ಬಜೆಟ್‌ನಲ್ಲಿ ಕೃಷಿಯನ್ನು ನಿರ್ಲಕ್ಷಿಸಲಾಗಿದೆ

ಯೋಜನೆಗಳು ಮತ್ತು ಕಾರ್ಯಕ್ರಮಗಳು ಸಂಪನ್ಮೂಲಗಳ ಕೊರತೆಯಿಂದ ಬಳಲುತ್ತಿವೆ ಮತ್ತು ರೈತರು ಮತ್ತು ಕೃಷಿ ವಲಯವನ್ನು ಎದುರಿಸುವ ನಿಜವಾದ ಸಮಸ್ಯೆಗಳು ಬದಿಗಿಡಲ್ಪಟ್ಟಿವೆ

ಪ್ರೊ. ಆರ್. ರಾಮಕುಮಾರ್,

 ಕನ್ನಡಕ್ಕೆ : ಜಿ.ಎಸ್.ಮಣಿ

(ಮೂಲ: ದಿ ಹಿಂದೂ ಫೆಬ್ರವರಿ 02, 2025; ಕಾರ್ಟೂನ್ ಕೃಪೆ : Down to earth)

ಆರ್ಥಿಕತೆಯ ಸವಾಲುಗಳಿಗೆ ಸರ್ಕಾರವು ನೀಡುವ ಪ್ರತಿಕ್ರಿಯೆಯೇ ಬಜೆಟ್. 2024-25ರ ಆರ್ಥಿಕ ಸಮೀಕ್ಷೆಯಲ್ಲಿ ಭಾರತೀಯ ಕೃಷಿಯ ಸ್ಥಿತಿಯ ಬಗ್ಗೆ ಸಕಾರಾತ್ಮಕ ನಿರೂಪಣೆಯನ್ನು ಹರಿಯಬಿಡುವ ಪ್ರಯತ್ನವನ್ನು ಸರಕಾರ ಮಾಡಿದೆ. ಉತ್ಪಾದಕತೆಯ ಹೆಚ್ಚಳ, ಬೆಳೆ ವೈವಿಧ್ಯೀಕರಣದ ವಿಸ್ತರಣೆ ಮತ್ತು ರೈತರ ಆದಾಯದಲ್ಲಿನ ಹೆಚ್ಚಳದಿಂದಾಗಿ ಭಾರತೀಯ ಕೃಷಿ ಗಮನಾರ್ಹವಾದ “ಸ್ಥಿತಿಸ್ಥಾಪಕತ್ವ”ವನ್ನು (ಭಾರೀ ವ್ಯತ್ಯಯಗಳಿಗೆ ತಾಳಿಕೆಯನ್ನು) ಹೊಂದಿದೆ ಎಂದು ಅದು ಹೇಳಿಕೊಂಡಿದೆ. ಈ ಹೇಳಿಕೆಗಳು ಅನುಮಾನಾಸ್ಪದ ಅಥವಾ ಭಾರೀ ಉತ್ಪ್ರೇಕ್ಷೆಯವು. ಬಜೆಟ್‌

ಮೊದಲಿಗೆ, ಬೆಳಗಳ ಉತ್ಪಾದಕತೆಯಲ್ಲಿ ಯಾವುದೇ ಗಮನಾರ್ಹ ಜಿಗಿತವಿಲ್ಲ. ಕೆಲವು ಸೂಚ್ಯಂಕಗಳನ್ನು ಆಧರಿಸಿದ ಸರಳ ವಿಶ್ಲೇಷಣೆಯು, ಉದಾಹರಣೆಗೆ – ಆಹಾರ ಧಾನ್ಯ ಬೆಳೆಗಳು ಮತ್ತು ಆಹಾರೇತರ ಬೆಳೆಗಳಲ್ಲಿ 2014-15 ಮತ್ತು 2022-23ರ ನಡುವಿನ ಇಳುವರಿ ಬೆಳವಣಿಗೆಯ ದರಗಳು, 2004-05 ಮತ್ತು 2013-14ರ ನಡುವಿನ ಇಳುವರಿ ಬೆಳವಣಿಗೆಯ ದರಗಳಿಗಿಂತ ಸ್ವಲ್ಪ ಕಡಿಮೆಯಾಗಿದೆ ಎಂದು ತೋರಿಸುತ್ತದೆ. ಎರಡನೆಯದಾಗಿ, ಕೆಲವು ರಾಜ್ಯಗಳಲ್ಲಿ ದ್ವಿದಳ ಧಾನ್ಯಗಳತ್ತ ಅಲ್ಪ ಬದಲಾವಣೆಗಳನ್ನು ಹೊರತುಪಡಿಸಿ, ಭಾರತದಲ್ಲಿ ಬೆಳೆ ವೈವಿಧ್ಯೀಕರಣದ ಯಾವುದೇ ಪ್ರಮುಖ ಪುರಾವೆಗಳಿಲ್ಲ. ಬಜೆಟ್‌

ವೈವಿಧ್ಯೀಕರಣವು ನಿಜವಾಗಿದ್ದರೆ, ಅದು ಬೆಳೆ ವಲಯದ ಹೊರಗೆ ಜಾನುವಾರು ಮತ್ತು ಮೀನುಗಾರಿಕೆ ಕ್ಷೇತ್ರಗಳಲ್ಲಿ ಮಾತ್ರ ನಡೆದಿದೆ. ಆದರೆ ಜಾನುವಾರು ಮತ್ತು ಮೀನುಗಾರಿಕೆ ವಲಯಗಳಲ್ಲಿ ತೊಡಗಿರುವ ಕುಟುಂಬಗಳ ಪ್ರಮಾಣ ಬೆಳೆ ವಲಯದಲ್ಲಿನ ಕುಟುಂಬಗಳ ಅನುಗುಣವಾದ ಪ್ರಮಾಣಕ್ಕಿಂತ ಕಡಿಮೆಯಾಗಿದೆ. ಮೂರನೆಯದಾಗಿ, ಸರ್ಕಾರವು ರೈತರ ಆದಾಯದಲ್ಲಿ ಏರಿಕೆಯಾಗಿದೆಯೆಂದು ಹೇಳುತ್ತಿದ್ದರೂ, ವಾಸ್ತವದ ದತ್ತಾಂಶವು ಇದಕ್ಕೆ ವಿರುದ್ಧವಾಗಿದೆ – ಇತ್ತೀಚಿನ ವರ್ಷಗಳಲ್ಲಿ ರೈತರ ನೈಜ ಆದಾಯದಲ್ಲಿ ಸ್ಥಗಿತತೆ ಅಥವಾ ಕುಸಿತ ಕಂಡುಬಂದಿದೆ. ಬಜೆಟ್‌

ಇದನ್ನೂ ಓದಿ: ಉದಯಗಿರಿ| ಮುಸ್ಲಿಂ ಸಮುದಾಯದ ಯುವಕರಿಂದ ಕಲ್ಲು ತೂರಾಟ

ಆರ್ಥಿಕ ಸಮೀಕ್ಷೆಯಲ್ಲಿ ಕೊಚ್ಚಿಕೊಂಡಿರುವ ಭಾರತೀಯ ಕೃಷಿಯ “ಸ್ಥಿತಿಸ್ಥಾಪಕತ್ವ”ವು ಯಾವುದೇ ನೀತಿಯ ಪರಿಣಾಮವಲ್ಲ, ಬದಲಿಗೆ, ಕೋವಿಡ್ ನಂತರದ ವರ್ಷಗಳಲ್ಲಿ ಅಂತರರಾಷ್ಟ್ರೀಯ ಬೆಲೆಗಳ ಸ್ಥಿರತೆ ಮತ್ತು ಅನುಕೂಲಕರ ಹವಾಮಾನ ಪರಿಸ್ಥಿತಿಗಳು ಸೇರಿದಂತೆ, ಹಲವಾರು ಆಕಸ್ಮಿಕ ಅಂಶಗಳ ಪರಿಣಾಮವಷ್ಟೇ. ಅದೇ ಸಮಯದಲ್ಲಿ, ಕಡಿಮೆ ಉತ್ಪಾದಕತೆ, ಬೆಲೆಗಳ ನಿಧಾನಗತಿಯ ಬೆಳವಣಿಗೆ, ಲಾಭದಾಯಕತೆಯ ಕುಗ್ಗುವಿಕೆ, ನೈಜ ಆದಾಯ ಮತ್ತು ಗ್ರಾಮೀಣ ನೈಜ ವೇತನಗಳ ಕುಸಿತ ಮುಂತಾದ ಹೆಚ್ಚು ಆಳವಾಗಿ ಬೇರೂರಿರುವ ಸಮಸ್ಯೆಗಳು, ಕೃಷಿಯಿಂದ ಹೊರಹೊಮ್ಮುವ ಯಾವುದೇ ಬೆಳವಣಿಗೆಯ ಪ್ರಚೋದನೆಗೆ ತೊಡಕಾಗುವ ಪರಿಸ್ಥಿತಿಗಳನ್ನು ಸೃಷ್ಟಿಸುತ್ತಲೇ ಇವೆ. ಬಜೆಟ್‌

ಕಡಿಮೆಯಾದ ಹಂಚಿಕೆಗಳು

ಬಜೆಟ್‌ಗೆ ಮುಂಚಿನ ಚರ್ಚೆಗಳಿಂದ, ಸರ್ಕಾರವು ಕೃಷಿಯ ಮೇಲಿನ ತನ್ನ ಹಿಂದಿನ ಹಣಕಾಸಿನ ನಿರ್ಲಕ್ಷವನ್ನು ತಿರುವು ಮುರುವು ಮಾಡುತ್ತದೆ ಎಂದು ನಿರೀಕ್ಷಿಸಲಾಗಿತ್ತು, ಈ ವರೆಗಿನ  ಹಣಕಾಸಿನ ನಿರ್ಲಕ್ಷ್ಯ ಹೆಚ್ಚಾಗಿ 2020 ರ ನಂತರದ ರೈತರ ಆಂದೋಲನಗಳಿಗೆ ಶಿಕ್ಷೆಯ ಕ್ರಮವೆಂದು ಪರಿಗಣಿಸಲಾಗಿತ್ತು. ಜೂನ್ 2024 ರಲ್ಲಿ ಗ್ರಾಮೀಣ ಮತದಾರರು ಬಿಜೆಪಿಗೆ ನೀಡಿದ ಕಠೋರ ಆಘಾತವು, ಹಿಂದಿನ ಹಾದಿಯ ತಿದ್ದುಪಡಿಗೆ ಪ್ರೇರಣೆಯಾಗಬಹುದು ಎಂದು ಹೇಳಲಾಗಿತ್ತು. ಆದರೆ ಬಜೆಟ್ ಈ ಆಶಾವಾದಿ ನಿರೀಕ್ಷೆಗಳನ್ನು ಸುಳ್ಳು ಮಾಡುತ್ತದೆ. ಕೃಷಿಯ ಹಣಕಾಸಿನ ನಿರ್ಲಕ್ಷ್ಯ ಮುಂದುವರೆದಿದೆ. ಬಜೆಟ್‌

ಕೃಷಿ ಸಂಶೋಧನೆಯೊಂದಿಗೆ ಪ್ರಾರಂಭಿಸೋಣ, ಇದು ಹವಾಮಾನ ಸ್ಥಿತಿಸ್ಥಾಪಕತ್ವವನ್ನು ಬೆಳೆಸುವುದರ ಜೊತೆಗೆ ಬೆಳೆ ಇಳುವರಿಯನ್ನು ಹೆಚ್ಚಿಸುವ ಪ್ರಯತ್ನಗಳಿಗೆ ಹೂಡಿಕೆಯ ಕೇಂದ್ರವಾಗಿರಬೇಕು. 2023-24 ಮತ್ತು 2025-26 ರ ನಡುವೆ ಕೃಷಿ ಸಂಶೋಧನೆ ಮತ್ತು ಶಿಕ್ಷಣದ ಮೇಲಿನ ವೆಚ್ಚದಲ್ಲಿ ಒಟ್ಟಾರೆ ಹೆಚ್ಚಳ ಕೇವಲ ₹ 21 ಕೋಟಿ. ಇದನ್ನು ನೈಸರ್ಗಿಕ ಕೃಷಿಯ ಮೇಲಿನ ಹುಸಿ ವೈಜ್ಞಾನಿಕ ರಾಷ್ಟ್ರೀಯ ಮಿಷನ್‌ನೊಂದಿಗೆ ಹೋಲಿಕೆ ಮಾಡಿ, ಇದಕ್ಕಾಗಿ 2023-24 ರಲ್ಲಿ ₹ 30 ಕೋಟಿ ಹಂಚಿಕೆಯಾಗಿತ್ತು ಆದರೆ 2025-26 ಕ್ಕೆ ₹ 616 ಕೋಟಿ ಹಂಚಿಕೆಯಾಗಿದೆ. ಇದು ತಲೆಕೆಳಗಾದ ಆದ್ಯತೆಗಳ ಪ್ರತಿಬಿಂಬ ಮಾತ್ರವಲ್ಲ, ಆಘಾತಕಾರಿ ಹುಂಬತನ ಸಹ.

ಇದನ್ನೂ ನೋಡಿ: ಕೇಂದ್ರ, ರಾಜ್ಯ ಸರಕಾರಗಳ ವಿರುದ್ಧ ರೈತ ಕೂಲಿಕಾರರ ಪ್ರತಿಭಟನೆ Janashakthi Media

ಕೃಷಿಯಲ್ಲಿನ ಯೋಜನೆಗಳು ಮತ್ತು ಸಂಸ್ಥೆಗಳ ಮೇಲಿನ ವೆಚ್ಚಗಳಿಗೆ ಒಂದು ಒಟ್ಟಾರೆ ವರ್ಗವಾಗಿರುವ ಬೆಳೆ ಸಾಕಣೆಯನ್ನು ನಾವು ಪರಿಗಣಿಸಿದರೆ, 2023-24 ಮತ್ತು 2025-26 ರ ನಡುವೆ ಹಂಚಿಕೆ ₹5,195 ಕೋಟಿಗಳಷ್ಟು ಕಡಿಮೆಯಾಗಿದೆ. ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಗೆ ₹3,622 ಕೋಟಿಗಳಷ್ಟು ಹಂಚಿಕೆಯಲ್ಲಿ ತೀವ್ರ ಕಡಿತವಾಗಿದೆ. 2024-25 ಮತ್ತು 2025-26 ರ ನಡುವೆ, ವಿನ್ಯಾಸ ವೈಫಲ್ಯಗಳಿಂದಾಗಿ ಅನೇಕ ರಾಜ್ಯಗಳು ಈ ಯೋಜನೆಯಿಂದ ಹಿಂದೆ ಸರಿದಿವೆ. ಇತರ ಕೇಂದ್ರ ವಲಯದ ಯೋಜನೆಗಳಿಗೆ ಹಂಚಿಕೆಗಳು ಸಹ ಸ್ಥಗಿತಗೊಂಡಿವೆ ಅಥವಾ ಕುಸಿದಿವೆ. ಬಜೆಟ್‌

ಹೊಸ ಬೆಳೆ ಆಧಾರಿತ ‘ಮಿಶನ್’ (ನಿರ್ದಿಷ್ಟ ಗುರಿಯ ಸಮಯಬದ್ಧ ಕಾರ್ಯಕ್ರಮ) ಗಳ ಕುರಿತು ಬಜೆಟ್ ಭಾಷಣದಲ್ಲಿ ಬಹಳಷ್ಟು ಹೇಳಲಾಗಿದೆ, ಆದರೆ ಇವುಗಳಿಗೆ ಹಂಚಿಕೆಗಳು ಅತ್ಯಲ್ಪವಾಗಿವೆ. ಹತ್ತಿ ತಂತ್ರಜ್ಞಾನ ಮಿಶನ್‌ಗೆ ಹಂಚಿಕೆ ₹500 ಕೋಟಿ, ದ್ವಿದಳ ಧಾನ್ಯಗಳ ಮಿಷನ್ ₹1,000 ಕೋಟಿ, ತರಕಾರಿಗಳು ಮತ್ತು ಹಣ್ಣುಗಳ ಮಿಷನ್ ₹500 ಕೋಟಿ ಮತ್ತು ಹೈಬ್ರಿಡ್ ಬೀಜಗಳ ರಾಷ್ಟ್ರೀಯ ಮಿಷನ್ ₹100 ಕೋಟಿ. ಬಿಹಾರಕ್ಕೆ ₹100 ಕೋಟಿ ಹಂಚಿಕೆಯೊಂದಿಗೆ ಹೊಸ ಮಖಾನಾ ಮಂಡಳಿಯನ್ನು ಘೋಷಿಸಲಾಗಿದೆ. ಆದರೆ ಈಗಾಗಲೇ ಅಸ್ತಿತ್ವದಲ್ಲಿರುವ ಕೃಷಿ ಸರಕು ಮಂಡಳಿಗಳು ನಗದು ಕೊರತೆಯಿಂದ ಬಳಲುತ್ತಿವೆ. ಉದಾಹರಣೆಗೆ, 2024-25 ಮತ್ತು 2025-26 ರ ನಡುವೆ, ಕಾಫಿ ಮಂಡಳಿಗೆ ಹಂಚಿಕೆ ಬದಲಾಗದೆ ಉಳಿದಿದೆ, ರಬ್ಬರ್ ಮಂಡಳಿಯ ಹಂಚಿಕೆ ಕೇವಲ ₹40 ಕೋಟಿಯಷ್ಟು ಹೆಚ್ಚಾಗಿದೆ ಮತ್ತು ಮಸಾಲೆ ಮಂಡಳಿಗೆ ಹಂಚಿಕೆ ಕೇವಲ ₹24 ಕೋಟಿಯಷ್ಟು ಹೆಚ್ಚಾಗಿದೆ. ತೆಂಗಿನಕಾಯಿ ಅಭಿವೃದ್ಧಿ ಮಂಡಳಿಗೆ ಹಂಚಿಕೆಯನ್ನು 2023-24 ರಲ್ಲಿ ₹39 ಕೋಟಿಯಿಂದ 2025-26 ರಲ್ಲಿ ₹35 ಕೋಟಿಗೆ ಕಡಿತಗೊಳಿಸಲಾಗಿದೆ. ಬಜೆಟ್‌

ಆರ್ಥಿಕವಾಗಿ ನಿರ್ಲಕ್ಷಿಸಲ್ಪಟ್ಟ ವಲಯಗಳು

ಜಾನುವಾರು ಮತ್ತು ಮೀನುಗಾರಿಕೆಯಲ್ಲಿ ವೈವಿಧ್ಯೀಕರಣದ ಬಗ್ಗೆ ಆರ್ಥಿಕ ಸಮೀಕ್ಷೆಯಲ್ಲಿ ಕೊಚ್ಚಿಕೊಂಡ ಹೊರತಾಗಿಯೂ, ಈ ವಲಯಗಳನ್ನು ಸಹ ಹಣ ಹಂಚಿಕೆಯಲ್ಲಿ ನಿರ್ಲಕ್ಷಿಸಲಾಗಿದೆ. 2024-25 ಮತ್ತು 2025-26 ರ ನಡುವೆ ಮೀನುಗಾರಿಕೆಯ ಮೇಲಿನ ಒಟ್ಟು ವೆಚ್ಚವು ಕೇವಲ ₹87 ಕೋಟಿಯಷ್ಟು ಹೆಚ್ಚಾಗುತ್ತದೆ. 2024-25 ಮತ್ತು 2025-26 ರ ನಡುವೆ, ಪಶುಸಂಗೋಪನೆಯ ಮೇಲಿನ ವೆಚ್ಚವು ₹407 ಕೋಟಿಯಷ್ಟು ಕಡಿಮೆಯಾಗಲಿದೆ ಮತ್ತು ಡೈರಿಯ ಮೇಲಿನ ವೆಚ್ಚವು ಕೇವಲ ₹321 ಕೋಟಿಯಷ್ಟು ಹೆಚ್ಚಾಗಲಿದೆ. ಒಟ್ಟಾರೆಯಾಗಿ ಪರಿಗಣಿಸಿದರೆ, ಪಶುಸಂಗೋಪನೆ ಮತ್ತು ಡೈರಿಯ ಎಲ್ಲಾ ಬಜೆಟ್ ವೆಚ್ಚಗಳ ಮೇಲಿನ ಒಟ್ಟಾರೆ ವೆಚ್ಚವು 2024-25 ಮತ್ತು 2025-26 ರ ನಡುವೆ ಅತ್ಯಲ್ಪ (₹319 ಕೋಟಿಯಷ್ಟು) ಹೆಚ್ಚಾಗಲಿದೆ. ಬಜೆಟ್ ಈ ವಲಯಗಳನ್ನು ಬೆಳವಣಿಗೆಯ ಎಂಜಿನ್‌ಗಳಾಗಿ ಚಿತ್ರಿಸುತ್ತದೆ, ಆದರೆ ಹಣ ಹಂಚಿಕೆಯಲ್ಲಿ ಅವುಗಳನ್ನು ಹಿಂಡುತ್ತದೆ.

ಪ್ರಧಾನ ಮಂತ್ರಿ ಧನ್-ಧಾನ್ಯ ಕೃಷಿ ಯೋಜನೆ ಎಂಬ ಹೊಸ ಯೋಜನೆಯನ್ನು ಘೋಷಿಸಲಾಗಿದೆ. ಇದು ‘ಮಹತ್ವಾಕಾಂಕ್ಷೆಯ ಜಿಲ್ಲೆಗಳ ಯೋಜನೆ’ಯ ಮಾದರಿಯಲ್ಲಿ. – ಕಡಿಮೆ ಉತ್ಪಾದಕತೆ, ಮಧ್ಯಮ ಬೆಳೆ ತೀವ್ರತೆ ಮತ್ತು ಸರಾಸರಿಗಿಂತ ಕಡಿಮೆ ಸಾಲದ ನಿಯತಾಂಕಗಳನ್ನು – ಹೊಂದಿರುವ 100 ಜಿಲ್ಲೆಗಳನ್ನು ಗುರಿಯಾಗಿಸಿದ ಯೋಜನೆ. ಆದರೆ ಕೃಷಿ ರಾಜ್ಯಕ್ಕೆ ಸಂಬಂಧಿಸಿದ ವಿಷಯ. ಈ ಯೋಜನೆಯ ವಿವರಣೆಯಲ್ಲಿ ಬಜೆಟ್ ಭಾಷಣದಲ್ಲಿ “ರಾಜ್ಯಗಳೊಂದಿಗೆ ಪಾಲುದಾರಿಕೆ” ಎಂದು ಉಲ್ಲೇಖಿಸಲಾಗಿದೆಯಾದರೂ, ಅದರ ಆಡಳಿತವು ಕೇಂದ್ರೀಕೃತ, ಎಲ್ಲ ರಾಜ್ಯಗಳಿಗೂ ಒಂದೇ ರೀತಿಯ ಮತ್ತು ರಾಜ್ಯಗಳಿಗೆ ಆರ್ಥಿಕ ಹೊರೆಯಾಗುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆಯೇ ಎಂದು ಕಾದು ನೋಡಬೇಕಾಗಿದೆ.

ಬಜೆಟ್ ಭಾಷಣದಲ್ಲಿ ಕೃಷಿಯನ್ನು ಹಲವಾರು ಬಾರಿ ಉಲ್ಲೇಖಿಸಿದ್ದರೂ, ಹಣಕಾಸಿನ ಹಂಚಿಕೆಗಳು ಅದಕ್ಕೆ ಅನುಗುಣವಾಗಿಲ್ಲ. ಯೋಜನೆಗಳು ಮತ್ತು ಕಾರ್ಯಕ್ರಮಗಳು ಸಂಪನ್ಮೂಲಗಳ ಕೊರತೆಯಿಂದ ಬಳಲುತ್ತಿವೆ ಮತ್ತು ರೈತರು ಮತ್ತು ಕೃಷಿ ವಲಯವನ್ನು ಎದುರಿಸುತ್ತಿರುವ ನಿಜವಾದ ಸಮಸ್ಯೆಗಳು ಬದಿಗಿಡಲ್ಪಟ್ಟಿವೆ.

Donate Janashakthi Media

Leave a Reply

Your email address will not be published. Required fields are marked *