ರಾಷ್ಟ್ರಧ್ವಜವನ್ನು ತಾಲಿಬಾನ್ ಧ್ವಜಕ್ಕೆ ಹೋಲಿಕೆ ವಿವಾದ | ಸಿಟಿ ರವಿ ‘ಕೋಮು ಕ್ರಿಮಿ’ ಎಂದ ಕಾಂಗ್ರೆಸ್

ಮಂಡ್ಯ: ಬಿಜೆಪಿ ನಾಯಕ ಸಿಟಿ ರವಿ ಅವರು ರಾಷ್ಟ್ರಧ್ವಜವನ್ನು ತಾಲಿಬಾನ್ ಧ್ವಜಕ್ಕೆ ಹೋಲಿಸಿ ಅವಮಾನಿಸಿದ್ದು ಭಾರಿ ವಿವಾದಕ್ಕೆ ಕಾರಣವಾಗಿದೆ. ಕೆರಗೋಡು ರಾಷ್ಟ್ರಧ್ವಜದ ಸ್ತಂಭದಲ್ಲಿ ಹನುಮ ಧ್ವಜ ವಿವಾದದ ಬಗ್ಗೆ ಮಾಧ್ಯಮದ ಜೊತೆಗೆ ಮಾತನಾಡಿದ್ದ ಅವರು, ಕಾಂಗ್ರೆಸ್ ಸರ್ಕಾರ ಹನುಮ ಧ್ವಜ ಇಳಿಸಿ ತಾಲಿಬಾನ್ ಧ್ವಜ ಹಾರಿಸಲು ಬಯಸಿದೆ ಎಂದು ಹೇಳಿಕೆ ನೀಡಿದ್ದರು. ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಕಾಂಗ್ರೆಸ್ ಸಿಟಿ ರವಿ ಅವರನ್ನು ‘ಕೋಮು ಕ್ರಿಮಿ’ ಎಂದು ಕರೆದಿದೆ.

ರಾಷ್ಟ್ರಧ್ವಜ ಮತ್ತು ನಾಡಧ್ವಜ ಹಾರಿಸುತ್ತೇವೆ ಎಂದು ಅನುಮತಿ ಪಡೆದು ಸ್ಥಾಪಿಸಿದ್ದ ಸ್ತಂಭದಲ್ಲಿ ಸಂಘಪರಿವಾರ ಹನುಮಧ್ವಜ ಹಾರಿಸಿದ ನಂತರ ಜಿಲ್ಲಾಡಳಿತ ಅದನ್ನು ತೆರವುಗೊಳಿಸಿತ್ತು. ಇದನ್ನು ಬಿಜೆಪಿ ವಿವಾದವನ್ನಾಗಿ ಮಾಡಿತ್ತು. ಜೊತೆಗೆ ಘಟನೆಯನ್ನು ಕೋಮು ವಿಭಜನಾ ರಾಜಕಾಣಕ್ಕೆ ಬಳಸಲು ತಯಾರಿ ನಡೆಸುತ್ತಿದೆ. ಅದರ ಭಾಗವಾಗಿ ಹಲವಾರು ಕಡೆ ಬಿಜೆಪಿ ಪ್ರತಿಭಟನೆ ನಡೆಸಿದೆ. ಸಿಟಿ ರವಿ

ಇದನ್ನೂ ಓದಿ: ಕೆರೆಗೋಡು ಧ್ವಜ ವಿವಾದ ; ಮೈಸೂರು ಬ್ಯಾಂಕ್ ವೃತ್ತದಲ್ಲಿ ಬಿಜೆಪಿ ಪ್ರತಿಭಟನೆ, ಹಲವರು ವಶಕ್ಕೆ

ಜಿಲ್ಲಾಡಳಿತದ ನಡೆಯ ವಿರುದ್ಧ ಜೆಡಿಎಸ್, ಬಜರಂಗದಳ, ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ಸೋಮವಾರ ಕೆರಗೋಡು ಗ್ರಾಮದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪಾದಯಾತ್ರೆ ಆಯೋಜಿಸಿತ್ತು. ಈ ಸಂದರ್ಭದಲ್ಲಿ ಸುದ್ದಿ ಸಂಸ್ಥೆ ಎಎನ್‌ಐ ಜೊತೆಗೆ ಮಾತನಾಡಿದ್ದ ಬಿಜೆಪಿ ನಾಯಕ ಸಿ.ಟಿ. ರವಿ, “ಇಂದು ಕಾಂಗ್ರೆಸ್ ಹನುಮ ಧ್ವಜವನ್ನು ತೆಗೆದು ತಾಲಿಬಾನ್ ಧ್ವಜ ಹಾರಿಸಲು ಬಯಸಿತ್ತು. ಆದರೆ ನಾವು ಹನುಮ ಧ್ವಜ ಹಾರಿಸುತ್ತೇವೆ. ತಾಲಿಬಾನ್ ಧ್ವಜ ಹಾರಿಸುವ ಕಾಲ ಹೋಯಿತು” ಎಂದು ಹೇಳಿದ್ದರು.

ಸಿ.ಟಿ. ರವಿ ಅವರ ಹೇಳಿಕೆ ವಿರೋಧಿಸಿರುವ ಕಾಂಗ್ರೆಸ್, “ಪವಿತ್ರವಾದ ರಾಷ್ಟ್ರಧ್ವಜವನ್ನು ತಾಲಿಬಾನ್ ಧ್ವಜಕ್ಕೆ ಹೋಲಿಸಿದೆ ದೇಶದ್ರೋಹಿ ಬಿಜೆಪಿ. ಸಿಟಿ ರವಿ ಎನ್ನುವ ಕೋಮು ಕ್ರಿಮಿ ದೇಶದ ಘನತೆಯನ್ನು ಮಣ್ಣುಪಾಲು ಮಾಡುವ ಹೇಳಿಕೆ ನೀಡಿದ್ದಾರೆ. ತ್ರಿವರ್ಣ ಧ್ವಜ ಈಗ ಬಿಜೆಪಿ ಪ್ರಕಾರ ತಾಲಿಬಾನ್ ಧ್ವಜವಾಗಿದೆಯೇ?” ಎಂದು ಪ್ರಶ್ನಿಸಿದೆ.

ಇದನ್ನೂ ಓದಿ: ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 28 ಸ್ಥಾನ ಗೆದ್ದ ತಿಂಗಳೊಳಗೆ ಕಾಂಗ್ರೆಸ್ ಸರ್ಕಾರವನ್ನು ಮನೆಗೆ ಕಳುಹಿಸುತ್ತೇವೆ – ಬೊಮ್ಮಾಯಿ

“ತ್ರಿವರ್ಣ ಧ್ವಜವನ್ನು ವಿರೋಧಿಸುವ ಆರೆಸ್ಸೆಸ್‌ನ ಸಿದ್ಧಾಂತವನ್ನು ಬಿಜೆಪಿ ಚಾಚೂ ತಪ್ಪದೆ ಪಾಲಿಸುತ್ತಿದೆ. ಬಿಜೆಪಿಗೆ ಇಂಡಿಯಾ ಮೇಲೂ ದ್ವೇಷ. ಬಿಜೆಪಿಗೆ ಭಾರತದ ಸಂವಿಧಾನದ ಮೇಲೂ ದ್ವೇಷ. ಬಿಜೆಪಿಗೆ ಭಾರತದ ತ್ರಿವರ್ಣ ಧ್ವಜದ ಮೇಲೂ ದ್ವೇಷ. ಇಂತಹ ಬಿಜೆಪಿ ದೇಶದ್ರೋಹಿಯಲ್ಲದೆ ಇನ್ನೇನು?” ಎಂದು ಕಾಂಗ್ರೆಸ್ ಕೇಳಿದೆ.

ಇದನ್ನೂ ಓದಿ: ಸೌಹಾರ್ದತೆಗಾಗಿ ಮಾನವ ಸರಪಳಿ : ರಾಜ್ಯವ್ಯಾಪಿ ಕೈ ಕೈ ಬೆಸೆದ ಶಾಂತಿಪ್ರಿಯ ಮನಸ್ಸುಗಳು

ಈ ನಡುವೆ ವಿವಾದಕ್ಕೆ ಸಂಬಂಧಿಸಿದಂತೆ ಗ್ರಾಮದಲ್ಲಿ ಉಂಟಾದ ಘಟನೆಗೆ ಜವಾಬ್ದಾರನ್ನಾಗಿಸಿ ಕೆರಗೋಡು ಗ್ರಾಮ ಪಂಚಾಯತ್‌ನ ಪಂಚಾಯತ್ ಅಭಿವೃದ್ಧಿ ಅಧಿಕಾರಿ (ಪಿಡಿಒ) ಅವರನ್ನು ಮಂಡ್ಯ ಜಿಲ್ಲಾಡಳಿತ ಅಮಾನತುಗೊಳಿಸಿದೆ. ಜನವರಿ 29ರಂದು ಹೊರಡಿಸಿದ ಆದೇಶದಲ್ಲಿ ಕರ್ತವ್ಯಲೋಪ ಆರೋಪದ ಮೇಲೆ ಜೀವನ್ ಬಿಎಂ ಅವರನ್ನು ಅಮಾನತುಗೊಳಿಸಿ ಅವರ ವಿರುದ್ಧ ಇಲಾಖಾ ವಿಚಾರಣೆ ನಡೆಸಲಾಗಿದೆ.

ಕಾನೂನು ಉಲ್ಲಂಘಿಸಿ ಸರ್ಕಾರಿ ಜಾಗದಲ್ಲಿ ಶ್ರೀ ಗೌರಿಶಂಕರ ಸೇವಾ ಟ್ರಸ್ಟ್‌ಗೆ ಧ್ವಜಸ್ತಂಭ ನಿರ್ಮಿಸಲು ಅನುಮತಿ ನೀಡಲಾಗಿದೆ ಎಂಬ ಆರೋಪ ಈ ಅಧಿಕಾರಿ ಮೇಲಿದೆ. ಸರ್ಕಾರಿ ಜಮೀನು ಗುತ್ತಿಗೆ, ಮಾರಾಟ ಅಥವಾ ವರ್ಗಾವಣೆಗೆ ಸರ್ಕಾರ, ಜಿಲ್ಲಾ ಅಥವಾ ತಾಲ್ಲೂಕು ಪಂಚಾಯಿತಿಯಿಂದ ಪೂರ್ವಾನುಮತಿ ಇಲ್ಲದೆ ಅನುಮತಿ ನೀಡುವಂತಿಲ್ಲ ಎಂದು ಮಂಡ್ಯ ಜಿಲ್ಲಾ ಪಂಚಾಯಿತಿ ನಡಾವಳಿಯಲ್ಲಿ ತಿಳಿಸಲಾಗಿದೆ.

ಉನ್ನತ ಅಧಿಕಾರಿಗಳ ಗಮನಕ್ಕೆ ತಾರದೆ ಧ್ವಜಸ್ತಂಭ ನಿರ್ಮಾಣಕ್ಕೆ ಅನುಮತಿ ನೀಡಿರುವುದು ಕರ್ತವ್ಯಲೋಪ ಎಸಗಿದಂತಾಗಿದೆ. ಇದಲ್ಲದೆ, ಟ್ರಸ್ಟ್‌ಗೆ ರಾಷ್ಟ್ರ ಅಥವಾ ರಾಜ್ಯ ಧ್ವಜಾರೋಹಣಕ್ಕೆ ಮಾತ್ರ ಅವಕಾಶವಿದ್ದರೂ, ಸರ್ಕಾರಿ ಜಾಗದಲ್ಲಿ ನಿರ್ಮಿಸಲಾದ ಕಂಬದಲ್ಲಿ ಹನುಮ ಧ್ವಜವನ್ನು ಆರೋಹಣ ಮಾಡಿದ ನಂತರ ಪಿಡಿಒ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ. ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಕಾಯ್ದೆ 1993ರ ನಿಯಮ 210ರ ಪ್ರಕಾರ ಪಿಡಿಒ ಅವರನ್ನು ಅಮಾನತುಗೊಳಿಸಲಾಗಿದೆ.

ವಿಡಿಯೊ ನೋಡಿ: ಕಾಂತರಾಜ ವರದಿ ಸ್ವೀಕರಿಸುತ್ತೇವೆ – ಸಿಎಂ ಸಿದ್ದರಾಮಯ್ಯ ವಾಗ್ದಾನ Janashakthi Media

Donate Janashakthi Media

Leave a Reply

Your email address will not be published. Required fields are marked *