ನವೀನ್ ಸಾವಿಗೆ ನೀಟ್ ಕಾರಣ-ಇನ್ನೆಷ್ಟು ಕನ್ನಡದ ಮಕ್ಕಳು ಬಲಿಯಾಗಬೇಕು: ಟಿ.ಎ. ನಾರಾಯಣಗೌಡ ಪ್ರಶ್ನೆ

ಬೆಂಗಳೂರು: ಉಕ್ರೇನಿನಲ್ಲಿ ರಷ್ಯಾ ಪಡೆಗಳ ದಾಳಿಗೆ ಸಿಲುಕಿ ಮೃತಪಟ್ಟ ಕನ್ನಡದ ಹುಡುಗ ನವೀನ್ ಶೇಖರಪ್ಪ ಸಾವಿನ ಹೊಣೆ ಹೊರುವವರು ಯಾರು? ಒಂದೆಡೆ ಶೈಕ್ಷಣಿಕ ಪ್ರವೇಶಾತಿಗೆ ಕೋಟಿಗಟ್ಟಲೆ ಹಣ ಬಾಚುವ ಕ್ಯಾಪಿಟೇಷನ್ ಲಾಬಿ, ಇನ್ನೊಂದೆಡೆ ಕನ್ನಡಿಗರ ಹಕ್ಕುಗಳನ್ನು ಕಸಿಯುತ್ತಿರುವ ನೀಟ್ ಎಂಬ ಷಡ್ಯಂತ್ರಕ್ಕೆ ಬಲಿಯಾಗುತ್ತಿರುವುದು ಕನ್ನಡಿಗರಲ್ಲವೇ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ ಹೇಳಿದ್ದಾರೆ.

ಸ್ವಾತಂತ್ರ್ಯಾನಂತರ ವೈದ್ಯಕೀಯ ವಿಜ್ಞಾನ ಕ್ಷೇತ್ರದಲ್ಲಿ ದೇಶದ ಇತರೆಲ್ಲ ರಾಜ್ಯಗಳಿಗಿಂತ ಹೆಚ್ಚು ಸಾಧಿಸಿರುವುದು ಕರ್ನಾಟಕ ರಾಜ್ಯ. ಒಟ್ಟು 69 ಮೆಡಿಕಲ್ ಕಾಲೇಜುಗಳೊಂದಿಗೆ ಕರ್ನಾಟಕ ಮೊದಲ ಸ್ಥಾನದಲ್ಲಿದೆ. ಆದರೆ, ಕನ್ನಡದ ಮಕ್ಕಳಿಗೆ ಮೆಡಿಕಲ್ ಸೀಟು ಇಲ್ಲ. ನೀಟ್ ಹೆಸರಲ್ಲಿ ನಮ್ಮ ಹಕ್ಕುಗಳನ್ನು ಕಿತ್ತುಕೊಳ್ಳಲಾಗಿದೆ. 21 ಕೋಟಿ ಜನಸಂಖ್ಯೆಯ ಉತ್ತರಪ್ರದೇಶ ರಾಜ್ಯದಲ್ಲಿ 6.5 ಕೋಟಿ ಜನಸಂಖ್ಯೆಯ ಕರ್ನಾಟಕದಲ್ಲಿ ಇರುವಷ್ಟು ಮೆಡಿಕಲ್ ಕಾಲೇಜುಗಳು ಇಲ್ಲ! ನೀಟ್ ಜಾರಿಗೆ ಬಂದಿದ್ದು ಈ ಕಾರಣಕ್ಕೆ. ಕರ್ನಾಟಕದ ಕಾಲೇಜುಗಳಲ್ಲಿ ಉತ್ತರ ಭಾರತೀಯರನ್ನು ತುಂಬುವ ಯೋಜನೆಯೇ ನೀಟ್ ಜಾರಿಯ ಹಿಂದಿನ ತಂತ್ರವಲ್ಲದೇ ಮತ್ತೇನೂ ಅಲ್ಲ ಎಂದು ಅವರು ಹೇಳಿದ್ದಾರೆ.

75 ವರ್ಷಗಳಿಂದ ಕನ್ನಡದ ನೆಲದಲ್ಲಿ, ಕನ್ನಡಿಗರ ದುಡ್ಡಿನಲ್ಲಿ, ಕನ್ನಡಿಗರ ಪರಿಶ್ರಮದಿಂದ ಅರವತ್ತಕ್ಕೂ ಹೆಚ್ಚು ಮೆಡಿಕಲ್ ಕಾಲೇಜುಗಳು ಸ್ಥಾಪನೆಯಾಗಿವೆ. ಆದರೆ ನೀಟ್ ನಿಂದಾಗಿ ಮೊದಲಿನ ಹಾಗೆ ಕನ್ನಡಿಗರಿಗೆ ಸುಲಭ ಪ್ರವೇಶವಿಲ್ಲ. ಈ ಯಾವ ವ್ಯವಸ್ಥೆಯನ್ನೂ ಮಾಡಿಕೊಳ್ಳದ ರಾಜ್ಯಗಳ ವಿದ್ಯಾರ್ಥಿಗಳೊಂದಿಗೆ ಪೈಪೋಟಿ ನಡೆಸಬೇಕಾದ ಪರಿಸ್ಥಿತಿ ಎದುರಾಗಿದೆ.

ನೀಟ್ ನಿಂದಾಗಿ ಮೆಡಿಕಲ್ ಸೀಟು ಸಿಗದೆ ಹಲವಾರು ಪ್ರತಿಭಾವಂತ ಕನ್ನಡದ ಮಕ್ಕಳು ಆತ್ಮಹತ್ಯೆಗೆ ಶರಣಾಗಿದ್ದಾರೆ. ಅವರಿಗೆ ಕರ್ನಾಟಕದಲ್ಲಿಯೇ ಅವಕಾಶ ಸಿಗದೆ ಸಾಯುವಂತೆ ಮಾಡುತ್ತಿರುವ ಕೆಟ್ಟ ವ್ಯವಸ್ಥೆಯೇ ಕಾರಣ. ಇದೆಂಥ ನ್ಯಾಯ? ಇದನ್ನೆಲ್ಲ ನೋಡಿಕೊಂಡು ನಾವು ಸುಮ್ಮನಿರಬೇಕೆ ಎಂದು ನಾರಾಯಣಗೌಡ ಪ್ರಶ್ನೆ ಮಾಡಿದ್ದಾರೆ.

ನೀಟ್ ವಿಷಯದಲ್ಲಿ ತಮಿಳುನಾಡು ಮೊದಲಿನಿಂದಲೂ ಧ್ವನಿ ಎತ್ತುತ್ತ ಬಂದಿದೆ. ಕರ್ನಾಟಕದ ರಾಜಕಾರಣಿಗಳಿಗೆ ಇದರ ಅರಿವೂ ಇಲ್ಲ. ಕನ್ನಡಿಗರ ಹಿತಾಸಕ್ತಿ ಕಾಪಾಡಬೇಕಾದ ರಾಜಕೀಯ ಪಕ್ಷಗಳು ಕನ್ನಡಿಗರ ಪಾಲಿಗೆ ಸತ್ತು ಹೋಗಿವೆ. ಇದರ ಪರಿಣಾಮವಾಗಿ ಕನ್ನಡದ ಮಕ್ಕಳು ನಲುಗುವಂತಾಗಿದೆ ಎಂದು ಹೇಳಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *