‘ನವ ಭಾರತ’ದ ಬುಲ್ಡೋಜರ್ ಹತ್ತಿ ಬರುತ್ತಿದೆ ದ್ವೇಷ, ರಕ್ತಪಾತ

ಸವೇರಾ
ಅನು: ಟಿ ಸುರೇಂದ್ರ ರಾವ್

ಬುಲ್ಡೋಜರ್ ತನ್ನ ಇಚ್ಛೆಯನ್ನು ಇತರರ ಮೇಲೆ ಬಲವಂತವಾಗಿ ಹೇರುವುದರ ಸಂಕೇತ. ಇದರಿಂದಾಗಿ ಬಿಜೆಪಿ ಮತ್ತದರ ಸಂಘ ಪರಿವಾರದವರಿಗೆ ಅದರ ಬಗ್ಗೆ ಒಂದು ಸಹಜ ಬಂಧುತ್ವ ಇದೆ. ತನ್ನ ದಾರಿಯಲ್ಲಿ ಅಡ್ಡಬರುವ ಎಲವನ್ನೂ ನಿರ್ದಯವಾಗಿ ಸದೆಬಡಿಯುವುದು ಆರ್‌ಎಸ್‌ಎಸ್ ನ ಫ್ಯಾಸಿಸ್ಟ್ ತೆರನ ಸಿದ್ಧಾಂತದಿಂದ ಹೊರಹೊಮ್ಮಿದ ದೀರ್ಘಕಾಲದ ಚಿಂತನೆಯೇ ತಾನೇ. ಈಗ ಬಿಜೆಪಿ ಅಧಿಕಾರದಲ್ಲಿರುವುದರಿಂದ ಭಾರತವು ಬುಲ್ಡೋಜರ್ ರಾಜಕೀಯದ ಪರ್ವವನ್ನು ಕಾಣುತ್ತಿದೆ. ‘ನವ ಭಾರತ’ವನ್ನು ನಿರ್ಮಾಣ ಮಾಡುವ ಅವರ ಹಾದಿಯಲ್ಲಿ ಯಾವುದೂ ಅಡ್ಡ ಬರದಂತೆ ನೋಡಿಕೊಳ್ಳಲಾಗುತ್ತಿದೆ. ಈ ‘ನವಭಾರತ’ ಎಂಬುದು ‘ಹಿಂದೂ ರಾಷ್ಟ್ರ’ ಕಟ್ಟುವ ಅವರ ನಿಜವಾದ ಕನಸನ್ನು ಮರೆಮಾಚುವ ಒಂದು ಪರದೆ ಎಂದು ಬೇರೆ ಹೇಳಬೇಕಾಗಿಲ್ಲ.

ಇತ್ತೀಚೆಗೆ ಉತ್ತರ ಪ್ರದೇಶದಲ್ಲಿ ಆಡಳಿತ ಪಕ್ಷ ಬಿಜೆಪಿ ಜಯ ಸಾಧಿಸಿದ ವಿಧಾನಸಭಾ ಚುನಾವಣೆಗಳಲ್ಲಿ ಒಂದು ವಿಲಕ್ಷಣ ವಿದ್ಯಮಾನ ಗೋಚರಿಸಿತು. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರನ್ನು ‘ಬುಲ್ಡೋಜರ್ ಬಾಬಾ’ ಎಂದು ಪದೇ ಪದೇ ಹಾಡಿ ಹೊಗಳಲಾಯಿತು. ಅವರೂ ಆ ವಿಲಕ್ಷಣ ವಿವರಣೆಯನ್ನು ಇಷ್ಟಪಟ್ಟಂತೆ ಕಂಡಿತು. ಬುಲ್ಡೋಜರಿನ ಮೇಲೆ ಹಾಡುಗಳು ಮತ್ತು ಅದರ ಚಿತ್ರಗಳನ್ನು ಹೊತ್ತ ಮಾದರಿಗಳು ಹಾಗೂ ದೊಡ್ಡ ದೊಡ್ಡ ಭಿತ್ತಿಪತ್ರಗಳು ಪ್ರಚಾರದ ಸಮಯದಲ್ಲಿ ಇದ್ದವು ಮತ್ತು ಒಂದು ಬಹಿರಂಗ ಸಭೆಯಲ್ಲಿ ವೇದಿಕೆಯ ಪಕ್ಕ ಒಂದು ಬುಲ್ಡೋಜರನ್ನು ನಿಲ್ಲಿಸಲಾಗಿತ್ತು. ಅದನ್ನು ತೋರಿಸುತ್ತಾ ಯೋಗಿಯವರು ‘ಬಳಕೆಗೆ ಸಿದ್ಧವಾಗಿದೆ’ ಎಂದು ಭಾಷಣದ ಮಧ್ಯೆ ಹೇಳುತ್ತಿದ್ದರು.

ಸಾಮಾನ್ಯವಾಗಿ ಕಟ್ಟಡ ನಿರ್ಮಾಣ ಕೆಲಸ ಅಥವಾ ಕಟ್ಟಡ ಕೆಡವಲು ಬಳಸಲಾಗುವ ಬುಲ್ಡೋಜರನ್ನು ಉತ್ತರ ಪ್ರದೇಶದ ಬಿಜೆಪಿ ಒಂದು ಅಸ್ತ್ರವಾಗಿ ಮಾಡಿದೆ. ಸಮಾಜ ಘಾತುಕರು, ಅಪರಾಧಿಗಳು ಹಾಗೂ ಆಸ್ತಿಪಾಸ್ತಿಗಳ ಮೇಲೆ ಕಲ್ಲುತೂರಿ ಹಾಳುಗೆಡಹುವ ಪ್ರತಿಭಟನಾಕಾರರ ಅದನ್ನು ಬಳಸಲಾಗುವುದು ಎಂದು ಅದು ಸೂಚಿಸಿತ್ತು. ಆದರೆ ಇದು ವಾಸ್ತವವಾಗಿ ಒಂದು ನಿರ್ದಿಷ್ಟ ಸಮುದಾಯದವರನ್ನು – ಮುಸ್ಲಿಮರನ್ನು – ಸೂಚಿಸಲು ಸಂಕೇತ ಭಾಷೆಯಾಗಿತ್ತು.

ಉತ್ತರಪ್ರದೇಶದಿಂದ ಆರಂಭ

ಅಲ್ಪ ಸಂಖ್ಯಾತ ಸಮುದಾಯದವರನ್ನು ಭಯಭೀತಗೊಳಿಸುವ ಮತ್ತು ಅಪರಾಧಿಗಳು ಎಂದು ಅವರಿಗೆ ಕಳಂಕ ಹಚ್ಚುವ ಪ್ರಕ್ರಿಯೆ ಪ್ರಾರಂಭವಾಗಿದ್ದು 2019ರಲ್ಲಿ. ಆಗ ಪೌರತ್ವ ತಿದ್ದುಪಡಿ ಕಾಯಿದೆ(ಸಿಎಎ) ಹಾಗೂ ಅದರೊಂದಿಗೆ ‘ರಾಷ್ಟ್ರೀಯ ಪೌರರ ದಾಖಲಾತಿ’ (ಎನ್.ಆರ್.ಸಿ) ಎಂಬುದನ್ನು ರಚಿಸುವ ನಡೆಯ ವಿರುದ್ಧ ವ್ಯಾಪಕ ಪ್ರತಿಭಟನೆಗಳು ನಡೆದವು. ಮುಸ್ಲಿಂ ಸಮುದಾಯದ ನಾಗರಿಕರು ತಾವು ಭಾರತದ ಪೌರರು ಎಂದು ಸಾಬೀತುಪಡಿಸುವುದನ್ನು ಕಷ್ಟಕರಗೊಳಿಸಿ ಅವರು ಮತದಾನದ ಹಕ್ಕು ಹೊಂದದಂತೆ ಮಾಡುವ ಪ್ರಯತ್ನ ಅದಾಗಿತ್ತು. ಉತ್ತರ ಪ್ರದೇಶದ ಹಲವಾರು ಸ್ಥಳಗಳಲ್ಲಿ ಸಿಎಎ/ಎನ್‌ಆರ್‌ಸಿ ವಿರೋಧಿ ಪ್ರತಿಭಟನಾಕಾರರು ಮತ್ತು ಪೋಲಿಸರ ನಡುವೆ ತಿಕ್ಕಾಟ ಉಂಟಾಗಿತ್ತು. ಪ್ರತಿಭಟನೆಯನ್ನು ನಿರ್ದಯವಾಗಿ ದಮನ ಮಾಡಬೇಕೆಂಬುದು ಯೋಗಿ ಸರ್ಕಾರದ ಆದೇಶವಾಗಿತ್ತು. ನಂತರದಲ್ಲಿ ನೂರಾರು ಪ್ರತಿಭಟನಾಕಾರರನ್ನು ಬಂಧಿಸಲಾಯಿತು. ಅವರಲ್ಲಿ ಬಹುತೇಕರು ಮುಸ್ಲಿಮರು. ಅವರ ಮನೆಗಳನ್ನು ಬುಲ್ಡೋಜರ್ ಬಳಸಿ ಕೆಡವಲಾಯಿತು. ಹೊಸದಾಗಿ ಜಾರಿ ಮಾಡಿದ್ದ ಕಾನೂನಿನ – ಸಾರ್ವಜನಿಕ ಆಸ್ತಿಪಾಸ್ತಿಗೆ ಉಂಟಾದ ನಷ್ಟವನ್ನು ಪ್ರತಿಭಟನಾಕಾರರು ತುಂಬಿಕೊಡಬೇಕು ಎಂಬ ಕಾನೂನಿನ – ಅಡಿಯಲ್ಲಿ ಭಾರಿ ದಂಡಗಳನ್ನು ವಿಧಿಸಲಾಯಿತು. ಆ ಪ್ರಕ್ರಿಯೆಯನ್ನು ಸುಪ್ರೀಂ ಕೋರ್ಟ್ ತಡೆಹಿಡಿಯಿತು. ಸೂಕ್ತ ಕಾನೂನನ್ನು ಬಳಸಬೇಕೆಂದು ಸುಪ್ರೀಂಕೋರ್ಟ್ ಉತರಪ್ರದೇಶ ಸರ್ಕಾರಕ್ಕೆ ಆದೇಶಿಸಿತು. ಆದರೆ ಬುಲ್ಡೋಜರನ್ನು ದ್ವೇಷದ ಅಸ್ತ್ರವಾಗಿ ಬಳಸುವ ಪ್ರಕ್ರಿಯೆ ಅಷ್ಟರಲ್ಲೇ ಜನ್ಮತಾಳಿತ್ತು.

ಬುಲ್ಡೋಜರನ್ನು ಬಳಸುವುದು ಕಾನೂನು ಮತ್ತು ಸುವ್ಯವಸ್ಥೆಯನ್ನು ಜಾರಿ ಮಾಡುವ ಸಾಧನವಾಗಿ ಎಂದು ಔಪಚಾರಿಕವಾಗಿ ವರ್ಣಿಸಿದರೂ, ಅದು ಮುಸ್ಲಿಮರ ವಿರುದ್ಧ ಒಂದು ಅಸ್ತ್ರ ಎಂಬ ಅಧಿಕೃತ ಮುದ್ರೆ ಪಡೆದುಕೊಂಡಿತು. ಹೀಗೆ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಮುಸ್ಲಿಂ ವಿರೋಧಿ ಭಾವನೆಗಳನ್ನು ಕೆರಳಿಸಲು ಮತ್ತೆ- ಮತ್ತೆ ಬುಲ್ಡೋಜರ್ ಸಂಕೇತಗಳನ್ನು ಬಳಸಲಾಯಿತು, ಈ ಮೂಲಕ ಇದು ಚುನಾವಣಾ ಕಾನೂನಿನ ತೆಕ್ಕೆಯಿಂದ ತಪ್ಪಿಸಿಕೊಳ್ಳುವ ಒಂದು ಹುನ್ನಾರವಾಯಿತು. ಆದಾಗ್ಯೂ ಇದರ ಹಿಂದಿನ ನಿಜವಾದ ಸಂದೇಶ ಎಲ್ಲರಿಗೂ ತಿಳಿಯುವಂತಿತ್ತು.

ಅಂದಿನಿಂದ ಬಿಜೆಪಿಯು ಇದನ್ನು ಅತ್ಯುತ್ಸಾಹದಿಂದ ಕೈಗೆತ್ತಿಕೊಂಡಿತು. ಅದರ ರಾಜ್ಯ ಸರ್ಕಾರಗಳು ಮನೆಗಳನ್ನು ಕೆಡವಲು ಬೀದಿ ನ್ಯಾಯದ ಸಿದ್ಧ ಮಾದರಿಯಾಗಿ ಬಳಸಲು ಶುರುಮಾಡಿದವು. ಮಧ್ಯಪ್ರದೇಶದ ಖರ್ಗೊನ್‌ನಲ್ಲಿ ಹಾಗೂ ಮತ್ತಿತರ ಸ್ಥಳಗಳಲ್ಲಿ ನಡೆದಿದ್ದನ್ನು ಎಲ್ಲರೂ ನೋಡಿದ್ದಾರೆ.

ಬುಲ್ಡೋಜರ್ ಬಾಬಾ ಮತ್ತು ಬುಲ್ಡೋಜರ್ ಮಾಮ     ವ್ಯಂಗ್ಯಚಿತ್ರ ಕೃಪೆ: ಮೊಲಿಟಿಕ್ಸ್.ಇನ್

ಬುಲ್ಡೋಜರ್ ರಾಜಕೀಯದ ಪರ್ವ

ಆದರೆ ಬುಲ್ಡೋಜರ್ ಕೇವಲ ಒಂದು ಯಂತ್ರ ಅಥವಾ ಆಸ್ತ್ರವಲ್ಲ. ಅದು ತನ್ನ ಇಚ್ಛೆಯನ್ನು ಇತರರ ಮೇಲೆ ಬಲವಂತವಾಗಿ ಹೇರುವುದರ ಸಂಕೇತ. ಇದರಿಂದಾಗಿ ಬಿಜೆಪಿ ಮತ್ತದರ ಸಂಘ ಪರಿವಾರದವರಿಗೆ ಅದರ ಬಗ್ಗೆ ಒಂದು ಸಹಜ ಬಂಧುತ್ವ ಇದೆ. ತನ್ನ ದಾರಿಯಲ್ಲಿ ಅಡ್ಡಬರುವ ಎಲವನ್ನೂ ನಿರ್ದಯವಾಗಿ ಸದೆಬಡಿಯುವುದು ಆರ್‌ಎಸ್‌ಎಸ್ ನ ಫ್ಯಾಸಿಸ್ಟ್ ತೆರನ ಸಿದ್ಧಾಂತದಿಂದ ಹೊರಹೊಮ್ಮಿದ ದೀರ್ಘಕಾಲದ ಚಿಂತನೆಯೇ ತಾನೇ. ಈಗ ಬಿಜೆಪಿ ಅಧಿಕಾರದಲ್ಲಿರುವುದರಿಂದ (ಮತ್ತು ಪ್ರಧಾನ ಮಂತ್ರಿಯವರನ್ನೂ ಒಳಗೊಂಡಂತೆ ಹಲವಾರು ಆರ್‌ಎಸ್‌ಎಸ್ ಸ್ವಯಂಸೇವಕರು ಉನ್ನತ ಸರಕಾರೀ ಸ್ಥಾನಗಳನ್ನು ಅಲಂಕರಿಸಿರುವಾಗ) ಭಾರತವು ಬುಲ್ಡೋಜರ್ ರಾಜಕೀಯದ ಪರ್ವವನ್ನು ಕಾಣುತ್ತಿದೆ.

ಅವರ ‘ನವ ಭಾರತ’ವನ್ನು ನಿರ್ಮಾಣ ಮಾಡುವ ಹಾದಿಯಲ್ಲಿ ಯಾವುದೂ ಅಡ್ಡ ಬರದಂತೆ ನೋಡಿಕೊಳ್ಳಲಾಗುತ್ತಿದೆ. ಈ ‘ನವಭಾರತ’ ಎಂಬುದು ‘ಹಿಂದೂ ರಾಷ್ಟ್ರ’ ಕಟ್ಟುವ ಅವರ ನಿಜವಾದ ಕನಸನ್ನು ಮರೆಮಾಚುವ ಒಂದು ಪರದೆ ಎಂದು ಬೇರೆ ಹೇಳಬೇಕಾಗಿಲ್ಲ. ಸಮಾಜವನ್ನೇ ಧಾರ್ಮಿಕ ನೆಲೆಯಲ್ಲಿ ವಿಭಜಿಸುತ್ತಿರುವಾಗ ಮತ್ತು ಅಲ್ಪಸಂಖ್ಯಾತರ ಬಾಯಿ ಬಡಿಯುತ್ತಿರುವಾಗ, ಭಯಭೀತರನ್ನಾಗಿಸುತ್ತಿರುವಾಗ, ಆರೆಸ್ಸೆಸ್ ಸಿದ್ಧಾಂತಿ ಎಂ ಎಸ್ ಗೋಲ್ವಾಲ್ಕರ್ ಕಂಡರಸಿದಂತೆ ‘ಎರಡನೇ ದರ್ಜೆಯ ನಾಗರಿಕ’ರಾಗಿ ಬದುಕುವಂತೆ ಮಾಡುತ್ತಿರುವಾಗ, ವೈವಿಧ್ಯತೆಯನ್ನು, ಭಿನ್ನಾಭಿಪ್ರಾಯವನ್ನು ಅಥವಾ ಭಿನ್ನತೆಯನ್ನು ಸಂರಕ್ಷಿಸುವ ಯಾವ ಸಂಸ್ಥೆಯೂ, ಯಾವ ಕಾನೂನೂ, ಯಾವ ನಡವಳಿಕೆಗಳೂ ವಿದ್ವಂಸ ಹಾಗೂ ವಿನಾಶದಿಂದ ಸುರಕ್ಷಿತವಾಗಿರಲಾರವು.

ಈ ಬಹುಸಂಖ್ಯಾಕವಾದೀ ಬುಲ್ಡೋಜರನ್ನು ಆರ್‌ಎಸ್‌ಎಸ್/ಬಿಜೆಪಿ ತನ್ನೆಲ್ಲಾ ಸಂಪನ್ಮೂಲಗಳೊಂದಿಗೆ ಹಾಗೂ ತನ್ನ ಹಿಂದಿರುವ ರಾಜಕೀಯ ಶಕ್ತಿಯ ಸಂಪೂರ್ಣ ಬಲದೊಂದಿಗೆ ಆಡಿಸುತ್ತಿರುವುದು ಮುಸ್ಲಿಂ ಅಲ್ಪಸಂಖ್ಯಾತ ಸಮುದಾಯದ ಸದಸ್ಯರ ಮೇಲಿನ ದಾಳಿಗಳಲ್ಲಿ ಎದ್ದುಕಾಣುತ್ತಿದೆ.

ಸರಕಾರದ ಕರ್ತವ್ಯದ ಮೇಲೆ    ವ್ಯಂಗ್ಯಚಿತ್ರ: ಮಂಜುಲ್, ನ್ಯೂಸ್9ಲೈವ್.ಕಾಂ

ಕೋಮು ತಿಕ್ಕಾಟಗಳಿಗೆ ಪ್ರಚೋದನೆ

ಏಪ್ರಿಲ್‌ನಲ್ಲಿ, ಒಂಬತ್ತು ರಾಜ್ಯಗಳಲ್ಲಿ ಒಂದಾದ ಮೇಲೊಂದರಂತೆ ಕೋಮುವಾದಿ ಹಿಂಸಾಚಾರದ ಘಟನೆಗಳು ಭುಗಿಲೆದ್ದವು. ಮೂರು ಧಾರ್ಮಿಕ– ಏಪ್ರಿಲ್ 2 ರಂದು ಹಿಂದೂ ಹೊಸ ವರ್ಷ, ಏಪ್ರಿಲ್ 10 ರಾಮನವಮಿ ಮತ್ತು ಏಪ್ರಿಲ್ 16 ಹನುಮಾನ್ ಜಯಂತಿ–ಸಂದರ್ಭಗಳಲ್ಲಿ ಮೆರವಣಿಗೆಗಳನ್ನು ಅಲ್ಪಸಂಖ್ಯಾತ ಸಮುದಾಯದವರನ್ನು ಪ್ರಚೋದಿಸಿ ಕೋಮು ಸಂಘರ್ಷವನ್ನು ಹುಟ್ಟುಹಾಕಲು ಬಳಸಲಾಯಿತು. ಅವಮಾನಕರ ಘೋಷಣೆಗಳು, ಮಸೀದಿಗಳ ಎದುರು ಧ್ವನಿವರ್ಧಕ ಬಳಸಿ ಕಿವಿಗಡಚಿಕ್ಕುವ ಸಂಗೀತ. ಆಯುಧಗಳ ಪ್ರದರ್ಶನ ತಕ್ಷಣವೇ ಉದ್ವಿಗ್ನತೆಯನ್ನು ಸೃಷ್ಟಿಸಿತು. ಕೆಲವು ಪ್ರಕರಣಗಳಲ್ಲಿ, ಜನರು ಮಸೀದಿಯೊಳಕ್ಕೆ ನುಗ್ಗಿದರು ಮತ್ತು ಕೇಸರಿ ಬಾವುಟಗಳನ್ನು ಹಾರಿಸಲು ಯತ್ನಿಸಿದರು. ನಂತರ ನಡೆದ ಹಿಂಸಾಚಾರದಲ್ಲಿ ಹಲವರು ಗಾಯಗೊಂಡರು ಮತ್ತು ಇಬ್ಬರು ಮಡಿದರು. ಬಿಜೆಪಿ ರಾಜ್ಯ ಸರ್ಕಾರಗಳು (ದೆಹಲಿಯಲ್ಲಿ ನಗರಸಭೆ) ಇರುವೆಡೆಗಳಲ್ಲಿ, ಘರ್ಷಣೆಗಳಾದ ಪ್ರದೇಶಗಳಲ್ಲಿ ಬುಲ್ಡೋಜರ್‌ಗಳನ್ನು ಹೊರತರಲು ಕರೆ ನೀಡಲಾಗಿತ್ತು – ಬಹುತೇಕ ಮುಸ್ಲಿಮರ ಮನೆಗಳನ್ನು ಗುರಿಯಾಗಿಸಿ ದಾಳಿ ಮಾಡಲಾಯಿತು. ಈ ಗಡಿಬಿಡಿಯಲ್ಲಿ ಕೆಲವು ಅಮಾಯಕ ಬಹುಸಂಖ್ಯಾಕ ಸಮುದಾಯದವರ ಮನೆಗಳನ್ನೂ ಬೀಳಿಸಿ ಹಾಕಲಾಯಿತು.

2014ರಲ್ಲಿ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ, ದೇಶದಲ್ಲಿ 5,417 ಕೋಮು ಹಿಂಸಾಚಾರದ ಪ್ರಕರಣಗಳು ನಡೆದಿವೆ. ಇವುಗಳಲ್ಲಿ 9,078 ಜನರು ಗಾಯಗೊಂಡರು. ಕೊನೇಪಕ್ಷ 494 ಜನರು ಸಾವಿಗೆ ತುತ್ತಾದರು. ಇವು 2020 ರ ವರೆಗೆ ನಡೆದ ಘಟನೆಗಳು, ಪೋಲಿಸರೇ ದಾಖಲಿಸಿರುವ ‘ರಾಷ್ಟ್ರೀಯ ಅಪರಾಧ ದಾಖಲಾತಿ ಬ್ಯೂರೋ’(ಎನ್‌ಸಿಆರ್‌ಬಿ) ವರದಿ ಮಾಡಿದ ಸಂಗತಿಗಳಾಗಿವೆ. ಇಂತಹ ಪ್ರಕರಣಗಳನ್ನು ದಾಖಲಿಸುವಲ್ಲಿ ಮತ್ತು ವರದಿ ಮಾಡುವಲ್ಲಿ ಹಲವು ನ್ಯೂನತೆಗಳಿವೆ. ಸಣ್ಣ ಪ್ರಕರಣಗಳು ಹಾಗೂ ದೂರದ ಸ್ಥಳಗಳ ಘಟನೆಗಳು ಕಡೆಗಣಿಸಲ್ಪಡುತ್ತವೆ. ಆದಾಗ್ಯೂ, ಮೋದಿ ಸರ್ಕಾರದ ಅಡಿಯಲ್ಲಿ ಕಳೆದ ಏಳು ವರ್ಷಗಳಲ್ಲಿ ಪ್ರತಿನಿತ್ಯ ಎರಡು ಕೋಮು ಗಲಭೆಗಳು ನಡೆದಿರುವುದು ನಿಜಕ್ಕೂ ಆಘಾತದ ಸಂಗತಿಯೇ ಸರಿ. ಪದೇ ಪದೇ ಗಲಭೆಗಳು ಅಥವಾ ದಾಳಿಗಳು ಆರ್‌ಎಸ್‌ಎಸ್ ಪರಿವಾರದವರ ಕುಮ್ಮಕ್ಕಿನಿಂದ ಪ್ರಚೋದಿತವಾದವುಗಳೇ ಆಗಿವೆ. ಇತ್ತೀಚೆಗಿನ ಘಟನೆ ಹಾಗೂ 2018 ರಲ್ಲಿ ಬಿಹಾರದಲ್ಲಿ ಸಂಭವಿಸಿದ ಪ್ರಕರಣಗಳು ಅವರ ಪ್ರಚೋದನೆಯಿಂದಲೇ ನಡೆದಿವೆ.

ಹಲ್ಲೆಗಳಿಗೆ ವಿಧ-ವಿಧ ನೆಪಗಳು

ಆದರೆ ಈ ಹಿಂದುತ್ವ ಬುಲ್ಡೋಜರ್ ಈ ರೀತಿಯ ಪ್ರತ್ಯಕ್ಷ ದೈಹಿಕ ಹಿಂಸೆಗಳ ಮೇಲೆ ಮಾತ್ರವೇ ಅವಲಂಬಿತವಾಗಿಲ್ಲ. ಆಳುವ ಬಿಜೆಪಿ ಸರ್ಕಾರದ ಅಭಯರಕ್ಷೆಯಿಂದಾಗಿ ಮುಸ್ಲಿಮರನ್ನು (ಮತ್ತು ಕ್ರಿಶ್ಚಿಯನ್ನರನ್ನು) ಇಡಿಯಾಗಿ ಕೆಣಕುವ ಅಥವಾ ಪ್ರಚೋದಿಸುವ ಬತ್ತಳೀಕೆಯೇ ಎದ್ದು ಬಂದಿದೆ. ಮೋದಿ ಆಳ್ವಿಕೆಯ ಆರಂಭದ ದಿನಗಳಲ್ಲಿ ಗೋರಕ್ಷಕರೆಂಬ ಕಾವಲುಕೋರ ಪಡೆಗಳಿಂದ ಇದು ಆರಂಭವಾಯಿತು. ಗೃಹ ಸಚಿವಾಲಯದ ಪ್ರಕಾರ 2014 ಮತ್ತು 2018 ರ ನಡುವೆ ದೊಂಬಿಹತ್ಯೆಗಳ 40 ಪ್ರಕರಣಗಳು ದಾಖಲಾಗಿವೆ, ಆದರೆ ಇತರ ಸಮೀಕ್ಷೆಗಳ ಪ್ರಕಾರ ದೊಂಬಿ ಹಲ್ಲೆಗಳ 80 ಪ್ರಕರಣಗಳು ದಾಖಲಾಗಿವೆ. ಈ ಪ್ರಕರಣಗಳ ಬಹುಪಾಲು ಸಂತ್ರಸ್ತರು ಮುಸ್ಲಿಮರು ಇಲ್ಲವೇ ದಲಿತರು/ಆದಿವಾಸಿಗಳು.

ಆನಂತರದಲ್ಲಿ, ಆರ್‌ಎಸ್‌ಎಸ್ ಮುಸ್ಲಿಮರ ಮೇಲೆ ದೊಂಬಿ ಹಲ್ಲೆ ನಡೆಸಬಹುದಾದ ಹೊಸ ‘ವಿಚಾರ ಗುಚ್ಛ’ಗಳನ್ನು ಒದಗಿಸಿದೆ- ಹಿಜಬ್, ಹಲಾಲ್, ಸಮಾನ ನಾಗರಿಕ ಸಂಹಿತೆ, ಸಾರ್ವಜನಿಕ ಸ್ಥಳಗಳಲ್ಲಿ ನಮಾಜು, ಮಸೀದಿಗಳಲ್ಲಿ ಧ್ವನಿವರ್ಧಕ ಬಳಸುವುದು ಇತ್ಯಾದಿ. ಈ ವಿಷಯಗಳನ್ನೆಲ್ಲ ಹಿಂಸಾಚಾರಕ್ಕೆ ಇಳಿಯುವ ಪ್ರವೃತ್ತಿಯ ಜನಜಂಗುಳಿಗಳು ಎತ್ತುತ್ತಿವೆ, ಇದಕ್ಕೆ ರಾಜ್ಯಗಳಲ್ಲಿನ ಬಿಜೆಪಿ ಮುಖಂಡರ ಬೆಂಬಲ ಸಿಗುತ್ತಿದೆ. ಇವುಗಳು ನಿರ್ಬಂಧಗಳಿಗೆ ಕಾರಣವಾಗಿವೆ. ಈ ಹಿಂದೆ, ದೇಶದ್ರೋಹಿಗಳು, ಪಾಕಿಸ್ತಾನಕ್ಕೆ ಬೆಂಬಲ ನೀಡುವವರು, ಗೋಮಾಂಸ ತಿನ್ನುವವರು ಎಂಬ ಆಪಾದನೆಗಳನ್ನು ಆಗಾಗ ಎತ್ತುತ್ತಿದ್ದರು. ಜಮ್ಮು ಕಾಶ್ಮೀರದಲ್ಲಿ ಪರಿಚ್ಛೇದ 370ರ ರದ್ದತಿ ಮತ್ತು ರಾಜ್ಯವನ್ನು ಮೂರು ಭಾಗಗಳಾಗಿ ವಿಭಜನೆ ಮಾಡಿದ್ದನ್ನು ಮುಸ್ಲಿಮರ ಪ್ರಾಬಲ್ಯದ ವಿರುದ್ಧ ‘ತಾಕತ್ತಿನ’ ಕ್ರಮಗಳು ಎಂಬ ‘ರಾಷ್ಟ್ರೀಯಯವಾದಿ’ ವಾಗ್ಝರಿ ಕೇಳಬರುತ್ತಿತ್ತು.

ದಬ್ಬಾಳಿಕೆಯ ಬುಲ್ಡೋಜರ್‌ ವಿರುದ್ಧ

ಈ ವಿಷಪೂರಿತ ದಾಳಿಯು ದೇಶಾದ್ಯಂತ  ಅನಗತ್ಯ ಉದ್ವಿಗ್ನತೆ ಹಾಗೂ ದ್ವೇಷದ ಸ್ಥಿತಿಯನ್ನು ಸೃಷ್ಟಿಸುತ್ತಿದೆ ಎಂಬುದನ್ನು ನಾವು ನೆನಪಿಡಬೇಕು. ಆರ್‌ಎಸ್‌ಎಸ್/ಬಿಜೆಪಿಗೆ ಈ ಕ್ರಮಗಳು ಭಾರತವನ್ನು ಅಖಂಡ ಹಿಂದೂರಾಷ್ಟ್ರವನ್ನಾಗಿ ಪರಿವರ್ತನೆ ಮಾಡುವತ್ತ ಕೊಂಡೊಯ್ಯುವ ಹೆಜ್ಜೆಗಳು. ಆದರೆ ದೇಶಕ್ಕೆ ಅವುಗಳು ತೀವ್ರ ವಿಭಜನಕಾರಿ ಸ್ವರೂಪದವುಗಳಾಗಿದ್ದು ಅವುಗಳನ್ನು ಎದುರಿಸಿ ಹೋರಾಡದಿದ್ದರೆ ಅವು ಭವಿಷ್ಯದಲ್ಲಿ ಹಿಂಸೆ, ರಕ್ತಪಾತ ಮತ್ತು ಅರಾಜಕತೆಯನ್ನು ಉಂಟುಮಾಡುವಂತವುಗಳು. ಅದು ಸಂವಿಧಾನವನ್ನು ಹಾಗೂ ಅದರ ಆಧಾರಸ್ಥಂಭಗಳಾದ ಪ್ರಜಾಪ್ರಭುತ್ವ, ಜಾತ್ಯತೀತತೆ ಹಾಗೂ ಒಕ್ಕೂಟತತ್ವವನ್ನು ನಾಶಮಾಡುತ್ತದೆ ಕೂಡ. ಬುಲ್ಡೋಜರ್ ಯಾವುದನ್ನೂ ಉಳಿಸುವುದಿಲ್ಲ.

‘ನಾವು, ಜನತೆ’ : ವ್ಯಂಗ್ಯಚಿತ್ರ: ಸತೀಶ ಆಚಾರ್ಯ

ಈಗ ಅದು, ಜನರ ಗಮನವನ್ನು ಮೋದಿ ಸಕಾರದ ಕಾರ್ಪೊರೇಟ್ ಪರ ನೀತಿಗಳು ಉಂಟುಮಾಡಿರುವ ಜನಗಳ ವ್ಯಾಪಕ ಆರ್ಥಿಕ ಸಂಕಟಗಳು ಮತ್ತು ದಾರಿದ್ರ್ಯದಿಂದ ಬೇರೆಡೆಗೆ ತಿರುಗಿಸುವ ಉದ್ದೇಶವನ್ನು ಕೂಡ ಹೊಂದಿದೆ. ಗಗನಕ್ಕೇರುತ್ತಿರುವ ಹಣದುಬ್ಬರ ಹಾಗೂ ಉದ್ಯೋಗಹೀನತೆಯಿಂದ ತೀವ್ರವಾಗಿ ಬಳಲುತ್ತಿರುವ ಬಡ ಜನರೇ ಕೋಮು ಗಲಭೆಗಳಾದಾಗ ತಮ್ಮ ಜೀವ ಉಳಿಸಿಕೊಳ್ಳುವ, ಈ ಗಲಭೆಗಳ ಪರಿಣಾಮವಾಗಿ ಆಡಳಿತದ ದಬ್ಬಾಳಿಕೆಯ ಕ್ರಮಗಳಿಂದ ತಮ್ಮ ಅಲ್ಪಸ್ವಲ್ಪ ಆಸ್ತಿಪಾಸ್ತಿಗಳನ್ನು ರಕ್ಷಿಸಿಕೊಳ್ಳುವ ಭೀತಿಗೆ ಒಳಗಾಗುವವರು ಕೂಡ.

ದೇಶದಲ್ಲಿರುವ ಎಲ್ಲಾ ಪ್ರಗತಿಪರ ಹಾಗೂ ಸ್ವಾತಂತ್ರ್ಯಪ್ರೇಮಿ ಜನಗಳು ಈ ಮತಾಂಧತೆ ಹಾಗೂ ಹಿಂಸಾತ್ಮಕ ದಬ್ಬಾಳಿಕೆಯ ಬುಲ್ಡೋಜರ್‌ಗಳ ವಿರುದ್ಧ ದನಿಯೆತ್ತಲು ಮುಂದಾಗಬೇಕು.

Donate Janashakthi Media

Leave a Reply

Your email address will not be published. Required fields are marked *