ತುಮಕೂರು: ಪಿಎಸ್ಐ ನೇಮಕಾತಿಯ ಹಗರಣದ ಕುರಿತು ರಾಜ್ಯಾದ್ಯಂತ ಕೋಲಾಹಲ ಉಂಟಾಗಿದ್ದು, ಇದೇ ಸಮಯದಲ್ಲಿ ಮತ್ತೊಂದು ಪರೀಕ್ಷೆ ಅಕ್ರಮ ನಡೆದಿದೆ ಎನ್ನಲಾಗಿದ್ದು, ಜವಹಾರ ಲಾಲ್ ನೆಹರು ನವೋದಯ ವಿದ್ಯಾಲಯದ ಪ್ರವೇಶ ಪರೀಕ್ಷೆಯಲ್ಲಿ ಅಕ್ರಮದ ಆರೋಪ ಕೇಳಿ ಬಂದಿದೆ.
ತುಮಕೂರು ಜಿಲ್ಲೆಯಲ್ಲಿ ಏಪ್ರಿಲ್ 30ರಂದು ನಡೆದ ನವೋದಯ ವಿದ್ಯಾಲಯದ ಪರೀಕ್ಷೆ ಅಕ್ರಮದಲ್ಲಿ ಕೊಠಡಿ ಮೇಲ್ವಿಚಾರಕರೇ ಭಾಗಿಯಾಗಿದ್ದಾರೆ ಎನ್ನಲಾಗಿದೆ.
ಪರೀಕ್ಷೆಯನ್ನು ಬರೆದ ಆರನೇ ತರಗತಿಯ ಮಕ್ಕಳ ಪೋಷಕರು ಮರು ಪರೀಕ್ಷೆ ನಡೆಸಬೇಕೆಂದು ತುಮಕೂರು ಜಿಲ್ಲಾಧಿಕಾರಿಗಳಾದ ವೈ.ಎಸ್. ಪಾಟೀಲ್ ಗೆ ಒತ್ತಾಯಿಸಿದರು. ಹಾಗಾಗಿ ರಾಜ್ಯದಲ್ಲಿ ಮತ್ತೊಂದು ಪರೀಕ್ಷಾ ಅಕ್ರಮ ನಡೆದಿದೆ ಎಂಬುದು ಬೆಳಕಿಗೆ ಬಂದಿದೆ.
ಪರೀಕ್ಷೆ ನಡೆಯುವ ಸಂದರ್ಭದಲ್ಲಿ ತಮ್ಮ ಹಸ್ತದಲ್ಲಿ ಉತ್ತರವನ್ನು ಬರೆದುಕೊಂಡು ಬಂದು ಕೆಲವು ವಿದ್ಯಾರ್ಥಿಗಳಿಗೆ ಉತ್ತರ ಹೇಳಿಕೊಟ್ಟಿರುವುದಾಗಿ ಆರೋಪಿಸಿದ್ದು, ಇನ್ನು ಕೆಲವೊಂದು ಕೊಠಡಿಗಳಲ್ಲಿ (ಓಎಂಆರ್) ಶೀಟ್‌ನಲ್ಲಿ ವಿದ್ಯಾರ್ಥಿಗಳಿಗೆ ತಮ್ಮ ಹೆಸರು ನೊಂದಣಿ ಸಂಖ್ಯೆ, ಮತ್ತು ಸಂಪೂರ್ಣ ವಿವರಗಳನ್ನು ಭರ್ತಿ ಮಾಡಬಾರದೆಂದು ಸಲಹೆಯನ್ನ ಕೊಟ್ಟು ಕೊಠಡಿ ಮೇಲ್ವಿಚಾರಕರೇ, ಎಲ್ಲಾ ಸಂಪೂರ್ಣ ಮಾಹಿತಿಯನ್ನು ಓಎಂಆರ್ ಶೀಟ್ ನಲ್ಲಿ ತುಂಬಿರುವುದಾಗಿ ತಿಳಿದುಬಂದಿದೆ ಪೋಷಕರ ಆರೋಪವಾಗಿದೆ.
ಇದೇ ರೀತಿ ಇನ್ನೂ ಹಲವು ಪರೀಕ್ಷಾ ಕೇಂದ್ರಗಳಲ್ಲೂ ಅಕ್ರಮ ನಡೆದಿರುವುದಾಗಿ ತಿಳಿದು ಬಂದಿರುತ್ತದೆ. ಆದ್ದರಿಂದ ಜಿಲ್ಲಾಧಿಕಾರಿಗಳು ಕೂಲಂಕಷ ತನಿಖೆ ನಡೆಸುವುದರ ಮೂಲಕ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಹಾಗೂ ಮರು ಪರೀಕ್ಷೆ ನಡೆಸಬೇಕೆಂದು ಪರೀಕ್ಷೆ ಬರೆದ ಮಕ್ಕಳು ಹಾಗೂ ಪೋಷಕರು ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿ ಒತ್ತಾಯಿಸಿದ್ದಾರೆ.