ನವದೆಹಲಿ: ಕೋವಿಡ್ ಪರಿಸ್ಥಿತಿಯನ್ನು ಎದುರಿಸುವುದಕ್ಕೆ ಸಂಬಂಧಿಸಿ ಆಸ್ಪತ್ರೆಗಳ ಸನ್ನದ್ಧತೆಯನ್ನು ಖಾತ್ರಿಪಡಿಸುವ ಸಲುವಾಗಿ ದೇಶದಾದ್ಯಂತ ಸೋಮವಾರ ಹಾಗೂ ಮಂಗಳವಾರ ಅಣಕು ಕಾರ್ಯಾಚರಣೆ ಹಮ್ಮಿಕೊಳ್ಳಲಾಗಿದೆ.
ಸಾರ್ವಜನಿಕ ಹಾಗೂ ಖಾಸಗಿ ಆಸ್ಪತ್ರೆಗಳು ಈ ಕಾರ್ಯಾಚರಣೆಯಲ್ಲಿ ಭಾಗಿಯಾಗಲಿವೆ.
ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯ ಅವರು ಹರಿಯಾಣದ ಝಜ್ಜರ್‌ನಲ್ಲಿರುವ ಎಐಐಎಂಎಸ್ ಶಾಖೆಗೆ ಸೋಮವಾರ ಭೇಟಿ ನೀಡಿ, ಪರಿಶೀಲನೆ ನಡೆಸುವರು ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
ಇದನ್ನೂ ಓದಿ : ಕೋವಿಡ್ ಸೋಂಕು ನಿರ್ವಹಣೆಗೆ ಸಜ್ಜಾಗಿರುವಂತೆ ರಾಜ್ಯಗಳಿಗೆ ಕೇಂದ್ರದಿಂದ ಸಲಹೆ
ದೇಶದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಸಚಿವ ಮಾಂಡವೀಯ ಅಧ್ಯಕ್ಷತೆಯಲ್ಲಿ ಶುಕ್ರವಾರ ಪರಿಶೀಲನಾ ಸಭೆ ನಡೆದಿತ್ತು. ಆಸ್ಪತ್ರೆಗಳಲ್ಲಿನ ಮೂಲಸೌಕರ್ಯಗಳು ಹಾಗೂ ಕೋವಿಡ್ ಪರಿಸ್ಥಿತಿ ನಿರ್ವಹಣೆಗೆ ಸಂಬಂಧಿಸಿ ಅವುಗಳ ಸನ್ನದ್ಧತೆ ಪರಿಶೀಲಿಸಲು ಏ.10 ಹಾಗೂ 11ರಂದು ಅಣಕು ಕಾರ್ಯಾಚರಣೆ ನಡೆಸಲು ಅಂದಿನ ಸಭೆಯಲ್ಲಿ ತೀರ್ಮಾನಿಸಲಾಗಿತ್ತು.