ಚಂಡೀಗಢ: ಪಂಜಾಬ್ ರಾಜ್ಯದ ಚುನಾವಣೆಗೆ ಇನ್ನು ಕೆಲವೇ ತಿಂಗಳು ಬಾಕಿ ಇರುವಾಗಲೇ ರಾಜ್ಯದಲ್ಲಿ ಬಹಳಷ್ಟು ಹೊಸ ಬೆಳವಣಿಗೆಗಳು ಕಂಡುಬರುತ್ತಿದೆ. ಇವೆಲ್ಲದರ ನಡುವೆ ಇಂದು ಪಂಜಾಬ್ ಕಾಂಗ್ರೆಸ್ ಪಕ್ಷಕ್ಕೆ ಮತ್ತೊಂದು ಅಘಾತವಾಗಿದ್ದು, ಪ್ರಾದೇಶಿಕ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿರುವುದು ಮಹತ್ವದ ಬೆಳವಣಿಗೆಯಾಗಿದೆ.
ಇದನ್ನು ಓದಿ: ಪಂಜಾಬ್ ಮುಖ್ಯಮಂತ್ರಿಯಾಗಿ ಚರಣಜಿತ್ ಸಿಂಗ್ ಚನ್ನಿ ಪ್ರಮಾಣ ವಚನ ಸ್ವೀಕಾರ
ರಾಜೀನಾಮೆ ಪತ್ರವನ್ನು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ರವಾನಿಸಿದ್ದಾರೆ. ರಾಜ್ಯ ಘಟಕದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದು, ಪಕ್ಷದ ಕಾರ್ಯ ಚಟುವಟಿಕೆಗಳಲ್ಲಿ ಮುಂದುವರಿಯುವುದಾಗಿ ತಿಳಿಸಿದ್ದಾರೆ.
‘ರಾಜಿಯ ಕಾರಣಗಳಿಂದಾಗಿ ವ್ಯಕ್ತಿಯೊಬ್ಬನ ವ್ಯಕ್ತಿತ್ವದಲ್ಲಿ ಕುಸಿತ ಉಂಟಾಗುತ್ತದೆ. ನಾನು ಪಂಜಾಬ್‌ನ ಭವಿಷ್ಯ ಮತ್ತು ಪಂಜಾಬ್‌ನ ಕಲ್ಯಾಣದಲ್ಲಿ ಯಾವುದೇ ಕಾರಣಕ್ಕೂ ರಾಜಿಯಾಗುವುದಿಲ್ಲ’ ಎಂದಿದ್ದಲ್ಲದೇ ಪಂಜಾಬ್ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ನಾನು ರಾಜೀನಾಮೆ ಸಲ್ಲಿಸುತ್ತಿದ್ದೇನೆ. ಕಾಂಗ್ರೆಸ್ ಪಕ್ಷಕ್ಕೆ ನನ್ನ ಸೇವೆ ಮುಂದುವರಿಯಲಿದೆ ಎಂದು ಉಲ್ಲೇಖಿಸಿದ್ದಾರೆ.
ಪಂಜಾಬ್ ರಾಜಕೀಯ ಬೆಳವಣಿಗೆಯಲ್ಲಿ ಕೆಲ ದಿನಗಳ ಹಿಂದಷ್ಟೇ ಕ್ಯಾಪ್ಟನ್ ಅಮರಿಂದರ್ ಸಿಂಗ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ನಂತರ ನೂತನ ಮುಖ್ಯಮಂತ್ರಿಯಾಗಿ ಚರಣ್‌ಜಿತ್ ಸಿಂಗ್ ಚನ್ನಿ ಪ್ರಮಾಣವಚನ ಸ್ವೀಕರಿಸಿದ್ದರು. ಕಳೆದ ಎರಡು ದಿನಗಳ ಹಿಂದಷ್ಟೇ 15 ಮಂದಿ ಸಚಿವರಾಗಿ ಪ್ರಮಾಣ ವಚನವನ್ನು ಸ್ವೀಕರಿಸಿದರು. ಇಂದು ಖಾತೆಗಳ ಹಂಚಿಕೆಯು ಮಾಡಲಾಗಿದೆ.
ಇದನ್ನು ಓದಿ: ಪಂಜಾಬ್: ನಾಳೆ 15 ಮಂದಿ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ
ಪಂಜಾಬಿನಲ್ಲಿ ಮುಖ್ಯಮಂತ್ರಿಯನ್ನು ಬದಲಾಗಿದ್ದರೂ ರಾಜಕೀಯ ಸಮಸ್ಯೆಗಳು ಇನ್ನು ಬದಲಾಗಿಲ್ಲ ಎಂಬುದು ಇಂದು ನವಜೋತ್ ಸಿಂಗ್ ಸಿಧು ರಾಜೀನಾಮೆ ಮಹತ್ವವನ್ನು ಪಡೆದುಕೊಂಡಿದೆ. ಒಂದೆಡೆ ಮಾಜಿ ಸಿಎಂ ಕ್ಯಾಪ್ಟನ್ ಅಮರಿಂದರ್ ಸಿಂಗ್ ಇಂದು ಸಂಜೆ ದೆಹಲಿಗೆ ಭೇಟಿ ನೀಡಲಿದ್ದಾರೆ. ಅಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರನ್ನು ಭೇಟಿ ಮಾಡುತ್ತಾರೆ ಎಂಬ ವಿಚಾರವೂ ಇದೆ ಎನ್ನಲಾಗಿದೆ.
ಮಾಧ್ಯಮ ವರದಿಗಳ ಪ್ರಕಾರ ಕ್ಯಾಪ್ಟನ್ ಅಮರಿಂದರ್ ಸಿಂಗ್ ಬಿಜೆಪಿ ನಾಯಕರನ್ನು ಏಕೆ ಭೇಟಿ ಮಾಡುತ್ತಿದ್ದಾರೆ ಎಂಬ ವಿಚಾರ ಇನ್ನೂ ಸ್ಪಷ್ಟವಾಗಿಲ್ಲ. ಹೀಗಿದ್ದರೂ ಅವರು ಬಿಜೆಪಿಗೆ ಸೇರುತ್ತಾರೆಂಬ ವರದಿಗಳು ಸದ್ದು ಮಾಡುತ್ತಿವೆ. ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ, ತಮ್ಮ ಮುಂದಿನ ಹೆಜ್ಜೆ ಏನೆಂಬುದರ ಬಗ್ಗೆ ಚರ್ಚೆಯನ್ನು ನಡೆಸಿದ್ದಾರೆ. ಬಿಜೆಪಿ ಸೇರುವ ಪ್ರಶ್ನೆಗೆ, ಭವಿಷ್ಯದ ರಾಜಕೀಯದಲ್ಲಿ ಏನಾಗುತ್ತದೆ ಎಂಬುದರ ಕುರಿತು ನಾನು ಏನನ್ನೂ ಹೇಳಲಾರೆ ಎಂದು ಅವರು ಹೇಳಿದ್ದರು.