ನವದೆಹಲಿ: ಭಾರತೀಯ ವೈದ್ಯಕೀಯ ಸಂಘ(ಐಎಂಎ) ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ನೀಟ್ ಪಿಜಿ ಕೌನ್ಸೆಲಿಂಗ್ ಬಿಕ್ಕಟ್ಟನ್ನು ಪರಿಹರಿಸುವಂತೆ ಆಗ್ರಹಿಸಿದ್ದಾರೆ. ಅಲ್ಲದೆ, ಕೋವಿಡ್-19 ಸೋಂಕಿನ ಮೂರನೇ ಅಲೆಯನ್ನು ಎದುರಿಸಲು ಮಾನವ ಸಂಪನ್ಮೂಲವನ್ನು ಹೆಚ್ಚಿಸುವಂತೆ ಮನವಿ ಮಾಡಿದ್ದಾರೆ.
ಕೋವಿಡ್ ಮೊದಲ ಮತ್ತು ಎರಡನೇ ಅಲೆಯಿಂದಾಗಿ ಮೂಲ ನೀಟ್ ಪಿಜಿ ಪರೀಕ್ಷೆಯನ್ನು ಮೊದಲಿಗೆ 2021ರ ಸೆಪ್ಟೆಂಬರ್ 12ರಂದು ನಡೆಸಲಾಯಿತು. ಆದರೆ , ಸುಪ್ರೀಂ ಕೋರ್ಟ್ನ ಕಾನೂನು ಅಡೆತಡೆಗಳಿಂದಾಗಿ ಈಗ ಈ ಪರೀಕ್ಷೆಯ ನಂತರದ ಕೌನ್ಸೆಲಿಂಗ್ ತಡೆಹಿಡಿಯಲಾಗಿದೆ. ಇದರ ಪರಿಣಾಮ ದೇಶದಲ್ಲಿ 45,000 ವೈದ್ಯರ ಕೊರತೆ ಎದುರಾಗುತ್ತಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.
ದೇಶದಲ್ಲಿ ಕೋವಿಡ್ ಸೋಂಕನ್ನು ನಿಯಂತ್ರಣ ತರುವ ಕ್ರಮದಲ್ಲಿ ಹೆಚ್ಚಿನ ಅಸ್ಥೆ ವಹಿಸುವ ಯುವ ತರುಣರು ತಮ್ಮ ಹಕ್ಕುಗಳಿಗಾಗಿ ಬೀದಿಗಿಳಿಯುವುದನ್ನು ನೋಡಲು ನಮಗೆ ತುಂಬಾ ಬೇಸರವಾಗುತ್ತಿದೆ ಎಂದು ಭಾರತೀಯ ವೈದ್ಯಕೀಯ ಸಂಘ ಪತ್ರದಲ್ಲಿ ಉಲ್ಲೇಖಿಸಿದೆ. ಆದ್ದರಿಂದ ತಮ್ಮ ಹಕ್ಕುಗಳಿಗಾಗಿ ಹೋರಾಡುತ್ತಿರುವ ಈ ದೇಶದ 3.5 ಲಕ್ಷ ವೈದ್ಯರಿಗೆ ನಾವು ನಮ್ಮ ನೈತಿಕ ಬೆಂಬಲವನ್ನು ಸ್ಪಷ್ಟವಾಗಿ ವ್ಯಕ್ತಪಡಿಸುತ್ತೇವೆ ಮತ್ತು ಆರೋಗ್ಯ ಸಚಿವಾಲಯವು ಸಹಾನುಭೂತಿಯ ಸಲಹೆ ಮತ್ತು ಮಧ್ಯಸ್ಥಿಕೆಯೊಂದಿಗೆ ಈ ಸಮಸ್ಯೆಯನ್ನು ತ್ವರಿತವಾಗಿ ಪರಿಹರಿಸಲು ವಿನಂತಿಸುತ್ತೇವೆ ಎಂದು ತಿಳಿಸಿದ್ದಾರೆ.
ದೇಶದ ಆರೋಗ್ಯ ವಲಯವು ಸಹಜ ಸ್ಥಿತಿಗೆ ಮರಳಲು ಪಿಜಿ ವೈದ್ಯರೊಂದಿಗೆ ಪ್ರಧಾನಮಂತ್ರಿಗಳು ನೇರವಾಗಿ ಮಾತುಕತೆ ನಡೆಸಬೇಕೆಂದು ಭಾರತೀಯ ವೈದ್ಯಕೀಯ ಸಂಘ ತಿಳಿಸಿದೆ.
ಪಿಜಿ ಕೌನ್ಸೆಲಿಂಗ್ ಅನ್ನು ತ್ವರಿತವಾಗಿ ಪರಿಹರಿಸುವಂತೆ ಆಗ್ರಹಿಸಿ ದೇಶದ ವೈದ್ಯರ ನಿರಂತರ ಮುಷ್ಕರದಲ್ಲಿ ಭಾಗಿಯಾಗಿದ್ದಾರೆ. ಅವರ ನಿಜವಾದ ಬೇಡಿಕೆಗಳ ಬಗ್ಗೆ ಭಾರತೀಯ ವೈದ್ಯಕೀಯ ಸಂಘ ಕಳವಳ ವ್ಯಕ್ತಪಡಿಸಿದೆ. ಆದರೆ, ಸುಪ್ರೀಂಕೋರ್ಟ್ನ ಕಾನೂನು ಅಡೆತಡೆಗಳಿಂದಾಗಿ ಇದೀಗ ಕೌನ್ಸೆಲಿಂಗ್ ಅನ್ನು ತಡೆಹಿಡಿಯಲಾಗಿದ್ದು, ಮಾನವಶಕ್ತಿ ಕೊರತೆಯನ್ನು ನಿರಂತರವಾಗಿ ಎದುರಿಸಲಾಗುತ್ತಿದೆ ಎಂದು ಪ್ರಸ್ತಾಪಿಸಲಾಗಿದೆ.
ಆರೋಗ್ಯ ಕ್ಷೇತ್ರದಲ್ಲಿ ಹೆಚ್ಚು ಮೂಲಸೌಕರ್ಯ ಅಭಿವೃದ್ಧಿಗಾಗಿ ನಾವು ಪ್ರಧಾನ ಮಂತ್ರಿಗಳಿಗೆ ತಿಳಿಸಿದ್ದೇವೆ. ಪ್ರಧಾನಮಂತ್ರಿಗಳು ಈ ವಿಚಾರದಲ್ಲಿ ವೈಯಕ್ತಿಕವಾಗಿ ಮಧ್ಯಪ್ರವೇಶಿಸಿ ದೇಶದಲ್ಲಿ ವೈದ್ಯರ ಕೊರತೆ ನೀಗಿಸಬೇಕು. ದೇಶದ ವೈದ್ಯರು ತಮ್ಮ ನಿಜವಾದ ಬೇಡಿಕೆಗಳನ್ನು ಎತ್ತುತ್ತಿದ್ದಾರೆ ಮತ್ತು ಇಲ್ಲಿಯವರೆಗೆ ಅದನ್ನು ಸರಿಯಾಗಿ ಪರಿಹರಿಸಲಾಗಿಲ್ಲ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಪ್ರತಿವರ್ಷ ನೀಟ್ ಪರೀಕ್ಷೆಗಳನ್ನು ನಡೆಸುವ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ನೀಟ್ ಕೌನ್ಸೆಲಿಂಗ್ ನಲ್ಲಿ ಈ ಬಾರಿ ಹೊಸ 5 ಬದಲಾವಣೆಯನ್ನು ಮಾಡಿದೆ. ವೈದ್ಯಕೀಯ ಕೌನ್ಸೆಲಿಂಗ್ ಸಮಿತಿ ಶೇ.15, ನೀಟ್ ಯುಜಿ ಕೋರ್ಸ್ಗಳ ಸೀಟುಗಳಿಗೆ ಮತ್ತು ನೀಟ್ ಪಿಜಿ ಸೀಟುಗಳಿಗೆ ಶೇ. 50 ಕೌನ್ಸೆಲಿಂಗ್ ನಡೆಸಲಾಗುವುದು ಎಂದಿದೆ. ಒಟ್ಟು ನಾಲ್ಕು ಸುತ್ತುಗಳಲ್ಲಿ ಕೌನ್ಸೆಲಿಂಗ್ ನಡೆಸುವುದಾಗಿ ಆಯೋಗ ಹೇಳಿದೆ.