ನೇರ ರಾಜಕೀಯಕ್ಕಿಳಿದ ಧಾರ್ಮಿಕ ಮಠಗಳು!

ಟಿ. ಸುರೇಂದ್ರರಾವ್‌

ಕೋಮು ವಿಷ ಬಿತ್ತಿ ಅಮಾಯಕ ಯುವಜನರ ಕೊಲೆಗೆ ಕಾರಣವಾಗುತ್ತಿರುವ ಮತಾಂಧ ಶಕ್ತಿಗಳ ಉಪಟಳ ಕರ್ನಾಟಕದಲ್ಲಿ ಹೆಚ್ಚಾಗುತ್ತಿದೆ. ಕೋಮು ಧೃವೀಕರಣದ ಮೂಲಕ ಮುಂದಿನ ವರ್ಷದ ವಿಧಾನಸಭಾ ಚುನಾವಣೆ ಗೆಲ್ಲುವುದು ಮತಾಂಧ ಶಕ್ತಿಗಳನ್ನು ಸಾಕುತ್ತಿರುವ ರಾಜಕೀಯ ಗುಂಪುಗಳ ಯೋಜನೆ ಇದ್ದಂತಿದೆ.

ಸಮಾಜದಲ್ಲಿ ಶಾಂತಿ ಸೌಹಾರ್ದತೆ ಕಾಪಾಡಬೇಕಾಗಿರುವ ಮಠ ಮಾನ್ಯಗಳು ಅಥವಾ ಸಂಸ್ಥೆಗಳು ನೇರ ರಾಜಕೀಯಕ್ಕೆ ಇಳಿಯುತ್ತಿರುವುದು ನಿಜಕ್ಕೂ ಆತಂಕದ ಸಂಗತಿಯಾಗಿದೆ. ಶಿವಮೊಗ್ಗದಲ್ಲಿ ಇತ್ತೀಚೆಗೆ ಹತ್ಯೆಯಾದ ಯುವಕನ ಮನೆಗೆ ಭೇಟಿ ನೀಡಿದ ಪೇಜಾವರ ಹಾಗೂ ಗೋಸಾಯಿ ಮಠಾಧೀಶರು ಸಾಂತ್ವನ ನೀಡಿದ್ದಾರೆ.

ಇಲ್ಲಿಯವರೆಗೂ ಇಂತಹ ಕೋಮು ಹತ್ಯೆಗಳ ಸಂತ್ರಸ್ತರ ಮನೆಗಳಿಗೆ ಮಠಾಧೀಶರುಗಳು ಭೇಟಿ ನೀಡಿ ಸಾಂತ್ವನ ಹೇಳಿದ ವರದಿಗಳು ಪತ್ರಿಕೆಗಳಲ್ಲಿ ಪ್ರಕಟವಾದ ಉದಾಹರಣೆಗಳು ಇದ್ದಿರಲಿಲ್ಲ. ಈಗ ಈ ಮೇಲಿನ ಸುದ್ದಿಯಲ್ಲಿ, ಸಂತ್ರಸ್ತ ಕುಟುಂಬಕ್ಕೆ ಸಹಾಯ ಮಾಡಿ ಎಂದು ಒಂದು ರಾಜಕೀಯ ಪಕ್ಷಕ್ಕೆ ನೇರ ನಿರ್ದೇಶನ ನೀಡುವ ಸಂಗತಿಯು ಬಹಿರಂಗ ರಾಜಕೀಯದ ನಡೆ ಎನ್ನುವುದು ಸ್ಪಷ್ಟವಾಗುತ್ತಿದೆ, ಇದು ಅಕ್ಷಮ್ಯ.

ಈ ಹಿಂದೆ ಅದೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹತ್ಯೆಗೊಳಗಾದ ವಿನಾಯಕ ಬಾಳಿಗಾ ಅಂಥವರ ಮನೆಗಳಿಗೆ ಈ ಮಠಾಧೀಶರುಗಳು ಭೇಟಿ ಮಾಡಿ ಸಾಂತ್ವನ ಹೇಳಿದ ವರದಿಗಳಂತೂ ಪತ್ರಿಕೆಗಳಲ್ಲಿ ವರದಿಯಾಗಿಲ್ಲ.

ಮಠ ಮಾನ್ಯಗಳು ಅಥವಾ ಯಾವುದೇ ಮತಧರ್ಮಗಳ ಧರ್ಮಾಧಿಕಾರಿಗಳು ಇಂತಹ ನೇರ ರಾಜಕೀಯದಲ್ಲಿ ತೊಡಗಿ ಸಾಮಾಜಿಕ ವಿಷಮತೆಗೆ ಕಾರಣವಾಗದಿರಲಿ ಎಂದು ಆಶಿಸೋಣ. ಈ ನಿಟ್ಟಿನಲ್ಲಿ ನಮ್ಮ ನ್ಯಾಯಾಂಗ ತಮ್ಮ ಗಮನವನ್ನು ಇಂತಹ ಬೆಳವಣಿಗೆಗಳತ್ತ ಹರಿಸುವುದು ಒಳ್ಳೆಯದು.

Donate Janashakthi Media

Leave a Reply

Your email address will not be published. Required fields are marked *