ಪ್ರೊ.ಪ್ರಭಾತ್ ಪಟ್ನಾಯಕ್
ಅನು: ಕೆ.ಎಂ.ನಾಗರಾಜ್
ಜರ್ಮನಿಯ ನಾರ್ಡ್ ಸ್ಟ್ರೀಮ್ ಕೊಳವೆ ಮಾರ್ಗವನ್ನು ಸ್ಫೋಟಿಸಿದ್ದು ಅಮೆರಿಕ, ಅದರ ಸ್ಫೋಟಕ್ಕೂ ಮತ್ತು ಉಕ್ರೇನ್ ಯುದ್ಧಕ್ಕೂ ಸಂಬಂಧವಿಲ್ಲ ಎಂಬುದು ಈಗ ಬಹಿರಂಗಗೊಂಡಿದೆ. ಆದರೂ ಈ ಆರ್ಥಿಕ ವಿಧ್ವಂಸಕ ಕೃತ್ಯದ ಬಗ್ಗೆ ಒಂದು ಸಣ್ಣ ಟೀಕೆಯಾಗಲಿ ಅಥವಾ ಅಸಮ್ಮತಿಯಾಗಲಿ, ಜರ್ಮನಿಯ ಯಾವುದೇ ರಾಜಕೀಯ ಪಕ್ಷದ ನಾಯಕರಿಂದಾಗಲೀ, ಯುರೋಪಿನ ಬೇರಾವ ರಾಜಕಾರಣಿಯಿಂದಲೂ ವ್ಯಕ್ತಗೊಂಡಿಲ್ಲ ಏಕೆ? ಏಕೆಂದರೆ, ಯುರೋಪಿನ ಹೊಸ ತಲೆಮಾರಿನ ರಾಜಕಾರಣಿಗಳು ಯಾವ ರಾಷ್ಟ್ರೀಯ ಹಿತಾಸಕ್ತಿಗಳಿಗೂ ಬದ್ಧರಲ್ಲ, ಜಾಗತೀಕರಣಗೊಂಡ ಬಂಡವಾಳದ ಹಿತಾಸಕ್ತಿಗಳಿಗೆ ಮಾತ್ರ ಬದ್ಧರು. ಅದಕ್ಕೆ ಕಾರಣ ಅಮೆರಿಕಾ ಮೂಲದ ಕಾರ್ಪೊರೇಟ್ ಕಾರ್ಯನಿರ್ವಾಹಕರಾಗಿ ಕೆಲಸ ಮಾಡಿದ ಅವರ ಮನೋಭಾವ. ರಾಷ್ಟ್ರೀಯ ಹಿತಾಸಕ್ತಿ
ಯುರೋಪಿನ ದೇಶಗಳ ಅರ್ಥವ್ಯವಸ್ಥೆಯನ್ನು ಒಳಗೊಳಗೆ ದುರ್ಬಲಗೊಳಿಸುವ ಅಮೆರಿಕಾದ ಪ್ರಯತ್ನದಲ್ಲಿ ಯುರೋಪಿನ ರಾಜಕೀಯ ನಾಯಕ ಮಣಿಗಳು ಏಕೆ ಶಾಮೀಲಾಗಿದ್ದಾರೆ ಎಂಬುದು ಒಂದು ಅತ್ಯಂತ ಕುತೂಹಲಕರ ಪ್ರಶ್ನೆ. ಸಮುದ್ರ ತಳದಲ್ಲಿ ನಿರ್ಮಿಸಿದ ಕೊಳವೆ ಮಾರ್ಗದ ಮೂಲಕ ರಷ್ಯಾದ ಅನಿಲವನ್ನು ಯೂರೋಪಿಗೆ ಸಾಗಿಸುತ್ತಿದ್ದ ನಾರ್ಡ್ ಸ್ಟ್ರೀಮ್ ಕೊಕೊಳವೆ ಮಾರ್ಗವನ್ನು ಸ್ಫೋಟಿಸಿದ್ದು ಅಮೆರಿಕ ಎಂಬುದನ್ನು ಆ ದೇಶದ ಪ್ರಸಿದ್ಧ ತನಿಖಾ ಪತ್ರಕರ್ತ ಸೇಮೌರ್ ಹರ್ಷ್ ಪುರಾವೆ ಸಮೇತ ವರದಿ ಮಾಡಿದ್ದರು. ಕೊಳವೆ ಮಾರ್ಗದ ಸ್ಫೋಟಕ್ಕೂ ಮತ್ತು ಉಕ್ರೇನ್ ಯುದ್ಧಕ್ಕೂ ಸಂಬಂಧವಿಲ್ಲ ಎಂಬ ಅಂಶವನ್ನು ಅವರು ಈಗ ಬಹಿರಂಗಪಡಿಸಿದ್ದಾರೆ. ರಷ್ಯಾದ ಅಗ್ಗದ ಇಂಧನವನ್ನು ಯುರೋಪ್ ಕೊಳ್ಳುವುದರ ಬದಲು, ದುಬಾರಿ ಬೆಲೆಯ ಅಮೆರಿಕದ ಇಂಧನವನ್ನು ಅವರು ಕೊಳ್ಳುವಂತೆ ಮಾಡುವ ಸಲುವಾಗಿ ಬೈಡನ್ ಆಡಳಿತವು ಈ ವಿಧ್ವಂಸಕ ಕೃತ್ಯವನ್ನು ಎಸಗಿತ್ತು.
ಹಾಗಾಗಿ ಈ ಕೊಳವೆ ಮಾರ್ಗದ ಸ್ಪೋಟವು ಯೂರೋಪಿನ ದೇಶಗಳ ಅರ್ಥವ್ಯವಸ್ಥೆಗಳ ಮೇಲೆ, ಅದರಲ್ಲೂ ವಿಶೇಷವಾಗಿ ಜರ್ಮನಿಯ ಮೇಲೆ, ಮಾಡಿದ ದಾಳಿ ಮಾತ್ರವಲ್ಲ, ಇದು ಜರ್ಮನ್ ಸರ್ಕಾರವೇ ಪ್ರಾರಂಭಿಸಿದ್ದ ಈ ಕಾರ್ಯವನ್ನು ಬುಡಮೇಲು ಮಾಡಿದ ಕೃತ್ಯವೂ ಹೌದು. ಈ ಸ್ಪೋಟವು ಯೂರೋಪಿನ ದೇಶಗಳ ಸರಕು ಉತ್ಪಾದನಾ ವೆಚ್ಚಗಳನ್ನು ಹೆಚ್ಚಿಸುತ್ತದೆ. ಆದರೂ, ಜರ್ಮನಿಯ ವಿರುದ್ಧ ನಡೆಸಿದ ಈ ಆರ್ಥಿಕ ವಿಧ್ವಂಸಕ ಕೃತ್ಯದ ಬಗ್ಗೆ ಒಂದು ಸಣ್ಣ ಟೀಕೆಯಾಗಲಿ ಅಥವಾ ಅಸಮ್ಮತಿಯಾಗಲಿ, ಜರ್ಮನಿಯ ಯಾವುದೇ ರಾಜಕೀಯ ಪಕ್ಷದ ನಾಯಕರಿಂದ ವ್ಯಕ್ತವಾಗಲಿಲ್ಲ.
ಅದಕ್ಕಿಂತಲೂ ಮುಖ್ಯವಾದ ಒಂದು ಅಂಶವಿದೆ. ಜರ್ಮನ್ ಸರ್ಕಾರವು ಈಗ ನೀಡುತ್ತಿರುವ ಇಂಧನ ಸಬ್ಸಿಡಿಗಳು ಕೊನೆಗೊಂಡಾಗ, ಇಂಧನದ ಬೆಲೆಗಳು ಹೆಚ್ಚುತ್ತವೆ ಮತ್ತು ಜನರನ್ನು ನಿಜಕ್ಕೂ ಹಿಂಡಿ ಹಿಪ್ಪೆಮಾಡುತ್ತವೆ ಎಂಬ ನಿರೀಕ್ಷೆಯ ಮೇಲೆ ಮತ್ತು ಒಟ್ಟಾರೆಯಾಗಿ ಇಂಧನದ ಪರಿಸ್ಥಿತಿಯ ಬಗ್ಗೆ ಉಂಟಾಗಬಹುದಾದ ಅನಿಶ್ಚಿತತೆಯ ಸಂದರ್ಭದಲ್ಲಿ ಉತ್ಪಾದನಾ ಚಟುವಟಿಕೆಗಳು ಜರ್ಮನಿಯಿಂದ ದೂರದ ಅಮೆರಿಕಾಗೆ ಸ್ಥಳಾಂತರಗೊಳ್ಳುವ ಪ್ರಕ್ರಿಯೆ ಆರಂಭವಾಗಿದೆ. ಆದರೂ, ಜರ್ಮನಿಯ ಅರ್ಥವ್ಯವಸ್ಥೆಯ ಮೇಲೆ ನಡೆಯುತ್ತಿರುವ ಈ ನಾಚಿಕೆಗೇಡಿನ ದಾಳಿಯ ಬಗ್ಗೆ ಜರ್ಮನಿಯ ಯಾವ ರಾಜಕೀಯ
ಪಕ್ಷದ ನಾಯಕರಿಂದಲೂ ಒಂದು ಅಪಸ್ವರ ಹೊರಡಲಿಲ್ಲ. ಏಕೆ? ಎಂಬುದೇ ಒಂದು ಪ್ರಶ್ನೆ.
ಕಾರ್ಪೊರೇಟ್‌ಗಳ ಸಂಬಳಕ್ಕಿರುವವರು..
ಈ ಪ್ರಶ್ನೆಗೆ ಸರಿಯಾದ ಉತ್ತರಕ್ಕಾಗಿ ಇನ್ನೂ ಹೆಚ್ಚಿನ ಸಂಶೋಧನೆಯ ಅವಶ್ಯಕತೆ ಇದೆಯಾದರೂ,ಉತ್ತರದ ಒಂದು ಅಂಶವಂತೂ ಸ್ಪಷ್ಟವಾಗಿ ಗೋಚರಿಸುತ್ತದೆ. ಅದೇನೆಂದರೆ, ಯುರೋಪಿನ ಅನೇಕ ರಾಜಕಾರಣಿಗಳು ಅಮೆರಿಕಾ ಮೂಲದ ದೈತ್ಯ ಕಾರ್ಪೊರೇಟ್‌ಗಳ ಸಂಬಳಕ್ಕಿರುವವರ ಪಟ್ಟಿಯಲ್ಲಿದ್ದಾರೆ. ಅವರು ಜಾಗತೀಕರಣಗೊಂಡ ಬಂಡವಾಳದೊಂದಿಗೆ ಸಂಬಂಧ ಹೊಂದಿದ ಅಂತಾರಾಷ್ಟ್ರೀಯ ಹಣಕಾಸು ಕುಳಗಳೊಂದಿಗೆ ಕೈ ಜೋಡಿಸಿದ್ದಾರೆ. ಅವರಿಗೆ ರಾಷ್ಟ್ರೀಯ ಹಿತಾಸಕ್ತಿಗಳ ಬಗ್ಗೆ ಸ್ವಲ್ಪವೂ ಕಾಳಜಿ ಇಲ್ಲ.
ಇದನ್ನೂ ಓದಿ: ‘ಕೃಷಿಯ ಬದುಕು’ ಅಸ್ಥಿರವೂ ಅತಂತ್ರವೂ ಆಗುತ್ತಿದೆ
ಮಾರ್ಕ್ಸ್ ವಾದಿ ಅರ್ಥಶಾಸ್ತ್ರಜ್ಞ ರುಡಾಲ್ಫ್ ಹಿಲ್ಫರ್ಡಿಂಗ್, ʼದಾಸ್ ಫಿನಾನ್ಝ್ ಕಪಿಟಲ್ʼ ಎಂಬ ತನ್ನ ಮಹೋನ್ನತ ಕೃತಿಯಲ್ಲಿ, ದೊಡ್ಡ ದೊಡ್ಡ ಬ್ಯಾಂಕುಗಳ ಒಡೆಯರು ಮತ್ತು ಬೃಹತ್ ಉದ್ದಿಮೆಗಳ ಒಡೆಯರುಗಳ ನಡುವಿನ ಖಾಸಾ ಸಂಬಂಧಗಳ ಬಗ್ಗೆ ಮಾತನಾಡಿದ್ದಾರೆ. ಹಣಕಾಸು ಕುಳಗಳು ಪ್ರಭುತ್ವದ ಸಿಬ್ಬಂದಿಯೊಂದಿಗೆ ಒಡನಾಟ ಹೊಂದಿದ್ದರು. ಅದರಿಂದಾಗಿ ಅದೇ ವ್ಯಕ್ತಿಗಳು ಒಂದು ಸಂಸ್ಥೆಯಿಂದ ಇನ್ನೊಂದಕ್ಕೆ ಸುಲಭವಾಗಿ ಸ್ಥಳಾಂತರ ಹೊಂದುತ್ತಿದ್ದರು. ಈ ಕಾರ್ಯವಿಧಾನವು ಪ್ರಭುತ್ವದ ನೀತಿಗಳನ್ನು ಶ್ರೀಮಂತ ಕುಳಗಳ ಹಿತಾಸಕ್ತಿಗಳನ್ನು ನೋಡಿಕೊಳ್ಳುವಂತೆ ನಿರೂಪಿಸಲಾಗಿದೆ ಎಂಬುದನ್ನು ಖಚಿತಪಡಿಸುತ್ತದೆ.
ಹಿಲ್ಫರ್ಡಿಂಗ್ ಇದೆಲ್ಲವನ್ನೂ ಹಣಕಾಸು ಬಂಡವಾಳವು ರಾಷ್ಟ್ರೀಯ ಸ್ವರೂಪ ಹೊಂದಿದ್ದ ಸಂದರ್ಭದಲ್ಲಿ ಬರೆದಿದ್ದರು. ಜಾಗತೀಕರಣದ ಯುಗದಲ್ಲಿ, ಹಣಕಾಸು ಬಂಡವಾಳವು ಜಾಗತೀಕರಣಗೊಂಡಿರುವಾಗ, ಪ್ರಭುತ್ವವು ರಾಷ್ಟ್ರ- ಪ್ರಭುತ್ವವಾಗಿಯೇ ಉಳಿದಿರುವ ಸನ್ನಿವೇಶದಲ್ಲಿ, ತನ್ನ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳುವ ಸಲುವಾಗಿ ಅಂತಾರಾಷ್ಟ್ರೀಯ ಹಣಕಾಸು ಬಂಡವಾಳವು ಪ್ರಭುತ್ವದ ಸಿಬ್ಬಂದಿಯೊಂದಿಗೆ ಒಡನಾಟ ಹೊಂದಿರುವುದು, ರಾಷ್ಟ್ರದ ಆಗು ಹೋಗುಗಳ ಬಗ್ಗೆ
ಪ್ರಭುತ್ವದ ಸಿಬ್ಬಂದಿಯು ನಿರಾಸಕ್ತಿ ಹೊಂದಿದೆ ಎಂಬುದನ್ನು ಅರ್ಥೈಸುತ್ತದೆ. ಅಂದರೆ, ಮೂಲಭೂತವಾಗಿ ರಾಷ್ಟ್ರದೊಳಗಿನ ದುಡಿಯುವ ಜನರ ಸ್ಥಿತಿ-ಗತಿಗಳ ಬಗ್ಗೆ ನಿರಾಸಕ್ತಿ ಹೊಂದಿದೆ ಎಂದರ್ಥ. ಇದನ್ನೇ ನಾವು ನಿಜಕ್ಕೂ ಕಾಣುತ್ತಿದ್ದೇವೆ.
ಯುರೋಪಿನ ಇಂದಿನ ಪ್ರಮುಖ ರಾಜಕಾರಣಿಗಳು ಮತ್ತು ಜಾಗತಿಕ ಕಾರ್ಪೊರೇಟ್‌ಗಳ ನಡುವಿನ ಖಾಸಾ ಸಂಬಂಧಗಳ ಪ್ರಕರಣಗಳು ನಿಜಕ್ಕೂ ಗಮನಾರ್ಹವಾಗಿವೆ. ಜರ್ಮನಿಯ ಕ್ರಿಶ್ಚಿಯನ್ ಡೆಮೋಕ್ರಾಟರ ನಾಯಕ ಮತ್ತು ಆ ಹುದ್ದೆಯಿಂದಾಗಿ ಜರ್ಮನಿಯ ವಿರೋಧ ಪಕ್ಷದ ನಾಯಕನೂ ಆಗಿರುವ ಫ್ರೆಡ್ರಿಕ್ ಮೆರ್ಜ್ ಅವರು ಹೊಂದಿರುವ ವ್ಯವಹಾರ-ಹಿತಾಸಕ್ತಿಗಳು ಬಹಳಷ್ಟಿವೆ. ಅವರೊಬ್ಬ ಬಿಲಿಯಾಧಿಪತಿ. ಅವರು ಅಮೇರಿಕದ ಬ್ಲ್ಯಾಕ್‌ರಾಕ್ ಎಂಬ ಹೂಡಿಕೆ ಕಂಪನಿಯೂ ಸೇರಿದಂತೆ ಹಲವಾರು ಕಂಪೆನಿಗಳ ಆಡಳಿತ ಮಂಡಳಿಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಫ್ರಾನ್ಸಿನ ಇಂದಿನ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರೋನ್ ರಾಥ್‌ಷ್ಕಿಲ್ಡ್ ಹಣಕಾಸು ಸಂಸ್ಥೆಯಲ್ಲಿ ಹೂಡಿಕೆ ಬ್ಯಾಂಕರ್ ಹುದ್ದೆಯಲ್ಲಿದ್ದರು. ಆಗ ಅವರು ಫೈಜರ್ ಕಂಪೆನಿಯ ಶಿಶು ಆಹಾರ ವಿಭಾಗವನ್ನು ನೆಸ್ಲೆ ಕಂಪೆನಿಯು ವಹಿಸಿಕೊಳ್ಳುವ ಒಪ್ಪಂದದಲ್ಲಿ ಮಧ್ಯಸ್ಥಿಕೆ ವಹಿಸಿದ್ದರು.
ಇಂಥಹ ಪ್ರಕರಣಗಳ ಪೈಕಿ ಇತ್ತೀಚಿನ ಮತ್ತು ಅತ್ಯಂತ ನಾಚಿಕೆಗೇಡಿನ ಉದಾಹರಣೆಯನ್ನು ಗ್ರೀಸ್‌ದೇಶದಲ್ಲಿ ಕಾಣಬಹುದು. ಗೋಲ್ಡ್ಮನ್ ಸ್ಯಾಕ್ಸ್ ಎಂಬ ಅಮೆರಿಕದ ಹೂಡಿಕೆ ಸಂಸ್ಥೆಯಲ್ಲಿ ಕಾರ್ಯನಿರ್ವಾಹಕ ಹುದ್ದೆಯಲ್ಲಿದ್ದ ಸ್ಟೆಫಾನೊಸ್ ಕಸ್ಸೆಲಾಕಿಸ್ ಎಂಬ ಒಬ್ಬ ಮಹಾಶಯನು ಗ್ರೀಸ್‌ದೇಶದಲ್ಲಿ ಈ ಹಿಂದೆ ಅಧಿಕಾರದಲ್ಲಿದ್ದ ಮತ್ತು ಈಗ ಅತಿದೊಡ್ಡ ವಿರೋಧ ಪಕ್ಷವಾಗಿರುವ ಎಡಪಂಥೀಯ ಪಕ್ಷವೆಂದು ಹೇಳಲಾದ ಸಿರಿಜಾದ ನಾಯಕನಾಗಿ ಆಯ್ಕೆಯಾಗಿದ್ದಾನೆ. ಈ ಕಸ್ಸೆಲಾಕಿಸ್ ಎಂಬ ವ್ಯಕ್ತಿಯು ಈ ಮೊದಲು ರಾಜಕೀಯದಲ್ಲಿ ತೊಡಗಿರಲಿಲ್ಲ. ಈತನಿಗೆ ಗ್ರೀಸ್ ದೇಶದ ಸಮಸ್ಯೆಗಳ ಅರಿವಿಲ್ಲ. ಈತ ಎಡಪಂಥೀಯರೊಂದಿಗೆ
ಸಲಿಗೆಯನ್ನೂ ಹೊಂದಿರಲಿಲ್ಲ ಮತ್ತು ಎಡ ಪಂಥದ ಬಗ್ಗೆ ಸೈದ್ಧಾಂತಿಕ ಒಲವನ್ನೂ ಹೊಂದಿರಲಿಲ್ಲ. ಈತ ತನ್ನ ಚುನಾವಣಾ ಪ್ರಚಾರದ ಸಮಯದಲ್ಲಿ ದೇಶದ ಯಾವ ಪ್ರಮುಖ ಸಮಸ್ಯೆಯನ್ನೂ ಎತ್ತಲಿಲ್ಲ. ಯಾರು ಬೇಕಾದರೂ ಸಿರಿಜಾದ ಅಲ್ಪಾವಧಿ ಸದಸ್ಯರಾಗಬಹುದು ಮತ್ತು ಆ ಮೂಲಕ ನಾಯಕತ್ವದ ಸ್ಪರ್ಧೆಯಲ್ಲಿ ಮತ ಚಲಾಯಿಸಬಹುದು ಎಂಬ ರೀತಿಯಲ್ಲಿ ಸಿರಿಜಾ ಪಕ್ಷದ ಸಂವಿಧಾನವನ್ನು ಬದಲಾಯಿಸುವ ಮೂಲಕ ಈತನ ಆಯ್ಕೆ ಸಾಧ್ಯವಾಯಿತು. ಗ್ರೀಸ್‌ನ ಮುಂದಿನ ಪ್ರಧಾನ ಮಂತ್ರಿಯಾಗಿ ಕಸ್ಸೆಲಾಕಿಸ್ ಆಯ್ಕೆಯಾಗುವ ಸಾಧ್ಯತೆಯಿದೆ. ವಾಸ್ತವವಾಗಿ, ಸಿರಿಜಾ ನಾಯಕತ್ವದ ಚುನಾವಣಾ ಪ್ರಚಾರದ ಸಮಯದಲ್ಲಿ ಇದೇ ಆತನ ಪ್ರಚಾರದ ಮುಖ್ಯ ಅಂಶವಾಗಿತ್ತು.
ಜಾಗತಿಕ ಬಂಡವಾಳದ ಹಿತಾಸಕ್ತಿಗಳಿಗೆ ಮಾತ್ರ ಬದ್ಧರು
ಅಮೆರಿಕ ಮೂಲದ ಕಾರ್ಪೊರೇಟ್‌ಗಳ ಕಾರ್ಯನಿರ್ವಾಹಕರಾಗಿ ಕೆಲಸ ಮಾಡಿದ ಯುರೋಪಿನ ಈ ಹೊಸ ತಲೆಮಾರಿನ ನಾಯಕರ ವಿಶೇಷವೆಂದರೆ ಅವರು ತಮ್ಮ ದೇಶದ ಹಿತಾಸಕ್ತಿಗಳನ್ನು ಬಲಿಕೊಟ್ಟು ಅಮೆರಿಕದ ಹಿತಾಸಕ್ತಿಗಳಿಗೆ ನೆರವಾಗುತ್ತಾರೆ ಎಂದಲ್ಲ, ಅವರು ಯಾವ ರಾಷ್ಟ್ರೀಯ ಹಿತಾಸಕ್ತಿಗಳಿಗೂ ಬದ್ಧರಲ್ಲ. ಬದಲಾಗಿ,ಅವರು ಜಾಗತೀಕರಣಗೊಂಡ ಬಂಡವಾಳದ ಹಿತಾಸಕ್ತಿಗಳಿಗೆ ನೆರವಾಗುತ್ತಾರೆ ಮತ್ತು ಬಂಡವಾಳದ ಹಿತಾಸಕ್ತಿಗಳನ್ನು ರಕ್ಷಿಸುತ್ತಾರೆ. ಕಾರ್ಪೊರೇಟ್
ಕಾರ್ಯನಿರ್ವಾಹಕರಾಗಿ ಕೆಲಸ ಮಾಡಿದ ಅವರ ಮನೋಭಾವವು ಅವರನ್ನು ಜಾಗತೀಕರಣಗೊಂಡ ಬಂಡವಾಳದ ಹಿತಾಸಕ್ತಿಗಳಿಗೆ ಬದ್ಧರನ್ನಾಗಿ ಮಾಡುತ್ತದೆ. ಹಾಗಾಗಿ, ಜಾಗತೀಕರಣಗೊಂಡ ಬಂಡವಾಳದ ರಾಜಕೀಯ ಸಮರ್ಥನೆಗೂ ಅವರು ಬದ್ಧರಾಗಿದ್ದಾರೆ. ಈ ರಾಜಕೀಯ ಸಮರ್ಥನೆಯನ್ನು ಸಾಮ್ರಾಜ್ಯಶಾಹಿ ದೇಶಗಳ ನಡುವಿನ ಐಕ್ಯತೆಯ ಮೂಲಕ ಮಾತ್ರ ಸಾಧಿಸಬಹುದು ಎಂದು ಅವರು ನಂಬುತ್ತಾರೆ. ಯುರೋಪಿನ ಹಿಂದಿನ ತಲೆಮಾರಿನ ರಾಜಕಾರಣಿಗಳಿಗೆ
ಹೋಲಿಸಿದರೆ, ಯುರೋಪಿನ ಈ ಹೊಸ ತಲೆಮಾರಿನ ನಾಯಕರ ಮನಸ್ಸಿನಲ್ಲಿ ಯೂರೋಪ್-ಅಮೆರಿಕಾ(ಟ್ರಾನ್ಸ್- ಅಟ್ಲಾಂಟಿಕ್) ಐಕ್ಯತೆಯು ಪ್ರಮುಖ ಸ್ಥಾನ ಪಡೆದಿದೆ.
ಸಾಮ್ರಾಜ್ಯಶಾಹಿ ದೇಶಗಳಲ್ಲಿ, ಫ್ಯಾಸಿಸ್ಟ್ ಸಮೂಹದ ಹೊರಗೆ, ಒಂದು ಹೊಸ ರೀತಿಯ ರಾಜಕಾರಣಿಯ ಉದಯವನ್ನು ನಾವು ನೋಡುತ್ತಿದ್ದೇವೆ. ಈ ವಿದ್ಯಮಾನವು ಯುರೋಪಿನಲ್ಲಿ ಹೆಚ್ಚು ಸ್ಪುಟವಾಗಿ ವ್ಯಕ್ತಗೊಂಡಿದೆ ಮತ್ತು ಅದರ ಆರಂಭಿಕ ಉದಾಹರಣೆ ಎಂದರೆ, ಬ್ರಿಟನ್ನಿನ ಟೋನಿ ಬ್ಲೇರ್. ಇಂಥಹ ರಾಜಕಾರಣಿಗಳು ಕಾರ್ಪೊರೇಟ್ ಜಗತ್ತಿನಿಂದ ಸೆಳೆಯಲ್ಪಡುತ್ತಾರೆ. ಈ ರಾಜಕಾರಣಿಗಳು ಕಾರ್ಪೊರೇಟ್ ಜಗತ್ತು ಮತ್ತು ರಾಜಕೀಯ ಜಗತ್ತುಗಳ ನಡುವೆ ಆಗಾಗ ಅತ್ತ ಇತ್ತ ಸಂಚಾರ ಮಾಡುತ್ತಾರೆ. ಅವರು ನಾಮಮಾತ್ರವಾಗಿ ಎಡಪಂಥೀಯ ಪಕ್ಷಗಳಿಗೆ ಅಥವಾ ನಡು-ಎಡಪಂಥದ ಪಕ್ಷಗಳಿಗೆ ಸೇರಿದವರಾಗಿದ್ದರೂ ಸಹ, ನವ-ಉದಾರವಾದದ ಬಗ್ಗೆ ಅವರಿಗಿರುವ ಬದ್ಧತೆ ಮತ್ತು ಕಾರ್ಮಿಕ ವರ್ಗದ ಬಗ್ಗೆ ಅವರು ಹೊಂದಿರುವ ಕಡು ಹಗೆತನವನ್ನು ಹೊರತುಪಡಿಸಿದರೆ ಅವರಿಗೆ ಬೇರೆ ಸಿದ್ಧಾಂತವೇ ಇಲ್ಲ. ಬ್ರಿಟನ್ನಿನಲ್ಲಿ, ಟೋನಿ ಬ್ಲೇರ್ ಲೇಬರ್ ಪ್ರಧಾನಿಯಾಗಿದ್ದರು. ಫ್ರಾನ್ಸಿನಲ್ಲಿ, ಇಮ್ಯಾನುಯೆಲ್ ಮ್ಯಾಕ್ರೋನ್ “ಸಮಾಜವಾದಿ” ಸರ್ಕಾರವೊಂದರ ಹಣಕಾಸು ಸಚಿವರಾಗಿದ್ದರು. ಗ್ರೀಸ್‌ನಲ್ಲಿ, ಸ್ಟೆಫಾನೊಸ್ ಕಸ್ಸೆಲಾಕಿಸ್ ಅವರನ್ನು “ಎಡ” ಪಕ್ಷವನ್ನು ಮುನ್ನಡೆಸಲು ಆಯ್ಕೆ ಮಾಡಲಾಗಿದೆ.
ಹಾಗಾಗಿ, ಅವರು ಮುನ್ನಡೆಸುವ ದೇಶಗಳ ಹಿತಾಸಕ್ತಿಗಳ ಬಗ್ಗೆ ಕಾಳಜಿ ಇಲ್ಲದಿರುವುದು ಈ ರಾಜಕಾರಣಿಗಳ ಸಹಜ ಲಕ್ಷಣವೇ ಹೌದು.
ಸಂಕ್ಷಿಪ್ತವಾಗಿ ಹೇಳುವುದಾದರೆ, ಕೆಲವು ವರ್ಷಗಳ ಹಿಂದೆ ಪ್ರಖ್ಯಾತರಾಗಿದ್ದ ಫ್ರಾನ್ಸಿನ ಡಿ ಗಾಲ್ ಮತ್ತು ಜರ್ಮನಿಯ ವಿಲ್ಲಿ ಬ್ರಾಂಟ್ ಇವರುಗಳ ರೀತಿಯ ಪ್ರಬುದ್ಧ ರಾಜಕಾರಣಿಗಳಿಗೆ ಹೋಲಿಸಿದರೆ, ಇಂದಿನ ಈ ರಾಜಕಾರಣಿಗಳು, ಸಂಪೂರ್ಣವಾಗಿ ಭಿನ್ನರು. ಹಿಂದಿನ ರಾಜಕಾರಣಿಗಳು ಪರಸ್ಪರ ಭಿನ್ನಾಭಿಪ್ರಾಯ ಹೊಂದಿದ್ದರೂ ಸಹ, ತಮ್ಮ ದೇಶದ ಹಿತಾಸಕ್ತಿಗಳನ್ನು ಎತ್ತಿಹಿಡಿಯುತ್ತಿದ್ದರು ಮತ್ತು ಅದಕ್ಕಾಗಿ ಅಮೆರಿಕದ ಎದುರು ನಿಲ್ಲಲೂ ಅವರು ಹಿಂಜರಿಯಲಿಲ್ಲ. ಇಂದಿನ ಕಾರ್ಪೊರೇಟ್ ಹಿನ್ನೆಲೆಯ ರಾಜಕಾರಣಿಗಳಿಗೆ ವಿರುದ್ಧವಾಗಿ,ಹಿಂದಿನ ರಾಜಕಾರಣಿಗಳು, ಅವರ ರಾಜಕೀಯ ಒಲವಿನ ಹೊರತಾಗಿಯೂ, ಜಾಗತೀಕರಣಗೊಂಡ ಹಣಕಾಸು ಬಂಡವಾಳವು ಪ್ರಾಬಲ್ಯ ಪಡೆಯುವ ಹಿಂದಿನ ಅವಧಿಗೆ ತಕ್ಕುನಾದ ಮನೋಭಾವವನ್ನು ಹೊಂದಿದ್ದರು.
ನವ-ಉದಾರವಾದಿ ಬಂಡವಾಳಶಾಹಿ ಬಿಕ್ಕಟ್ಟಿನ ಸನ್ನಿವೇಶದಲ್ಲಿ,ಕಾರ್ಪೊರೇಟ್-ತರಪೇತಿ ಹೊಂದಿದ ಈ ಹೊಸ ತಳಿಯ ರಾಜಕಾರಣಿಗಳಿಗೆ ಸಾಮ್ರಾಜ್ಯಶಾಹಿ ದೇಶಗಳ ಐಕ್ಯತೆಯೇ ಒಂದು ತುರ್ತಿನ ಅಗತ್ಯವೆಂದು ತೋರುತ್ತದೆ.ಇಂದಿನ ಜಗತ್ತಿಲ್ಲಿ ಕಂಡುಬರುತ್ತಿರುವ “ಬಹುಧ್ರುವೀಯತೆ”ಯ ಪ್ರವೃತ್ತಿಯ ಕಾರಣದಿಂದಾಗಿ ಮೆಟ್ರೋಪಾಲಿಟನ್ ಬಂಡವಾಳಶಾಹಿ ದೇಶಗಳು ಅಪಾಯಕ್ಕೊಳಗಾಗಿವೆ ಎಂದು ಈ ರಾಜಕಾರಣಿಗಳು ಭಾವಿಸುತ್ತಾರೆ.
ಅವರ ಈ ಭಾವನೆಗಳು ಬಂಡವಾಳಶಾಹಿಯು ಎದುರಿಸುತ್ತಿರುವ ಬಿಕ್ಕಟ್ಟಿನ ಈ ಸಂದರ್ಭವನ್ನೇ ಪರಿಗಣಿಸುವುದಿಲ್ಲ. ಆದರೆ, ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ತಮ್ಮ ದೇಶದ ಕಾರ್ಮಿಕ ವರ್ಗದಿಂದ ಮತ್ತು ಮೂರನೇ ಜಗತ್ತಿನಿಂದ ಉದ್ಭವಿಸಬಹುದಾದ ಸವಾಲುಗಳನ್ನು ಎದುರಿಸಲು ಸಾಮ್ರಾಜ್ಯಶಾಹಿ ದೇಶಗಳು ತಮ್ಮ ನಡುವೆ ಇರುವ ಭಿನ್ನಾಭಿಪ್ರಾಯಗಳನ್ನು ಮರೆತು ಒಂದಾಗುವುದು ಅತ್ಯಗತ್ಯವೆಂದು ಅವರು ಬಗೆಯುತ್ತಾರೆ.
ಫ್ಯಾಸಿಸಂನ ಆಧಿಪತ್ಯಕ್ಕೆ ದಾರಿ..
“ರಾಷ್ಟ್ರೀಯ ಹಿತಾಸಕ್ತಿ”ಗಳನ್ನು ಕಡೆಗಣಿಸಿ, ಸಾಮ್ರಾಜ್ಯಶಾಹಿ ದೇಶಗಳ ನಡುವೆ ಐಕ್ಯತೆ ಸಾಧಿಸುವ ಮನೋಭಾವವು ಮೆಟ್ರೋಪಾಲಿಟನ್ ಅಂದರೆ ಮುಂದುವರೆದ ಬಂಡವಾಳಶಾಹಿ ದೇಶಗಳಲ್ಲಿ ಫ್ಯಾಸಿಸಂನ ಆಧಿಪತ್ಯಕ್ಕೆ ದಾರಿ ಮಾಡಿಕೊಡುತ್ತದೆ. ಏಕೆಂದರೆ, ಫ್ಯಾಸಿಸ್ಟ್ರೂ ಸಹ “ರಾಷ್ಟ್ರೀಯ ಹಿತಾಸಕ್ತಿ”ಗಳ ಬಗ್ಗೆಯೇ ಮಾತನಾಡುತ್ತಾರೆ. ಆ ಮೂಲಕ ಅವರು ಕಾರ್ಮಿಕ ವರ್ಗವನ್ನು ತಮ್ಮೆಡೆಗೆ ಸೆಳೆಯುತ್ತಾರೆ. ಫ್ಯಾಸಿಸ್ಟ್ರು ಅಧಿಕಾರಕ್ಕೆ ಬಂದಾಗ ಅವರು ತಮ್ಮ ದೇಶದ ದೊಡ್ಡ ದೊಡ್ಡ ವ್ಯಾಪಾರಿಗಳ/ಉದ್ದಿಮೆದಾರರ ಹಿಂದೆ ನಿಲ್ಲುತ್ತಾರೆ ಮತ್ತು ಹಿಂದಿನ ಉದಾರವಾದಿ ಬಂಡವಾಳಶಾಹಿ ಸರ್ಕಾರಗಳು ರೂಪಿಸಿದ್ದ ಅದೇ ಆರ್ಥಿಕ ನೀತಿಯನ್ನು ಮತ್ತು ಅದೇ ವಿದೇಶಾಂಗ ನೀತಿಯನ್ನು ಅನುಸರಿಸುತ್ತಾರೆ ಎಂಬುದು ಬೇರೆ ವಿಷಯ.
ಈ ಪ್ರತಿಪಾದನೆಯನ್ನು ಇಟಲಿಯ ಮೆಲೋನಿ ಪ್ರಕರಣವು ದೃಢಪಡಿಸುತ್ತದೆ. ಆದರೆ, ವಿರೋಧ ಪಕ್ಷದಲ್ಲಿದ್ದಾಗ ಫ್ಯಾಸಿಸ್ಟ್ರು ರಾಷ್ಟ್ರದ ಬಗ್ಗೆ ರೋಷಾವೇಶದಿಂದ ಮಾತನಾಡುತ್ತಾರೆ ಮತ್ತು ತಾವು ಮಾತ್ರವೇ ರಾಷ್ಟ್ರದ ರಕ್ಷಕರು ಎಂದು ಬಿಂಬಿಸಿಕೊಳ್ಳುತ್ತಾರೆ. ಆರ್ಥಿಕ ಬಿಕ್ಕಟ್ಟು ಮೆಟ್ರೊಪಾಲಿಟನ್ ದೇಶಗಳನ್ನು ಆವರಿಸಿರುವ ಸನ್ನಿವೇಶದಲ್ಲಿ, ಜಾಗತೀಕರಣಗೊಂಡ ಬಂಡವಾಳವು “ಏನೇ ಆಗಲಿ, ಗೆಲ್ಲುವುದು ನಾನೇ” ಎಂಬ ತಂತ್ರವನ್ನು ಅನುಸರಿಸುತ್ತಿದೆ. ಮೆಟ್ರೊಪಾಲಿಟನ್ ದೇಶಗಳ ಜನರ ಮುಂದೆ “ಫ್ಯಾಸಿಸಂ-ವರ್ಸಸ್-ಲಿಬರಲ್ ಬೂರ್ಜ್ವಾ” ಇವುಗಳಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳುವ ಚರ್ಚೆಯನ್ನು ಏರ್ಪಡಿಸಿ, ರಾಜಕೀಯದ ದಿಕ್ಕು ತಪ್ಪಿಸುವುದು ಜಾಗತೀಕರಣಗೊಂಡ ಬಂಡವಾಳದ ಉದ್ದೇಶ. ಉದಾರವಾದಿ ಬೂರ್ಜ್ವಾ ಸರ್ಕಾರಗಳು (ಕಾರ್ಪೊರೇಟ್ ಹಿನ್ನೆಲೆಯುಳ್ಳವರೇ ಈ ಸರ್ಕಾರಗಳ ಮುಖಂಡರು), ಸಾಮ್ರಾಜ್ಯಶಾಹಿ ದೇಶಗಳ ನಡುವೆ ಐಕ್ಯತೆ ಸಾಧಿಸುವ ಮೂಲಕ ಜಾಗತೀಕರಣಗೊಂಡ ಬಂಡವಾಳದ ರಕ್ಷಣೆಗೆ ಮುಂದಾಗುತ್ತಾರೆ.
ಇದನ್ನೂ ಓದಿ:ತಾಯಂದಿರ ತಳಮಳ ಹೇಳುವ ಕತೆಯೆ ಬೇರೆ
ಲಿಬರಲ್ ಬೂರ್ಜ್ವಾಗಳನ್ನು ಜನರು ಒಂದು ವೇಳೆ ತಿರಸ್ಕರಿಸಿದರೆ, ಜನರ ಮುಂದೆ ಉಳಿಯುವ ಏಕೈಕ ಪರ್ಯಾಯವೆಂದರೆ, ರಾಷ್ಟ್ರವನ್ನು ವೈಭವೀಕರಿಸಿ ರಾಷ್ಟ್ರಭಕ್ತಿಯನ್ನು ಮೆರೆಯುವ, ಆದರೆ, ಜಾಗತೀಕರಣಗೊಂಡ ಬಂಡವಾಳದ ಆಜ್ಞೆಯನ್ನು ಪರಿಪಾಲಿಸುವ ಫ್ಯಾಸಿಸ್ಟ್ ಪರ್ಯಾಯವೇ. ಫ್ಯಾಸಿಸ್ಟ್ರು ಅಧಿಕಾರ ಹಿಡಿದಾಗ, ರಾಷ್ಟ್ರದ ಬಗ್ಗೆ ಅವರು ಹೊಂದಿರುವ ಕಳಕಳಿಯ ಅಭಿವ್ಯಕ್ತಿಯು ಜಾಗತೀಕರಣಗೊಂಡ ಬಂಡವಾಳವನ್ನು ವಿರೋಧಿಸುವ ರೂಪವನ್ನು ತಳೆಯುವುದಿಲ್ಲ. ಬದಲಿಗೆ, ವಲಸಿಗರನ್ನು ವಿರೋಧಿಸುವ ರೂಪವನ್ನು ತಳೆಯುತ್ತದೆ. ಬಂಡವಾಳಶಾಹಿ ಬಿಕ್ಕಟ್ಟಿನಿಂದಾಗಿ ಬಹುಸಂಖ್ಯಾತ ಕಾರ್ಮಿಕರು ಎದುರಿಸುತ್ತಿರುವ ಸಂಕಷ್ಟಗಳಿಗೆ ವಲಸಿಗರೇ ಕಾರಣವೆಂದು
ಫ್ಯಾಸಿಸ್ಟ್ರು ಬಿಂಬಿಸುತ್ತಾರೆ ಮತ್ತು ತಮ್ಮದೇ ವಿಶಿಷ್ಟ ಫ್ಯಾಸಿಸ್ಟ್ ಶೈಲಿಯಲ್ಲಿ ಮತ್ತು ಫ್ಯಾಸಿಸ್ಟ್ವಿಧಾನಗಳ ಮೂಲಕ ದುಡಿಯುವ ಜನರ ಆಕ್ರೋಶವನ್ನು ವಲಸಿಗರ ವಿರುದ್ಧ ತಿರುಗಿಸುತ್ತಾರೆ. ಜಾಗತೀಕರಣಗೊಂಡ ಬಂಡವಾಳದ “ಏನೇ ಆಗಲಿ, ಗೆಲ್ಲುವುದು ನಾನೇ” ಎಂಬ ಈ ತಂತ್ರವನ್ನು ಬಹಿರಂಗಪಡಿಸುವ ಮತ್ತು ಸೋಲಿಸುವ ಕೆಲಸವನ್ನು ಪ್ರಾಮಾಣಿಕ ಎಡಪಂಥವೇ ಮಾಡಬೇಕಾಗುತ್ತದೆ. ಏಕೆಂದರೆ, ಕಾರ್ಪೊರೇಟ್-ತರಪೇತಿಯ ನೇತೃತ್ವ ಅದನ್ನು ಮಾಡುವುದಿಲ್ಲ.
ವಿಡಿಯೋ ನೋಡಿ: ಇನ್ಷೆಂಟಿವ್ ಆಸೆಗೆ ಬಿದ್ದು ಬೇಕಾ ಬಿಟ್ಟಿಯಾಗಿ ಉಚಿತ ಟಿಕೆಟ್ ಹರಿದು ಬೀಸಾಕಿದ ನಿರ್ವಾಹಕ Janashakthi Media