ಬೆಂಗಳೂರು: ದೇಶದ ಅತ್ಯುನ್ನತ ಶೈಕ್ಷಣಿಕ ಪ್ರಾಧಿಕಾರವಾದ ರಾಷ್ಟ್ರೀಯ ಶಿಕ್ಷಣ,ಸಂಶೋಧನೆ ಮತ್ತು ತರಬೇತಿ ಮಂಡಳಿಯು (NCERT) ಆಡಳಿತರೂಢ ಸರ್ಕಾರದ ಅಂಚೆ ಕಚೇರಿಯಂತೆ ಕಾರ್ಯ ನಿರ್ವಹಿಸುವ ಮಟ್ಟಕ್ಕೆ ಇಳಿದಿರುವುದು ಇಡೀ ಶೈಕ್ಷಣಿಕ ವಲಯ ತಲೆ ತಗ್ಗಿಸುವಂತೆ ಮಾಡಿದೆ ಎಂದು ಅಭಿವೃದ್ಧಿ ಶಿಕ್ಷಣ ತಜ್ಞ ನಿರಂಜನಾರಾಧ್ಯ.ವಿ.ಪಿ ಆರೋಪಿಸಿದ್ದಾರೆ.
ಎನ್‌ಸಿಇಆರ್‌ಟಿಯ ಸಮಾಜ ವಿಜ್ಞಾನ ಸಮಿತಿಯು 12 ನೇ ತರಗತಿಯವರೆಗಿನ ಎಲ್ಲಾ ಸಮಾಜ ವಿಜ್ಞಾನ ಪಠ್ಯಪುಸ್ತಕಗಳಲ್ಲಿ ‘ ಇಂಡಿಯಾ’ವನ್ನು ‘ಭಾರತ’ ಎಂದು ಕರೆಯಬೇಕೆಂದು ಸಲಹೆ ನೀಡಿರುವುದು ಅತ್ಯಂತ ಅಘಾತಕಾರಿ ಸಲಹೆಯಾಗಿದೆ . ಸಮಿತಿಯ ಅಧ್ಯಕ್ಷರಾದ ಪ್ರೊ .ಸಿ.ಐ ಇಸಾಕ್ ರವರ ಈ ನಡೆ ಸಂವಿಧಾನ ವಿರೋಧಿಯಾಗಿದೆ. ಸಂವಿಧಾನದ ಪರಿಚ್ಛೇಧ 1 ರಲ್ಲಿ ಒಕ್ಕೂಟದ ಹೆಸರು ಇಂಡಿಯಾ, ಅಂದರೆ ಭಾರತ, ರಾಜ್ಯಗಳ ಒಕ್ಕೂಟವಾಗಿದೆ ಎಂದು ವ್ಯಾಖ್ಯಾನಿಸಿದೆ ಎಂದಿದ್ದಾರೆ.
ಎನ್‌ಸಿಇಆರ್‌ಟಿಯು ಶಾಲಾ ಶಿಕ್ಷಣದಲ್ಲಿ ಗುಣಾತ್ಮಕತೆಯ ಸುಧಾರಣೆಗಾಗಿ ನೀತಿಗಳು ಮತ್ತು ಕಾರ್ಯಕ್ರಮಗಳನ್ನು ರೂಪಿಸುವ ಕುರಿತು ಒಕ್ಕೂಟ ಮತ್ತು ರಾಜ್ಯ ಸರ್ಕಾರಗಳಿಗೆ ಸಹಾಯ ಮತ್ತು ಸಲಹೆ ನೀಡಲು 1961 ರಲ್ಲಿ ಸ್ಥಾಪಿಸಿದ ಸ್ವಾಯತ್ತ ಸಂಸ್ಥೆಯಾಗಿದೆ. ಶಾಲಾ ಶಿಕ್ಷಣಕ್ಕೆ ಸಂಬಂಧಿಸಿದಂತೆ ಹತ್ತು ಹಲವು ಶೈಕ್ಷಣಿಕ ಉದ್ದೇಶಗಳನ್ನು ಹೊಂದಿರುವ ಈ ಅತ್ಯುನ್ನತ ಸಂಸ್ಥೆಯು , ಪಠ್ಯ ವಿಷಯಗಳಲ್ಲಿ ಕಲ್ಪನೆಗಳು (Ideas) ಮತ್ತು ಮಾಹಿತಿಗಾಗಿ ವಿಷಯಗಳನ್ನು ಸ್ಪಷ್ಟಪಡಿಸುವ (Clearing) ಮನೆಯಂತೆಯೂ ಕಾರ್ಯನಿರ್ವಹಿಸಿಸುವ ಮೂಲಕ ಪ್ರಾಥಮಿಕ ಶಿಕ್ಷಣದ ಸಾರ್ವತ್ರಿಕೀಕರಣದ ಗುರಿಗಳನ್ನು ಸಾಧಿಸಲು ನೋಡಲ್ ಏಜೆನ್ಸಿಯಾಗಿ ಕಾರ್ಯನಿರ್ವಹಿಸುತ್ತದೆ ಎಂದು ತಿಳಿಸಿದ್ದಾರೆ. ಎನ್‌ಸಿಇಆರ್‌ಟಿ
ಇದನ್ನೂ ಓದಿ : ಪಠ್ಯಪುಸ್ತಕಗಳಲ್ಲಿ ಇನ್ನು ಮುಂದೆ ‘ಇಂಡಿಯಾ’ ಬದಲಿಗೆ ‘ಭಾರತ್’ | ಎನ್‌ಸಿಇಆರ್‌ಟಿ ಸಮಿತಿ ಶಿಫಾರಸು
ಇಂಥಹ ಅತ್ಯುನ್ನತ ಸಂಸ್ಥೆಯು ಸಂವಿಧಾನದ ಕನಿಷ್ಠ ಜ್ಞಾನವೂ ಇಲ್ಲದಂತೆ ತನ್ನ ಎಲ್ಲಾ ಸಮಾಜ ವಿಜ್ಞಾನದ ಪಠ್ಯಪುಸ್ತಕಗಳಲ್ಲಿ ಇಂಡಿಯಾ ಎಂಬುದನ್ನು ಭಾರತವನ್ನಾಗಿ ಬದಲಿಸುವ ಸಲಹೆಯನ್ನು ನೀಡಿರುವುದು ಸಂವಿಧಾನಬಾಹಿರ ನಡೆಯಾಗಿದ್ದು ದೇಶದ್ರೋಹವೆನಿಸಿಕೊಳ್ಳುತ್ತದೆ. ಪರೋಕ್ಷವಾಗಿ ಇದು ಸಂವಿಧಾನವನ್ನೇ ಬದಲಾಯಿಸುವ ಮುನ್ಸೂಚನೆಯಾಗಿದೆ ಎಂದು ಆರೋಪಿಸಿದ್ದಾರೆ.
ದೇಶದ ಅತ್ಯುನ್ನತ ಶೈಕ್ಷಣಿಕ ಪ್ರಾಧಿಕಾರವೊಂದು ಆಡಳಿತ ಪಕ್ಷದ ಅಂಗ ಸಂಸ್ಥೆಯಂತೆ ಕಾರ್ಯನಿರ್ವಹಿಸುತ್ತಿರುವುದ ಸ್ವಾತಂತ್ರ್ಯ ಭಾರತದ ಇತಿಹಾಸದಲ್ಲಿ ಒಂದು ಕಪ್ಪು ಚುಕ್ಕೆಯಾಗಿದೆ. ಕಳೆದ ಒಂದು ದಶಕದ ಈ ಬೆಳವಣಿಗೆಯು , ಶಾಲಾ ಶಿಕ್ಷಣದಲ್ಲಿ ಧರ್ಮ, ಪುರಾಣ, ಇತ್ಯಾದಿಗಳನ್ನು ಬೆರೆಸುವ ಮೂಲಕ ಶಿಕ್ಷಣವನ್ನು ಕೋಮುವಾದೀಕರಣಗೊಳಿಸುವ ಹುನ್ನಾರವಾಗಿದೆ. ಭಾರತದ ಸಂವಿಧಾನ ಸ್ವಾತಂತ್ರ್ಯ ಚಳುವಳಿಯ ಉತ್ಪನ್ನವಾಗಿದ್ದು, ಜನರ ಆಶಯದಂತೆ , ಸಂವಿಧಾನ ರಚನಾ ಸಭೆಯಲ್ಲಿ ವ್ಯಾಪಕ ಚರ್ಚೆ ಮತ್ತು ವಿಶ್ಲೇಷಣೆಯ ನಂತರ ಒಕ್ಕೂಟವನ್ನು ಇಂಡಿಯಾ, ಅಂದರೆ ಭಾರತ ವ್ಯಾಖ್ಯಾನಿಸಿದೆ . ಇದನ್ನು ಏಕಪಕ್ಷೀಯವಾಗಿ ಬದಲಾಯಿಸುವ ಅಧಿಕಾರ ಯಾವ ಸಂಸ್ಥೆಗಳಿಗೂ ಇಲ್ಲ. ಸಂವಿಧಾನ ತಿದ್ದುಪಡಿಯಾಗದೆ , ಈ ಬಗೆಯ ಸಲಹೆ –ಶಿಫಾರಸ್ಸುಗಳು ಸಂವಿಧಾನ ವಿರೋಧಿ ನಡೆಯಾಗುತ್ತವೆ ಎಂದಿದ್ದಾರೆ. ಎನ್‌ಸಿಇಆರ್‌ಟಿ
ಇದಕ್ಕೆ ಕಾರಣರಾದ ಸಮಿತಿಯ ಅಧ್ಯಕ್ಷ ಸಿ.ಐ.ಇಸಾಕ್ ಮತ್ತು ಸದಸ್ಯರನ್ನು ವಜಾಗೊಳಿಸಿ ಸಮಿತಿಯನ್ನು ವಿಸರ್ಜಿಸಬೇಕೆಂದು ಹಾಗು ಈ ಸಮಿತಿಯ ಎಲ್ಲಾ ಪ್ರಸ್ತಾವನೆಗಳನ್ನು ಕೈಬಿಡಬೇಕೆಂದು ಶಿಕ್ಷಣದ ಮೂಲಭೂತ ಹಕ್ಕಿಗಾಗಿ ಜನಾಂದೋಲನಗಳ ಸಮನ್ವಯ ಒಕ್ಕೂಟ ಸರ್ಕಾರ ಮತ್ತು ಎನ್ ಸಿ ಇ ಆರ್ ಟಿಯ ಕಾರ್ಯಕಾರಿ ಸಮಿತಿಯನ್ನು ಒತ್ತಾಯಿಸುತ್ತದೆ ಎಂದು ತಿಳಿಸಿದ್ದಾರೆ. ಎನ್‌ಸಿಇಆರ್‌ಟಿ
ಈ ವಿಡಿಯೋ ನೋಡಿ : ವಿಷವಟ್ಟಿ ಸುಡುವಲ್ಲಿ:”ಆರ್‌ಎಸ್‌ಎಸ್ ಸಿದ್ದಾಂತ ಪಠ್ಯದಲ್ಲಿ” ಹೇಗೆ ಸೇರಿಕೊಳ್ಳುತ್ತದೆ ಎಂಬುದನ್ನು ತೆರೆದಿಡುವ ಪುಸ್ತಕ