ಮೇ 20ರಂದು ದೇಶವ್ಯಾಪಿ ಸಾರ್ವತ್ರಿಕ ಮುಷ್ಕರ – ನಾಲ್ಕು ಕಾರ್ಮಿಕ ಸಂಹಿತೆಗಳನ್ನು ರದ್ದು ಮಾಡಿ- ಐಎಲ್‍ಸಿ ಆಯೋಜಿಸಿ

ಖಾಸಗೀಕರಣವನ್ನು ನಿಲ್ಲಿಸಿ: ಕೇಂದ್ರ ಕಾರ್ಮಿಕ ಸಂಘಟನೆಗಳ ಆಗ್ರಹ

ನವದೆಹಲಿ: ಮೇ 20 ರಂದು ರಾಷ್ಟ್ರವ್ಯಾಪಿ ಸಾರ್ವತ್ರಿಕ ಮುಷ್ಕರ ಮತ್ತು ಅದಕ್ಕೆ ಮೊದಲು ದೇಶಾದ್ಯಂತ ಎರಡು ತಿಂಗಳ ಕಾಲದ ಅಭಿಯಾನವನ್ನು ನಡೆಸಲು ಕೇಂದ್ರ ಕಾರ್ಮಿಕ ಸಂಘಗಳು ಮತ್ತು ಸ್ವತಂತ್ರ ವಲಯ ಒಕ್ಕೂಟಗಳು ಮತ್ತು ಸಂಘಗಳ ವೇದಿಕೆಯು ದೇಶದ ಕಾರ್ಮಿಕರಿಗೆ ಕರೆ ನೀಡಿದೆ. ಮಾರ್ಚ್ 18, 2025 ರಂದು ದಿಲ್ಲಿಯಲ್ಲಿ ಆಯೋಜಿಸಿದ್ದ ಕಾರ್ಮಿಕರ ರಾಷ್ಟ್ರೀಯ ಸಮಾವೇಶವು ಅಂಗೀಕರಿಸಿದ ಘೋಷಣೆಯು ಈ ಕರೆಯನ್ನು ನೀಡಿದೆ.

ನಾಲ್ಕು ಕಾರ್ಮಿಕ ಸಂಹಿತೆಗಳನ್ನು ರದ್ದು ಮಾಡಬೇಕು, ಭಾರತೀಯ ಕಾರ್ಮಿಕ ಸಮ್ಮೇಳನ(ಐಎಲ್‍ಸಿ)ವನ್ನು ಆಯೋಜಿಸಬೇಕು ಮತ್ತು ಸಾರ್ವಜನಿಕ ವಲಲಯದ ಉದ್ದಿಮೆಗಳ ಮತ್ತು ಸಾರ್ವಜನಿಕ ಸೇವೆಗಳ ಖಾಸಗೀಕರಣವನ್ನು ನಿಲ್ಲಿಸಬೇಕು ಎಂದು ಸಮಾವೇಶ ಆಗ್ರಹಿಸಿತು.

ಬ್ಯಾಂಕುಗಳು, ವಿಮೆ, ಕಲ್ಲಿದ್ದಲು, ಉಕ್ಕು, ಬಂದರು -ಹಡಗುಕಟ್ಟೆ, ವಿದ್ಯುತ್, ಟೆಲಿಕಾಂ, ಅಂಚೆ, ರೈಲ್ವೆ, ರಕ್ಷಣೆ, ರಸ್ತೆಮಾರ್ಗಗಳು, ಶಿಕ್ಷಣ, ಆರೋಗ್ಯ, ನೀರು, ನಾಗರಿಕ ಸೇವೆಗಳು ಇತ್ಯಾದಿ ಸರ್ಕಾರಿ ಮತ್ತು ಸಾರ್ವಜನಿಕ ವಲಯದ ನೌಕರರು ಮತ್ತು ಕಾರ್ಮಿಕರು, ಖಾಸಗಿ ಔಪಚಾರಿಕ ವಲಯದ ಕಾರ್ಮಿಕರು, ಗುತ್ತಿಗೆ ಕಾರ್ಮಿಕರು, ಅನೌಪಚಾರಿಕ/ಅಸಂಘಟಿತ ವಲಯಗಳ ಕೈಗಾರಿಕಾ ಹಾಗೂ ಗುತ್ತಿಗೆ, ಹೊರಗುತ್ತಿಗೆ ಕಾರ್ಮಿಕರು ಮತ್ತು ತುಂಡು ದರ ಕೆಲಸದಲ್ಲಿರುವ ಸ್ವಯಂ ಉದ್ಯೋಗಿಗಳು, ಗೃಹ ಕಾರ್ಮಿಕರು, ಗಿಗ್ ಮತ್ತು ಆಪ್ ಆಧಾರಿತ ಕಾರ್ಮಿಕರು, ಅಂಗನವಾಡಿ, ಆಶಾ ಮತ್ತು ಮಧ್ಯಾಹ್ನ ಊಟ ಯೋಜನೆಗಳು, ಬೀಡಿ ಮತ್ತು ನಿರ್ಮಾಣ ವಲಯ, ಲೋಡರ್‌ಗಳು-ಅನ್‌ಲೋಡರ್‌ಗಳು ಇತ್ಯಾದಿಗಳ ಸ್ಕೀಮ್ ಕಾರ್ಮಿಕರ ಸಂಘಗಳ ಮುಖಂಡರು ಮತ್ತು ಕಾರ್ಯಕರ್ತರು ಸಮಾವೇಶದಲ್ಲಿ ಭಾಗವಹಿಸಿದ್ದರು.

ಇದನ್ನು ಓದಿ :-ಮರುಭೂಮಿಯ ಹೂ – ಸ್ತ್ರೀವಾದಿ ನಿರ್ವಚನ

ಬಿಜೆಪಿ ಸರ್ಕಾರದ ಕಾರ್ಮಿಕ ವಿರೋಧಿ, ರೈತ ವಿರೋಧಿ ಮತ್ತು ಜನ ವಿರೋಧಿ ನೀತಿಗಳ ವಿರುದ್ಧ ಪ್ರತಿರೋಧಿಸುವಲ್ಲಿ ಒಗ್ಗಟ್ಟನ್ನು ಪ್ರದರ್ಶಿಸಲು ನವದೆಹಲಿಯ ಪ್ಯಾರೆಲಾಲ್ ಭವನದಲ್ಲಿ ಎಲ್ಲಾ ರಾಜ್ಯಗಳಿಂದ ಎಲ್ಲಾ ಕೇಂದ್ರೀಯ ಕಾರ್ಮಿಕ ಸಂಘಟನೆಗಳ ಮತ್ತು ವಲಯ ಒಕ್ಕೂಟಗಳ ಪ್ರತಿನಿಧಿಗಳು ಭಾರೀ ಸಂಖ್ಯೆಯಲ್ಲಿ ಸೇರಿದ್ದರು.

ಒಂದು ಕಡೆ ಕಾರ್ಮಿಕ ಸಂಘಗಳು ಸತತವಾಗಿ ಎತ್ತುತ್ತಿರುವ ಬೇಡಿಕೆಗಳಿಗೆ ಒಂದು ದಶಕಕ್ಕೂ ಹೆಚ್ಚು ಕಾಲ ಉದ್ದೇಶಪೂರ್ವಕವಾಗಿ ಕಿವಿಗೊಡದಿರುವ ಕೇಂದ್ರ ಸರಕಾರದ ಖಂಡನೆಯ ದನಿಗಳು ಮತ್ತು ಇನ್ನೊಂದೆಡೆ ಇಂತಹ ಸರಕಾರದ ನೀತಿಗಳ ಸಾಮೂಹಿಕ ತಿರಸ್ಕಾರದ ದನಿಗಳು ಮೊಳಗಿ, ಮೇ 20, 2025 ರಂದು ಒಂದು ದಿನದ ರಾಷ್ಟ್ರೀಯ ಮುಷ್ಕರಕ್ಕೆ ಸ್ಪಷ್ಟ ಕರೆ ಹೊಮ್ಮಿ ಬಂತು ಎಂದು ಈ ಸಭೆಯ ನಂತರ ಕೇಂದ್ರೀಯ ಕಾರ್ಮಿಕ ಸಂಘಟನೆಗಳು ಜಂಟಿಯಾಗಿ ನೀಡಿದ ಹೇಳಿಕೆಯಲ್ಲಿ ತಿಳಿಸಿವೆ.

ಈ ಸಮಾವೇಶವು ದುಡಿಯುವ ಜನರಿಗೆ ಮತ್ತು ದೇಶದ ಒಟ್ಟಾರೆ ಆರ್ಥಿಕ ಯೋಗಕ್ಷೇಮಕ್ಕೆ ಹಾನಿಕಾರಕವಾದ ಏಕಸ್ವಾಮ್ಯ ಮತ್ತು ಒಬ್ಬಿಬ್ಬ ದೊಡ್ಡ ಬಂಡವಾಳಶಾಹಿಗಳ ಸೃಷ್ಟಿ, ಬಂಟ ಬಂಡವಾಳಶಾಹಿಗಳ ಪರವಾದ ನಿರ್ಲಜ್ಜ ನೀತಿಗಳ ಮೇಲೆ ಕಟುವಾದ ದಾಳಿಯನ್ನು ಮಾಡಿತು., ಕೇಂದ್ರ ಸರ್ಕಾರವು ದುಡಿಯುವ ಜನಸಾಮಾನ್ಯರ ಐಕ್ಯ ಸಮರಘೋಷಕ್ಕೆ ಮಣಿಯದೆ ಮುಂದುವರಿಯಲು ಸಾಧ್ಯವಿಲ್ಲ ಎಂಬ ದೃಢ ಸಂದೇಶವನ್ನು ಸಮಾವೇಶವು ನಿಸ್ಸಂದಿಗ್ಧವಾದ ಧ್ವನಿ ಮತ್ತು ಅಚಲವಾದ ದೃಢನಿಶ್ಚಯದಿಂದ ರವಾನಿಸಿತು, ಭಾರತದ ದುಡಿಯುವ ಜನರು, ನಿಜವಾದ ಸಂಪತ್ತು ತಯಾರಕರು ಬಂಟ ಬಂಡವಾಳಶಾಹಿಗಳು ತಮ್ಮ ಸೃಷ್ಟಿಯ ಲೂಟಿಗೆ ಅವಕಾಶ ಕೊಡುವುದಿಲ್ಲ ಎಂದು ಸಮಾವೇಶವು ಒತ್ತಿಹೇಳಿತು ಎಂದು ಕೇಂದ್ರೀಯ ಕಾರ್ಮಿಕ ಸಂಘಟನೆಗಳ ಜಂಟಿ ಹೇಳಿಕೆ ತಿಳಿಸಿದೆ.

ಇದನ್ನು ಓದಿ :-₹571 ಕೋಟಿ ಮೊತ್ತದ ಭ್ರಷ್ಟಾಚಾರ ಪ್ರಕರಣ: ಸತ್ಯೇಂದ್ರ ಜೈನ್ ವಿರುದ್ಧ ಎಫ್‌ಐಆರ್

ಸರ್ಕಾರದ ಸವಾಲನ್ನು ಸ್ವೀಕರಿಸಲು ದುಡಿಯುವ ಜನರು ಸಿದ್ಧರಾಗಬೇಕು ಎಂದು ಕರೆ ನೀಡಿದ ಈ ಸಮಾವೇಶವು, ಮೇ 20, ಇನ್ನು ಮುಂದೆ ಕಾರ್ಮಿಕರು ಮತ್ತು ರೈತರ ರಾಷ್ಟ್ರವ್ಯಾಪಿ ನಿರ್ಣಾಯಕ ಹೋರಾಟಗಳ ಸರಣಿಗೆ ಚಾಲನೆ ನೀಡುವ ವೇದಿಕೆಯಾಗಲಿದೆ, ಶೋಷಣೆ, ಆಳವಾಗುತ್ತಿರುವ ಆದಾಯ ಅಸಮಾನತೆ, ಸಾಂವಿಧಾನಿಕ ಹಕ್ಕುಗಳ ನಿರಾಕರಣೆ ಮತ್ತು ಭಾರತದ ಜನರ ಮೇಲೆ ಆಗುತ್ತಿರುವ ಒಟ್ಟಾರೆ ಅನ್ಯಾಯವನ್ನು ಹೊಸ ಶಕ್ತಿಯಿಂದ ಎದುರಿಸಲಾಗುವುದು ಎಂದು ಸಾರಿತು.

ಕಾರ್ಮಿಕ ಸಂಹಿತೆಗಳನ್ನು ರದ್ದುಗೊಳಿಸುವ ತನ್ನ ಬಹುದಿನಗಳ ಆಗ್ರಹವನ್ನು ಪುನರುಚ್ಚರಿಸುವುದರ ಜೊತೆಗೆ, ತನ್ನ 17 ಅಂಶಗಳ ಆಗ್ರಹಗಳ ಪಟ್ಟಿಯನ್ನು ಕಾರ್ಮಿಕರ ರಾಷ್ಟ್ರೀಯ ಸಮಾವೇಶದ ಘೋಷಣೆಯು ಪುನರುಚ್ಚರಿಸಿತು. ಅಲ್ಲದೆ ನವ ಉದಾರವಾದದ ವಿನಾಶಕಾರಿ ನೀತಿಗಳಿಗೆ ಪರ್ಯಾಯವನ್ನು ಸಹ ಸೂಚಿಸಿದ ಸಮಾವೇಶವು ಧರ್ಮ, ಪ್ರದೇಶ, ಜಾತಿ, ಸಂಸ್ಕೃತಿ, ಭಾಷೆ ಇತ್ಯಾದಿಗಳ ಆಧಾರದ ಮೇಲೆ ಕಾರ್ಮಿಕರನ್ನು ವಿಭಜಿಸುವ ಎನ್‍ಡಿಎ ಸರ್ಕಾರದ ಎಲ್ಲಾ ಕೊಳಕು ಪ್ರಯತ್ನಗಳನ್ನು ವಿಫಲಗೊಳಿಸುವುದಾಗಿಯೂ ಸಾರಿತು.

Donate Janashakthi Media

Leave a Reply

Your email address will not be published. Required fields are marked *