ಮರ-ಗಿಡಗಳ ಮರೆಯಲ್ಲಿ ಬಟ್ಟೆ ಬದಲಾಯಿಸಿದ ಮಹಿಳಾ ಕ್ರೀಡಾಪಟುಗಳು – ಅವ್ಯವಸ್ಥೆಗೆ ಪೋಷಕರು ಗರಂ

ನೆಲಮಂಗಲ: ನೆಲಮಂಗಲದಲ್ಲಿ ಗ್ರಾಮಾಂತರ ಶಿಕ್ಷಣ ಇಲಾಖೆ ಆಯೋಜಿಸಿರುವ ಹೋಬಳಿ ಮಟ್ಟದ ಕ್ರೀಡಾಕೂಟದ ಅವ್ಯವಸ್ಥೆ ಇಡೀ ಜಿಲ್ಲಾಡಳಿತವೇ ತಲೆತಗ್ಗಿಸುವಂತೆ ಮಾಡಿದೆ.  ಜಿಲ್ಲಾಡಳಿತ ಮತ್ತು ಸರಕಾರದ ಅವವ್ಯಸ್ಥೆಯ ವಿರುದ್ಧ ಪೋಷಕರು ಗರಂ ಆಗಿದ್ದಾರೆ.

ನೆಲಮಂಗಲದ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ನಾಲ್ಕೂ ದಿನಗಳಿಂದ ನಡೆಯುತ್ತಿರುವ ಕ್ರೀಡಾಕೂಟದಲ್ಲಿ ಕುಡಿವ ನೀರು, ಶೌಚಗೃಹ, ಉಪಹಾರ, ಆಂಬುಲೆನ್ಸ್ ಸೇರಿ ಯಾವುದೇ ಸೌಲಭ್ಯ ಇಲ್ಲವಾಗಿದೆ. ವಿದ್ಯಾರ್ಥಿನಿಯರು ಗುಂಪುಕಟ್ಟಿಕೊಂಡು ಮರಗಿಡಗಳ ಮರೆಯಲ್ಲಿ ಡ್ರಸ್ ಬದಲಿಸುವ ದುಸ್ಥಿತಿ ನೋಡಿದರೆ ಹಳ್ಳಹಿಡಿಯುತ್ತಿರುವ ಸರಕಾರ ಮತ್ತು ಜಿಲ್ಲಾಡಳಿತದ ಕಾರ್ಯವೈಖರಿಯನ್ನು ಅಣಕ ಮಾಡುವಂತಿದೆ.

500ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಪಾಲ್ಗೊಂಡಿರುವ ಈ ಕ್ರೀಡಾಕೂಟದಲ್ಲಿ ಮಹಿಳಾ ಕ್ರೀಡಾಪಟುಗಳಿಗೆ ಬಟ್ಟೆ ಬದಲಿಸಲು ಕನಿಷ್ಠ ವ್ಯವಸ್ಥೆಯೂ ಇಲ್ಲ. ಕ್ರೀಡಾಂಗಣದಲ್ಲಿರುವ ಕೊಠಡಿಗೂ ಬೀಗ ಹಾಕಿದ್ದು, ಕ್ರೀಡಾಂಗಣದ ಮರಗಿಡಗಳ ಮರೆಯಲ್ಲಿ ಬಟ್ಟೆ ಬದಲಿಸುವ ಅನಿವಾರ್ಯತೆ ಸೃಷ್ಟಿಯಾಗಿದ್ದು, ತೀವ್ರ ಮುಜುಗರ ಎದುರಿಸುವಂತಾಯಿತು ಎಂದು ಕ್ರೀಡಾಪಟುಗಳು ಅಳಲು ತೋಡಿಕೊಂಡರು.

ಹೆಣ್ಣುಮಕ್ಕಳ ಖಾಸಗಿತನಕ್ಕೆ ಬೆಲೆ ಕೊಡದ ಶಿಕ್ಷಣ ಇಲಾಖೆ ದುರ್ವರ್ತನೆಗೆ ಬೇಸತ್ತ ಪಾಲಕರು ಇನ್ಯಾವತ್ತೂ ನಮ್ಮ ಮಕ್ಕಳನ್ನು ಇಂಥ ಕ್ರೀಡಾಕೂಟಗಳಿಗೆ ಕಳುಹಿಸಲ್ಲ ಎಂದು ಅಸಹನೆ ವ್ಯಕ್ತಪಡಿಸಿದ್ದಾರೆ. ಕೆಲ ಪಾಲಕರು ಈಗಾಗಲೇ ತಮ್ಮ ಮಕ್ಕಳನ್ನು ಕರೆದುಕೊಂಡು ಮನೆಗಳತ್ತ ಹೆಜ್ಜೆ ಹಾಕಿದ್ದಾರೆ.

ಅವ್ಯವಸ್ಥೆ ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಗುರುವಾರ ಸ್ಥಳಕ್ಕೆ ಭೇಟಿ ನೀಡಿದ ತಹಸೀಲ್ದಾರ್ ಕೆ.ಮಂಜುನಾಥ್ ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡರು. ನಿಮ್ ಹೆಣ್ಮಕ್ಕಳಾಗಿದ್ರೆ ಹೀಗೆ ಮಾಡ್ತೀರಾ? ಸರ್ಕಾರಿ ಶಾಲಾ ಮಕ್ಕಳು ಅಂದ್ರೆ ಅಷ್ಟೊಂದು ಉದಾಸೀನಾನ? ನಿಮ್ಮ ಕರ್ತವ್ಯಲೋಪಕ್ಕೆ ನಾವೆಲ್ಲ ತಲೆತಗ್ಗಿಸುವಂತಾಗಿದೆ..’ ಕ್ರೀಡಾಕೂಟ ಆಯೋಜಕರ ಬೇಜಬ್ದಾರಿಯಿಂದ ಸಾರ್ವಜನಿಕರ ಕೆಂಗಣ್ಣಿಗೆ ಗುರಿ ಆಗುವಂತಾಗಿದೆ ಎಂದು ಕಿಡಿಕಾರಿದರು. ಸ್ವಚ್ಛತೆಗೆ ಆದ್ಯತೆ ನೀಡಬೇಕು, ಕುಡಿಯುವ ನೀರು, ಪೊಲೀಸ್ ಬಂದೋಬಸ್ತ್, ಪ್ರಥಮ ಚಿಕಿತ್ಸೆಗೆ ಆಯಂಬುಲೆನ್ಸ್ ವ್ಯವಸ್ಥೆ ಕಲ್ಪಿಸುವಂತೆ ತಾಕೀತು ಮಾಡಿದರು.

ಕ್ರೀಡಾಂಗಣದಲ್ಲಿನ ಕೊಠಡಿಯೊಂದನ್ನು ತಾತ್ಕಾಲಿಕವಾಗಿ ಬಟ್ಟೆ ಬದಲಿಸಿಕೊಳ್ಳಲು ಅನುಕೂಲ ಮಾಡಿಕೊಡಿ, ಇನ್ನು ಮುಂದೆ ಇಂಥ ಅವ್ಯವಸ್ಥೆ ಪುನಾವರ್ತನೆಯಾದರೆ ಶಿಸ್ತುಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

Donate Janashakthi Media

Leave a Reply

Your email address will not be published. Required fields are marked *