ಮೈಸೂರು: ದೇಶದ ಮಾಜಿ ಪ್ರಧಾನ ಮಂತ್ರಿ ಜವಾಹರ್‌ಲಾಲ್ ನೆಹರೂ ಅವರು ತಮ್ಮ ಅಧಿಕಾರದ ದಿನಗಳಿಗಿಂತ ಹೆಚ್ಚಾಗಿ ಜೈಲಿವಾಸ ಅನುಭವಿಸಿದ್ದರು. ಅವರ ಇಡೀ ಕುಟುಂಬವೇ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿತ್ತು. ಇಂತಹವರ ಬಗ್ಗೆ ಲಘುವಾಗಿ ಮಾತನಾಡಿದ ಸಿ.ಟಿ.ರವಿ ಅವರಿಗೆ ಶೋಭೆ ತರುವಂತದ್ದಲ್ಲ ಎಂದು ವಿಧಾನ ಪರಿಷತ್ ಸದಸ್ಯ ಎಚ್ ವಿಶ್ವನಾಥ್ ಹೇಳಿದರು.
ಮೈಸೂರಿನಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಶ್ವನಾಥ್ ಮಾಜಿ ಪ್ರಧಾನಿಗಳಾದ ನೆಹರೂ ಮತ್ತು ಅಟಲ್ ಬಿಹಾರಿ ವಾಜಪೇಯಿ ಬಗ್ಗೆ ಲಘುವಾಗಿ ಮಾತುಗಳನ್ನಾಡುತ್ತಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಶಾಸಕ ಸಿ ಟಿ ರವಿ ಹಾಗೂ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಬಗ್ಗೆ ಪ್ರಿಯಾಂಕ್ ಖರ್ಗೆ ಇಬ್ಬರಿಗೂ ಬುದ್ದಿವಾದ ಹೇಳಿದರು.
ಕಾಂಗ್ರೆಸ್ ಶಾಸಕ ಪ್ರಿಯಾಂಕ ಖರ್ಗೆ ವಾಜಪೇಯಿ ಅವರ ಭಾಷಣಗಳನ್ನು ಕೇಳಿ ನಂತರ ಮಾತನಾಡಿ, ಅಲ್ಲದೆ ತಮ್ಮ ತಂದೆ ಮಲ್ಲಿಕಾರ್ಜುನ ಖರ್ಗೆ ಅವರನ್ನು ನೋಡಿಯಾದರೂ ಕಲಿಯಬೇಕು ಎಂದು ಕಿವಿಮಾತು ಹೇಳಿದರು.
ನೆಹರೂ ನಿಧನರಾದಾಗ ಅಟಲ್ ಬಿಹಾರಿ ವಾಜಪೇಯಿ ಅವರು ಭಾರತಾಂಬೆಯ ರಾಜಕುಮಾರನೊಬ್ಬ ಭಾರತವನ್ನುಅಗಲಿದರು ಎಂದಿದ್ದರು. ಆಗ ವಾಜಪೇಯಿ ಮಾಡಿರುವ ಭಾಷಣವನ್ನು ರವಿ ಓದಬೇಕು. ಅಲ್ಲದೇ ನೆಹರೂ ದೇಶಕ್ಕಾಗಿ ತಮ್ಮ ಆಸ್ತಿ ಬರೆದಿದ್ದಾರೆ. ರವಿ ದೇಶಕ್ಕೆ ಹತ್ತು ಪೈಸೆಯನ್ನೂ ಕೊಟ್ಟಿಲ್ಲ. ಇವರು ಬಳಸುವ ಪದಗಳನ್ನು ಗಮನಿಸಿದರೆ ಕನ್ನಡ ಕೊಲೆಯಾಗುತ್ತಿದೆ. ನೆಹರು ಬಗ್ಗೆ ಇಂತಹ ಬಾಲಿಶ ಹೇಳಿಕೆ ಕೊಡುವುದು ತಪ್ಪು ಎಂದು ಟೀಕಿಸಿದರು.
ನೆಹರೂ ಭಾರತದ ಅಸ್ಮಿತೆ. ಯಾರನ್ನೋ ರಮಿಸಲು ಹೋಗಿ ಭಾರತದ ಅಸ್ಮಿತೆಯನ್ನು, ಗೌರವವನ್ನು ಕಳೆಯಬಾರದು. ಯಾರನ್ನೋ ಮೆಚ್ಚಿಸಲಿಕ್ಕೆ ಇಂತಹ ಹೇಳಿಕೆಗನ್ನ ಕೊಡಬೇಡಿ. ತಕ್ಷಣ ತಮ್ಮ ಹೇಳಿಕೆಯನ್ನು ಸಿ ಟಿ ರವಿ ವಾಪಸ್ ತೆಗೆದುಕೊಂಡು ಸಮಜಾಯಿಷಿ ನೀಡಬೇಕು ಎಂದರು.
ಕಾಂಗ್ರೆಸ್ಸಿನವರು ಇಂದಿರಾ ಕ್ಯಾಂಟೀನ್ ತೆರೆದಿರೋದು ಅವರ ಎಟಿಎಂಗಳನ್ನು ತುಂಬಿಸಿಕೊಳ್ಳಲೇ ಹೊರತು, ಇಂದಿರಾ ಗಾಂಧಿ ಮೇಲಿನ ಪ್ರೀತಿಯಿಂದಲ್ಲ. ಕಾಂಗ್ರೆಸ್‍ನವರು ಬೇಕಾದ್ರೆ ಕಾಂಗ್ರೆಸ್ ಕಚೇರಿಯಲ್ಲಿ ಇಂದಿರಾ ಕ್ಯಾಂಟೀನ್ ತೆರೆಯಲಿ. ಬೇಕಾದ್ರೆ ಬಾರ್ ತೆರೆಯಲಿ, ನೆಹರು ಹುಕ್ಕಾ ಬಾರ್ ತೆರೆಯಲಿ ಎಂದು ಸಿ.ಟಿ ರವಿ ನೀಡಿದ್ದ ಹೇಳಿಕೆ ನೀಡಿದ್ದರು.
ಈ ತರಹ ಮಾತುಗಳು ಕೇಳಿ ಬರುತ್ತಿದ್ದರೂ ರಾಜ್ಯದಲ್ಲಿ ಐವರು ಮಾಜಿ ಸಿಎಂಗಳಿದ್ದರೂ ನೀವ್ಯಾಕೆ ಈ ಬಗ್ಗೆ ಬಾಯಿ ಬಿಡುತ್ತಿಲ್ಲ, ನಿಮಗೆ ಸ್ವಲ್ಪವೂ ಕಾಳಜಿ ಇಲ್ವಾ? ಎಂದು ಮಾಜಿ ಮುಖ್ಯಮಂತ್ರಿಗಳು, ಆಯಾಯ ಪಕ್ಷಗಳ ಹಿರಿಯ ನಾಯಕರು ಬಾಯಿ ಮುಚ್ಚಿ ಎಂದು ಅವರನ್ನು ಹೇಳುತ್ತಿಲ್ಲ. ಇವರನ್ನು ಸುಮ್ಮನಿರಿಸಲು ಮಾತನಾಡುವ ನೈತಿಕತೆಯನ್ನೆ ಅವರು ಕಳೆದುಕೊಂಡಿದ್ದಾರೆ ಎಂದು ಎಚ್ ವಿಶ್ವನಾಥ್ ಆರೋಪಿಸಿದರು.
ಈಗಿನ ಸಂದರ್ಭ ಪಕ್ಷ ರಾಜಕಾರಣಕ್ಕೆ ಸೋಲಾಗಿದ್ದು, ರಾಕ್ಷಸ ರಾಜಕಾರಣ ಆರಂಭವಾಗಿದೆ. ಪಕ್ಷದ ಆಂತರಿಕ ಪ್ರಜಾಪ್ರಭುತ್ವ ನಶಿಸಿ ಹೋಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ಜೊತೆಗೆ ಸಚಿವರು ತಮಗೆ ಇಂತದ್ದೆ ಖಾತೆ ಬೇಕು ಎಂದು ಹಠ ಹಿಡಿಯುವುದು ಸರಿಯಲ್ಲ. ಎಲ್ಲ ಖಾತೆಯಲ್ಲೂ ಕೆಲಸ ಇದೆ. ಕೇವಲ ದುಡ್ಡು ಹೆಚ್ಚಿರುವ ಖಾತೆ ತಮಗೆ ಬೇಕೆನ್ನುವುದು ಸರಿಯಾದದ್ದಲ್ಲ ಎಂದರು.