ಡಬ್ಲ್ಯುಎಫ್‌ಐ ಅಧ್ಯಕ್ಷರ ಲೈಂಗಿಕ ಕಿರುಕುಳದ ವಿರುದ್ಧ ಮಹಿಳಾ ಕುಸ್ತಿಪಟುಗಳ ಹೋರಾಟಕ್ಕೆ ವಿದ್ಯಾರ್ಥಿ-ಯುವಜನ, ರೈತರು, ಕಾರ್ಮಿಕರು ಮತ್ತು ಕೃಷಿಕೂಲಿಕಾರರ ಸಂಘಟನೆಗಳ ಬೆಂಬಲ
ಅಂತಾರಾಷ್ಟ್ರೀಯ ಮಟ್ಟದಲ್ಲಿ ಪದಕ ಗೆಲ್ಲುವ ಮೂಲಕ ದೇಶಕ್ಕೆ ಗೌರವ, ಪ್ರತಿಷ್ಠೆ ತಂದುಕೊಡುತ್ತಿರುವ ಒಲಿಂಪಿಕ್ಸ್ ಪದಕ ವಿಜೇತ ಕುಸ್ತಿಪಟುಗಳು, ಅದರಲ್ಲೂ ಮಹಿಳಾ ಕುಸ್ತಿಪಟುಗಳು ಎಪ್ರಿಲ್ 24ರಿಂದ ಎರಡನೇ ಬಾರಿಗೆ ದಿಲ್ಲಿಯ ಜಂತರ್ ಮಂತರ್‌ನಲ್ಲಿ ಧರಣಿ ಕುಳಿತ್ತಿದ್ದಾರೆ. ಭಾರತದ ಕುಸ್ತಿ ಒಕ್ಕೂಟ(ಡಬ್ಲ್ಯುಎಫ್‌ಐ)ದ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಲೈಂಗಿಕ ಕಿರುಕುಳದ ದೂರಿನ ಮೇಲೆ ಮೂರು ತಿಂಗಳ ನಂತರವೂ ಯಾವುದೇ ಕ್ರಮ ಕೈಗೊಳ್ಳದ ಕಾರಣ ತಾವು ಈ
ಪ್ರತಿಭಟನೆಗೆ ಇಳಿದಿರುವುದಾಗಿ ಅವರು ಹೇಳುತ್ತಿದ್ದಾರೆ. ಬ್ರಿಜ್ ಭೂಷಣ್ ಶರಣ್ ಸಿಂಗ್ ಬಿಜೆಪಿ ಸಂಸದರೂ ಆಗಿದ್ದಾರೆ.
ಎಪ್ರಿಲ್ 26ರಂದು ರೈತರು, ಕಾರ್ಮಿಕರು, ಕೃಷಿ ಕಾರ್ಮಿಕರು, ಯುವಕರು ಮತ್ತು ವಿದ್ಯಾರ್ಥಿಗಳ ಜಂಟಿ ನಿಯೋಗ ಪ್ರತಿಭಟನೆ ನಡೆಸುತ್ತಿರುವ ಕುಸ್ತಿಪಟುಗಳನ್ನು ಭೇಟಿ ಮಾಡಿತು.
ದೇಶಕ್ಕೆ ಗೌರವ, ಪ್ರತಿಷ್ಠೆ ತಂದುಕೊಡುತ್ತಿರುವ ನಮ್ಮ ಅಗ್ರಮಾನ್ಯ ಕ್ರೀಡಾಪಟುಗಳು ನ್ಯಾಯಕ್ಕಾಗಿ ಆಗ್ರಹಿಸಿ ಜಂತರ್‌ಮಂತರ್‌ನಲ್ಲಿ ಧರಣಿ ಕುಳಿತಿರುವುದು ದುರದೃಷ್ಟಕರ ಎಂದಿರುವ ನಿಯೋಗ, ದೂರು ನೀಡಿದ ನಂತರ, ಮೂರು ತಿಂಗಳ ಹಿಂದೆ ಇದೇ ಜಂತರ್ ಮಂತರ್‌ನಲ್ಲಿ ಧರಣಿ ನಡೆಸಿದ ನಂತರವೂ ಪೊಲೀಸರು ಇನ್ನೂ ಎಫ್‌ಐಆರ್ ದಾಖಲಿಸಿಲ್ಲ, ನ್ಯಾಯಯುತ ತನಿಖೆಯನ್ನು ಮಾತ್ರ ಕೇಳುತ್ತಿದ್ದೇವೆ ಎನ್ನುವ ಪ್ರತಿಭಟನಾ ನಿರತ ಕುಸ್ತಿಪಟುಗಳು ಮಾಡಿರುವ ಆರೋಪಗಳನ್ನು ತನಿಖೆ ಮಾಡಿದ ಮೇಲುಸ್ತುವಾರಿ ಸಮಿತಿಯ ವರದಿಯನ್ನು ಸಾರ್ವಜನಿಕಗೊಳಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ.
ಡಬ್ಲ್ಯುಎಫ್‌ಐ ಮುಖ್ಯಸ್ಥರು ಮತ್ತು ಡಬ್ಲ್ಯುಎಫ್‌ಐನಿಂದ ನೇಮಕಗೊಂಡ ಇತರ ಕೆಲವು ತರಬೇತುದಾರರಿಂದ ಮಹಿಳಾ ಕುಸ್ತಿಪಟುಗಳು ಲೈಂಗಿಕ ಶೋಷಣೆಗೆ ಒಳಗಾಗಿದ್ದಾರೆ ಮತ್ತು ಅವರೊಂದಿಗೆ ಕೆಟ್ಟದಾಗಿ ನಡೆಸಿಕೊಳ್ಳಲಾಗುತ್ತಿದೆ ಎಂಬ ಪ್ರಮುಖ ಮಹಿಳಾ ಕುಸ್ತಿಪಟುಗಳ ದೂರು ಅತ್ಯಂತ ಆತಂಕಕಾರಿ. ಒಂದೆಡೆ ಕೇಂದ್ರ ಸರ್ಕಾರವು ತನ್ನ “ಬೇಟಿ ಬಚಾವೋ ಬೇಟಿ ಪಢಾವೋ” ಅಭಿಯಾನದ ಬಗ್ಗೆ ಅಬ್ಬರದ ಪ್ರಚಾರ ಮಾಡುತ್ತಿದ್ದರೆ, ಇನ್ನೊಂದೆಡೆಯಲ್ಲಿ ಈ ಘೋರ ಅಪರಾಧದ ಆರೋಪಕ್ಕೆ ಒಳಗಾಗಿರುವ ಆಳುವ ಪಕ್ಷದ ಸಂಸದರನ್ನು ರಕ್ಷಿಸಲು ಪ್ರಯತ್ನಿಸುತ್ತಿದೆ. ಇದು ಬರಿಯ ಬೂಟಾಟಿಕೆ ಎಂದು ನಿಯೋಗ ಆಕ್ರೋಶ ವ್ಯಕ್ತಪಡಿಸಿದೆ. ತಪ್ಪಿತಸ್ಥರಿಗೆ ಶಿಕ್ಷೆಯಾಗುವವರೆಗೂ ತಾವು ಹಿಂದೆ ಸರಿಯುವುದಿಲ್ಲ ಎಂದು ದೇಶದ ಉನ್ನತ ಕುಸ್ತಿಪಟುಗಳು ತಮ್ಮ ನಿಯೋಗಕ್ಕೆ ತಿಳಿಸಿರುವುದಾಗಿ ಅದು ಹೇಳಿದೆ.
ಆರೋಪಿಗಳ ವಿರುದ್ಧ ಪೋಕ್ಸೋ ಕಾಯ್ದೆ ಸೇರಿದಂತೆ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸುವಂತೆ ಪೊಲೀಸರನ್ನು ಒತ್ತಾಯಿಸಿರುವ ನಿಯೋಗ, ಕಿರುಕುಳ ಮತ್ತು ಶೋಷಣೆಯ ಆರೋಪಗಳನ್ನು ಸರಿಯಾಗಿ ತನಿಖೆ ಮಾಡಬೇಕು ಮತ್ತು ನ್ಯಾಯವನ್ನು ನಿರಾಕರಿಸಬಾರದು, ಇದು ನಮ್ಮ ಭವಿಷ್ಯದ ಕ್ರೀಡಾಪಟುಗಳಿಗೆ ಭಯಪಡಲು ಮತ್ತು ಅವರ ಕನಸುಗಳನ್ನು ಸಾಕಾರಗೊಳಸಲು ಹಿಂದೇಟು ಹಾಕಲು ಕಾರಣವಾಗಬಾರದು ಎಂದು ಸರಕಾರವನ್ನು ಆಗ್ರಹಿಸಿದೆ.
ಅಖಿಲ ಭಾರತ ಕಿಸಾನ್ ಸಭಾ (ಎಐಕೆಎಸ್) ಉಪಾಧ್ಯಕ್ಷ ಹನ್ನನ್ ಮೊಲ್ಲಾ, ಎಐಕೆಎಸ್ ಹಣಕಾಸು ಕಾರ್ಯದರ್ಶಿ ಪಿ ಕೃಷ್ಣಪ್ರಸಾದ್, ಸಿಐಟಿಯು ಕಾರ್ಯದರ್ಶಿ ಎ ಆರ್ ಸಿಂಧು ಮತ್ತು ಅಖಿಲ ಭಾರತ ಕೃಷಿ ಕೂಲಿಕಾರರ ಸಂಘ(ಎಐಎಡಬ್ಲ್ಯುಯು)ದ ಕಾರ್ಯದರ್ಶಿ ವಿಕ್ರಮ್ ಸಿಂಗ್, ಸಂಸತ್ ಸದಸ್ಯ ಎ ಎ ರಹೀಂ, ಡಿವೈಎಫ್‌ಐ ಪ್ರಧಾನ ಕಾರ್ಯದರ್ಶಿ ಹಿಮಂಗರಾಜ್ ಭಟ್ಟಾಚಾರ್ಯ ಮತ್ತು ಎಸ್‌ಎಫ್‌ಐ ಪ್ರಧಾನ ಕಾರ್ಯದರ್ಶಿ ಮಯೂಖ್ ಬಿಶ್ವಾಸ್ ಈ ನಿಯೋಗದಲ್ಲಿದ್ದರು.
“ನಮ್ಮ ಕ್ರೀಡಾಪಟುಗಳಿಗೆ ನಾವು ಸಂಪೂರ್ಣ ಬೆಂಬಲವನ್ನು ನೀಡುತ್ತೇವೆ. ಈ ದೇಶದ ರೈತರು, ಕಾರ್ಮಿಕರು, ಯುವಕರು ಮತ್ತು ವಿದ್ಯಾರ್ಥಿಗಳು ನಮ್ಮ ಗೌರವಾನ್ವಿತ ಕ್ರೀಡಾಪಟುಗಳನ್ನು ಘನತೆ ಮತ್ತು ನ್ಯಾಯಕ್ಕಾಗಿ ಅವರ ಹೋರಾಟದಲ್ಲಿ ಬೆಂಬಲಿಸುತ್ತಾರೆ ಎಂದು ನಾವು ಭರವಸೆ ನೀಡುತ್ತೇವೆ” ಎಂದಿರುವ ಈ ನಿಯೋಗ, ಎಐಕೆಎಸ್, ಸಿಐಟಿಯು, ಎಐಎಡಬ್ಲ್ಯುಯು, ಡಿವೈಎಫ್‌ಐ ಮತ್ತು ಎಸ್‌ಎಫ್‌ಐ 27 ಏಪ್ರಿಲ್ 2023 ರಂದು ಪ್ರತಿಭಟನಾನಿರತ ಕ್ರೀಡಾಪಟುಗಳಿಗೆ ಬೆಂಬಲವಾಗಿ ರಾಷ್ಟ್ರವ್ಯಾಪಿ ಪ್ರತಿಭಟನೆಗೆ ಕರೆ ನೀಡಿವೆ ಎಂದು ಹೇಳಿತು.
ದೇಶಾದ್ಯಂತ ಪ್ರತಿಭಟನೆ-ರಾಷ್ಟ್ರಾಧ್ಯಕ್ಷರಿಗೆ ಮನವಿ : ಎಪ್ರಿಲ್ 27ನ್ನು ದೇಶಾದ್ಯಂತ ಪ್ರತಿಭಟನಾ ದಿನ ಎಂದು ಆಚರಿಸಲಾಗಿದೆ, ಡಬ್ಲ್ಯುಎಫ್‌ಐ ಅಧ್ಯಕ್ಷ ಮತ್ತು ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ತಕ್ಷಣವೇ ಬಂಧನ ಮತ್ತು ಇತರ ಕ್ರಮಗಳನ್ನು ಕೈಗೊಳ್ಳಬೇಕೆಂದು ಆಗ್ರಹಿಸಿ ವ್ಯಾಪಕ ಮತಪ್ರದರ್ಶನಗಳು, ಧರಣಿಗಳು, ಪ್ರತಿಕೃತಿ ದಹನ, ಮತ್ತು ರಾಷ್ಟ್ರಪತಿಗಳಿಗೆ ಮನವಿ ಪತ್ರ ಸಲ್ಲಿಕೆಗಳು ನಡೆದಿವೆ, ಇವುಗಳಲ್ಲಿ ಸಾವಿರಾರು ಮಹಿಳೆಯರೂ ಭಾಗವಹಿಸಿದ್ದಾರೆ ಎಂದು ವರದಿಗಳು ತಮಗೆ ಬಂದಿರುವುದಾಗಿ ಈ ಐದು ಸಂಘಟನೆಗಳು ಮತ್ತು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ (ಎಐಡಿಡಬ್ಲ್ಯುಎ) ಜಂಟಿ ಹೇಳಿಕೆಯಲ್ಲಿ ತಿಳಿಸಿವೆ. ನಗರಗಳು, ಪಟ್ಟಣಗಳು ಮತ್ತು ಹಳ್ಳಿಗಳಲ್ಲೂ ಪ್ರತಿಭಟನೆಗಳು ನಡೆದಿವೆ ಎಂದು ಅವು ತಿಳಿಸಿವೆ.
ಆರೋಪಿಯು ಆಳುವ ಪಕ್ಷಕ್ಕೆ ಸೇರಿದ ಸಂಸದರಾಗಿದ್ದು, ಅವರನ್ನು ರಕ್ಷಿಸಲು ಪ್ರಧಾನಿ ಮತ್ತು ಅವರ ಸರ್ಕಾರವು ಸರ್ವಪ್ರಯತ್ನ ನಡೆಸುತ್ತಿದ್ದಾರೆ ಎಂಬುದು ಎದ್ದು ಕಾಣುತ್ತಿದೆ. ಸಂತ್ರಸ್ತ ಮಹಿಳೆಯರು ನ್ಯಾಯ ಪಡೆಯಲು ಓಡಾಡಬೇಕಾದ, ಬೀದಿಯಲ್ಲಿ ಮಲಗಬೇಕಾದ ಈ ಅರಾಜಕ ಪರಿಸ್ಥಿತಿಗೆ ಮೋದಿ ಸರಕಾರವನ್ನು ಕ್ಷಮಿಸಲಾಗದು. ಹೀನಾಯ ವೈಫಲ್ಯದ ಹೊಣೆ ಹೊತ್ತು ಕ್ರೀಡಾ ಸಚಿವ ಅನುರಾಗ್ ಠಾಕೂರ್ ಕೂಡಲೇ ರಾಜೀನಾಮೆ ನೀಡಬೇಕು. ಎಲ್ಲ ಆರೋಪಗಳ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಬೇಕು. ದೂರುದಾರರ ಗುರುತನ್ನು ಬಹಿರಂಗಪಡಿಸಿ ಸಂತ್ರಸ್ತ ಮಹಿಳೆಯರಿಗೆ ಕ್ರಿಮಿನಲ್ ಮಾಫಿಯಾದಿಂದ ಬೆದರಿಕೆಗಳು ಬರುವಂತಾಗಿರುವ ಬಗ್ಗೆ ಕನ್ನಾಟ್ ಪ್ಲೇಸ್ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿಗಳ ಮೇಲೂ ಕಾನೂನು ಅಡಿಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಜರುಗಿಸಬೇಕು ಎಂದು ಈ ಆರು ಸಂಘಟನೆಗಳ ಪ್ರಧಾನ ಕಾರ್ಯದರ್ಶಿಗಳು ಜಂಟಿ ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.
“ನಾವು ಶ್ರೀಮತಿ ದ್ರೌಪದಿ ಮುರ್ಮು, ಗೌರವಾನ್ವಿತ ಭಾರತದ ರಾಷ್ಟ್ರಾಧ್ಯಕ್ಷರು, ತಕ್ಷಣವೇ ಮಧ್ಯಪ್ರವೇಶಿಸಿ ಎಫ್‌ಐಆರ್ ದಾಖಲಿಸಲು ಮತ್ತು ಅಪರಾಧಿಯನ್ನು ಬಂಧಿಸಲು ಮತ್ತು ಸಂತ್ರಸ್ತರಿಗೆ ನ್ಯಾಯವನ್ನು ಒದಗಿಸುವಂತೆ ದೆಹಲಿ ಪೊಲೀಸರಿಗೆ ಆದೇಶ ನೀಡುವಂತೆ ಪ್ರಧಾನ ಮಂತ್ರಿಗೆ ನಿರ್ದೇಶಿಸಬೇಕು ಎಂದು ಅವರನ್ನು ಬಲವಾಗಿ ಒತ್ತಾಯಿಸುತ್ತೇವೆ. ದೇಶದ ಉನ್ನತ ಆಡಳಿತದ ಸ್ಥಾನದಲ್ಲಿರುವ ಮಹಿಳೆಯಾಗಿ, ಇದು ಗೌರವಾನ್ವಿತ ರಾಷ್ಟ್ರಾಧ್ಯಕ್ಷರಿಂದ ನಿರೀಕಿಸುವ ಕನಿಷ್ಠ ಬಾಧ್ಯತೆಯಾಗಿದೆ” ಎಂದು ಅವರು ಹೇಳಿದ್ದಾರೆ.
ಕೇಂದ್ರ ಸರಕಾರ ಕೂಡಲೇ ಕ್ರಮ ಕೈಗೊಳ್ಳಲು ವಿಫಲವಾದರೆ ಮುಂದಿನ ದಿನಗಳಲ್ಲಿ ಪ್ರತಿಭಟನೆಯನ್ನು ತೀವ್ರಗೊಳಿಸಲಾಗುವುದು ಎಂದೂ ತಪನ್ಸ್ ಸೇನ್(ಸಿ.ಐ.ಟಿ.ಯು), ವಿಜೂ ಕೃಷ್ಣನ್(ಎಐಕೆಎಸ್), ಬಿ ವೆಂಕಟ್(ಎಐಎಡಬ್ಲ್ಯುಯು), ಮರಿಯಮ್ ಧವಳೆ(ಎಐಡಿಡಬ್ಲ್ಯುಎ), ಹಿಮಂಗನರಾಜ್ ಭಟ್ಟಾಚಾರ್ಯ (ಡಿ.ವೈ.ಎಫ್.ಐ) ಮತ್ತು ಮಯೂಖ್ ಬಿಸ್ವಾಸ್(ಎಸ್‌ಎಫ್‌ಐ) ಎಚ್ಚರಿಸಿದ್ದಾರೆ.
ಮಹಿಳಾ ಸಂಘಟನೆಗಳ ಪ್ರತಿಭಟನಾ ಮೆರವಣಿಗೆ : ದೇಶದ ಪ್ರಮುಖ ಮಹಿಳಾ ಸಂಘಟನೆಗಳಾದ ಎಐಡಿಡಬ್ಲ್ಯುಎ, ಎನ್‌ಎಫ್‌ಐಡಬ್ಲ್ಯು, ಎಐಎಂಎಸ್‌ಎಸ್, ಪಿಎಂಸ್ ಮತ್ತು ಸಿಎಸ್‌ಬ್ಲ್ಯು ಎಪ್ರಿಲ್ 27ರಂದು ದೇಶದ ರಾಜಧಾನಿಯಲ್ಲಿ ದಿಲ್ಲಿ ಪೋಲೀಸ್ ಕಮಿಷನರ್ ಕಚೇರಿಗೆ ಆರೋಪಿಯ ಮೇಲೆ ಎಫ್‌ಐಆರ್ ಹಾಕಬೇಕೆಂದು ಆಗ್ರಹಿಸಿ ಪ್ರತಿಭಟನಾ ಮೆರವಣಿಗೆ ಹೊರಟವು. ಮಾರ್ಗಮಧ್ಯದಲ್ಲೇ ಅವರನ್ನು ತಡೆದು, ಹಲ್ಲೆ ನಡೆಸಿ ಬಂಧಿಸಲಾಯಿತು, ನಂತರ ಜಂತರ್ ಮಂತರ್‌ನಲ್ಲಿ ಬಿಡುಗಡೆ ಮಾಡಲಾಯಿತು.
ಈ ನಡುವೆ ದೇಶದ ಗೌರವಾನ್ವಿತ ಓಟಗಾರ್ತಿ ಮತ್ತು ಈಗ ಭಾರತ ಒಲಿಂಪಿಕ್ ಅಸೋಸಿಯೇಷನ್ ಅಧ್ಯಕ್ಷೆ ಪಿ.ಟಿ.ಉಷಾ ಜಂತರ್ ಮಂತರ್‌ನಲ್ಲಿ ಮಹಿಳಾ ಕುಸ್ತಿ ಪಟುಗಳು ಧರಣಿ ಕೂತಿರುವುದು ಅಶಿಸ್ತಿನ ಕೃತ್ಯ ಎಂದಿರುವುದು ದುರದೃಷ್ಟಕರ ಮತ್ತು ನಿರಾಶಾದಾಯಕ ಸಂಗತಿ ಎಂದು ಎಐಡಿಬ್ಲ್ಯುಎ ಅಧ್ಯಕ್ಷರಾದ ಪಿ.ಕೆ.ಶ್ರೀಮತಿ ಮತ್ತು ಪ್ರಧಾನ ಕಾರ್ಯದರ್ಶಿ ಮರಿಯಂ ಧವಳೆ ಖೇದ ವ್ಯಕ್ತ ಪಡಿಸಿದ್ದಾರೆ. ಮಹಿಳಾ ಕ್ರೀಡಾಪಟುಗಳ ಭದ್ರತೆ ಅವರ ಹೊಣೆ. ಲೈಂಗಿಕ ಕಿರುಕುಳದ ಆರೋಪಕ್ಕೆ ಒಳಗಾಗಿರುವ ವ್ಯಕ್ತಿಯನ್ನು ಆತನ ಹುದ್ದೆಯಿಂದ ತೆಗೆದು ಹಾಕುವಂತೆ ಮಾಡುವ ಬದಲು, ಆತನಿಗೆ ಪರೋಕ್ಷವಾಗಿ ಬೆಂಬಲವನ್ನೇ ನೀಡಿರುವುದು ನಾಚಿಕೆಗೇಡಿನ ಸಂಗತಿ, ಇಂತಹ ವರ್ತನೆಯನ್ನು ಅವರಿಂದ ನಿರೀಕ್ಷಿಸಿರಲಿಲ್ಲ ಎಂದು ಅವರು ಹೇಳಿದ್ದಾರೆ.