ಸೌರಮಂಡಲದ ಉಗಮದ ಬಗ್ಗೆ ಅಧ್ಯಯನ ನಡೆಸಲು ಬಾಹ್ಯಕಾಶಕ್ಕೆ ಹಾರಿದೆ ʻಲೂಸಿʼ

ಫ್ಲೋರಿಡಾ: ಬಾಹ್ಯಾಕಾಶ ವಿಜ್ಞಾನದ ಬಗ್ಗೆ ಸಂಶೋಧನೆ ನಡೆಸಿದಾಗ ಪ್ರತಿ ಬಾರಿ ಕುತೂಹಲಕಾರಿ ಸಂಗತಿಗಳು ಅನಾವರಣಗೊಳ್ಳುತ್ತವೆ. ಅದರ ಬಗ್ಗೆ ಅರಿತಿಕೊಳ್ಳಲು ಪ್ರಯತ್ನಿಸಿದಷ್ಟು ವಿಸ್ತಾರಗೊಳ್ಳುತ್ತಲೇ ಹೋಗುತ್ತದೆ. ಪ್ರತಿಬಾರಿಯೂ ಹೊಸ ಸಂಗತಿಗಳು ತೆರೆದುಕೊಳ್ಳುತ್ತಾ ಹೋಗುತ್ತವೆ. ಈಗ ನಾಸಾ ಸಂಸ್ಥೆಯೂ ಹೊಸದೊಂದು ಯೋಜನೆಗೆ ಕೈ ಹಾಕಿದೆ.

ಸೌರಮಂಡಲದ ಉಗಮದ ಬಗ್ಗೆ ಅಧ್ಯಯನ ನಡೆಸಲು ಲೂಸಿ ಎಂಬ ಬಾಹ್ಯಾಕಾಶ್ಯ ನೌಕೆಯನ್ನು ಉಡಾಯಿಸಿದೆ. ಸೌರಮಂಡಲದ ಹೊರ ಭಾಗದಲ್ಲಿ ಈವರೆಗೂ ಯಾರು ತಲುಪದ ಕತ್ತಲೆಯಿಂದಲೇ ಕೂಡಿರುವ ಜಾಗಕ್ಕೆ ನಾಸಾ ನೌಕೆ ಕಳುಹಿಸುವ ಸಾಹಸಕ್ಕೆ ಕೈ ಹಾಕಿದೆ. ನಾಸಾ ಈ ಯೋಜನೆಗೆ ಸುಮಾರು  7,351 ಕೋಟಿ (981 ಮಿಲಿಯನ್‌ ಡಾಲರ್) ರೂಪಾಯಿಗಳನ್ನು ಖರ್ಚು ಮಾಡಿದೆ. ಗುರು ಗ್ರಹದ ಹತ್ತಿರ ಸೂರ್ಯನನ್ನು ಸುತ್ತುತ್ತಿರುವ ಕ್ಷುದ್ರಗ್ರಹಗಳು  ಬಗ್ಗೆ ಅಧ್ಯಯನ ನಡೆಸಲು ಬಾಹ್ಯಾಕಾಶ ವಿಜ್ಞಾನಿಗಳಿಗೆ ಇದು ಸಹಾಯ ಮಾಡಲಿದೆ.

ಲೂಸಿ ಬಾಹ್ಯಾಕಾಶ್ಯ ನೌಕೆಯ ವಿಶೇಷತೆ

ಈ ಬಗ್ಗೆ ತನ್ನ ಇನ್‌ಸ್ಟ್ರಾಗ್ರಾಮ್‌ನಲ್ಲಿ ಸಂದೇಶ ಹಂಚಿಕೊಂಡಿರುವ ನಾಸಾ ಸಂಸ್ಥೆಯು ಬಾಹ್ಯಾಕಾಶ ನೌಕೆಯನ್ನು ತನ್ನ ಗುರಿಯತ್ತ ಹೊತ್ತೊಯ್ಯುವ ಅಟ್ಲಾಸ್‌ 5 ರಾಕೆಟ್‌ನ ಆಕಾಶಕ್ಕೆ ಹಾರುವ ಮೊದಲು ಸಿದ್ದಗೊಂಡಿರುವ ಚಿತ್ರವನ್ನು ಹಂಚಿಕೊಂಡಿದೆ. ಈ ರಾಕೆಟ್‌ನ್ನು ನಾಸಾ ಸಂಸ್ಥೆಯು ಇಂದು ಮಧ್ಯಾಹ್ನ ಸುಮಾರು 3:00 ಕ್ಕೆ ಉಡಾವಣೆ ಮಾಡಿದ್ದೂ, ತನ್ನ ಜಾಲತಾಣದಲ್ಲಿ ಇದರ ಕ್ಷಣ ಕ್ಷಣದ ನೇರಪ್ರಸಾರ ಮಾಡಿದೆ. ಫ್ಲೋರಿಡಾದ ಬಾಹ್ಯಾಕಾಶ ಉಡಾವಣೆ ನಿಲ್ದಾಣದಿಂದ ಈ ರಾಕೆಟ್ ಉಡಾವಣೆ ಮಾಡಲಾಗಿದೆ.

‘ಲೂಸಿ’ ಹೆಸರಿನ ಹಿಂದಿನ ರಹಸ್ಯ

1974 ರಲ್ಲಿ ಮಾನವನ ಉಗಮದ ಬಗೆಗಿನ ರಹಸ್ಯಗಳನ್ನು ಭೇದಿಸಲು ಸಹಾಯ ಮಾಡಿದ, ಈಥಿಯೋಪಿಯಾದಲ್ಲಿ ಭೂಗರ್ಭದಿಂದ ಹೊರ ತೆಗೆದ 3.3 ಮಿಲಿಯನ್‌ ವರ್ಷ ಹಳೆಯ ಪಳೆಯುಳಿಕೆ ಹೆಸರನ್ನು ಈ ನೌಕೆಗೆ ಬಳಸಲಾಗಿದೆ. ಈಗ ಈ ಯೋಜನೆಯ ಮೂಲಕ ಸೌರಮಂಡಲದ ಉಗಮದ ಬಗೆಗಿನ ರಹಸ್ಯಗಳನ್ನು ಭೇದಿಸಲು ವಿಜ್ಞಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಲೂಸಿ ನೌಕೆಯೂ ಗುರು ಗ್ರಹದ ಸುತ್ತ 12 ವರ್ಷಗಳ ಕಾಲ ಪ್ರದಕ್ಷಿಣೆ ಹಾಕಲಿದ್ದು ಕನಿಷ್ಟ 6 ಕ್ಷುದ್ರ ಗ್ರಹಗಳ ಚಿತ್ರಣಗಳನ್ನು ಪಡೆದು ಅವುಗಳ ಸಂಯೋಜನೆ ಬಗ್ಗೆ ಅಧ್ಯಯನ ನಡೆಸಲಿದೆ. ಈ ಯೋಜನೆಯ ಮೂಲಕ ಸೌರಮಂಡಲದ ಬಗೆಗಿನ ನಮ್ಮ ತಿಳಿವಳಿಕೆ ಇನ್ನಷು ಹೆಚ್ಚಲಿದೆ ಎಂದು ನಾಸಾ ತಿಳಿಸಿದೆ.

12 ವರ್ಷ ಬಾಹ್ಯಾಕಾಶದಲ್ಲಿ ಇರಲಿರುವ ಲೂಸಿ

ʼನಮ್ಮ ತಂಡವು ಅತ್ಯದ್ಭುತ ನೌಕೆಯೊಂದನ್ನು ತಯಾರಿಸುವಲ್ಲಿ ಯಶಸ್ವಿಯಾಗಿದೆ’ ಎಂದು ಲೂಸಿ ಯೋಜನೆಯ ಮುಖ್ಯಸ್ಥರು ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದ್ದಾರೆ. 1991ರಲ್ಲಿ  ಗೆಲಿಲಿಯೋ ಬಾಹ್ಯಾಕಾಶ ನೌಕೆಯನ್ನು  ಮೊದಲ ಬಾರಿಗೆ ಗುರು ಗ್ರಹದ ಬಳಿ ಕಳುಹಿಸಲಾಗಿತ್ತು. ಅದಾದ ನಂತರ ಈ ಭಾಗಕ್ಕೆ ನೌಕೆಗಳನ್ನು ಕಳುಹಿಸುವ ಹಲವಾರು ಯೋಜನೆಗಳು ಕಾರ್ಯ ರೂಪಕ್ಕೆ ಬಂದಿವೆ. ಆದರೆ ಗುರು ಗ್ರಹದ ಟ್ರೋಜಾನ್ಸ್‌ ಬಳಿ ಇವರೆಗೂ ಯಾವುದೇ ನೌಕೆ ಹೋಗಿಲ್ಲ. ಈಗ ಕಳುಹಿಸುತ್ತಿರುವ ಲೂಸಿ ನೌಕೆಯು ಈ ಕಾರ್ಯವನ್ನು ಅತ್ಯಂತ ಯಶಸ್ವಿಯಾಗಿ ಮಾಡಲಿದೆ ಎಂದು ನಾಸಾ ತಿಳಿಸಿದೆ.‌ ನಾಸಾದ ಈ ಬಾಹ್ಯಾಕಾಶ ನೌಕೆ 12 ವರ್ಷಗಳ ಕಾಲ ಕಾರ್ಯ ನಿರ್ವಹಿಸಲಿದ್ದು ಸೌರಮಂಡಲದ ಉಗಮದ ಬಗೆ ರಹಸ್ಯಗಳನ್ನು ಭೇದಿಸುವಲ್ಲಿ ಯಶಸ್ವಿಯಾಗಲಿದೆಯೇ ಎಂದು ಕಾದು ನೋಡಬೇಕಿದೆ.

Donate Janashakthi Media

Leave a Reply

Your email address will not be published. Required fields are marked *