ನೀಟ್ ಪರೀಕ್ಷೆ ರದ್ದುಗೊಳಿಸಲು ಎಸ್ಎಫ್ಐ ಆಗ್ರಹ

ಬೆಂಗಳೂರು: ದೇಶದಲ್ಲಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ವೈದ್ಯಕೀಯ ಮತ್ತು ಇತರೆ ವಿಷಯಗಳಿಗೆ ಪ್ರವೇಶ ಪಡೆಯಲು ರಾಷ್ಟ್ರ ಮಟ್ಟದಲ್ಲಿ ನಡೆಸುವ ನೀಟ್ ಪರೀಕ್ಷೆ ಸಂವಿಧಾನ ವಿರೋಧಿಯಾಗಿದ್ದು ಈ ಪರೀಕ್ಷೆಯ ಮೂಲಕ ವೈದ್ಯಕೀಯ ಶಿಕ್ಷಣವನ್ನು ಕೇಂದ್ರ ಸರ್ಕಾರ ತನ್ನ ಹಿಡಿತದಲ್ಲಿಟ್ಟುಕೊಳ್ಳುವ ಹುನ್ನಾರ ಅಡಗಿದೆ ಎಂದಿರುವ ಭಾರತ ವಿದ್ಯಾರ್ಥಿ ಫೆಡರೇಷನ್‌(ಎಸ್‌ಎಫ್‌ಐ) ಸಂಘಟನೆಯು ನೀಟ್‌ ಪರೀಕ್ಷೆ ರದ್ದುಗೊಳಿಸಬೇಕೆಂದು ದೇಶಾದ್ಯಂತ ಪ್ರತಿಭಟಿಸಿಲು ತೀರ್ಮಾನಿಸಿದೆ.

ಈ ಬಗ್ಗೆ ಹೇಳಿಕೆ ನೀಡಿರುವ ಎಸ್‌ಎಫ್‌ಐ ರಾಜ್ಯ ಅಧ್ಯಕ್ಷ ಅಮರೇಶ ಕಡಗದ ʻʻನೀಟ್‌ ಪರೀಕ್ಷೆಯಲ್ಲಿ ಇಂಗ್ಲಿಷ್, ಹಿಂದಿ ಭಾಷೆಯ ಅಭ್ಯರ್ಥಿಗಳೇ ಹೆಚ್ಚು ಪ್ರವೇಶ ಪಡೆಯುತ್ತಿದ್ದಾರೆ. ಇದರಲ್ಲಿ ಗ್ರಾಮೀಣ ಪ್ರದೇಶದ ದಲಿತ, ಹಿಂದುಳಿದ, ಅಲ್ಪಸಂಖ್ಯಾತ, ತಳಸಮುದಾಯದ ವಿದ್ಯಾರ್ಥಿಗಳು ಲಕ್ಷಾಂತರ ರೂಪಾಯಿ ಸುರಿಯುವ ಶ್ರೀಮಂತ, ಉನ್ನತ ಶೈಕ್ಷಣಿಕ ಸೌಲಭ್ಯವುಳ್ಳ ಅಭ್ಯರ್ಥಿಗಳ ಜೊತೆಗೆ ಪೈಪೋಟಿ ನಡೆಸಿ ಪ್ರವೇಶಾತಿ ಪಡೆಯಲು ಸಾಮಾನ್ಯರಿಗೆ ಸಾಧ್ಯವಾಗುತ್ತಿಲ್ಲ, ಅಲ್ಲದೆ ಇದರಿಂದ ಸಾಮಾಜಿಕ ನ್ಯಾಯ ಉಲ್ಲಂಘನೆಯಾಗುತ್ತಿದೆʼʼ ಎಂದಿದ್ದಾರೆ.

ಎಸ್‌ಎಫ್‌ಐ ರಾಜ್ಯ ಕಾರ್ಯದರ್ಶಿ ವಾಸುದೇವರೆಡ್ಡಿ.ಕೆ ನೀಟ್‌ ನಿಂದಾಗುತ್ತಿರುವ ಸಮಸ್ಯೆಗಳನ್ನು ವಿವರಿಸುತ್ತಾ ʻʻಕಳೆದ ನಾಲ್ಕು ವರ್ಷಗಳಲ್ಲಿ ತಮಿಳುನಾಡು ಮತ್ತು ಇತರ ರಾಜ್ಯಗಳಲ್ಲಿ ಈ ನೀಟ್ ಪರೀಕ್ಷೆಯಿಂದ ಅನ್ಯಾಯಕ್ಕೊಳಗಾದ ಸುಮಾರು 22 ಜನ ವಿದ್ಯಾರ್ಥಿಗಳು ಆತ್ಮಹತ್ಯೆಗೆ ಗುರಿಯಾಗಿದ್ದಾರೆ. ತಮಿಳುನಾಡು ರಾಜ್ಯ ಸರ್ಕಾರ ಎ.ಕೆ.ರಾಜನ್ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಿದ್ದು, ತನ್ನ ವರದಿಯಲ್ಲಿ ಪರೀಕ್ಷೆಯ ತರಬೇತಿಗಾಗಿ ಪ್ರತಿವರ್ಷ ದೇಶದಲ್ಲಿ ಖಾಸಗಿ ತರಬೇತಿ ಕೇಂದ್ರಗಳ ಹಾವಳಿ ಸುಮಾರು 16 ಸಾವಿರ ಕೋಟಿಯಷ್ಟು ದೊಡ್ಡ ಮಾಫಿಯಾ ನಡೆಯುತ್ತಿದೆ. ಒಬ್ಬ ವಿದ್ಯಾರ್ಥಿಗೆ ನೀಟ್ ಪರೀಕ್ಷೆಯ ತರಬೇತಿಗೆ ಒಂದು ಲಕ್ಷದಿಂದ 5 ಲಕ್ಷದವರೆಗೆ ಹಣ ವಸೂಲಿ ನಡೆಯುತ್ತಿದೆ. ಇದರಿಂದ ಹಣ ಬರಿಸಲು ಸಾಧ್ಯವಿಲ್ಲದ ಬಡಕುಟುಂಬದ ವಿದ್ಯಾರ್ಥಿಗಳು ಪರೀಕ್ಷೆಗೆ ಅರ್ಹತೆ ಪಡೆಯಲು ವಂಚಿತರಾಗುತ್ತಿದ್ದಾರೆ ಎಂಬುತು ಸಾಬೀತಾಗಿದೆʼʼ ಎಂದು ತಿಳಿಸಿದ್ದಾರೆ.

ಹಾಗಾಗಿ ನೀಟ್ ಪರೀಕ್ಷೆಯನ್ನು ರದ್ದುಗೊಳಿಸದಿದ್ದರೆ ಬಡ, ಮಧ್ಯಮ ವರ್ಗದ ವಿದ್ಯಾರ್ಥಿಗಳ ಶೈಕ್ಷಣಿಕ ಹಕ್ಕುಗಳು ಕಿತ್ತುಕೊಂಡಂತೆ ಆಗುತ್ತಿದೆ. ಆದ್ದರಿಂದ ತಮಿಳುನಾಡು, ಕೇರಳ ಮುಂತಾದ ರಾಜ್ಯಗಳು ನೀಟ್ ಪರೀಕ್ಷೆಯನ್ನು ರದ್ದುಗೊಳಿಸಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುತ್ತಿರುವುದು ಸ್ವಾಗತಾರ್ಹ ಬೆಳವಣಿಗೆಯಾಗಿದೆ ಎಂದು ಎಸ್‌ಎಫ್‌ಐ ಸಂಘಟನೆ ಉಲ್ಲೇಖಿಸಿದೆ.

ಕರ್ನಾಟಕ ರಾಜ್ಯ ಸರ್ಕಾರವು ಸಹ ನೀಟ್ ಪರೀಕ್ಷೆಯನ್ನು ರದ್ದುಗೊಳಿಸಿ ಎ.ಕೆ.ರಾಜನ್ ಸಮಿತಿಯ ಶಿಫಾರಸುಗಳನ್ನು ಜಾರಿಗೊಳಿಸಬೇಕೆಂದು ಎಸ್ಎಫ್ಐ ಕರ್ನಾಟಕ ರಾಜ್ಯ ಸಮಿತಿ ಒತ್ತಾಯಿಸಿದೆ.

Donate Janashakthi Media

Leave a Reply

Your email address will not be published. Required fields are marked *