ನವೋದಯ ಸಂಸ್ಥೆ ನಡೆ ಖಂಡಿಸಿ ರಾಯಚೂರು ಬಂದ್​ ಬೆಂಬಲಿಸಿ ಪ್ರತಿಭಟನೆ

ರಾಯಚೂರು: ಜಿಲ್ಲೆಯ ಮುಖ್ಯ ನಗರದಲ್ಲಿರುವ ನವೋದಯ ಮೆಡಿಕಲ್ ಕಾಲೇಜು ಆಡಳಿತ ಮಂಡಳಿಯ ಧೋರಣೆ ಖಂಡಿಸಿ ಇಂದು(ಮಾ.07) ರಾಯಚೂರ್‌ ಬಂದ್‌ಗೆ ಕರೆ ನೀಡಲಾಗಿತ್ತು.

ನವೋದಯ ಮೆಡಿಕಲ್‌ ಕಾಲೇಜು ಹೈದ್ರಾಬಾದ್ ಕರ್ನಾಟಕ ಭಾಗಕ್ಕೆಂದೇ‌ 371(ಜೆ) ಕಲಂನಡಿ ವಿಶೇಷ ಸ್ಥಾನ ನೀಡಲಾಗಿದೆ. ಹೀಗಿದ್ದರೂ, ಕಾಲೇಜು ಆಡಳಿತ ಮಂಡಳಿ 371(ಜೆ) ಮೀಸಲಾತಿಯನ್ನು ಗಾಳಿಗೆ ತೂರಿ, ಬೇಕಾಬಿಟ್ಟಿ ಮೆಡಿಕಲ್ ಸೀಟು ಹಂಚಿಕೆ ಮಾಡುತ್ತಿರುವ ಆರೋಪ ಕೇಳಿಬಂದಿದೆ. ಮೆಡಿಕಲ್ ಓದಬೇಕೆಂದು ಆಕಾಂಕ್ಷಿಗಳಾಗಿರುವ ಹೈದರಾಬಾದ್ ಕರ್ನಾಟಕ ಭಾಗದ ವಿದ್ಯಾರ್ಥಿಗಳಿಗೆ ದೊಡ್ಡ ಅನ್ಯಾಯ ಮಾಡಲಾಗುತ್ತಿದೆ ಎಂದು ಹೋರಾಟಗಾರರು ಆರೋಪಿಸಿದ್ದಾರೆ.

ಮೆಡಿಕಲ್ ಸೀಟ್ ಹಂಚಿಕೆಯಲ್ಲಿ ವಿದ್ಯಾರ್ಥಿಗಳಿಗೆ ಅನ್ಯಾಯ ಆರೋಪ ಕೇಳಿ ಬಂದಿದೆ. ಅಲ್ಲದೆ, ನವೋದಯ ಸಂಸ್ಥೆಯು ಕೋರ್ಟಿಗೆ ರಿಟ್ ಅರ್ಜಿ ಸಲ್ಲಿಸಿದ್ದು ಅದರಲ್ಲಿ ವಿಶೇಷ ಸ್ಥಾನಮಾನದಡಿ ಮೆಡಿಕಲ್ ಸೀಟು ನೀಡದಿರಲು ಸಲ್ಲಿಸಿರುವ ಅಂಶಗಳು ಒಳಗೊಂಡಿದೆ. ಈ ಹಿನ್ನೆಲೆ ವಿವಿಧ ಸಂಘಟನೆಗಳಿಂದ ರಾಯಚೂರು ನಗರದಲ್ಲಿ ಪ್ರತಿಭಟನೆ ನಡೆದಿದೆ.

ನವೋದಯ ಮೆಡಿಕಲ್ ಕಾಲೇಜು ಆಡಳಿತ ಮಂಡಳಿ ನೀತಿಯಿಂದಾಗಿ ಈ ಸಾಲಿನ ಸುಮಾರು 106 ವಿದ್ಯಾರ್ಥಿಗಳು ಭವಿಷ್ಯ ಅತಂತ್ರದಲ್ಲಿದೆ ಎಂಬುವುದು ಹೋರಾಟಗಾರರ ಆರೋಪವಾಗಿದೆ. ನವೋದಯ ಮೆಡಿಕಲ್ ಕಾಲೇಜು ಪ್ರಾರಂಭವಾಗಿದ್ದು, ಭಾಷಾ ಅಲ್ಪಸಂಖ್ಯಾತರ ಖೋಟಾದಡಿ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಭಾಷಾ ಅಲ್ಪಸಂಖ್ಯಾತರಡಿಯಲ್ಲಿರುವುದು ಇದೊಂದೇ ಮೆಡಿಕಲ್ ಕಾಲೇಜು ಆಗಿದೆ.

ಬಳ್ಳಾರಿ, ರಾಯಚೂರು, ಯಾದಗಿರಿ, ಬೀದರ ಜಿಲ್ಲೆಗಳಲ್ಲಿ ಹೆಚ್ಚಾಗಿ ತೆಲುಗು ಭಾಷಿಕರಿದ್ದಾರೆ. ನವೋದಯ ಮೆಡಿಕಲ್ ಕಾಲೇಜಿನಲ್ಲಿ‌ ಸರ್ಕಾರದ ಖೋಟಾದಲ್ಲಿ 371(ಜೆ) ಮೀಸಲಾತಿ ಅನ್ವಯ ಸೀಟು ನೀಡಲಾಗಿದೆ. ಹೈದರಾಬಾದ್ ಕರ್ನಾಟಕ ಭಾಗದ ಭಾಷಾ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರವೇಶಾತಿ ನೀಡಲಾಗುವುದಿಲ್ಲ ಎಂದು ಪ್ರಶ್ನಿಸಿ ನವೋದಯ ಮೆಡಿಕಲ್ ಕಾಲೇಜು ಆಡಳಿತ ಮಂಡಳಿ ಹೈಕೋರ್ಟ್ ಮೆಟ್ಟಿಲೇರಿದೆ.

ನವೋದಯ ವೈದ್ಯಕೀಯ ಸಂಸ್ಥೆಯ ಅಧ್ಯಕ್ಷ ಎಸ್.ಆರ್.ರೆಡ್ಡಿ ಅವರು ಈ ಭಾಗದ ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡಿ ನ್ಯಾಯಾಲಯ ಹಾಗೂ ಜನರಿಗೆ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಇದು ಸರಿಯಲ್ಲ ಕೂಡಲೇ ಅರ್ಜಿ ಹಿಂಪಡೆಯಬೇಕು. ಇದೇ ಕಾರಣಕ್ಕೆ ನಾವೆಲ್ಲ, ಈಗ ಮತ್ತೊಮ್ಮೆ ಹೋರಾಟಕ್ಕೆ ಮುಂದಾಗಿದ್ದೇವೆ ಎಂದು ಹೈದರಾಬಾದ್ ಕರ್ನಾಟಕ ಹೋರಾಟ ಸಮೀತಿ ಅಧ್ಯಕ್ಷ ರಜಾಕ್ ಉಸ್ತಾದ್ ಆಗ್ರಹಿಸಿದ್ದಾರೆ.

ನವೋದಯ ಮೆಡಿಕಲ್ ಕಾಲೇಜು ಆಡಳಿತ ಮಂಡಳಿ ಪ್ರಕಾರ, ನಾವು ಕಲಂ 371(ಜೆ) ವಿರುದ್ಧ ಕೋರ್ಟ್ ಮೊರೆ ಹೋಗಿಲ್ಲ. 371(ಜೆ)ಕಲಂನಲ್ಲಿರುವ ನಿಯಮಗಳ ಬಗ್ಗೆ ಸರ್ಕಾರ ಗಮನಹರಿಸಲಿ ಎಂದು ಕೋರ್ಟಿನಲ್ಲಿ ಮನವಿ‌ ಮಾಡಿದ್ದೇವೆಂದು ನವೋದಯ ಮೆಡಿಕಲ್ ಕಾಲೇಜು ಮುಖ್ಯಸ್ಥ ಎಸ್ ಆರ್ ರೆಡ್ಡಿ ಸ್ಪಷ್ಟನೆ ನೀಡಿದರು.

ಆದರೆ, ನವೋದಯ ಮೆಡಿಕಲ್ ಕಾಲೇಜು ಮಾತ್ರ ಕೋರ್ಟಿನಲ್ಲಿ ಸಲ್ಲಿಸಿರುವ ಅರ್ಜಿ ವಾಪಸ್ ಪಡೆಯದೇ ತಮ್ಮ ಧೋರಣೆ ಮುಂದುವರೆಸಿದ್ದಾರೆ. ಇಲ್ಲಿನ ವಿದ್ಯಾರ್ಥಿಗಳಿಗೆ ಮೀಸಲಾತಿ ನೀಡದೇ ಅನ್ಯಾಯ ಮಾಡಿದ್ದಲ್ಲದೇ ತಾನು ಈ 371 ಜೆ ಕಾಯ್ದೆ ಅನುಷ್ಠಾನಕ್ಕೆ ಬದ್ಧ ಎಂದು ಜಾಹಿರಾತು ನೀಡಿ ಧ್ವಂದ್ವ ನೀತಿ ಅನುರಿಸಿ ಜನರನ್ನು ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಪ್ರತಿಭಟನಾಕಾರರ ಆರೋಪವಾಗಿದೆ.

ರಾಯಚೂರು ಬಂದ್‌ ಬೆಂಬಲಿಸಿ ಆಡಳಿತರೂಢ ಬಿಜೆಪಿ ಪಕ್ಷ ಒಳಗೊಂಡು ಎಲ್ಲರೂ ಬೆಂಬಲ ನೀಡಿದ್ದಾರೆ.

ಬಂದ್‌ ಕರೆಗೆ ಬೆಂಬಲ ನೀಡಿರುವ ಪಕ್ಷವು ನವೋದಯ ಶಿಕ್ಷಣ ಸಂಸ್ಥೆಯು ನ್ಯಾಯಾಲಯದಲ್ಲಿ ದಾವೆ ಮಾಡಿರುವುದನ್ನು ಸಿಪಿಐ(ಎಂ) ರಾಯಚೂರು ಜಿಲ್ಲಾ ಸಮಿತಿ ತೀವ್ರವಾಗಿ ಖಂಡಿಸುತ್ತದೆ ಮತ್ತು ನ್ಯಾಯಾಲಯದಲ್ಲಿ ಹೂಡಿರುವ ದಾವೆ ವಾಪಸ್ ಪಡೆಯಲು ಒತ್ತಾಯಿಸಿದೆ.

ಈ ಬಗ್ಗೆ ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಕೆ.ಜಿ. ವಿರೇಶ ಮಾತನಾಡಿದ್ದು, ಸಂವಿಧಾನದ ಬಂದವಾಗಿ ಪಡೆದ ಹಕ್ಕುಗಳನ್ನು ರಕ್ಷಿಸಲು ರಾಯಚೂರಿನ ಪ್ರತಿಯೊಬ್ಬ ನಾಗರಿಕರು ಈ ಹೋರಾಟಕ್ಕೆ ಜೊತೆಯಾಗಬೇಕು. ಇಲ್ಲಿಯ ನೆಲ, ಜಲ, ವಿದ್ಯುತ್ ಮತ್ತು ಸಂಪತ್ತು ಪಡೆದು ಜನರ ಲೂಟಿ ಮಾಡುವ ಮುಖಾಂತರ ಕಲ್ಯಾಣ ಕರ್ನಾಟಕದ ಜನರಿಗೆ ದ್ರೋಹ ಮಾಡಲು ಮುಂದಾಗಿರುವ ನವೋದಯ ಶಿಕ್ಷಣ ಸಂಸ್ಥೆಯು ಸಂವಿಧಾನದ 371(ಜೆ) ಜಾರಿಗೆ ಒತ್ತಡ ಹೇರುವ ಮತ್ತು ನಮ್ಮ ಹಕ್ಕುಗಳ ರಕ್ಷಣೆಗೆ ಸಿಪಿಐ(ಎಂ) ಪಕ್ಷವು ಮುಂಚೂಣಿಯಾಗಿ ಇರುತ್ತದೆ ಎಂದು ತಿಳಿಸಿದ್ದಾರೆ.

ರಾಯಚೂರಿನಲ್ಲಿ ಬಂದ್ ನಡೆದಿದ್ದು, ಅದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಶಾಲಾ ಕಾಲೇಜು, ಬಸ್ ಸಂಚಾರ, ಅಂಗಡಿ ಮುಗ್ಗಟ್ಟು, ತರಕಾರಿ ಮಾರುಕಟ್ಟೆ, ಎಪಿಎಂಸಿ ಬಂದ್ ಮಾಡಲಾಗಿದೆ. ಸ್ವಯಂ ಪ್ರೇರಿತರಾಗಿ ವ್ಯಾಪಾರಿಗಳು ಅಂಗಡಿಗಳನ್ನು ಬಂದ್ ಮಾಡಿದ್ದಾರೆ. ನಗರದ ಭಗತ್ ಸಿಂಗ್ ವೃತ್ತದಲ್ಲಿ ಹೋರಾಟ ಸಮಿತಿಯಿಂದ ಪ್ರತಿಭಟನೆ ನಡೆದಿದೆ. ಹೋರಾಟಗಾರರು ಬೈಕ್ ರ‍್ಯಾಲಿ ಮೂಲಕ ಬಂದ್‍ಗೆ ಬೆಂಬಲ ಕೋರುತ್ತಿದ್ದಾರೆ.

ಟೈಯರಿಗೆ ಬೆಂಕಿ ಹಚ್ಚಿ ಪ್ರತಿಭಟನೆ

ಬಂದ್ ಹಿನ್ನೆಲೆ ರಾಯಚೂರು-ಲಿಂಗಸುಗೂರು ಬೈಪಾಸ್ ರಸ್ತೆ ಬಳಿ ಟೈಯರಿಗೆ ಬೆಂಕಿ ಹಚ್ಚಿ ಪ್ರತಿಭಟನಾ ನಿರತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೋರ್ಟಿಗೆ ಸಲ್ಲಿಸಿರುವ ರಿಟ್ ಅರ್ಜಿ ಹಿಂಪಡೆಯುವಂತೆ ಆಗ್ರಹಿಸಿದ್ದಾರೆ. ರಸ್ತೆ ಮಧ್ಯೆ ವಾಹನಗಳನ್ನು ತಡೆದು ಧರಣಿ ನಡೆಸಿದ್ದಾರೆ. ರಸ್ತೆಯಲ್ಲಿ ಕುಳಿತಿದ್ದ ಪ್ರತಿಭಟನಾಕಾರರನ್ನು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.

Donate Janashakthi Media

Leave a Reply

Your email address will not be published. Required fields are marked *