಪುರಸ್ಕಾರ ಸಹಿತ ಸುಮಾರು 250 ಪ್ರಶಸ್ತಿಗಳು ಇವರಿಗೆ ದೊರತಿವೆ. ಇವರ ಆತ್ಮಕತೆ “ಲಾಂಗ್ ವಾಕ್ ಟು ದಿ ಫ್ರೀಡಂ” ಮಂಡೇಲಾರ ಹೋರಾಟದ ಹೆಜ್ಜೆ ಗುರುತುಗಳನ್ನು ದಾಖಲಿಸಿದೆ.
ಮಂಡೆಲಾ ಕುರಿತು ಕನ್ನಡದ ಸಾಹಿತಿ ಮತ್ತು ಪತ್ರಕರ್ತರಾಗಿದ್ದ ಪಿ.ಲಂಕೇಶ್ ರವರು “ಮರೆಯುವ ಮುನ್ನ” ಎಂಬ ತಮ್ಮ ಕೃತಿಯಲ್ಲಿ ಹೀಗೆ ಧಾಖಲಿಸಿದ್ದಾರೆ.
ನಿಜವಾದ ಮನುಷ್ಯ : “ನೆಲ್ಸನ್ ಮಂಡೇಲಾ ಇಪ್ಪತ್ತೇಳು ವರ್ಷ ಜೈಲಲ್ಲಿದ್ದವನು; ಕಠಿಣ ಸಜೆ ವಿಧಿಸಿದ್ದರಿಂದ ಕಲ್ಲು ಒಡೆದು ಕಲ್ಲಿನ ಚೂರುಗಳಿಂದ ಕಣ್ಣು ಐಬುಗೊಳಿಸಿಕೊಂಡವನು. ಬಿಳಿಯರ ಅವಾಂತರಗಳನ್ನು, ದಬ್ಬಾಳಿಕೆಯನ್ನು ಜೈಲಿನಿಂದಲೇ ನೋಡುತ್ತಾ ದಿಗ್ಭ್ರಮೆಗೊಳ್ಳುತ್ತಿದ್ದ ದಕ್ಷಿಣ ಆಫ್ರಿಕಾದ ಧೀರ ಸ್ವಾತಂತ್ರ್ಯ ಯೋಧ ಈತ. ಆತನ ಜೀವನ ಪೂರ್ತಿ ಜೈಲಲ್ಲಿ ಇಂಗಿಹೋಯಿತು. ಆದರೆ ಆತನ ಕೀರ್ತಿ ಎಲ್ಲೆಲ್ಲೂ ಹಬ್ಬಿತು.
ಜೈಲಿನಿಂದ ಬಿಡುಗಡೆಗೊಂಡೊಡನೆ ಆಫ್ರಿಕನ್ ನ್ಯಾಷನಲ್ ಕಾಂಗ್ರೆಸ್ ನಿಂದ ಚುನಾಯಿತನಾಗಿ ದಕ್ಷಿಣ ಆಫ್ರಿಕಾದ ಅಧ್ಯಕ್ಷನಾದ. ಇಡೀ ಜಗತ್ತಿನ ಆದರ್ಶ -model- ರಾಜಕಾರಣಿಯಾದ. ಸೇಡು, ದ್ವೇಷ, ನೆನಪು- ಎಲ್ಲವನ್ನೂ ಹತ್ತಿಕ್ಕಿ ಮನುಷ್ಯನ ವಿಚಿತ್ರ ಗುಣಗಳನ್ನು ಅರ್ಥಮಾಡಿಕೊಂಡು ಆಡಳಿತ ನಡೆಸಿದ. ಈತ ಇಪ್ಪತ್ತನೆಯ ಶತಮಾನದ ಅದ್ಭುತಗಳಲ್ಲಿ ಒಂದು…
ಮಂಡೇಲಾ ತನ್ನ ಅಧ್ಯಕ್ಷಗಿರಿಗೆ ರಾಜೀನಾಮೆ ಸಲ್ಲಿಸಿದಾಗ ನಿಜಕ್ಕೂ ಖಾಸಗಿ ಮನುಷ್ಯನಾದ; ಯಾವುದೇ ಸರ್ಕಾರಿ ಕಿರಿಕಿರಿ ಇಲ್ಲದ ಸುಖದ ವ್ಯಕ್ತಿಯಾದ.
ಈ ಸುಖವನ್ನು ಸುಖ ಎಂದು ತಿಳಿಯಬಲ್ಲವ ದೇಶದ ಸುಖವನ್ನು ಬಯಸುತ್ತಾನೆ ಎನ್ನುವುದು ಇದರಿಂದೆಲ್ಲ ನನ್ನ ಪುಟ್ಟ ತೀರ್ಮಾನ. ಈತ ಆಹ್ವಾನಿಸಿದ ಪತ್ರಕರ್ತರಲ್ಲಿ ಒಬ್ಬ ಕೇಳಿದ:
ಎಂಭತ್ತು ವರ್ಷದ ನೀವು ಮುಂದೆ ಏನು ಮಾಡುತ್ತೀರಿ?
ಮಂಡೇಲಾ: ನಾನು ಹುಟ್ಟೂರಿಗೆ ಹೋಗಿ ನಮ್ಮೂರ ಗುಡ್ಡ, ಪರ್ವತ, ನದಿ, ಕಾಡಿನ ಸುತ್ತ ಸಂಚರಿಸುತ್ತೇನೆ; ನನ್ನ ಬಾಲ್ಯದ ದಿನಗಳನ್ನು ನೆನೆಯುತ್ತಾ ನನ್ನ ಏಳು ಜನ ಮೊಮ್ಮಕ್ಕಳೊಂದಿಗೆ ಕಾಲ ಕಳೆಯುತ್ತೇನೆ…
ಎಲ್ಲರೂ ಮಂಡೇಲಾನ ಉತ್ತರದಿಂದ ಮೂಕ ವಿಸ್ಮಿತರಾದರು. ಆತ ನಿಜವಾದ ಮನುಷ್ಯನಂತೆ, ಮನುಷ್ಯನ ನೋವು, ಏಕಾಂಗಿತನ, ಸುಖ, ದುಃಖ ಬಲ್ಲವನಂತೆ ಮಾತಾಡಿದ್ದ…”
ಕನ್ನಡ ನಾಡಿನ ಸಾಕ್ಷಿ ಪ್ರಜ್ಞೆಯಾಗಿರುವ ದೇವನೂರು ಮಹದೇವರವರು ಮಂಡೆಲಾ ನಿಧನರಾದಾಗ ಪತ್ರಿಕೆಯೊಂದಕ್ಕೆ ಹೀಗೆ ಪ್ರತಿಕ್ರಿಯಿಸಿದ್ದರು.
“ಜಗತ್ತಿನ ಬೆಳಕು ನೆಲ್ಸನ್ ಮಂಡೆಲಾ”
ಡಿಸೆಂಬರ್ 6 ರಂದೇ ನೆಲ್ಸನ್ ಮಂಡೇಲಾ ಕಾಲದೊಂದಿಗೆ ಸೇರಿಬಿಟ್ಟರು. ಮಂಡೇಲಾರ ಮುಖ ಕಣ್ಮುಂದೆ ಬಂದಾಗಲೆಲ್ಲಾ, ಈ ವ್ಯಕ್ತಿ 27 ವರ್ಷಗಳ ಕಾಲ ಜೈಲಿನಲ್ಲಿದ್ದು ಹೊರಬಂದಾಗ ಜೈಲಲ್ಲಿ ಇದ್ದ ಯಾವ ಲಕ್ಷಣಗಳೂ ಆ ಜೀವದಲ್ಲಿ ಕಾಣುತ್ತಿಲ್ಲವಲ್ಲಾ ಮಂಡೇಲಾರ ಮಹಿಮೆ ಏನು ಎಂಬುದೇ ನನ್ನ ಮನಸ್ಸಿಗೆ ಬರುತ್ತಿತ್ತು. ಮುಂದೆ ಇದಕ್ಕೊಂದು ಜಾನಪದ ಕತೆಯ ರೀತಿಯ ಉತ್ತರವೂ ಸಿಕ್ಕಿತು. ಅದು ನಿಜವೋ ಸುಳ್ಳೋ ತಿಳಿಯದು- ಮಂಡೇಲಾ ಸ್ಥಳೀಯ ರಾಜನೊಬ್ಬನ ಮಗನಂತೆ. ಮಹಾ ಸೋಮಾರಿಯಂತೆ. ಹೆಚ್ಚು ನಿದ್ದೆ ಮಾಡುತ್ತಿದ್ದನಂತೆ. ಹಾಗಾಗಿ ಅವರಿಗೆ ಜೈಲಿನ ಜಗತ್ತಿಗೂ ಹೊರಗಿನ ಜಗತ್ತಿಗೂ ಅಂಥ ವ್ಯತ್ಯಾಸವೆ ತಿಳಿಯುತ್ತಿರಲಿಲ್ಲವಂತೆ – ಇದು ಕತೆ.
ಇದರ ಅರ್ಥ- ಮಂಡೇಲಾ ಇದ್ದರು. ಕೇಡಿನ ಸೋಂಕಿಲ್ಲದ ಒಳ್ಳೆತನದ ಅವರ ಇರುವಿಕೆಯೇ ಬುದ್ಧ ಕ್ರೈಸ್ತರ ಇರುವಿಕೆಯಂತೆ ಸುತ್ತಲನ್ನೂ ಆವರಿಸಿಕೊಳ್ಳುತ್ತಿತ್ತೇನೋ. ಅವರ ಇಡೀ ದೇಹವೇ ಬಹುಶಃ, ಹೃದಯ ಮಾತ್ರವಾಗಿತ್ತು ಕಾಣುತ್ತದೆ. ಆ ಹೃದಯದ ಬಡಿತಗಳು ಆ ದೇಹದ ಉಸಿರಾಟಗಳು ಮನುಷ್ಯ ಎಂಬ ಹೆಸರಲ್ಲಿ ಹುಟ್ಟಿದ ಮನುಷ್ಯನನ್ನು ಮಾನವೀಯನಾಗು ಅಂತಿತ್ತು. ಹಾಗಾಗೇ ದಕ್ಷಿಣ ಆಫ್ರಿಕಾ ಸ್ವತಂತ್ರ್ಯ ಪಡೆದ ಮೇಲೆ ಮಂಡೇಲಾರ ಇರುವಿಕೆಯ ಕಾರಣವಾಗೇ ’ಟ್ರೂತ್ ಅಂಡ್ ರಿಕನ್ಸಿಲಿಯೇಷನ್’ (ನಿಜ ಒಪ್ಪಿಕೊಂಡು ಮತ್ತೆ ಒಂದಾಗುವ ಪ್ರಕ್ರಿಯೆ) ಆಯೋಗ ರಚನೆಯಾಗುವುದು ಸಾಧ್ಯವಾಯಿತು. ಮಂಡೇಲಾ ಕರಿಯ-ಬಿಳಿಯರೆನ್ನದೆ ಆ ಮನುಷ್ಯರನ್ನೆಲ್ಲಾ ವಿಮೋಚನೆಗೊಳಿಸುವತ್ತ ಹೆಜ್ಜೆಯಿಟ್ಟರು. ಜಗತ್ತಿನ ಬೆಳಕಾದರು.
ಈ ಜಗತ್ತಿನ ಬೆಳಕು ಡಿಸೆಂಬರ್ ಆರರಂದು ಡಿಸೆಂಬರ್ ಆರರಂದೇ ಕಾಲವಶವಾದ ಇನ್ನೊಂದು ಜಗತ್ತಿನ ಬೆಳಕು ಡಾ.ಅಂಬೆಡ್ಕರ್ರ ಜತೆ ಈಗ ಕೂಡಿಕೊಂಡಿದೆ. ಅವಮಾನ ತಾರತಮ್ಯ ಬಡತನ ಸುಲಿಗೆಗೆ ತುತ್ತಾಗಿ ಹೊರಕ್ಕೆಸೆಯಲ್ಪಟ್ಟು ಜರ್ಜರಿತವಾದ ಮಾನವ ಕೋಟಿಗೆ ಬೆಳಕಾದ ಇವರು ಕಾಲವಶವಾದ ಈ ಒಂದೇ ದಿನವನ್ನು ಭೂಮಿಯ ಮೇಲೆ ಮನುಷ್ಯರೆಂಬ ಹೆಸರಿನಲ್ಲಿ ಹುಟ್ಟಿದ ನಾವು ಮಾನವೀಯಗೊಳ್ಳುವ ದಿನವಾಗಿ ಅಂದರೆ ಅವಮಾನ ತಾರತಮ್ಯ ಹಸಿವು ಸುಲಿಗೆ ಇಲ್ಲದ ಸಮಾನತೆಯ ಆಶಯದ ದಿನವನ್ನಾಗಿ ಆಚರಿಸಬೇಕಾಗಿದೆ.
ಈ ಇಬ್ಬರು ಕಾಲವಶವಾದ ದಿನವನ್ನು- ಈ ಜಗತ್ತು ಅಸಮಾನತೆಯ ’ಗ್ಲೋಬಲ್ ವಿಲೇಜ್’ ಕಡೆಗಲ್ಲ, ಸಮಾನತೆಯ ’ವಿಶ್ವಕುಟುಂಬ’ದ ಕಡೆಗೆ ಹೆಜ್ಜೆ ಹಾಕುವ ಕನಸಿನ ದಿನವನ್ನಾಗಿಸಬೇಕಾಗಿದೆ.
ಎಚ್.ಆರ್. ನವೀನ್ ಕುಮಾರ್, ಹಾಸನ