ಭಾಷೆಗಳ ರಾಷ್ಟ್ರೀಯತೆಯನ್ನು ಪ್ರಾದೇಶಿಕತೆ ಎಂದು ಹೀಗಳೆದ ಮೋದಿ

ಜಿ.ಎನ್.ನಾಗರಾಜ

ಭಾರತದಲ್ಲಿ ಸ್ವಾತಂತ್ರ್ಯ ಚಳುವಳಿಯ ಕಾಲದಲ್ಲಿ ಪಸರಿಸಿದ ರಾಷ್ಟ್ರೀಯ ಭಾವನೆಯ ಜನನದ ಮೂಲವೇ ಭಾಷಾವಾರು ರಾಷ್ಟ್ರೀಯತೆ. ಮೋದಿ ಮತ್ತು ಅವರ ಚಿಂತನೆಯ ಅಡಿಪಾಯ ಆರೆಸ್ಸೆಸ್‌ಗೆ ಇದನ್ನು ನೆನಪಿಸಬೇಕಾಗಿದೆ. ಭಾರತದ ಮೊತ್ತ ಮೊದಲ ಸ್ವಾತಂತ್ರ್ಯ ಚಳುವಳಿ 1905 ರ ವಂಗ ಭಂಗ ಚಳುವಳಿ. ಬಂಗಾಲವನ್ನು ಹಿಂದು ,ಮುಸ್ಲಿಂ ಬಂಗಾಲಗಳೆಂದು ಎರಡಾಗಿ ವಿಭಜಿಸಿದ ಬ್ರಿಟಿಷರ ಕುತಂತ್ರದ ವಿರುದ್ಧ ಹಿಂದೂ, ಮುಸ್ಲಿಂ ಬಂಗಾಲಿ ಭಾಷಿಕರು ಒಟ್ಟಾಗಿ ಮಾಡಿದ ಹೋರಾಟದಿಂದ ಇಡೀ ದೇಶದಲ್ಲಿ ರಾಷ್ಟ್ರೀಯ ಭಾವನೆಯ ಉದ್ದೀಪನವಾಯಿತು.

ಮೊನ್ನೆ ವಿಜಯ ದಶಮಿಯ ದಿನ ರಾವಣನ ಪ್ರತಿಕೃತಿಯನ್ನು ಸುಡುತ್ತಾ ಮೋದಿಯವರು ಕೆಲವು ಆಕ್ರಮಣಕಾರಿ ಘೋಷಣೆಗಳನ್ನು ಮಾಡಿದರು. ಹಿಂದೆ ಸಾಮ್ರಾಟರುಗಳು ದಸರೆಯ ನಂತರ ವಿಜಯದಶಮಿಯ ದಿನ ಬೇರೆ ರಾಜ್ಯಗಳ ಮೇಲೆ ಆಕ್ರಮಣ ಆರಂಭಿಸಿದರೆ ವಿಜಯ ಸಿದ್ಧವೆಂದು ಭಾವಿಸಿ ಯುದ್ಧ ಘೋಷಣೆ ಮಾಡುತ್ತಿದ್ದರಂತೆ. ತಾನು ಭಾರತದ ಸಾಮ್ರಾಟನೆಂದು ನಂಬಿರುವ, ಬಿಂಬಿಸಿಕೊಳ್ಳುತ್ತಿರುವ ಮೋದಿ ಕೂಡಾ ಭಾರತದ ವಿವಿಧ ಜಾತಿ ಸಮುದಾಯಗಳ ಹಕ್ಕುಗಳು,ಸವಲತ್ತುಗಳ ಮೇಲೆ ಒಂದು ಕಡೆ , ವಿವಿಧ ಭಾಷಾವಾರು ರಾಜ್ಯಗಳ ಮೇಲೆ ಮತ್ತೊಂದು ಕಡೆ ಆಕ್ರಮಣವನ್ನು ಘೋಷಿಸಿದರು. ಅವರು ಅದನ್ನು ಜನರನ್ನು ಒಪ್ಪಿಸುವ ಭಾಷೆಯಲ್ಲಿ ಜಾತಿವಾದ ಮತ್ತು ಪ್ರಾದೇಶಿಕವಾದ ಎಂದು ಹೆಸರಿಸಿದರು. ಕೇವಲ ಮೂರು ನಾಲ್ಕು ರಾಜ್ಯಗಳಲ್ಲಿ ಮಾತ್ರ ಚುನಾವಣಾ ಗೆಲುವಿನ ಪ್ರಜಾಪ್ರಭುತ್ವೀಯ ಮಾರ್ಗ ಹಿಡಿದು ಬಿಜೆಪಿ ಗೆದ್ದಿರುವ ವಾಸ್ತವ ಅವರ ಕಣ್ಣಿಗೆ ದಿನವೂ ರಾಚುತ್ತಿದೆ . ಇನ್ನು ಕೆಲವು ರಾಜ್ಯಗಳನ್ನು ಶಾಸಕರ ಮಾರಾಟದಲ್ಲಿ ಕೊಂಡು ಅಕ್ರಮವಾಗಿ ಅಧಿಕಾರ ಹಿಡಿದಿರುವುದು ಲೋಕಕ್ಕೇ ಗೊತ್ತಿದೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಈ ರಾಜ್ಯಗಳನ್ನೂ ಕಳೆದುಕೊಳ್ಳುವ ಭಯ ಕಾಡುತ್ತಿದೆ.

ಅಂತಹ ಸಂದರ್ಭದಲ್ಲಿ ಇಡೀ ಭಾರತವನ್ನು ತಮ್ಮ ಮುಷ್ಟಿಯೊಳಗೆ ಹಿಡಿದುಕೊಳ್ಳಬೇಕೆಂಬ ತಹ ತಹ ಅವರದು.‌ ಭಾಷಾವಾರು ರಾಜ್ಯಗಳನ್ನು ಪ್ರಾದೇಶಿಕವಾದ ಎಂದು ಕರೆಯುವುದು, ಭಾಷಾವಾರು ರಾಜ್ಯಗಳ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಕಿತ್ತುಕೊಳ್ಳುವುದು  ‌ಭಾಷಾವಾರು ರಾಷ್ಟ್ರೀಯತೆಯ ಭಾವನೆಯನ್ನು ಧಿಕ್ಕರಿಸಿದಂತೆ. ಅಷ್ಟೇ ಅಲ್ಲ, ಪ್ರಜಾಪ್ರಭುತ್ವವನ್ನೇ ಕುಂಠಿತಗೊಳಿಸುವ ಕುಕೃತ್ಯ.

ಆದರೆ ಭಾರತದಲ್ಲಿ ಸ್ವಾತಂತ್ರ್ಯ ಚಳುವಳಿಯ ಕಾಲದಲ್ಲಿ ಪಸರಿಸಿದ ರಾಷ್ಟ್ರೀಯ ಭಾವನೆಯ ಜನನದ ಮೂಲವೇ ಭಾಷಾವಾರು ರಾಷ್ಟ್ರೀಯತೆ. ಮೋದಿ ಮತ್ತು ಅವರ ಚಿಂತನೆಯ ಅಡಿಪಾಯ ಆರೆಸ್ಸೆಸ್‌ಗೆ ಇದನ್ನು ನೆನಪಿಸಬೇಕಾಗಿದೆ. ಭಾರತದ ಮೊತ್ತ ಮೊದಲ ಸ್ವಾತಂತ್ರ್ಯ ಚಳುವಳಿ 1905 ರ ವಂಗ ಭಂಗ ಚಳುವಳಿ. ಬಂಗಾಲವನ್ನು ಹಿಂದು, ಮುಸ್ಲಿಂ ಬಂಗಾಲಗಳೆಂದು ಎರಡಾಗಿ ವಿಭಜಿಸಿದ ಬ್ರಿಟಿಷರ ಕುತಂತ್ರದ ವಿರುದ್ಧ ಹಿಂದೂ, ಮುಸ್ಲಿಂ ಬಂಗಾಲಿ ಭಾಷಿಕರು ಒಟ್ಟಾಗಿ ಮಾಡಿದ ಹೋರಾಟದಿಂದ ಇಡೀ ದೇಶದಲ್ಲಿ ರಾಷ್ಟ್ರೀಯ ಭಾವನೆಯ ಉದ್ದೀಪನವಾಯಿತು. ಆ ಚಳುವಳಿಯ ತೀವ್ರತೆ ಕೊನೆಗೆ ಬ್ರಿಟಿಷರು ವಿಭಜನೆಯನ್ನು ಹಿಂತೆಗೆದುಕೊಳ್ಳಲೇಬೇಕಾದ ಪರಿಸ್ಥಿತಿ ನಿರ್ಮಿಸಿತು. ಈ ವಿಜಯ ದೇಶಾದ್ಯಂತ ರಾಷ್ಟ್ರೀಯ ಭಾವನೆಯ ಬೆಳವಣಿಗೆಗೆ ವೇಗವರ್ಧಕವಾಯಿತು.

ಕರ್ನಾಟಕ ಏಕೀಕರಣದ ಬಗ್ಗೆ ಮೊದಲ ಸೊಲ್ಲು ಕೇಳಿದ್ದೇ ಆಗ. ಪೂನಾದಲ್ಲಿ ಶಿಕ್ಷಣ ಪಡೆಯುತ್ತಿದ್ದವರು ಬಂಗಾಲಿ ಭಾಷಿಕರ  ಚಳುವಳಿಯ ಪ್ರಭಾವಕ್ಕೊಳಗಾದರು. ಬಂಗಾಲಿ ಭಾಷೆಯಿಂದ ಹಲವು ಕಾದಂಬರಿಗಳು ಕನ್ನಡಕ್ಕೆ ಭಾಷಾಂತರವಾಗಿ ಕನ್ನಡ ಸಾಹಿತ್ಯದಲ್ಲಿ ನವೋದಯದ ವಿಚಾರಗಳನ್ನು ಮೂಡಿಸಿದವು. ಕನ್ನಡ ಸಾಹಿತ್ಯದ ಬೆಳವಣಿಗೆಯನ್ನೂ ಪ್ರಚೋದಿಸಿದವು. ಕನ್ನಡ ಭಾಷೆಯಲ್ಲಿ ಸ್ವಾತಂತ್ರ್ಯ, ಪ್ರಜಾಪ್ರಭುತ್ವದ ವಿಚಾರಗಳನ್ನು ಜನರಿಗೆ ಮುಟ್ಟಿಸಲು ಹಲವು ಕನ್ನಡ ಪತ್ರಿಕೆಗಳು ಹುಟ್ಟಿದವು. ಜಯ ಕರ್ನಾಟಕ, ಸಂಯುಕ್ತ ಕರ್ನಾಟಕ,  ತಾಯಿ ನಾಡು ಮೊದಲಾದ ಹೆಸರುಗಳೇ ಈ ಭಾವನೆಯ ಸಂಕೇತವಾಗಿದ್ದವು. ಅಂದಿನ ಪತ್ರಿಕೆಗಳ ಹೆಸರುಗಳ ಧಾರವಾಡದಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘ, ಬೆಂಗಳೂರಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತುಗಳು ಹುಟ್ಟಿದ್ದು ಇದೇ ಸ್ಫೂರ್ತಿಯ ಮುಂದುವರೆದ ಬೆಳವಣಿಗೆ.

ಇದನ್ನೂ ಓದಿ: ಕೇರಳ | ನ್ಯೂಸ್‌ ಕ್ಲಿಕ್ ಮಾಜಿ ಉದ್ಯೋಗಿಯ ನಿವಾಸದ ಮೇಲೆ ದಾಳಿ ನಡೆಸಿ ಲ್ಯಾಪ್‌ಟಾಪ್ ಮೊಬೈಲ್ ವಶಕ್ಕೆ ಪಡೆದ ದೆಹಲಿ ಪೊಲೀಸ್

ಅಂದು ಸ್ವಾತಂತ್ರ್ಯ ಚಳುವಳಿಯ ನೇತೃತ್ವ ವಹಿಸಿದ್ದ ಕಾಂಗ್ರೆಸ್‌ಗೆ ಸ್ವಾತಂತ್ರ್ಯ ಚಳುವಳಿಗೆ ಬೃಹತ್ ಜನ ಸಮೂಹವನ್ನು ಸೆಳೆಯಬೇಕಾದರೆ ಜನರ ಭಾಷೆಗಳಲ್ಲಿ ಮಾತನಾಡಿದರೆ ಮಾತ್ರ ಸಾಧ್ಯ ಎಂಬ ಅರಿವು ಮೂಡಿತು. ನಾಗಪುರ ಮಹಾಧಿವೇಶನ, ಗಾಂಧೀಜಿಯವರ ಅಧ್ಯಕ್ಷತೆಯ ಏಕೈಕ ಕಾಂಗ್ರೆಸ್ ಅಧಿವೇಶನವಾದ  1924 ರ ಬೆಳಗಾಂ ಮಹಾಧಿವೇಶನದಲ್ಲಿ ಭಾಷಾವಾರು ಪ್ರಾಂತ್ಯಗಳನ್ನು ರಚಿಸಲು ಮತ್ತು ಭಾಷಾವಾರು ಕಾಂಗ್ರೆಸ್ ಘಟಕಗಳನ್ನು ಸ್ಥಾಪಿಸಲು ನಿರ್ಧಾರ ಮಾಡಿತು.

ಪ್ರಜಾಪ್ರಭುತ್ವೀಯ ವಿಚಾರಗಳ ಮೊದಲ ವಿಸ್ತರಣೆಗೆ, ಸ್ವಾತಂತ್ರ್ಯ ಚಳುವಳಿಯ ಅಗಾಧತೆಗೆ ಭಾಷಾವಾರು ರಾಷ್ಟ್ರೀಯತೆ ಸಾಧಕವಾಯಿತು. ಹೀಗೆ ಭಾರತದಲ್ಲಿ ರಾಷ್ಟ್ರೀಯತೆ ಎಂದರೆ ಅಖಿಲ ಭಾರತ ರಾಷ್ಟ್ರೀಯತೆ ಮತ್ತು ಅದರ ಮುಖ್ಯ ಆಧಾರ ಸ್ತಂಭವಾಗಿ ಭಾಷಾವಾರು ರಾಷ್ಟ್ರೀಯತೆ ಎಂಬುದು ಆರಂಭದಿಂದಲೇ ಮೂಡಿದ ವ್ಯಾಖ್ಯಾನ.

ಭಾಷಾವಾರು ರಾಷ್ಟ್ರೀಯತೆ ಕೇವಲ ಭಾಷೆಗೆ ಸೀಮಿತವಾಗಿರಲಿಲ್ಲ. ಅದು ಈ ಭಾಷೆಗಳನ್ನು ಮಾತನಾಡುವ ಜನ ಸಮುದಾಯದ ಸಮಸ್ಯೆಗಳನ್ನು ಒಳಗೊಂಡಿತು. ಮುಖ್ಯವಾಗಿ ಶಿಕ್ಷಣ, ಜನಭಾಷೆಗಳಲ್ಲಿ ಶಿಕ್ಷಣ ನೀಡುವ ರಾಷ್ಟ್ರೀಯ ವಿದ್ಯಾಶಾಲೆಗಳ ಸ್ಥಾಪನೆ, ರೈತರು ಬೆಳೆದ ಬೆಲೆಯ ಸಮಸ್ಯೆಗಳು, ಗೇಣಿದಾರ ರೈತರ ಸಮಸ್ಯೆಗಳು, ಬರಗಾಲ ಜೊತೆಗೆ ಕರ್ನಾಟಕ ಏಕೀಕರಣದ ಚಳುವಳಿ ಬೆಳೆಯುತ್ತಾ ಹೋಯಿತು.

ಇದೇ ಸಮಯದಲ್ಲಿಯೇ ಭಾರತವೆಂದರೆ ವಿವಿಧ ಭಾಷಾವಾರು ರಾಷ್ಟ್ರೀಯತೆಗಳ ಒಕ್ಕೂಟ ಅಂದರೆ ಭಾಷಾವಾರು ರಾಜ್ಯಗಳ ಒಕ್ಕೂಟ ಎಂಬ ಭಾವನೆ ಬೆಳೆಯುತ್ತಾ ಬಂದಿತು. 1935 ರಲ್ಲಿ ಬ್ರಿಟಿಷರು ತಮ್ಮ ನೇರ ಆಡಳಿತದಲ್ಲಿದ್ದ ಪ್ರದೇಶಗಳಲ್ಲಿ ಸೀಮಿತ ಚುನಾವಣೆ ಆಧಾರಿತ ಪ್ರಾಂತ್ಯ ಸರ್ಕಾರಗಳನ್ನು ಅಸ್ತಿತ್ವಕ್ಕೆ ತರುವ ಆಡಳಿತ ಸುಧಾರಣೆಯನ್ನು ತರುವಾಗ ಮತ್ತು ರಾಜ್ಯ ಸರ್ಕಾರಗಳಲ್ಲಿ ಕಾಂಗ್ರೆಸ್ ಗೆಲುವಿನ ನಂತರ ಭಾಷಾವಾರು ರಾಜ್ಯಗಳ ಅಗತ್ಯ ಎದ್ದು ಕಾಣಿಸಿತು. ಅತ್ಯಂತ ಕೇಂದ್ರೀಕೃತವಾದ ಬ್ರಿಟಿಷ್ ವೈಸ್‌ರಾಯ್ ದಬ್ಬಾಳಿಕೆಯಡಿಯಲ್ಲಿನ ಪ್ರಾಂತ್ಯ ಸರ್ಕಾರಗಳ ಸೀಮಿತ ಹಕ್ಕುಗಳು, ಅಧಿಕಾರಗಳು, ಜನರ ಸಮಸ್ಯೆಗಳ ಪರಿಹಾರದಲ್ಲಿ ಅವುಗಳ ಪಾತ್ರದ ಬಗ್ಗೆ ಪ್ರಶ್ನೆಗಳು ಎದ್ದವು.

ಭಾರತದ ಸ್ವಾತಂತ್ರ್ಯಕ್ಕಾಗಿ ಚಲೇಜಾವ್ ಅಥವಾ ಮಾಡು ಇಲ್ಲವೇ ಮಡಿ ಎಂದು ಘೋಷಿಸಿದ ಆಗಸ್ಟ್ 9, 1942 ರ ಕಾಂಗ್ರೆಸ್ ನಿರ್ಣಯದಲ್ಲಿ ರಾಜ್ಯಗಳ ಹಕ್ಕುಗಳ ಬಗ್ಗೆ ನಿರ್ದಿಷ್ ಪ್ರಸ್ತಾಪ ಮಾಡಬೇಕಾದಷ್ಟು ಪ್ರಾಮುಖ್ಯತೆ ಪಡೆದುಕೊಂಡಿತು.

” ಸಂವಿಧಾನ ಸಭೆಯು ಭಾರತದ ಜನತೆಗೆ ಒಂದು ಸಂವಿಧಾನವನ್ನು ರೂಪಿಸುತ್ತದೆ. ಆ ಸಂವಿಧಾನವು ಒಕ್ಕೂಟ ಸ್ವರೂಪದ್ದಾಗಿರುತ್ತದೆ. ಈ ಒಕ್ಕೂಟಕ್ಕೆ ಸೇರಿದ ಘಟಕಗಳಿಗೆ ಅತ್ಯಂತ ಗರಿಷ್ಟ ಮಟ್ಟದ ಸ್ವಾಯತ್ತತೆಯನ್ನು ನೀಡುವಂತಹ ಸಂವಿಧಾನವಾಗಿರುತ್ತದೆ. ಇವುಗಳಿಗೆ ಕೇಂದ್ರ ಸರ್ಕಾರಕ್ಕಾಗಿ ಬಿಟ್ಟುಕೊಟ್ಟ ಅಧಿಕಾರಗಳ ಹೊರತಾಗಿ ಉಳಿದೆಲ್ಲ ಹಕ್ಕುಗಳೂ ರಾಜ್ಯಗಳಿಗೇ ಸೇರುತ್ತದೆ ” ಎಂದು ಘೋಷಿಸಿತು. ಇಂತಹ ಒಂದು ಭಾಷಾವಾರು ರಾಷ್ಟ್ರೀಯತೆಗೆ ನೀಡಿದ ಮಾನ್ಯತೆಯೊಂದಿಗೆ ಬ್ರಿಟಿಷರನ್ನು ಓಡಿಸುವ ಚಳುವಳಿಯಲ್ಲಿ ಭಾಗವಹಿಸೋಣ ಎಂದು ನಿರ್ಣಯದ ಮೂಲಕ ಭರವಸೆ ನೀಡಿತು.

ಮುಂದೆ ಸ್ವಾತಂತ್ರ್ಯಕ್ಕೆ ಸಂಬಂಧಿಸಿ ವಿವಿಧ ಪಕ್ಷ, ಸಂಘಟನೆಗಳ ಅಭಿಪ್ರಾಯ ಪಡೆದ ಪ್ರಸಿದ್ಧ ಕ್ರಿಪ್ಸ್ ಮಿಷನ್ ವರದಿಯಲ್ಲಿಯೂ ಮುಂದೆ ರಾಜ್ಯಗಳೆಂದು ಹೆಸರಾದ ಪ್ರಾಂತ್ಯಗಳ ಹಕ್ಕುಗಳ ಬಗ್ಗೆ ಇದೇ ಅಂಶವನ್ನು ಒಂದು ಪ್ರಧಾನ ಅಂಗವಾಗಿಸಿದೆ.

ಹೀಗೆ ಸ್ವಾತಂತ್ರ್ಯ ಚಳುವಳಿ ಹಾಗೂ ಪ್ರಜಾಪ್ರಭುತ್ವದ ಭಾಗವಾಗಿ ರೂಪುಗೊಂಡ ಭಾಷಾವಾರು ರಾಷ್ಟ್ರೀಯತೆ ಮತ್ತು ಅದರ ಫಲವಾದ ಭಾಷಾವಾರು ರಾಜ್ಯಗಳು ಸ್ವಾತಂತ್ರ್ಯ ಚಳುವಳಿಯಲ್ಲಿ ಒಂದು ದಿನವೂ ಭಾಗವಹಿಸದ ಆರೆಸ್ಸೆಸ್ ಮತ್ತು ಅದರ ಶಿಶುವಾದ ಮೋದಿಗೆ ಅದರ ಗಂಧ ಗಾಳುಯೆಲ್ಲಿಂದ ಬಂದೀತು ! ವಿವಿಧ ರಾಜ್ಯಗಳಲ್ಲಿ ಅಲ್ಲಲ್ಲಿಯ ಜನರ ಪ್ರಜಾಸತ್ತಾತ್ಮಕ ಹಕ್ಕುಗಳ ಚಲಾವಣೆಯ ಫಲವಾಗಿ ಅಲ್ಲಿ ಜನಪ್ರಿಯತ ಪಡೆದ ವಿವಿಧ ಪ್ರಾದೇಶಿಕ ಪಕ್ಷಗಳ ಸರ್ಕಾರಗಳು ಬಿಜೆಪಿ, ಆರೆಸ್ಸೆಸ್‌ನ ಕಾರ್ಪೊರೇಟ್ ಫ್ಯಾಸಿಸ್ಟ್ ಸರ್ಕಾರದ ಹೇರಿಕೆಗೆ ‌ಅಡ್ಡವಾದ ದೊಡ್ಡ ಬಂಡೆಗಲ್ಲುಗಳಾಗಿವೆ. ಅವರು‌ ಅಧಿಕಾರಕ್ಕೆ ಬಂದ ಮೊದಲ ದಿನದಿಂದಲೂ ರಾಜ್ಯಗಳ ಸ್ವಾಯತ್ತತೆ, ಅವುಗಳ ಸಂವಿಧಾನ ಬದ್ಧ ಅಧಿಕಾರಗಳು, ವಿವಿಧ ಭಾಷೆಗಳ ಮೇಲೆ ಕೆಂಗಣ್ಣು ಬೀರುತ್ತಾ ಬಂದಿದೆ.

ದೇಶದೆಲ್ಲ ರಾಜ್ಯಗಳಿಂದ ಸಂಗ್ರಹಿಸುವ ತೆರಿಗೆಯ ಭಾಗವನ್ನು  ರಾಜ್ಯಗಳಿಗೆ ಸಂವಾದದ ಮೂಲಕ ಹಂಚುವ ಒಂದು ವೇದಿಕೆಯಾಗಿದ್ದ ಯೋಜನಾ ಆಯೋಗವನ್ನು ವಜಾಗೊಳಿಸಿದ್ದು, ಈ ಹಂಚಿಕೆಯನ್ನು ಪ್ರಧಾನಮಂತ್ರಿಗಳ ಕಛೇರಿಯಿಂದ ಅವರ ಮನಬಂದಂತೆ ಮಾಡುವ ಅಕ್ರಮ ವಿಧಾನ ಸ್ಥಾಪಿಸಿದ್ದು ಮೋದಿ‌ ಸರ್ಕಾರದ ಮೊದಲ ಘಾತ. ಬಿಜೆಪಿ ಅಧಿಕಾರದ ಸರ್ಕಾರಗಳಿಗೆ, ರಾಜ್ಯಗಳಿಗೆ ಒಂದೊಂದು ಭೇಟಿ ನೀಡಿದಾಗಲೂ ಹಲವು ಹತ್ತು ಸಾವಿರ ಕೋಟಿ ಘೋಷಣೆ, ವಿರೋಧ ಪಕ್ಷಗಳ ಸರ್ಕಾರಗಳಿಗೆ ನ್ಯಾಯ ಬದ್ಧ ಹಂಚಿಕೆ ಮಾಡದೆ ವಂಚನೆ, ಜಿಎಸ್‌ಟಿ ಮೂಲಕ ಮತ್ತಷ್ಟು ಅನ್ಯಾಯ, ಹಣಕಾಸು ಆಯೋಗಕ್ಕೆ ಜನಸಖ್ಯಾ  ಆಧಾರಿತ ಸೂತ್ರ ರೂಪಿಸಲ ನಿರ್ದೇಶಿಸುವ ಮೂಲಕ ಜನಸಂಖ್ಯಾ ನಿಯಂತ್ರಣವನ್ನು ಪರಿಣಾಮಕಾರಯಾಗಿ ಜಾರಿಗೆ ತಂದ ಕರ್ನಾಟಕ, ಕೇರಳ ಮೊದಲಾದ ದಕ್ಷಿಣದ ರಾಜ್ಯಗಳಿಗೆ ವಂಚನೆ, ಹೊಸ ಶಿಕ್ಷಣ ನೀತಿ , ಆರೋಗ್ಯ ನೀತಿ, ಉದ್ಯೋಗ  ನೇಮಕಾತಿ ನೀತಿಗಳು, ಮೆಡಿಕಲ್, ಇಂಜನಿಯರಿಂಗ್ ಸೀಟು ಹಂಚಿಕೆಯ ಏಕೀಕೃತ ನೀಟ್ ಪರೀಕ್ಷೆ,  ಒಂದು ದೇಶ , ಒಂದು ಭಾಷೆ, ಒಂದು ದೇಶ ಒಂದು ರೇಷನ್ ಕಾರ್ಡ್, ಒಂದು ದೇಶ ಒಂದು ತೆರಿಗೆ ಕೊನೆಗೆ ಒಂದು ದೇಶ ಒಂದು ಚುನಾವಣೆ ಎಂದು ಹಲ ಹಲವು ಕ್ರಮಗಳು, ಘೋಷಣೆಗಳ ಮೂಲಕ ರಾಜ್ಯಗಳ ಸ್ವಾಯತ್ತತೆಯನ್ನು ಇಲ್ಲವಾಗಿಸುತ್ತಿದೆ. ಆ ಮೂಲಕ ಪ್ರತಿ ಹೆಜ್ಜೆಯಲ್ಲಿಯೂ ವಿವಿಧ ಭಾಷಿಕ ಸಮುದಾಯಗಳನ್ನು  ತುಳಿಯಲಾಗುತ್ತಿದೆ.

ಜಮ್ಮು ಕಾಶ್ಮೀರ ರಾಜ್ಯದ ವಿಭಜನೆ, ಇಲ್ಲಿಯವರೆಗೂ ಚುನಾವಣೆ ನಡೆಸದೆ ರಾಜ್ಯದ ಸ್ಥಾನಮಾನ ಕಿತ್ತುಕೊಂಡಿರುವುದು ಅಲ್ಲಿ ಒಳಗೊಳಗೇ ಅಸಮಧಾನ ಕುದಿಯಲು ಕಾರಣವಾಗಿದೆ. ವಿವಿಧ ರಾಜ್ಯಗಳ ರೈತರು, ಕಾರ್ಮಿಕರ ಬದುಕನ್ನು ಹಿಂಡಿ ಹಿಪ್ಪೆ ಮಾಡಲಾಗುತ್ತಿದೆ. ನಿರುದ್ಯೋಗ ಹಿಂದೆಂದಿಗಿಂತಲೂ ಹೆಚ್ಚಾಗಿದೆ.
ಹೀಗೆ ರಾಜ್ಯಗಳಿಗೆ ಸಂವಿಧಾನ ಬದ್ಧ ಅಧಿಕಾರದ ವಂಚನೆ ಹಿಂದೆ ಪಂಜಾಬಿನಲ್ಲಿ ಖಲಿಸ್ಥಾನ, ಅಸ್ಸಾಮಿನಲ್ಲಿ ಇತರ ನೆರೆ ರಾಜ್ಯಗಳಲ್ಲಿ ವಿಚ್ಛಿದ್ರಕಾರಿ ಚಳುವಳಿಗಳ ಬೆಳವಣಿಗೆ, ಸಾವಿರಾರು ಜನ ಹತ್ಯೆ, ಹಿಂಸೆಗಳನ್ನು ದೇಶ ಎದುರಿಸಲು ಕಾರಣವಾಗಿದೆ.

ದೇಶದ ಐಕ್ಯತೆಯ ಸಾಕಾರ ರೂಪವಾದ ಭಾರತ ರಾಷ್ಟ್ರೀಯತೆ ರೂಪುಗೊಂಡದ್ದೇ ಭಾಷಾವಾರು ರಾಷ್ಟ್ರೀಯತೆಯ ಅಡಿಪಾಯದ ಮೇಲೆ ಎಂಬುದನ್ನು ಮರೆಯಲಾಗದು. ಅದನ್ನು ಕೇವಲ ಪ್ರಾದೇಶಿಕ ಸಂಕುಚಿತತೆ ಎಂದು ಹೀಗಳೆದು ನಿರ್ಲಕ್ಷ್ಯ ಮಾಡಿದರೆ ಭಾರತದ ರಾಷ್ಟ್ರೀಯ ಐಕ್ಯತೆಗೆ ಧಕ್ಕೆ ತರುತ್ತದೆ.
ಮತ್ತೊಂದೆಡೆಯಲ್ಲಿ ಕರ್ನಾಟಕದ ಏಕೀಕರಣವಾದ ನಂತರದ ದಿನಗಳಲ್ಲಿ  1983 ರ ಜನತಾ ಪಕ್ಷ ಸರ್ಕಾರದ ಹೊರತಾಗ ಬೇರೆ ಯಾವ ಪಕ್ಷವೂ, ಸರ್ಕಾರವೂ ರಾಜ್ಯಗಳ ಸ್ವಾಯತ್ತತೆಯ ಪ್ರಶ್ನೆಯನ್ನು ಅದರ ಎಲ್ಲ ಆಯಾಮಗಳ , ಆಳ ಅಗಲಗಳ ಸಮಗ್ರ ರೂಪದಲ್ಲಿ ಅರ್ಥಪೂರ್ಣವಾಗಿ ಎತ್ತುತ್ತಿಲ್ಲ.‌ ಹೆಗ್ಡೆ ಸರ್ಕಾರದಲ್ಲಿ ರಾಷ್ಟ್ರ ಮಟ್ಟದ ವಿಚಾರ ಸಂಕಿರಣ, ಜ್ಯೋತಿಬಸುರವರ ನೇತೃತ್ವದಲ್ಲಿ ವಿರೋಧಪಕ್ಷಗಳ ಆಡಳಿತದಲ್ಲಿದ್ದ ಎಲ್ಲ ರಾಜ್ಯಗಳ ಮುಖ್ಯ ಮಂತ್ರಿಗಳ ಶೃಂಗಸಭೆಯಲ್ಲ ಭಾಗವಹಿಸುವುದರ ಮೂಲಕ ಸರ್ಕಾರಿಯಾ ಕಮಿಷನ್ ನೇಮಕಕ್ಕೆ,  ಒಂದಿಷ್ಟು ಪರಿಹಾರ ಪಡೆಯುವುದಕ್ಕೆ ಕಾರಣರಾಗಿದ್ದರು.

ಕೇವಲ ಇತ್ತೀಚೆಗೆ ಮಾತ್ರ ತೆರಿಗೆ ಪಾಲು, ಅಕ್ಕಿ ಪಾಲು ಇತ್ಯಾದಿ ಕೆಲ ಪ್ರಶ್ನೆಗಳನ್ನು ಬಿಡಿ ಬಿಡಿಯಾಗಿ, ಅರೆಬರೆಯಾಗಿ ಎತ್ತಲಾಗುತ್ತಿದೆ. ಏಕೀಕರಣದ ನಂತರ ಬೆಳೆದ ಕನ್ನಡ ಚಳುವಳಿಯ ಯಾವ ನಾಯಕರೂ ಭಾವನಾತ್ಮಕವಾಗಿ ಕನ್ನಡ ಭಾಷೆ, ಗಡಿ, ನೀರು ಹಂಚಿಕೆ ಬಿಟ್ಟರೆ ಕರ್ನಾಟಕ ಎಂಬ ರಾಜ್ಯದ ಸ್ವಾಯತ್ತತೆ, ಹಣಕಾಸು ಹಾಗೂ‌ ಕಾನೂನು ಅಧಿಕಾರಗಳ ಬಗ್ಗೆ ತಲೆಯನ್ನೇ ಕೆಡಿಸಿಕೊಂಡಿಲ್ಲ.

ಇದನ್ನೂ ಓದಿ: Rajasthan Election| ರಾಜಸ್ಥಾನ ವಿಧಾನಸಭಾ ಚುನಾವಣೆಯ ಭವಿಷ್ಯ ನಿರ್ಧರಿಸಲಿದೆ ಈ 5 ಅಂಶಗಳು

ಇದರಿಂದಾಗಿ ಕರ್ನಾಟಕದ ಜನತೆಗೆ ಕರ್ನಾಟಕ ಏಕೀಕರಣದ ನೈಜ‌ ಪರಿಕಲ್ಪನೆ, ಸ್ವಾಯತ್ತತೆಯ ವಿಶಾಲತೆಯ ಬಗ್ಗೆ ಕೇರಳ, ತಮಿಳುನಾಡುಗಳ ಜನತೆಗಿರುವಷ್ಟು ಅರಿವು ಮೂಡಿಲ್ಲ. ಇದರಿಂದಾಗಿ ಬಿಜೆಪಿ, ಆರೆಸ್ಸೆಸ್‌ಗಳು ಭಾಷಾವಾರು ರಾಜ್ಯ ಪರಿಕಲ್ಪನೆಯನ್ನೇ ನಾಶ ಮಾಡುವುದಕ್ಕೆ ಅವಕಾಶ ಉಂಟಾಗುತ್ತಿದೆ.

“ಉದಯವಾಯಿತು ನಮ್ಮ ಚೆಲುವ ಕನ್ನಡ ನಾಡು, ಬದುಕು ಬಲುಹಿನ ನಿಧಿಯು ಸದಭಿಮಾನದ ಗೂಡು” ಎಂಬ ಕಲ್ಪನೆ ಮೂಡಬೇಕು. ಬದುಕು ಬಲುಹಾಗುವುಂತಹ ಕನ್ನಡನಾಡು ಇನ್ನೂ ಉದಯವಾಗಿಲ್ಲ. ಅದನ್ನು ನಿರ್ಮಾಣ ಮಾಡಬೇಕು ಎಂಬ ಅರಿವು ಬೆಳೆಸಬೇಕು.

ವಿಡಿಯೋ ನೋಡಿ: ಕರ್ನಾಟಕ ರಾಜ್ಯೋತ್ಸವ : ಜನರ ಬದುಕಿನ‌ ಪ್ರಶ್ನೆಗಳು ಯಾಕಿಲ್ಲ? – ಜಿ.ಎನ್ ನಾಗರಾಜ ಅವರ ವಿಶ್ಲೇಷಣೆ Janashakthi Media

 

Donate Janashakthi Media

Leave a Reply

Your email address will not be published. Required fields are marked *