- ನೇಣು ಬಿಗಿದು ತಾಯಿ ಮಗಳು ಆತ್ಮಹತ್ಯೆ
- ಗೋವಿಂದಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ
- ತಡವಾಗಿ ಬೆಳಕಿಗೆ ಬಂದ ಪ್ರಕರಣ
ಬೆಂಗಳೂರು: ನಾಯಿ ವಿಚಾರಕ್ಕೆ ಅತ್ತೆ ಮಾವನ ಜೊತೆ ಜಗಳ ಮಾಡಿ ತಾಯಿ-ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗೋವಿಂದಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೂರು ದಿನಗಳ ಹಿಂದೆ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಮೃತರನ್ನು ಪೂರ್ವ ಬೆಂಗಳೂರಿನ ಬಾಣಸವಾಡಿಯ ಎಚ್ಬಿಆರ್ ಲೇಔಟ್ ನಿವಾಸಿಗಳಾದ ದಿವ್ಯಾ ಆರ್ (36) ಮತ್ತು ಮಗಳು ಹೃದಯ ಎಸ್ (13) ಎಂದು ಗುರುತಿಸಲಾಗಿದೆ. ಕಳೆದ ಕೆಲವು ವರ್ಷಗಳಿಂದ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದು, ಚರ್ಮದ ಅಲರ್ಜಿಯೂ ಇದೆ ಎಂದು ದಿವ್ಯಾ ತಂದೆ ರಾಮನ್ ಎಂಕೆ ಆರೋಪಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಆಕೆಯ ಆರೋಗ್ಯ ಸ್ಥಿತಿಯನ್ನು ಸುಧಾರಿಸಲು ನಾಯಿಗಳಿಂದ ದೂರವಿರಲು ವೈದ್ಯರು ತಿಳಿಸಿದ್ದರು.
ಆದರೆ ಪ್ರೀತಿಯಿಂದ ಸಾಕಿದ ನಾಯಿಯನ್ನು ಮನೆಯಿಂದ ಹೊರಗೆ ಕಳುಹಿಸುವುದು ದಿವ್ಯಾ ಅತ್ತೆ ಮತ್ತು ಮಾವನಿಗೆ ಇಷ್ಟವಿರಲಿಲ್ಲ. ಈ ಹಿನ್ನೆಲೆಯಲ್ಲಿ ನಾಯಿಯನ್ನು ಮನೆಯಿಂದ ಕಳಿಸಲು ಅತ್ತೆ ಮಾವ ಇಬ್ಬರೂ ಒಪ್ಪಿರಲಿಲ್ಲ. ಇದೇ ವಿಚಾರಕ್ಕೆ ದಿವ್ಯಾ ಹಾಗೂ ಅತ್ತೆ ಮಾವನ ನಡುವೆ ಗಲಾಟೆ ನಡೆಯುತ್ತಿತ್ತು. ಆದರೆ ಈ ಗಲಾಟೆ ಮೂರು ದಿನಗಳ ಹಿಂದೆ ಆತ್ಮಹತ್ಯೆಯಲ್ಲಿ ಅಂತ್ಯ ಕಂಡಿದೆ. ಘಟನೆಯಿಂದ ಮನನೊಂದಿರುವ ದಿವ್ಯಾ ಮತ್ತು ಅವರ ಪುತ್ರಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗೋವಿಂದಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.