ನಾನು ಬಂದಿದ್ದು ಪಕ್ಷದೊಳಗಿನ ಅಸಮಾಧಾನ ಪರಿಹಾರದ ಬಗ್ಗೆ ಅಲ್ಲ, ಕೋವಿಡ್‌ ಕಾರ್ಯನಿರ್ವಹಣೆ ಪರಿಶೀಲಿಸಲು: ಅರುಣ್ ಸಿಂಗ್

ಬೆಂಗಳೂರು: ಬಿಜೆಪಿ ಪಕ್ಷದಲ್ಲಿ ಎಲ್ಲವೂ ಸರಿ ಇದೆ. ಯಾವುದೇ ಅಸಮಾಧಾನವಿಲ್ಲ. ಗುಂಪುಗಾರಿಕೆ ಇಲ್ಲ. ಕೋವಿಡ್‌ ನಿರ್ವಹಣೆಯಲ್ಲಿ ಸರಕಾರದ ಕಾರ್ಯವೈಖರಿಯನ್ನು ಪರಿಶೀಲಿಸಲು ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್‌ ಸಿಂಗ್‌ ಹೇಳಿದ್ದಾರೆ.

ಬಿಜೆಪಿಯೊಳಗಿನ ಗುಂಪುಗಾರಿಕೆಯನ್ನು ಶಮನ ಮಾಡಲು ಮೂರು ದಿನಗಳ ಕಾಲ ರಾಜ್ಯಕ್ಕೆ ಭೇಟಿ ನೀಡಿರುವ ಅರುಣ್‌ ಸಿಂಗ್‌ ಅವರು ನಗರಕ್ಕೆ ಆಗಮಿಸುತ್ತಿದ್ದಂತೆಯೇ ಸುದ್ದಿಗಾರರೊಂದಿಗೆ ಮಾತನಾಡಿ ಮೇಲಿನ ಹೇಳಿಕೆಯನ್ನು ನೀಡಿದ್ದಾರೆ.

ಇದನ್ನು ಓದಿ: ಬಿಜೆಪಿಯೊಳಗಿನ ನಾಯಕತ್ವದ ಒಳಜಗಳ ಇನ್ನೂ ತಣ್ಣಗಾಗಿಲ್ಲ

ರಾಜ್ಯ ಸಭಾ ಸದಸ್ಯರು ಆಗಿರುವ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮತ್ತು ಕರ್ನಾಟಕ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರ ಹೇಳಿಕೆ ಮೇಲ್ನೋಟಕ್ಕೆ ನೀಡುವ ಉತ್ತರಕ್ಕೂ ಒಳಗಿನ ಕಾರ್ಯವೈಖರಿ ಬಹಳಷ್ಟು ವ್ಯತ್ಯಾಸವಿದೆ.

ಕುಮಾರಕೃಪಾ ಅತಿಥಿ ಗೃಹದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡುತ್ತಾ ಅರುಣ್‌ ಸಿಂಗ್‌ ಅವರು ʻʻನಮ್ಮ ಪಕ್ಷದ ಕಾರ್ಯಕರ್ತರು ಸತತವಾಗಿ ಕೋವಿಡ್-19 ಪರಿಹಾರ ಕಾರ್ಯಗಳನ್ನು ಮಾಡುತ್ತಿದ್ದಾರೆ. ಅದನ್ನು ಪರಿಶೀಲಿಸಲು ನಾನು ಇಲ್ಲಿಗೆ ಬಂದಿದ್ದೇನೆ. ಅಂತೆಯೇ ಏಕ-ಬಳಕೆಯ  ಪ್ಲಾಸ್ಟಿಕ್ ಮತ್ತು ಮುಂಬರುವ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಂತಹ ಇತರ ವಿಷಯಗಳ ಬಗ್ಗೆ ಚರ್ಚೆಯನ್ನು ನಡೆಸುತ್ತೇವೆʼʼ ಎಂದು ಹೇಳಿದ್ದಾರೆ.

ಆದರೆ ಹೇಳಿಕೆಗೂ ರಾಜ್ಯದ ಭೇಟಿಗೂ ಬಹಳಷ್ಟು ವ್ಯತ್ಯಾಸವಿದೆ. ಅರುಣ್‌ ಸಿಂಗ್‌ ಅವರ ಭೇಟಿ ಮೂಲಕ ಉದ್ದೇಶ ಮುಖ್ಯಸ್ಥಾನದಿಂದ ಬಿ ಎಸ್‌ ಯಡಿಯೂರಪ್ಪ ಅವರನ್ನು ಕೆಳಗಿಸಬೇಕೆಂದು ತೆರೆಮರೆಯಲ್ಲಿ ಕೆಲವರು ಗುಂಪು ಕಟ್ಟಿಕೊಂಡು ಓಡಾಡುತ್ತಿರುವವರನ್ನು ಹತೋಟಿಯಲ್ಲಿಡುವುದಾಗಿದೆ. ಆದರೆ ಅವರು “ನಾಯಕತ್ವ ಬದಲಾವಣೆ ಬಗ್ಗೆ ಪುಕಾರು ನಡೆದಿವೆ ಎಂದು ಕಾಂಗ್ರೆಸ್ ಆರೋಪ ಮಾಡುತ್ತಿದೆ. ನಮ್ಮ ಪಕ್ಷದಲ್ಲಿ ಎಲ್ಲವೂ ಸರಿಯಿದೆ, ಪಕ್ಷದಲ್ಲಿ ಯಾವುದೇ ಭಿನ್ನಾಬಿಪ್ರಾಯಗಳಿಲ್ಲ. ಕೆಲವು ಸಣ್ಣಪುಟ್ಟ ಸಮಸ್ಯೆ ನಾನು ಬಗೆಹರಿಸುತ್ತೇನೆ” ಎಂದು ತಿಳಿಸಿದರು.

ಇದನ್ನು ಓದಿ: ಮುಖ್ಯಮಂತ್ರಿ ಸ್ಥಾನ ಭದ್ರಪಡಿಸಿಕೊಂಡ ಬಿಎಸ್‌ವೈ

ಮೂಲಗಳ ಪ್ರಕಾರ ಸಿಎಂ ಬಿಎಸ್ ಯಡಿಯೂರಪ್ಪ ಮತ್ತು ಕೆಲವು ಸಚಿವರ ವಿರುದ್ಧ ದೂರು ನೀಡಲು ಶಾಸಕರು ಈಗಾಗಲೇ ಸಿದ್ಧತೆ ಮಾಡಿಕೊಂಡಿದ್ದಾರೆ. ಜೂನ್ 18ರಂದು ಅರುಣ್ ಸಿಂಗ್ ಅಧ್ಯಕ್ಷತೆಯಲ್ಲಿ ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆ ಸಹ ನಡೆಯಲಿದೆ

ಅರುಣ್‌ ಸಿಂಗ್‌ ಅವರು ಸಮಸ್ಯೆಯನ್ನು ಬಗೆಹರಿಸುವುದಕ್ಕಾಗಿ ಒಬ್ಬೊಬ್ಬರ ಜೊತೆ ಮಾತುಕತೆ ನಡೆಸುವರು. ಯಡಿಯೂರಪ್ಪ ನೇತೃತ್ವದಲ್ಲಿ ಸರ್ಕಾರ ಉತ್ತಮ ಕೆಲಸ ಮಾಡುತ್ತಿದೆ ಎಂಬ ಕೆಲ ಹೇಳಿಕೆಯೂ ಇದೆ.

ಬಿಜೆಪಿ‌ ಕಚೇರಿಯಲ್ಲಿ ಅರುಣ್ ಸಿಂಗ್ ಸಚಿವರ ಜೊತೆ ಪ್ರತ್ಯೇಕವಾಗಿ ಮಾತುಕತೆ ನಡೆಸಲಿದ್ದಾರೆ. ಸಚಿವರು ಮಾತ್ರ ಆಗಮಿಸಬೇಕು ಎಂದು ಸೂಚನೆ ನೀಡಲಾಗಿದೆ. ಆಪ್ತ ಸಹಾಯಕರು, ಗನ್‌ಮ್ಯಾನ್‌ಗಳಿಗೆ ಕಚೇರಿಗೆ ಪ್ರವೇಶವಿಲ್ಲ. ಮುಖ್ಯಮಂತ್ರಿ ಯಡಿಯೂರಪ್ಪ ಜೊತೆ ಬಿಜೆಪಿ ಕಚೇರಿಯೊಳಗೆ ಬಂದಿದ್ದ ಗನ್‌ಮ್ಯಾನ್‌ಗಳನ್ನು ಪಕ್ಷದ ನಿಯೋಜಿತ ಸ್ವಯಂ ಸೇವಕರು ವಾಪಸ್ ಕಳಿಸಿದರು. ಬಿಜೆಪಿ ಕಚೇರಿಗೆ 31 ಸಚಿವರು ಆಗಮಿಸಿದ್ದಾರೆ. ಪ್ರತಿ ಸಚಿವರ ಜೊತೆ 30 ನಿಮಿಷಗಳ ಕಾಲ ಅರುಣ್ ಸಿಂಗ್ ಮಾತುಕತೆ ನಡೆಸಲಿದ್ದಾರೆ. ಈ ಸಂದರ್ಭದಲ್ಲಿ ಯಡಿಯೂರಪ್ಪ ಮತ್ತು ಕರ್ನಾಟಕ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಉಪಸ್ಥಿತರಿರುವರು ಎಂಬ ಮಾಹಿತಿ ಲಭ್ಯವಾಗಿದೆ.

Donate Janashakthi Media

Leave a Reply

Your email address will not be published. Required fields are marked *