ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ನ. 1ರಂದು ದೇಶವ್ಯಾಪಿ ಹೋರಾಟ: ವಿ.ಆರ್. ಸುದರ್ಶನ್

ಬೆಂಗಳೂರು: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ನವೆಂಬರ್‌ 1ರಂದು ನಡೆಯಲಿರುವ ಪ್ರತಿಭಟನೆಗೆ ದೇಶವ್ಯಾಪಿ ಬೆಂಬಲ ವ್ಯಕ್ತವಾಗಿದೆ. ಕಾಂಗ್ರೆಸ್‌ ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು, ಸಮಾನ ಮನಸ್ಕ ರಾಜಕೀಯ ಪಕ್ಷಗಳು ಹಾಗೂ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಹೊಂದಿರುವ ನಾಗರಿಕ ಸಂಘಟನೆಗಳ ಪ್ರತಿನಿಧಿಗಳು ಹೋರಾಟದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಮಾಜಿ ವಿಧಾನಸಭಾಧ್ಯಕ್ಷ ವಿ.ಆರ್. ಸುದರ್ಶನ್ ತಿಳಿಸಿದ್ದಾರೆ.‌ ಜ್ಞಾನೇಶ್ 

ಕೆಪಿಸಿಸಿ ಕಚೇರಿಯಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಮತದಾರರ ಹಕ್ಕುಗಳ ರಕ್ಷಣೆ, ಚುನಾವಣಾ ಆಯೋಗದ ಸ್ವತಂತ್ರ ಕಾರ್ಯನಿರ್ವಹಣೆ ಹಾಗೂ ಪ್ರಜಾಪ್ರಭುತ್ವದ ಉಳಿವಿಗಾಗಿ ಈ ಹೋರಾಟ ಮಹತ್ವದ್ದಾಗಿದೆ. ಇಂಡಿಯಾ ಮೈತ್ರಿಕೂಟದ ಆಶ್ರಯದಲ್ಲಿ ನಡೆಯಲಿರುವ ಪ್ರತಿಭಟನೆಯನ್ನು ಯಶಸ್ವಿಗೊಳಿಸಲು ಎಲ್ಲರೂ ಸಹಕರಿಸಬೇಕು ಎಂದು ಮನವಿ ಮಾಡಿದರು.

ಚುನಾವಣಾ ವ್ಯವಸ್ಥೆಯನ್ನು ರಾಜಕೀಯಗೊಳಿಸಲಾಗುತ್ತಿದೆ ಎಂಬುದು ಕಾಂಗ್ರೆಸ್‌ನ ಆರೋಪವಾಗಿದೆ. ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು ಕೇಂದ್ರದ ಎನ್‌ಡಿಎ ಸರ್ಕಾರ ಮತ್ತು ಬಿಜೆಪಿಯ ರಾಜಕೀಯ ಹಿತಾಸಕ್ತಿಗೆ ಅನುಗುಣವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಸುದರ್ಶನ್ ದೂರಿದರು. ಚುನಾವಣಾ ಆಯೋಗದ ವಿಶ್ವಾಸಾರ್ಹತೆ ಮತ್ತು ಸ್ವತಂತ್ರ ಕಾರ್ಯನಿರ್ವಹಣೆಯ ಬಗ್ಗೆ ಪ್ರಶ್ನೆಗಳು ಎದ್ದಿರುವ ಹಿನ್ನೆಲೆಯಲ್ಲಿ ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು. ಜ್ಞಾನೇಶ್

ಮತದಾರರ ಪಟ್ಟಿ ಪರಿಷ್ಕರಣೆ ಹೊಸ ಪ್ರಕ್ರಿಯೆಯಲ್ಲ

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಹೊಸ ಪ್ರಕ್ರಿಯೆಯಲ್ಲ. ದೇಶದಲ್ಲಿ ಹಿಂದಿನಿಂದಲೂ ಮತದಾರರ ಪಟ್ಟಿಯ ತೀವ್ರ ಪರಿಷ್ಕರಣೆ ನಡೆಯುತ್ತ ಬಂದಿದೆ. ಆದರೆ ಈಗಿನ ಪ್ರಕ್ರಿಯೆಯನ್ನು ಹೊಸ ವ್ಯವಸ್ಥೆಯಂತೆ ಬಿಂಬಿಸಲಾಗುತ್ತಿದೆ ಎಂದು ಸುದರ್ಶನ್ ಆಕ್ಷೇಪಿಸಿದರು.

ದೇಶದಲ್ಲಿ ಈ ಹಿಂದೆ ಸುಮಾರು 10ರಿಂದ 12 ಬಾರಿ ಮತದಾರರ ಪಟ್ಟಿಯ ತೀವ್ರ ಪರಿಷ್ಕರಣೆ ನಡೆದಿದೆ ಎಂಬುದು ಕಾಂಗ್ರೆಸ್‌ನ ನಿಲುವು. 2003–04ರಲ್ಲಿ ಇಂತಹ ಪರಿಷ್ಕರಣೆ ನಡೆದ ಬಳಿಕ 2015–16ರಲ್ಲಿ ಮತ್ತೊಮ್ಮೆ ಈ ಪ್ರಕ್ರಿಯೆ ನಡೆಯಬೇಕಿತ್ತು. ಆದರೆ ಅದು ನಡೆಯಲಿಲ್ಲ. ಆಗಲೇ ಚುನಾವಣಾ ಆಯೋಗ ಕ್ರಮ ಕೈಗೊಂಡಿದ್ದರೆ ಈಗಿನ ಪರಿಸ್ಥಿತಿಯನ್ನು ತಪ್ಪಿಸಬಹುದಿತ್ತು ಎಂದು ಅವರು ಅಭಿಪ್ರಾಯಪಟ್ಟರು.

ಜನಗಣತಿಯನ್ನು ಪ್ರತಿ ಹತ್ತು ವರ್ಷಗಳಿಗೊಮ್ಮೆ ನಡೆಸುವಂತೆ ಮತದಾರರ ಪಟ್ಟಿಯ ಪರಿಷ್ಕರಣೆಯನ್ನೂ ವ್ಯವಸ್ಥಿತವಾಗಿ ನಡೆಸಬೇಕು. 2021–22ರಲ್ಲಿ ನಡೆಯಬೇಕಿದ್ದ ಜನಗಣತಿ ಕೋವಿಡ್‌ ಕಾರಣದಿಂದ ಮುಂದೂಡಲ್ಪಟ್ಟಿದ್ದು, 2026ರ ವೇಳೆಯಲ್ಲಿಯೂ ಅದರ ಪ್ರಗತಿಯ ಕುರಿತು ಸಮರ್ಪಕ ಮಾಹಿತಿ ಲಭ್ಯವಿಲ್ಲ ಎಂಬುದು ಕಾಂಗ್ರೆಸ್‌ನ ಆಕ್ಷೇಪವಾಗಿದೆ. ಪಶ್ಚಿಮ ಬಂಗಾಳ, ಬಿಹಾರ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಯನ್ನು ಆರಂಭಿಸಿರುವುದರ ಹಿಂದೆ ರಾಜಕೀಯ ಲಾಭದ ಉದ್ದೇಶವಿದೆ ಎಂದು ಪಕ್ಷ ಆರೋಪಿಸಿದೆ.

1949ರ ನವೆಂಬರ್‌ 26ರಂದು ಸಂವಿಧಾನವನ್ನು ಅಂಗೀಕರಿಸಲಾಯಿತು. 1951ರ ನವೆಂಬರ್‌ 15ರಂದು ದೇಶದ ಮೊದಲ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದ್ದು, 1952ರಲ್ಲಿ ಮೊದಲ ಸಾರ್ವತ್ರಿಕ ಚುನಾವಣೆ ನಡೆಯಿತು ಎಂದು ಸುದರ್ಶನ್ ನೆನಪಿಸಿದರು. ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಆಶಯಗಳನ್ನು ರಕ್ಷಿಸುವುದು ಚುನಾವಣಾ ಆಯೋಗದ ಜವಾಬ್ದಾರಿಯಾಗಿದೆ ಎಂದರು.

ಇದನ್ನೂ ಓದಿ :ಸಾಲಮನ್ನಾ, ಬರ ಪರಿಹಾರಕ್ಕೆ ಆಗ್ರಹಿಸಿ ಮಹಾರಾಷ್ಟ್ರದಲ್ಲಿ 12 ಸಾವಿರಕ್ಕೂ ಹೆಚ್ಚು ರೈತರ ವಾಹನ ಜಾಥಾ

ಚುನಾವಣಾ ಆಯೋಗಕ್ಕೆ ಬರೆದ ಎಂಟು ಪತ್ರಗಳಿಗೆ ಉತ್ತರವಿಲ್ಲ

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರು ಮತದಾರರ ಪಟ್ಟಿ ಪರಿಷ್ಕರಣೆಯ ಕುರಿತು ಚುನಾವಣಾ ಆಯೋಗಕ್ಕೆ ಎಂಟು ಪತ್ರಗಳನ್ನು ಬರೆದಿದ್ದರೂ ಈವರೆಗೆ ಉತ್ತರ ಬಂದಿಲ್ಲ ಎಂದು ಸುದರ್ಶನ್ ಆರೋಪಿಸಿದರು. ಎಸ್‌ಐಆರ್‌ ಪ್ರಕ್ರಿಯೆಯ ಜವಾಬ್ದಾರಿ ಹೊತ್ತಿರುವ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಪ್ರತಿವಾರ ಸಾರ್ವಜನಿಕ ಸಭೆಗಳನ್ನು ನಡೆಸುವಂತೆ ಕಾಂಗ್ರೆಸ್ ಒತ್ತಾಯಿಸಿತ್ತು. ಪಕ್ಷದ ಒತ್ತಾಯದ ಬಳಿಕವೇ ಇಂತಹ ಸಭೆಗಳು ಆರಂಭವಾದವು ಎಂದು ಹೇಳಿದರು.

ಮತದಾರರ ಪಟ್ಟಿಯ ಪರಿಷ್ಕರಣೆ ಕುರಿತು ಪಕ್ಷದ ಪ್ರತಿನಿಧಿಗಳು ನಿರಂತರವಾಗಿ ಸಭೆಗಳಲ್ಲಿ ಭಾಗವಹಿಸುತ್ತಿದ್ದು, ರಮೇಶ್ ಬಾಬು ಸೇರಿದಂತೆ ಹಲವು ನಾಯಕರು ಚುನಾವಣಾ ಆಯೋಗಕ್ಕೆ ಪತ್ರಗಳನ್ನು ಬರೆದಿದ್ದಾರೆ. ಅರ್ಹ ಮತದಾರರಲ್ಲಿ ಗೊಂದಲ ಮತ್ತು ಆತಂಕ ಸೃಷ್ಟಿಯಾಗದಂತೆ ನೋಡಿಕೊಳ್ಳುವುದು, ಅನಗತ್ಯ ವಿಳಂಬದಿಂದ ಅವರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳುವುದು ಚುನಾವಣಾ ಆಯೋಗದ ಆದ್ಯತೆಯಾಗಬೇಕು ಎಂದು ಆಗ್ರಹಿಸಿದರು.

ಕರ್ನಾಟಕದಲ್ಲಿ ಬೂತ್‌ ಮಟ್ಟದ ಏಜೆಂಟ್‌ಗಳನ್ನು ದೊಡ್ಡ ಪ್ರಮಾಣದಲ್ಲಿ ನೇಮಿಸಿದ ಮೊದಲ ರಾಜಕೀಯ ಪಕ್ಷ ಕಾಂಗ್ರೆಸ್ ಎಂದು ಹೇಳಿದ ಸುದರ್ಶನ್, 2025ರ ಜೂನ್‌ನಿಂದಲೇ ಈ ಕಾರ್ಯ ಆರಂಭಿಸಲಾಗಿತ್ತು ಎಂದರು. ಆಗಿನ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಜಿ.ಸಿ. ಚಂದ್ರಶೇಖರ್ ಸೇರಿದಂತೆ ಹಲವು ನಾಯಕರು ಈ ಕಾರ್ಯಕ್ಕೆ ಚಾಲನೆ ನೀಡಿದ್ದರು. ನಂತರ ಬಿ.ಕೆ. ಹರಿಪ್ರಸಾದ್ ಅವರ ನೇತೃತ್ವದಲ್ಲಿಯೂ ಜಿಲ್ಲಾಮಟ್ಟದಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಮುಂದುವರಿಸಲಾಗಿದೆ ಎಂದು ತಿಳಿಸಿದರು.

ಬೂತ್‌ ಮಟ್ಟದ ಏಜೆಂಟ್‌ಗಳಿಗೆ ಕಾರ್ಯಾಗಾರಗಳನ್ನು ನಡೆಸಿ ಮತದಾರರ ಪಟ್ಟಿ ಪರಿಷ್ಕರಣೆ ಮತ್ತು ಮತದಾರರ ಹಕ್ಕುಗಳ ಕುರಿತು ತರಬೇತಿ ನೀಡಲಾಗಿದೆ. ಶಾಸಕರು, ವಿಧಾನಪರಿಷತ್ ಸದಸ್ಯರು, ಸಂಸದರು ಹಾಗೂ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಅಭ್ಯರ್ಥಿಗಳಿಗೂ ತರಬೇತಿ ನೀಡಲಾಗಿದ್ದು, ಪ್ರತಿ ಜಿಲ್ಲೆಗೆ ವೀಕ್ಷಕರನ್ನು ನೇಮಿಸಲಾಗಿದೆ. ಕಾಂಗ್ರೆಸ್ ಸುಮಾರು 59ರಿಂದ 60 ಸಾವಿರ ಬೂತ್‌ ಮಟ್ಟದ ಏಜೆಂಟ್‌ಗಳನ್ನು ನೇಮಿಸಿದೆ ಎಂದು ಅವರು ಮಾಹಿತಿ ನೀಡಿದರು.

ಮತದಾರರ ಹಕ್ಕುಗಳ ರಕ್ಷಣೆಗೆ ಸಂಬಂಧಿಸಿದಂತೆ ಕಾನೂನು ಮತ್ತು ನ್ಯಾಯಾಂಗದ ಮೇಲೆ ಕಾಂಗ್ರೆಸ್‌ಗೆ ವಿಶ್ವಾಸವಿದೆ. ಚುನಾವಣಾ ಆಯೋಗವು ಯಾವುದೇ ರಾಜಕೀಯ ಪಕ್ಷದ ಹಿತಾಸಕ್ತಿಗೆ ಅನುಗುಣವಾಗಿ ಕಾರ್ಯನಿರ್ವಹಿಸದೆ, ಸಂವಿಧಾನದ ಚೌಕಟ್ಟಿನಲ್ಲಿ ಸ್ವತಂತ್ರವಾಗಿ ಮತ್ತು ನಿಷ್ಪಕ್ಷಪಾತವಾಗಿ ಕೆಲಸ ಮಾಡಬೇಕು ಎಂದು ಸುದರ್ಶನ್ ಒತ್ತಾಯಿಸಿದರು.

ಇದನ್ನೂ ನೋಡಿ :ಎಸ್‌ಐಆರ್‌ | ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯೇ? ಈಗಲೇ ಪರಿಶೀಲಿಸಿ! ಹೇಗೆ ಪರಿಶೀಲಿಸಬೇಕು? ಈ ವಿಡಿಯೋ ನೋಡಿ

Donate Janashakthi Media

Leave a Reply

Your email address will not be published. Required fields are marked *