ನೆಲಮಂಗಲ : ಗ್ರಾಪಂ ಕಚೇರಿಯಲ್ಲಿ ಕಳ್ಳತನ

ನೆಲಮಂಗಲ: ಮಂಗಳೂರಯ ಹೆದ್ದಾರಿ 75ಕ್ಕೆ ಹೊಂದಿಕೊಂಡಂತ್ತಿರುವ ಯಂಟಗನಹಳ್ಳಿ ಗ್ರಾಪಂ ಕಚೇರಿಯ ಬೀಗ ಹೊಡೆದ ಖದೀಮರು ಕೆಲ ದಾಖಲಾತಿಗಳನ್ನು ಕಳ್ಳತನ ಮಾಡಿರುವ ಘಟನೆ ನೆಲಮಂಗಲ ಗ್ರಾಮಾಂತರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ನೆಲಮಂಗಲ ತಾಲೂಕಿನ ಯಂಟಗನಹಳ್ಳಿ ಗ್ರಾಪಂ ಕಚೇರಿಗೆ ಅಧಿಕಾರಿಗಳು ಶನಿವಾರ ಸಂಜೆ ಕಚೇರಿ ಸಮಯ ಮುಗಿದ ಬಳಿಕ ಬೀಗ ಹಾಕಿ ಮನೆಗೆ ಹೋಗಿದ್ದರು. ಭಾನುವಾರ ಬೆಳಗ್ಗೆ ರಾಷ್ಟ್ರಧ್ವಜ ಹಾರಿಸಲು ಸಿಬ್ಬಂದಿ ಕಚೇರಿಗೆ ಬಂದಾಗ ಬೀಗ ಮುರಿದು ಕಳ್ಳತನ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

ಅಧಿಕಾರಿಗಳು ಹಾಗೂ ಪೊಲೀಸರಿಗೆ ಸಿಬ್ಬಂದಿ ಮಾಹಿತಿ ನೀಡಿದ್ದು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ ಬಳಿಕ ಬೆರಳಚ್ಚು ತಜ್ಞರ ಪರಿಶೀಲನೆ ನಡೆಸಿ ಖದೀಮರು ಬಿಟ್ಟು ಹೋಗಿರುವ ಕೆಲ ಸಾಕ್ಷಿಗಳನ್ನು ಕಲೆಹಾಕಿದ್ದಾರೆ ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಡಿವೈಎಸ್‌ಪಿ ಜಗದೀಶ್‌, ಇನ್‌ಸ್ಪೆಕ್ಟರ್‌ ರಾಜೀವ್‌ ಭೇಟಿ ನೀಡಿ ಹೆಚ್ಚಿನ ಮಾಹಿತಿ ಕಲೆಹಾಕಿದ್ದಾರೆ.

ಯಂಟಗನಹಳ್ಳಿ ಗ್ರಾಪಂ ಕಚೇರಿಗೆ ಖದೀಮರು ಹಣಕ್ಕಾಗಿ ಬಂದಿಲ್ಲ ಎಂಬುದು ಮೇಲ್ನೋಟಕ್ಕೆ ಕಂಡುಬಂದಿದ್ದು, ಕೆಲ ಪೈಲ್‌ಗಳನ್ನು ಹುಡುಕಿರುವುದು ಕಂಡುಬಂದಿದೆ, ಕಚೇರಿಯಲ್ಲಿ ಪೈಲ್‌ಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು ನರೇಗಾ ಹಾಗೂ ಕೆಲವು ಆಸ್ತೀ ಖಾತೆಗೆ ಸೇರಿದ ಪೈಲ್‌ಗಳನ್ನು ತೆಗೆದುಕೊಂಡು ಹೋಗಿರುವ ಶಂಕೆ ವ್ಯಕ್ತವಾಗಿದೆ. ಅನೇಕ ಸಾಕ್ಷಿಗಳ ನಾಶಕ್ಕೆ ಪ್ರಯತ್ನಮಾಡಿದ್ದಾರೆ ಎಂಬ ಅನುಮಾನಗಳು ಘಟನಾಸ್ಥಳದಲ್ಲಿ ಕಂಡು ಬಂದಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಚೇರಿಯಲ್ಲಿ ಪೈಲ್‌ಗಳ ಮಾಹಿತಿ, ಸಿಸಿಟಿವಿಯ ಮಾಹಿತಿ, ಕಚೇರಿಯ ಬೀರು, ಡ್ರಾಯರ್‌ಗಳ ಕೀ ಇರುವ ಮಾಹಿತಿ ಬಲ್ಲವರೇ ಪ್ರಕರಣದಲ್ಲಿ ಭಾಗಿಯಾಗಿರುವ ಶಂಕೆ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದ್ದು ಸಿಸಿಟಿವಿಯ ಡಿವಿಆರ್‌ ಸಹ ತೆಗೆದುಕೊಂಡು ಹೋಗಿದ್ದಾರೆ. ಈಗಾಗಲೆ ಹಲವು ಭಾರಿ ಪಂಚಾಯತಿ ಕಚೇರಿಗೆ ಭೇಟಿ ನೀಡಿ ಕಚೇರಿಯ ಸಂಪೂರ್ಣ ಮಾಹಿತಿ ಹೊಂದಿರುವ ತಂಡದ ಕೈಚಳಕ ಇದಾಗಿದೆ, ಅದರಲ್ಲೂ ಕಾರ್ಯದರ್ಶಿ ಬೀರು ಮುಟ್ಟ ದಿರುವ ಖದೀಮರ ಕೈಚಳಕ ಅನುಮಾನ ಮೂಡಿಸಿದೆ.

ಸದಾ ಹೆದ್ದಾರಿಯಲ್ಲಿ ನೂರಾರು ವಾಹನಗಳು ಓಡಾಡುತಿದ್ದರೂ ಹೆದರದೆ ಕಳ್ಳತನ ಮಾಡಲು ಮುಂದಾಗಿರುವ ಕಳ್ಳರು ಘಟನಾಸ್ಥಳಕ್ಕೆ ಹಾಗೂ ಕಚೇರಿಗೆ ಹೊಸಬರಲ್ಲ ಎಂಬುದು ಮೇಲ್ನೋಟಕ್ಕೆ ತಿಳಿಯುತ್ತದೆ.ಇದನ್ನು ಗಂಭೀರವಾಗಿ ತೆಗೆದುಕೊಂಡು ಖದೀಮರನ್ನು ಶೀಘ್ರದಲ್ಲಿ ಸೆರೆಹಿಡಿಯಬೇಕು ತಪ್ಪಿತಸ್ಥರಿಗೆ ಸೂಕ್ತ ಶಿಕ್ಷೆಯಾಗಬೇಕು ಎಂದು ಯಂಟಗನಹಳ್ಳಿ ಗ್ರಾಪಂ ಅಧ್ಯಕ್ಷ ರಾಹುಲ್‌ಗೌಡ ಆಗ್ರಹಿಸಿದ್ದಾರೆ.

 

Donate Janashakthi Media

Leave a Reply

Your email address will not be published. Required fields are marked *