ನವದೆಹಲಿ: ಬಿಹಾರ ರಾಜ್ಯದ ಮುಖ್ಯಮಂತ್ರಿ ಜೆಡಿಯು ನಾಯಕ ನಿತೀಶ್ ಕುಮಾರ್ ಇಂದು(ಸೆಪ್ಟಂಬರ್ 06) ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ವಾದಿ)-ಸಿಪಿಐ(ಎಂ) ನಾಯಕ ಸೀತಾರಾಮ್ ಯೆಚೂರಿ ಅವರನ್ನು ಅವರ ಕಚೇರಿಯಲ್ಲಿ ಭೇಟಿ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ನಿತೀಶ್ ಕುಮಾರ್, ತಾವು ಪ್ರಧಾನಿ ಅಭ್ಯರ್ಥಿಯೂ ಅಲ್ಲ, ಹಕ್ಕುದಾರನೂ ಅಲ್ಲ ಎಂದು ಎಂದು ಸ್ಪಷ್ಟಪಡಿಸಿದ್ದಾರೆ.
ಬಿಹಾರದಲ್ಲಿ ಆರ್ಜೆಡಿ, ಕಾಂಗ್ರೆಸ್ನೊಂದಿಗೆ ಮೈತ್ರಿ ಸರ್ಕಾರ ರಚನೆಗೊಂಡ ನಂತರ ನಿತೀಶ್ ಕುಮಾರ್ ಪ್ರವಾಸದಲ್ಲಿದ್ದು, ದೆಹಲಿಯಲ್ಲಿ ಹಲವು ಪ್ರತಿಪಕ್ಷಗಳ ನಾಯಕರನ್ನು ಭೇಟಿಯಾಗಿದ್ದಾರೆ. ಪ್ರತಿಪಕ್ಷಗಳ ಒಗ್ಗಟ್ಟಿನ ಸಲುವಾಗಿ ದಿಲ್ಲಿಯಲ್ಲಿದ್ದೇನೆ ಎಂದು ಎಡಪಕ್ಷದ ನಾಯಕ ಸೀತಾರಾಂ ಯೆಚೂರಿ ಅವರನ್ನು ಭೇಟಿ ಮಾಡಿದ ನಂತರ ಬಿಹಾರ ಮುಖ್ಯಮಂತ್ರಿ ಹೇಳಿದರು.
Good to receive Shri @NitishKumar ji at our office today. He spoke of his commitment to unite the secular democratic opposition to save India's Constitution and safeguard the Indian Republic.
This echoes with us and all Indian patriots. https://t.co/6KadCfKS2B— Sitaram Yechury (@SitaramYechury) September 6, 2022
“ನನಗೆ ಚಿಕ್ಕಂದಿನಿಂದಲೂ ಸಿಪಿಐ(ಎಂ) ಜೊತೆ ಬಹಳ ಒಡನಾಟವಿದೆ. ನೀವೆಲ್ಲರೂ ನನ್ನನ್ನು ನೋಡಿಲ್ಲ, ಆದರೆ ನಾನು ದೆಹಲಿಗೆ ಬಂದಾಗಲೆಲ್ಲಾ ನಾನು ಈ ಕಚೇರಿಗೆ ಬರುತ್ತಿದ್ದೆ. ಇಂದು ನಾವೆಲ್ಲರೂ ಒಟ್ಟಿಗೆ ಇದ್ದೇವೆ. ಎಡಪಕ್ಷಗಳು, ಪ್ರಾದೇಶಿಕ ಪಕ್ಷಗಳು, ಕಾಂಗ್ರೆಸ್ ಅನ್ನು ಒಗ್ಗೂಡಿಸುವ ಸಂಪೂರ್ಣ ಗಮನವಾಗಿದೆ”ಎಂದು ಅವರು ಹೇಳಿದರು.
ವಿವಿಧ ಪಕ್ಷಗಳು ಒಟ್ಟಾಗಿ ಸೇರಿದರೆ ಅದೊಂದು ದೊಡ್ಡ ಬದಲಾವಣೆಗೆ ದಾರಿಯಾಗಲಿದೆ ಎಂದ ಅವರು, ವಿವಿಧ ರಾಜ್ಯಗಳಲ್ಲಿನ ಎಡಪಕ್ಷಗಳು, ಪ್ರಾದೇಶಿಕ ಪಕ್ಷಗಳು ಮತ್ತು ಕಾಂಗ್ರೆಸ್ ಒಟ್ಟಾದರೆ ಅದೊಂದು ದೊಡ್ಡ ಶಕ್ತಿಯಾಗಿ ರೂಪ ಪಡೆದುಕೊಳ್ಳಲಿದೆ ಎಂದರು.
ವಿರೋಧ ಪಕ್ಷಗಳ ನಾಯಕರ ಭೇಟಿ ಮತ್ತು ಸಭೆಗಳು 2024 ರಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಿರೋಧ ಪಕ್ಷದ ಪ್ರಧಾನಿ ಅಭ್ಯರ್ಥಿಯಾಗಿ ತಮ್ಮನ್ನು ಬೆಂಬಲಸುವ ಬಗ್ಗೆ ಪ್ರಯತ್ನಗಳನ್ನು ಸೂಚಿಸುತ್ತವೆಯೇ ಎಂಬ ಪ್ರಶ್ನೆಗಳನ್ನು ನಿತೀಶ್ ಕುಮಾರ್ ಗೆ ಕೇಳಲಾಯಿತು.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿದ ನಿತೀಶ್ ಕುಮಾರ್, ಮುಂಬರುವ ಲೋಕಸಭೆ ಚುನಾವಣೆಯ ಕಾರ್ಯತಂತ್ರ ಮತ್ತು ಸಮಾನ ಮನಸ್ಕ ಪಕ್ಷಗಳನ್ನು ಒಟ್ಟಿಗೆ ತರುವ ಸಾಧ್ಯತೆಯ ಬಗ್ಗೆ ಚರ್ಚಿಸಿದರು. ಕಾಂಗ್ರೆಸ್ ಮೂಲಗಳ ಪ್ರಕಾರ, ಬಿಹಾರದಲ್ಲಿ ಕಾಂಗ್ರೆಸ್ ಭಾಗವಾಗಿರುವ ಮಹಾಘಟಬಂಧನದೊಂದಿಗೆ ಮತ್ತೆ ಜೊತೆಗೂಡಿದ ನಂತರ ಮೊದಲ ಬಾರಿಗೆ ರಾಹುಲ್ ಗಾಂಧಿಯನ್ನು ಭೇಟಿ ಮಾಡಿ ಪಕ್ಷದ ಬೆಂಬಲ ನೀಡಿದ್ದಕ್ಕಾಗಿ ಕೃತಜ್ಞತೆ ಸಲ್ಲಿಸಿದರು.
ಸಿಪಿಐ(ಎಂ) ನಾಯಕ ಸೀತಾರಾಮ್ ಯೆಚೂರಿ ಅವರು, ನಿತೀಶ್ ಕುಮಾರ್ ಪ್ರತಿಪಕ್ಷದ ಮಡಿಲಿಗೆ ಮರಳಿದ್ದು ಮತ್ತು ಬಿಜೆಪಿ ವಿರುದ್ಧದ ಹೋರಾಟದ ಭಾಗವಾಗಲು ಅವರ ಬಯಕೆ ಭಾರತೀಯ ರಾಜಕೀಯಕ್ಕೆ ಉತ್ತಮ ಸಂಕೇತವಾಗಿದೆ. 2024 ರ ಸಾರ್ವತ್ರಿಕ ಚುನಾವಣೆಗೆ ಮುಂಚಿತವಾಗಿ ಎಲ್ಲಾ ವಿರೋಧ ಪಕ್ಷಗಳನ್ನು ಒಗ್ಗೂಡಿಸುವುದು ಮೊದಲ ಕಾರ್ಯಸೂಚಿಯಾಗಿದೆ, ಪ್ರಧಾನಿ ಅಭ್ಯರ್ಥಿಯನ್ನು ನಿರ್ಧರಿಸುವುದು ಅಲ್ಲ. ಸಮಯ ಬಂದಾಗ ನಾವು ಪ್ರಧಾನಿ ಅಭ್ಯರ್ಥಿಯನ್ನು ನಿರ್ಧರಿಸುತ್ತೇವೆ ಮತ್ತು ನಿಮಗೆಲ್ಲರಿಗೂ ತಿಳಿಸುತ್ತೇವೆ” ಎಂದು ಹೇಳಿದರು.
ದೆಹಲಿ ಪ್ರವಾಸದ ವೇಳೆ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರನ್ನೂ ಭೇಟಿ ಮಾಡಿದ್ದಾರೆ. ಎನ್ಸಿಪಿಯ ಶರದ್ ಪವಾರ್, ಎಎಪಿಯ ಅರವಿಂದ್ ಕೇಜ್ರಿವಾಲ್, ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್ ಮತ್ತು ಐಎನ್ಎಲ್ಡಿಯ ಓಂ ಪ್ರಕಾಶ್ ಚೌತಾಲಾ ಸೇರಿದಂತೆ ಇತರ ವಿರೋಧ ಪಕ್ಷದ ನಾಯಕರನ್ನು ಭೇಟಿ ಮಾಡುವ ಸಾಧ್ಯತೆಯಿದೆ.