- ವಿದ್ಯಾರ್ಥಿಗಳ ಭವಿಷ್ಯವನ್ನು ಬಲಿಕೊಡುವುದು ಸರಿಯಲ್ಲ
ನವದೆಹಲಿ: ಕೊರೋನಾ ವೈರಸ್ ಇರುವ ಕಾರಣ ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಪ್ರವೇಶ ಪರೀಕ್ಷೆಗಳಾದ NEET ಮತ್ತು JEE ಮುಂದೂಡಿಕೆ ಮಾಡಬೇಕೆಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಗಳನ್ನ ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. ಕೋವಿಡ್ ಜೊತೆಗೆ ಜೀವನ ಸಾಗಬೇಕಿದೆ. ಅದಕ್ಕಾಗಿ ವಿದ್ಯಾರ್ಥಿಗಳ ಭವಿಷ್ಯವನ್ನು ಬಲಿಕೊಡುವುದು ಸರಿಯಲ್ಲ ಎಂದು ತ್ರಿಸದಸ್ಯ ಸುಪ್ರೀಂ ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
“ನೀವು (ವಕೀಲರು) ನ್ಯಾಯಾಲಯಗಳು ಭೌತಿಕವಾಗಿ ಕಾರ್ಯನಿರ್ವಹಿಸಬೇಕು ಎಂದು ಬೇಡಿಕೆ ಇಡುತ್ತೀರಿ. ಆದರೆ, ಪರೀಕ್ಷೆಗಳನ್ನ ಮುಂದೂಡಬೇಕೆಂದು ವಾದಿಸುತ್ತೀರಿ. ಪರೀಕ್ಷೆಗಳನ್ನು ಮುಂದೂಡುವುದು ದೇಶಕ್ಕೆ ನಷ್ಟ… ವಿದ್ಯಾರ್ಥಿಗಳ ಭವಿಷ್ಯ ಮಸುಕಾಗುವಂತೆ ಮಾಡಲು ಸಾಧ್ಯವಿಲ್ಲ. ಈ ಅರ್ಜಿಯಲ್ಲಿ ಬಲವಾದ ಅಂಶವಿಲ್ಲ. ಇದನ್ನು ತಿರಸ್ಕರಿಸಲಾಗಿದೆ” ಎಂದು ನ್ಯಾ| ಅರುಣ್ ಮಿಶ್ರಾ, ನ್ಯಾ| ಬಿಆರ್ ಗವಾಯ್ ಮತ್ತು ನ್ಯಾ| ಕೃಷ್ಣ ಮುರಾರಿ ಅವರಿದ್ದ ನ್ಯಾಯಪೀಠ ತೀರ್ಪು ನೀಡಿತು.
ಕೋವಿಡ್ ಸ್ಥಿತಿ ತಹಬದಿಗೆ ಬರುವವರೆಗೂ ಜೆಇಇ ಮತ್ತು ನೀಟ್ ಪರೀಕ್ಷೆಗಳನ್ನ ಮುಂದೂಡಬೇಕೆಂದು 11 ರಾಜ್ಯಗಳ 11 ವಿದ್ಯಾರ್ಥಿಗಳು ಸುಪ್ರೀಂ ಕೋರ್ಟ್ನಲ್ಲಿ ಮನವಿ ಸಲ್ಲಿಸಿದ್ದರು. ಅನಿರ್ದಿಷ್ಟಾವಧಿಯವರೆಗೆ ಪರೀಕ್ಷೆ ಮುಂದೂಡಿ ಎಂದು ಕೇಳುತ್ತಿಲ್ಲ. ಆದರೆ, ಕೋವಿಡ್ ಲಸಿಕೆ ಬಿಡುಗಡೆಯ ಹಾದಿಯಲ್ಲಿದೆ. ಲಸಿಕೆ ಬರುವವರೆಗೂ ಪರೀಕ್ಷೆ ಮುಂದೂಡಿ ಎಂಬುದು ನಮ್ಮ ಮನವಿ ಎಂದು ಅರ್ಜಿದಾರರ ಪರವಾಗಿ ವಕೀಲ ಅಲೋಕ್ ಶ್ರೀವಾಸ್ತವ ಅವರು ವಾದಿಸಿದರಾದರೂ ಕೋರ್ಟ್ ಮಾನ್ಯ ಮಾಡಲಿಲ್ಲ.
ಅದೇ ವೇಳೆ, ಜೆಇಇ ಮತ್ತು ಎನ್ಇಇಟಿ ಪರೀಕ್ಷೆಗಳನ್ನು ಮುಂದೂಡಬಾರದು. ನಿಗದಿತ ವೇಳಾಪಟ್ಟಿಯಂತೆಯೇ ಆಯೋಜಿಸಬೇಕು ಎಂದು ಕೋರಿ ಬೇರೊಂದು ಅರ್ಜಿಯೂ ಸುಪ್ರೀಂ ಕೋರ್ಟ್ನಲ್ಲಿ ದಾಖಲಾಗಿತ್ತು. ಆದರೆ, ಕೋರ್ಟ್ ತೀರ್ಪು ತಮ್ಮ ಆಶಯದಂತೆ ಬಂದ ಕಾರಣಕ್ಕೆ ಈ ಅರ್ಜಿಯನ್ನು ಹಿಂಪಡೆಯಲಾಗಿದೆ.
ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ(ಎನ್ಟಿಎ) ಸೆಪ್ಟೆಂಬರ್ ತಿಂಗಳಲ್ಲಿ ನೀಟ್ ಮತ್ತು ಜೆಇಇ ಪರೀಕ್ಷೆಗಳನ್ನು ಆಯೋಜಿಸುತ್ತಿದೆ. ಎಂಜಿನಿಯರಿಂಗ್ ಪ್ರವೇಶ ಪರೀಕ್ ಜೆಇಇ ಸೆಪ್ಟೆಂಬರ್ 1ರಿಂದ 6ರವರೆಗೆ ನಡೆಯಲಿದೆ. ಎನ್ಇಇಟಿ ಪರೀಕ್ಷೆ ಸೆಪ್ಟೆಂಬರ್ 13ರಂದು ನಡೆಸಲು ಎನ್ಟಿಎ ನಿರ್ಧರಿಸಿದೆ.