ನವದೆಹಲಿ : ಎನ್‌ಡಿಟಿವಿ ಮಾಲಕತ್ವ ಅದಾನಿ ಸಮೂಹದ ತೆಕ್ಕೆಗೆ ಬಿದ್ದ ಬೆನ್ನಲ್ಲೇ ಹಿರಿಯ ಪತ್ರಕರ್ತ ರವೀಶ್ ಕುಮಾರ್ ಎನ್ಡಿಟಿವಿಗೆ ರಾಜೀನಾಮೆ ನೀಡಿದ್ದಾರೆ.
ಎನ್‌ಡಿಟಿವಿ ಸಂಸ್ಥಾಪಕರಾದ ಪ್ರಣಯ್ ರಾಯ್ ಮತ್ತು ರಾಧಿಕಾ ರಾಯ್ ಅವರು ಆರ್‌ಆರ್‌ಪಿಆರ್ ಹೋಲ್ಡಿಂಗ್ ಪ್ರೈವೇಟ್ ಲಿಮಿಟೆಡ್‌ನ ನಿರ್ದೇಶಕ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ ಎಂದು ವರದಿಯಾದ ಒಂದು ದಿನದ ನಂತರ ರವೀಶ್ ಕುಮಾರ್ ಅವರ ರಾಜೀನಾಮೆಯ ಬಗ್ಗೆ ಪ್ರಕಟಣೆ ಹೊರಬಿದ್ದಿದೆ.
ರವೀಶ್ ಕುಮಾರ್ ದಶಕಗಳಿಂದ ಎನ್‌ಡಿಟಿವಿಯ ಅವಿಭಾಜ್ಯ ಅಂಗವಾಗಿದ್ದರು. ಎನ್‌ಡಿಟಿವಿಗೆ ಹಾಗೂ ಪತ್ರಿಕೋದ್ಯಮಕ್ಕೆ ಅವರ ಕೊಡುಗೆ ಅಪಾರವಾಗಿದೆ. ರಾಮನ್ ಮ್ಯಾಗಸೆಸೆ ಪ್ರಶಸ್ತಿ ವಿಜೇತ ಸುದ್ದಿ ನಿರೂಪಕರರಾಗಿರುವ ರವೀಶ್ ಕುಮಾರ್ ಜನಪ್ರಿಯ ಕಾರ್ಯಕ್ರಮಗಳಾದ ‘ಪ್ರೈಮ್ ಟೈಮ್’, ‘ರವೀಶ್ ಕಿ ರಿಪೋರ್ಟ್’, ‘ಹಮ್ ಲೋಗ್’ ಮತ್ತು ‘ದೇಶ್ ಕಿ ಬಾತ್’ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದರು. ಎರಡು ಬಾರಿ ರಾಮನಾಥ್ ಗೋಯೆಂಕಾ ಎಕ್ಸಲೆನ್ಸ್ ಇನ್ ಜರ್ನಲಿಸಂ ಪ್ರಶಸ್ತಿಯನ್ನು ರವೀಶ್ ಕುಮಾರ್ ಪಡೆದಿರುವುದು ಅವರ ಮಾಧ್ಯಮ ಸೇವೆಗೆ ಸಾಕ್ಷಿಯಾಗಿದೆ.
ರವೀಶ್ ಕುಮಾರ್ ರಾಜಿನಾಮೆಯೊಂದಿಗೆ ಎನ್‌ಡಿಟಿವಿಯ ಬಹುಮುಖ್ಯ ಭಾಗವೇ ಕಳಚಿಕೊಂಡಂತಾಗಿದೆ. ಎನ್‌ಡಿಟಿವಿ ಎಂದರೆ ರವೀಶ್, ರವೀಶ್ ಎಂದರೆ ಎನ್‌ಡಿಟಿವಿ ಅನ್ನುವಂತಹ ವಾತಾವರಣವಿತ್ತು. ರವೀಶ್ ಈಗ ಹೊರ ಹೋಗಿರುವುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ರವೀಶ್ ಅವರ ಮುಂದಿನ ನಡೆಯೇನು ಎನ್ನುವುದರ ಬಗ್ಗೆ ಅವರ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗಳನ್ನು ನಡೆಸುತ್ತಿದ್ದಾರೆ.
ಕಾಸು ಕೊಟ್ಟು ಎನ್‌ಡಿಟಿವಿಯನ್ನಷ್ಟೇ ಖರೀದಿಸಬಹುದು , ರವೀಶ್ ಕುಮಾರ್ ರನ್ನಲ್ಲ ಎಂದು ಅವರ ಅಭಿಮಾನಿಗಳು ರವೀಶ್ ಕುಮಾರ್ ಅವರ ರಾಜಿನಾಮೆಯನ್ನು ಸಂಭ್ರಮಿಸುತ್ತಿದ್ದಾರೆ. #TheEndtv ಎಂಬ ಹ್ಯಾಶ್ ಟ್ಯಾಗ್ ಮೂಲಕ NDTV ಕಥೆ ಮುಗಿಯಿತು ಎಂದೆಲ್ಲ ಹುತ್ತಿದ್ದಾರೆ.
ಎನ್‌ಡಿಟಿವಿಯ ಶೇ.29.18ರಷ್ಟು ಷೇರುಗಳು ಅದಾನಿ ಗ್ರೂಫ್ ಪಾಲು!
ಉದ್ಯಮಿ ಗೌತಮ್ ಅದಾನಿ ನೇತೃತ್ವದ ಅದಾನಿ ಗ್ರೂಪ್ ಎನ್‌ಡಿಟಿವಿ ಲಿಮಿಟೆಡ್‌ನಲ್ಲಿ ಶೇ.29.18ರಷ್ಟು ಷೇರುಗಳನ್ನು ಆಗಸ್ಟ್ 23 ರಂದು ಸ್ವಾಧೀನಪಡಿಸಿಕೊಂಡಿತ್ತು. ಇದಾದ ಬಳಿಕ ಕಂಪನಿಯ ಇನ್ನೂ ಶೇ.26ರಷ್ಟು ಷೇರುಗಳನ್ನು ಖರೀದಿಸಲು ಒಪನ್ ಆಫರ್ ಅನ್ನು ಅದಾನಿ ಗ್ರೂಪ್ ನೀಡಿತ್ತು.
ರಾಧಿಕಾ ರಾಯ್ ಮತ್ತು ಪ್ರಣಯ್ ರಾಯ್ ಒಡೆತನದ ಆರ್‌ಆರ್‌ಪಿಆರ್ ಹೋಲ್ಡಿಂಗ್ ಕಂಪೆನಿಯು, ಸೋಮವಾರ ತನ್ನ ಈಕ್ವಿಟಿ ಬಂಡವಾಳದ 99.5 % ಅದಾನಿ ಗ್ರೂಪ್ ಒಡೆತನದ ವಿಶ್ವಪ್ರಧಾನ್ ಕಮರ್ಷಿಯಲ್ ಪ್ರೈವೇಟ್ ಲಿಮಿಟೆಡ್‌ಗೆ (ವಿಸಿಪಿಎಲ್) ವರ್ಗಾಯಿಸಿದೆ ಎಂದು ಹೇಳಿತ್ತು. ಇದರೊಂದಿಗೆ ಎನ್ ಡಿ ಟಿ ವಿ ಮೇಲೆ ಪೂರ್ಣ ಸ್ವಾಧೀನ ಪಡೆಯುವ ಅದಾನಿ ಸಮೂಹದ ಪ್ರಯತ್ನಕ್ಕೆ ಜಯ ಸಿಕ್ಕಿತ್ತು. ಎನ್‌ಡಿಟಿವಿಯ ಪ್ರೊಮೋಟರ್ ಆಗಿದ್ದ ಆರ್‌ಆರ್‌ಪಿಆರ್ ಹೋಲ್ಡಿಂಗ್ ಸಂಸ್ಥೆಯು ಷೇರುಗಳ ವರ್ಗಾವಣೆ ಮಾಡಿರುವುದರಿಂದ ಅದಾನಿ ಸಮೂಹಕ್ಕೆ NDTV ಯಲ್ಲಿ 29.18 ರಷ್ಟು ಪಾಲು ಸಿಕ್ಕಿದೆ.