ಒಂದು ಸೆಮಿನಾರಿನ ಅನುಭವ ಕಥನ

– ಮೂಡ್ನಾಕೂಡು ಚಿನ್ನಸ್ವಾಮಿ

ಇವರ ಜಾತಿಯಲ್ಲಿ ಈಗಲೂ ಇವರೊಬ್ಬರೇ ಪದವೀಧರ ಎಂದು ಹೇಳಿಕೊಂಡರು. ಮಳೆಗಾಲದಲ್ಲಿ ತಲೆಯಮೇಲೆ ಹೊತ್ತ ಮಲದ ಬುಟ್ಟಿಯಿಂದ ಮಲ ಮುಖದ ಮೇಲೆ ಹರಿಯುತ್ತಿತ್ತು ಎಂದು ಹೇಳುವಾಗ ಕರುಳು ಕಿವುಚಿದಂತಾಗುತ್ತಿತ್ತು. ಅನುಭವ

ಕಳೆದ ವಾರ ನವೆಂಬರ್, 23-24 ರಂದು ಪಾಂಡಿಚೇರಿಯ ಫ್ರೆಂಚ್ ಇನ್ಸ್ಟಿಟ್ಯುಟ್ ನಡೆಸಿಕೊಟ್ಟ ಒಂದು ಸೆಮಿನಾರ್‌ನಲ್ಲಿ ಭಾಗವಹಿಸುವ ಅವಕಾಶ ಸಿಕ್ಕಿತ್ತು. ಇಷ್ಟು ವರ್ಷಗಳು ನಾನು ಭಾಗವಹಿಸಿದ ಸೆಮಿನಾರ್‌ಗಳಲ್ಲಿ ಅದು ವಿಶಿಷ್ಟವಾಗಿ ಕಂಡದ್ದರಿಂದ ಕೆಲವು ಪ್ರಸಂಗಗಳನ್ನು ಗೆಳೆಯರೊಂದಿಗೆ ಹಂಚಿಕೊಳ್ಳಬೇಕೆನಿಸಿದೆ. ವಿಷಯ ‘ದಲಿತ ಸಾಹಿತ್ಯ: ನನ್ನ ಅನುಭವ’ ಎಂದಿತ್ತಾದರೂ ಆಹ್ವಾನಿತರು ಕೇವಲ ಸಾಹಿತಿಗಳಾಗಿರದೆ ದಲಿತ ಹಿನ್ನೆಲೆಯ ಕಲಾವಿದರು, ಗಾಯಕರು, ಫೋಟೋಗ್ರಾಫರ್, ಪತ್ರಕರ್ತರು, ಪ್ರಕಾಶಕರು, ಮಲ ಹೊರುವ ಜಾತಿಯವರು, ಸಾಮಾಜಿಕ ಕಾರ್ಯಕರ್ತರು, ಎಲ್ಲರೂ ಇದ್ದರು. ಎಲ್ಲರೂ ಅವರವರ ಅನುಭವಗಳನ್ನು ಹೇಳಿಕೊಂಡರು. ನನಗಂತೂ ಅದೊಂದು ರೋಚಕ ಅನುಭವ ನೀಡಿತು. ದಲಿತ ಸಾಹಿತ್ಯ ಅನ್ನುವುದು ಆತ್ಮಕತೆಗಳಲ್ಲಿ ಹರಳುಗಟ್ಟಿದೆ ಅನ್ನಿಸಿಬಿಟ್ಟಿತು. ಅಂತಹ ಕೆಲವು ದಾರುಣ ಕಥೆಗಳ ಸ್ಯಾಂಪಲ್ಸ್ ಇಲ್ಲಿವೆ ನೋಡಿ.

1.ಜೂಲಿ: ತಮಿಳುನಾಡಿನಲ್ಲಿ ಒಂದು ಜಾತಿ ಇದೆ. ಅದು ಪುಲಯರ್ ಜಾತಿಗೆ ಮಡಿವಾಳಿಕೆ ಮಾಡಿಕೊಂಡಿರುವ ಜಾತಿ. ಇದು ನನ್ನ ಗಮನಕ್ಕೆ ಬಂದಿರಲಿಲ್ಲ, ಸಖೇದಾಶ್ಚರ್ಯವಾಯಿತು. ಜೂಲಿ ತಂದೆ ತಾಯಿಗೆ ಒಬ್ಬಳೇ ಮಗಳು. ಜೂಲಿಯ ಊರಿನಲ್ಲಿ 100 ಪುಲಯರ್ ಮನೆಗಳಿವೆ. ಅದೊಂದೇ ಕುಟುಂಬ ಎಲ್ಲಾ ಪುಲಯರ್ ಮನೆಗಳಿಂದ ಬಟ್ಟೆಗಳನ್ನು (ಮುಟ್ಟಿನ ಬಟ್ಟೆಯೂ ಸೇರಿದಂತೆ) ಸಂಗ್ರಹಿಸಿ ಒಗೆದು ಮಡಿ ಮಾಡಿ ಕೊಡಬೇಕು. ಇವರಿಗೆ ವಿಧಿಸಿರುವ ಕಟ್ಟಳೆ ಏನೆಂದರೆ ಇವರು ಅಡಿಗೆ ಮಾಡುವ ಹಾಗಿಲ್ಲ, ಪುಲಯರ್ ಮನೆಗಳಲ್ಲಿ ಬೇಡಿಯೇ ತಿನ್ನಬೇಕು! ಜೂಲಿ ಒಂದು ಘಟನೆ ಹೇಳುವಾಗ ಎಲ್ಲರ ಕಣ್ಣಲ್ಲಿ ನೀರಣಿಸುತ್ತಿತ್ತು. ಒಮ್ಮೆ ಒಂದು ಮನೆಯಲ್ಲಿ ಊಟದ ಬುತ್ತಿಯನ್ನು ಕೊಟ್ಟರು. ಅದರ ಜೊತೆಗೆ ಕೊಳೆಬಟ್ಟೆಯನ್ನು ತೆಗೆದುಕೊಂಡು ಹೋಗು ಎಂದರು. ಜೂಲಿ ಆಮೇಲೆ ಬರುತ್ತೇನೆ ಎಂದಳು. ಅವರು ಕೇಳಲಿಲ್ಲ. ಹಾಗಾದರೆ ಬುತ್ತಿ ಇಲ್ಲೇ ಇಡು, ಆಮೇಲೆ ಬಾ! ಎಂದರು. ಹಸಿದಿದ್ದ ಜೂಲಿ ತಲೆಯ ಮೇಲೆ ಕೊಳೆಬಟ್ಟೆಯ ಗಂಟನ್ನು ಹೊತ್ತು ಕಂಕುಳಲ್ಲಿ ಬುತ್ತಿ ಹಿಡಿದುಕೊಂಡು ಹೊರಟಳು. ದಾರಿಯುದ್ದಕ್ಕೂ ಬಟ್ಟೆಯ ಗಂಟಿನಿಂದ ಮುಟ್ಟಿನ ವಾಸನೆ ಹೊಡೆಯುತ್ತಿತ್ತು. ಕಣ್ಣೀರಿಡುತ್ತಾ ಮನೆ ತಲುಪಿದಳು. ನನಗೆ ಇದು ನಮ್ಮಲ್ಲಿರುವ ಮಾದಿಗರು ಮತ್ತು ದಕ್ಕಲಿಗರ ಜಾತಿ ಸಂಬಂಧವನ್ನು ನೆನಪಿಸುತ್ತಿತ್ತು. ಜಾತಿಯ ಒಳಸುಳಿಗಳು ಎಲ್ಲೆಲ್ಲಿ ಹೇಗೆ ಹಬ್ಬಿವೆ ಎಂಬುದು ಇನ್ನೂ ನಿಗೂಢವೆ! ಪ್ರತಿಭಾವಂತೆ ಜೂಲಿ ಶಾಲೆ ಕಲಿಯುತ್ತಾಳೆ. ಆಟದಲ್ಲಿ ಮುಂದಿರುತ್ತಾಳೆ. ಒಂದು ದೊಡ್ಡ ಮೊತ್ತದ ಬಹುಮಾನ ಬಂದಾಗ ಅದನ್ನು ಜಾಣತನದಿಂದ ಉಪಯೋಗಿಸಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳುತ್ತಾಳೆ. ಈಗ ಒಂದು ಸಂಸ್ಥೆ ನಡೆಸುತ್ತಿದ್ದಾಳೆ, ತನ್ನ ಆತ್ಮಕತೆ ಪ್ರಕಟಿಸಿದ್ದಾಳೆ!

2.ನಟರಾಜನ್ ಭಾರತಿದಾಸ್: ಭಾರತಿದಾಸ್ ಹೆಸರನ್ನು ಅಭಿಮಾನದಿಂದ ಸೇರಿಸಿಕೊಂಡಿದ್ದಾರೆ. ಇವರು ಕ್ಷೌರಿಕರು. ಅಲ್ಲಿ ಎಸ್ಸಿಗಳ ಪಟ್ಟಿಯಲ್ಲಿದ್ದಾರೆ. ಗಂಡಸರು ಕ್ಷೌರ ಮಾಡುವುದು. ಹೆಂಗಸರು ಹೆರಿಗೆ ಮಾಡುವುದು ಇವರ ಜಾತಿವೃತ್ತಿ. ಚೆಟ್ಟಿಯಾರ್, ನಾಯರ್‌fಗಳೆಲ್ಲರೂ ಕರೆಯುತ್ತಾರೆ. ನಟರಾಜನ್ ಪ್ರಶ್ನೆ ಏನೆಂದರೆ; ಸತ್ತ ಹೆಣ ಕ್ಲೀನ್ ಮಾಡಲು ನಮ್ಮನ್ನು ಕರೆಯುತ್ತಾರೆ. ಹನ್ನೊಂದನೆಯ ದಿನ ಮಂಡೆಯ ಜೊತೆಗೆ ದೇಹದ ಎಲ್ಲಾ ಭಾಗದಲ್ಲೂ ಬೆಳೆಯುವ ಕೂದಲನ್ನು ಬೋಳಿಸುವುದಕ್ಕೆ ನಾನೆ ಬೇಕು. ಪುರೋಹಿತ ಬಂದು ಒಂದೆರಡು ಮಂತ್ರ ಉದುರಿಸಿ ಹೊರಡುತ್ತಾನೆ. ಅದು ಹೇಗೆ ನಾನು ಕೀಳು ಅವನು ಮೇಲು? ಸ್ವಾರಸ್ಯಕರವಾಗಿದೆಯಲ್ಲವೆ?

3.ಸಿವ ಸಿನ್ನಪೊಡಿ: ಇವರು ಶ್ರೀಲಂಕಾದ ಪಂಚಮರ್. online ನಲ್ಲಿ ಮಾತನಾಡಿದರು. ಪಂಚಮರ್ ಎಂದರೆ ದಲಿತರು. ತಮಿಳು ಈಲಂ ವಿಸರ್ಜನೆಯಾದಮೇಲೆ ಜಾತಿ ಅಲ್ಲಿ ಗಟ್ಟಿಗೊಳ್ಳುತ್ತಿದೆಯಂತೆ. ಶೋಷಣೆಯಿಂದ ತಪ್ಪಿಸಿಕೊಳ್ಳಲು ಅವರು ಮಗನನ್ನು ಚೆನ್ನಾಗಿ ಓದಿಸಿ ವಿದೇಶಕ್ಕೆ ಕಳುಹಿಸಿದರು. ಮಗ ಫ್ರ್ಯಾನ್ಸ್‌ನಲ್ಲಿ ಸಾಫ್ಟ್‍ವೇರ್ ಇಂಜಿನಿಯರ್. ಒಮ್ಮೆ ಶ್ರೀಲಂಕಾ ಮೂಲದ ಸವರ್ಣೀಯ ಸ್ನೇಹಿತನೊಬ್ಬ ಮನೆಗೆ ಊಟಕ್ಕೆ ಆಹ್ವಾನಿಸುತ್ತಾನೆ. ಕುಟುಂಬ ಸಮೇತ ಇವನು ಹಾಜರಾದಾಗ ಮನೆಯಲ್ಲಿದ್ದ ಸ್ನೇಹಿತನ ತಂದೆ ಮಾಮೂಲಿಯಂತೆ ಜಾತಿ ಹುಡುಕುವ ಪ್ರಶ್ನೆಗಳನ್ನು ಎಸೆಯುತ್ತಾನೆ. ಈತ ನಾವಿದರ್ ಎಂಬುದು ತಿಳಿಯುತ್ತದೆ. ಆಗ ನೀನು ಯಾಕೆ ಕ್ಷೌರಿಕ ವೃತ್ತಿಯನ್ನು ಮುಂದುವರೆಸಲಿಲ್ಲ ಎಂದು ಕೇಳುತ್ತಾನೆ! ಅಷ್ಟಕ್ಕೇ ನಿಲ್ಲದೆ ಇಂಥ ಕೆಳಜಾತಿಯವರನ್ನು ಯಾಕೆ ಮನೆಗೆ ಕರೆಯುತ್ತೀಯೆ ಎಂದು ತನ್ನ ಮಗನನ್ನು ನಿಂದಿಸುತ್ತಾನೆ. ಮರಿ ಸಿನ್ನಪೊಡಿ ಅವಮಾನವಾಯಿತೆಂದು ಪೋಲೀಸ್ ದೂರು ಕೊಡುತ್ತಾನೆ. ಅಪ್ಪ ಜೈಲು ಸೇರುತ್ತಾನೆ, ಮಗ ಕೆಲಸ ಕಳೆದುಕೊಂಡು ಉಡಾಳನಾಗಿ ಅಲೆಯುತ್ತಿದ್ದಾನೆ. ಇಂಡಿಯಾದಲ್ಲಿ ಇಂತಹ ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡರೆ ಅಸ್ಪೃಶ್ಯತೆಯನ್ನು ಕೊನೆಗೊಳಿಸಲು ಯಾಕೆ ಸಾಧ್ಯವಾಗುವುದಿಲ್ಲ?

4.ಸುನಿಲ್ ಅಭಿಮಾನ್ ಅವಚಾರ್: ಇವರು ಮಹಾರಾಷ್ಟ್ರ ಮೂಲದ ಕಲಾವಿದ. ದೆಹಲಿಯಲ್ಲಿ ವಾಸ. ತುಂಬಾ innovative ಆಗಿದ್ದಾರೆ. ನನ್ನ ಗಮನ ಸೆಳೆದದ್ದು ಇವರು ಬಿಡಿಸಿದ Anti-Caste Alphabets ಎಂಬ ಸರಣಿ ಚಿತ್ರಗಳು.A for Ambedkar, B for Buddha, C for Chokamela, E for Ekalavya, s for Savitribhai Phule ಇತ್ಯಾದಿ.

ಇದನ್ನೂ ಓದಿ: ಸರ್ಕಾರದ ಅಸಂಬದ್ಧ ಧೋರಣೆಗಳಿಂದ ಹೆಚ್ಚುತ್ತಿರುವ ನಿರುದ್ಯೋಗದ ಬಿಕ್ಕಟ್ಟು

5.ಪಾಂಡಿಯ ಕಣ್ಣನ್ ಜಾತಿ ಶ್ರೇಣಿಯ ಅತ್ಯಂತ ಕೆಳಗಿನ ಕುರುವರ್ ಜಾತಿಗೆ ಸೇರಿದವರು. ವಿರುದನಗರ್ ಇವರ ವಾಸಸ್ಥಳ. ಇವರ ಕುಟುಂಬದ ವೃತ್ತಿ ಮಲ ಹೊರುವುದು, ಚರಂಡಿ ಸ್ವಚ್ಛ ಮಾಡುವುದು, ಊರನ್ನು ಶುಚಿಯಾಗಿಡುವುದು. ಜೊತೆಗೆ ಇವರನ್ನು ಕ್ರಿಮಿನಲ್ ಟ್ರೈಬ್ ಎಂದು ಬೇರೆ ವಿಂಗಡಿಸಿದ್ದಾರೆ. ಇವರ ತಂದೆ ಮತ್ತು ತಾತ ಇಬ್ಬರೂ ನಿತ್ಯವೂ ಪೋಲೀಸ್ ಸ್ಟೇಷನ್‍ಗೆ ಹೋಗಿ ಸಹಿ ಹಾಕಬೇಕಾಗಿತ್ತಂತೆ. ಇವರ ಜಾತಿಯಲ್ಲಿ ಈಗಲೂ ಇವರೊಬ್ಬರೇ ಪದವೀಧರ ಎಂದು ಹೇಳಿಕೊಂಡರು. ಮಳೆಗಾಲದಲ್ಲಿ ತಲೆಯಮೇಲೆ ಹೊತ್ತ ಮಲದ ಬುಟ್ಟಿಯಿಂದ ಮಲ ಮುಖದ ಮೇಲೆ ಹರಿಯುತ್ತಿತ್ತು ಎಂದು ಹೇಳುವಾಗ ಕರುಳು ಕಿವುಚಿದಂತಾಗುತ್ತಿತ್ತು. ನನ್ನ ‘ಅಧೋಗತಿ’ ಕವನದಲ್ಲಿ ಅದೇ ಚಿತ್ರಣವಿದೆ. ಕುರುವರ್ ಆಡುನುಡಿಯಲ್ಲಿಯೆ ಕಾದಂಬರಿಗಳನ್ನು ಬರೆದಿದ್ದಾರೆ.

6.ಕೇರಳದ ಸಿವಲಿಂಗನ್ ಇರುಳರು ಎಂದು ಗುರುತಿಸಿಕೊಳ್ಳುತ್ತಾರೆ. ಅದೊಂದು ಬುಡಕಟ್ಟು ಜನಾಂಗ. ಕಾಡಿನಲ್ಲಿಯೆ ವಾಸ. ಇರುಳ ಎಂಬ ಭಾಷೆಯೂ ಇದೆ. ಕೊಲ್ಲಮ್ ಜಿಲ್ಲೆಗೆ ಬಂದು ಶಾಲೆಗೆ ಸೇರಿದಾಗ ಹೊಸದಾಗಿ ಮಲಯಾಳಂ ಕಲಿಯಬೇಕಾಗುತ್ತದೆ. ನಮ್ಮದು ಆದಿವಾಸಿ ಸಾಹಿತ್ಯ, ದಲಿತ ಸಾಹಿತ್ಯವಲ್ಲ ಎಂದು ಪ್ರತಿಪಾದಿಸುತ್ತಿದ್ದರು. ಈಗ ಶಿಕ್ಷಕರಾಗಿ ಕೆಲಸ ಸಿಕ್ಕಿದೆ.

7.ಪಳಿನಿಕುಮಾರ್ ಒಬ್ಬ ಛಾಯಾಗ್ರಾಹಕ. ಅದೊಂದು ಶಕ್ತ ಮಾಧ್ಯಮ. ಅವರು ಕ್ಯಾಮೆರಾವನ್ನು ದುಡಿಸಿಕೊಳ್ಳುತ್ತಿರುವ ರೀತಿಯೆ ಬೇರೆ. ಅದಕ್ಕಿರುವುದು ದಲಿತ ಕಣ್ಣು. ಮದುರೈನಿಂದ ಬಂದಿದ್ದರು. ಕಾವೇರಿಯ ಮಡಿಲಿನ ಹಸಿರು ತುಳುಕುವ ಜಿಲ್ಲೆಯಲ್ಲಿದ್ದರೂ ಕುಕ್ಕಿ ತಿನ್ನುವ ಬಡತನದಲ್ಲಿ ಬೆಳೆದರು. ಹೇಗೋ ಕೈಗೆ ಕ್ಯಾಮೆರಾ ಸಿಕ್ಕಿತು. ಎಲ್ಲಿ ದಲಿತರ ಮೇಲೆ ದೌರ್ಜನ್ಯ ನಡೆದರೂ ಇವರು ಕ್ಯಾಮೆರಾದೊಂದಿಗೆ ಅಲ್ಲಿಗೆ ದೌಡಾಯಿಸುತ್ತಾರೆ. ಮನುಷ್ಯರು ಮನುಷ್ಯರ ಮೇಲೆ ನಡೆಸುವ ಅಪರಾಧ, ಅತ್ಯಾಚಾರ, ಕೊಲೆಯಾದ ಹೆಣದ ಮುಮದೆ ಗೋಳಿಡುವ ಮುಂತಾದ ದೃಶ್ಯಗಳನ್ನು ಸೆರೆ ಹಿಡಿಯುತ್ತಾರೆ. ಮಲದ ಗುಂಡಿಯಲ್ಲಿ ಮುಳುಗುವ ಕರಾಳ ಚಿತ್ರಗಳು ಬೆಚ್ಚಿಬೀಳಿಸುವಂತಿವೆ.

ಇದನ್ನೂ ಓದಿ: ಗೋರ್ಕಲ್ಲ ಮೇಲೆ ಮಳೆ!

8.ಗಾನ ವಿಮಲ ಎಂದೇ ಖ್ಯಾತರಾಗಿರುವ ವಿಮಲ ಮಂಗಳಮುಖಿ. 13 ನೆಯ ವಯಸ್ಸಿನಲ್ಲಿ ಅವರಿಗೆ ನಾನು ಹೆಣ್ಣು ಎಂಬುದು ತಿಳಿಯಿತು. ಎಲ್ಲರಂತೆ ಇವರೂ ಕುಟುಂಬದಿಂದ ದೂರವಾಗಿ ಅನೇಕ ಕಷ್ಟ ನಷ್ಟಗಳಿಗೆ ಗುರಿಯಾದರು. ಸುಮಧುರವಾದ ಕಂಠ ಅವರಿಗೆ ವರದಾನವಾಯಿತು. ಮೊದಲಿಗೆ ಹಣಕ್ಕಾಗಿ ಶವಗಳ ಮುಂದೆ ಹಾಡಲು ಶುರುಮಾಡಿದರು. ಅಂತ್ಯಸಂಸ್ಕಾರಗಳಲ್ಲಿ ಹಾಡಲು ಬೇಡಿಕೆ ಹೆಚ್ಚಾಯಿತು, ಜೀವನ ಸಾಗುತ್ತಿತ್ತು. ಒಮ್ಮೆ ಟಿ. ಎಮ್. ಕೃಷ್ಣ ಅವರಿದ್ದ ವೇದಿಕೆಯಲ್ಲಿ ಹಾಡಬೇಕಾಗಿಬಂತು. ಅಲ್ಲಿ ಅವರ ಅದೃಷ್ಟ ಖುಲಾಯಿಸಿತು. ಇವರ ಧ್ವನಿಗೆ ಮಾರುಹೋದ ಕೃಷ್ಣ ಸ್ವತಃ 25000 ರೂ ಬಕ್ಷೀಸು ನೀಡಿದರಲ್ಲದೆ ಮುಂದೆ ಹಲವು ವೇದಿಕೆಗಳನ್ನು ಕಲ್ಪಿಸಿಕೊಟ್ಟರು. ಈಗ ‘ಕೋಕ್ ತಮಿಳ್’ ಎಂಬ ಟಿ. ವಿ. ಚಾನೆಲ್ಲಿನಲ್ಲಿ ವೃತ್ತಿ ಗಾಯಕಿ. ಒಂದು ಸಲ ಇವರಿಗನ್ನಿಸಿತಂತೆ, ಬೇರೆಯವರು ಬರೆದ ಹಾಡನ್ನು ನಾನು ಯಾಕೆ ಹಾಡಬೇಕು? ನಾನೇ ಬರೆಯುತ್ತೇನೆ ಎಂದು ಅಂಬೇಡ್ಕರ್ ಮೇಲೆ ಹಾಡು ಬರೆದು ಹಾಡಲು ಶುರುಮಾಡಿದರು. ಈಗ ಜೈ ಭೀಮ್ ಹಾಡುಗಳ ಸುರಿಮಳೆಯಾಗುತ್ತಿದೆ.

ವಿಡಿಯೋ ನೋಡಿ: ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯ (ಜಾತಿ ಗಣತಿ?) ಬಹಿರಂಗ ಚರ್ಚೆಗೆ ಬ್ರಾಹ್ಮಣ, ಲಿಂಗಾಯತ, ಒಕ್ಕಲಿಗರ ವಿರೋಧ ಯಾಕೆ?

Donate Janashakthi Media

Leave a Reply

Your email address will not be published. Required fields are marked *