ಹೊಸದಿಲ್ಲಿ: ದೇಶದ ಚುನಾವಣಾ ಆಯುಕ್ತರ ನೇಮಕಾತಿ ಪ್ರಕ್ರಿಯೆ ಕುರಿತಂತೆ ತೀಕ್ಷ್ಣ ಅಭಿಪ್ರಾಯ ಮತ್ತು ಪ್ರಶ್ನೆಗಳನ್ನು ಮುಂದಿಟ್ಟ ಬಳಿಕ ಸುಪ್ರೀಂಕೋರ್ಟ್, ಅರುಣ್ ಗೋಯಲ್ ಅವರನ್ನು ನ. 19ರಂದು ಆಯೋಗಕ್ಕೆ ನೇಮಕ ಮಾಡಿದ ನಿರ್ದಿಷ್ಟ ಕಡತಗಳನ್ನು ಸಲ್ಲಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿದೆ.
ಅರುಣ್ ಗೋಯಲ್ ಅವರಿಗೆ ಇತ್ತೀಚೆಗಷ್ಟೇ ಸ್ವಯಂ ನಿವೃತ್ತಿ ನೀಡಿದ್ದು, ಅದಾದ ಕೂಡಲೇ ಚುನಾವಣಾ ಆಯೋಗದ ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಗಿದೆ. ಹೀಗಾಗಿ ನೇಮಕಾತಿಯಲ್ಲಿ ‘ಕಣ್ಕಟ್ಟು’ ನಡೆದಿರಬಹುದೇ ಎಂಬುದನ್ನು ತಿಳಿಯಲು ಬಯಸಿರುವುದಾಗಿ ನ್ಯಾ. ಕೆಎಂ ಜೋಸಫ್ ನೇತೃತ್ವದ ಐವರು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠ ಬುಧವಾರ ಹೇಳಿದೆ.
ನಾವು ಅರುಣ್ ಗೋಯೆಲ್ ಅವರ ರುಜುವಾತುಗಳ ಅರ್ಹತೆಯನ್ನು ಪ್ರಶ್ನಿಸುತ್ತಿಲ್ಲ, ಅವರ ನೇಮಕಾತಿಯ ಪ್ರಕ್ರಿಯೆಯನ್ನು ಪ್ರಶ್ನಿಸುತ್ತಿದ್ದೇವೆಎಂದು ನ್ಯಾಯಮೂರ್ತಿ ಕೆ ಎಂ ಜೋಸೆಫ್ ನೇತೃತ್ವದ ಐವರು ನ್ಯಾಯಾಧೀಶರ ಸಂವಿಧಾನ ಪೀಠ ಪ್ರಶ್ನಿಸಿತು.
ಚುನಾವಣಾ ಆಯುಕ್ತರಿಗೆ ಪ್ರಧಾನ ಮಂತ್ರಿಯವರ ವಿರುದ್ಧ ಕ್ರಮ ಕೈಗೊಳ್ಳಿ ಎಂದರೆ ಅವರು ಇಲ್ಲ ಎಂದು ಹೇಳಲು ಸಾಧ್ಯವೇ ಎಂದು ಪ್ರಶ್ನಿಸಿತು. ಉದಾಹರಣೆಗೆ ಪ್ರಧಾನ ಮಂತ್ರಿಯವರ ವಿರುದ್ಧ ಏನೋ ಒಂದು ಆರೋಪ ಬಂತು ಎಂದಿಟ್ಟುಕೊಳ್ಳಿ.ಮುಖ್ಯ ಚುನಾವಣಾ ಆಯುಕ್ತರು ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು, ಆದರೆ ಅವರು ಪ್ರಧಾನಿ ವಿರುದ್ಧ ಕ್ರಮ ಕೈಗೊಳ್ಳುತ್ತಿಲ್ಲ, ಆಗ ವ್ಯವಸ್ಥೆಯ ಸಂಪೂರ್ಣ ಕುಸಿತವಾಗುವುದಿಲ್ಲವೇ ಎಂದು ನ್ಯಾಯಮೂರ್ತಿ ಜೋಸೆಫ್ ಪ್ರಶ್ನಿಸಿದರು. ನ್ಯಾಯಪೀಠದಲ್ಲಿ ನ್ಯಾಯಾಧೀಶರುಗಳಾದ ಅಜಯ್ ರಸ್ತೊಗಿ, ಅನಿರುದ್ಧ ಬೋಸ್, ಹೃಷಿಕೇಶ್ ರಾಯ್ ಮತ್ತು ಸಿ ಟಿ ರವಿಕುಮಾರ್ ಅವರು ಕೂಡ ಉಪಸ್ಥಿತರಿದ್ದರು.
ಮುಖ್ಯ ಚುನಾವಣಾ ಆಯುಕ್ತರನ್ನು ರಾಜಕೀಯ ಪ್ರಭಾವದಿಂದ ರಕ್ಷಿಸಬೇಕು, ಅವರು ಸ್ವತಂತ್ರವಾಗಿರಬೇಕು ಅವರು ವ್ಯಕ್ತಿತ್ವದಿಂದಲೇ ವ್ಯಕ್ತಿಯಾಗಬೇಕು. ನಮಗೆ ಚುನಾವಣೆಗೆ ಸ್ವತಂತ್ರ ಪ್ರಭಾವರಹಿತ ಸಂಸ್ಥೆ ಬೇಕೆ ಹೊರತು ಅದು ಕೇಂದ್ರ ಸಚಿವರುಗಳು, ಪ್ರಧಾನಿಯವರಿಂದ ಪ್ರಭಾವಕ್ಕೆ ಒಳಗಾಗಿರಬಾರದು ಎಂದು ನ್ಯಾಯಪೀಠ ಹೇಳಿದೆ.
ಕೇಂದ್ರದಲ್ಲಿ ಅಧಿಕಾರದಲ್ಲಿರುವ ಪಕ್ಷಗಳು ‘ಹೌದಪ್ಪ’ ಎನ್ನುವ ಅಧಿಕಾರಿಗಳನ್ನೇ ಆಯುಕ್ತರಾಗಿ ನೇಮಕ ಮಾಡುತ್ತವೆ. ಅಂತಹವರು ಪ್ರಧಾನಿ ವಿರುದ್ಧ ಕ್ರಮ ತೆಗೆದುಕೊಳ್ಳುತ್ತಾರೆಯೇ? ಹೀಗಾಗಿ ಪ್ರಬಲ ಚುನಾವಣಾ ಆಯುಕ್ತರ ಅಗತ್ಯ ವಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.