ನಾನೊಬ್ಬ ಲಿಂಗಾಯತ-ಆದರೆ ಹಿಂದೂ ಅಲ್ಲ: ಸಾಹಿತಿ ಕುಂ ವೀರಭದ್ರಪ್ಪ

ಬೆಂಗಳೂರು: ಹಿಂದೂ ಎಂಬ ಪದದಿಂದಲೇ ದೇಶದಲ್ಲಿ ಅಪಾಯ ಸೃಷ್ಟಿ ಆಗುತ್ತಿದೆ. ಹಿಂದೂ ಎಂಬುದು ಕೇವಲ ಪದ ಅಷ್ಟೇ. ಹಿಂದೂ ಎನ್ನುವುದು ಬಹಳ ಅಪಾಯಕಾರಿ ಶಬ್ದ. ನಾವೆಲ್ಲ ಭಾರತೀಯರು, ನಾನು ಹಿಂದೂ ಅಲ್ಲ ಅಂತ ಇವತ್ತು ಘೋಷಿಸುತ್ತಿದ್ದೇನೆ ಎಂದು ಹಿರಿಯ ಸಾಹಿತಿ ಕುಂ.ವೀರಭದ್ರಪ್ಪ ಹೇಳಿದರು.

ಜೆಪಿ ವಿಚಾರ ವೇದಿಕೆಯು ಬೆಂಗಳೂರಿನ ಗಾಂಧಿ ಭವನದಲ್ಲಿ ಸರ್ವಜನಾಂಗದ ಶಾಂತಿಯ ತೋಟ ಎಂಬ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕುಂ ವೀರಭದ್ರಪ್ಪ, ನಾನು ಹಿಂದೂ ಅಲ್ಲ. ನಾನು ಲಿಂಗಾಯತ, ಬಸವಣ್ಣನ ಅನುಯಾಯಿ. ಹಿಂದೂಗಳು ಬಹುಸಂಖ್ಯಾತರು ಎನ್ನೋದು ಸರಿಯಲ್ಲ ಎಂದರು.

ಹಿಂದೂಗಳು ಬಹುಸಂಖ್ಯಾತರು ಎನ್ನೋದು ಸರಿಯಲ್ಲ. ಅದು ಪ್ರಮುಖವಾದುದ್ದಲ್ಲ. ದೇಶದಲ್ಲಿ 20 ಕೋಟಿ ಮುಸ್ಲಿಮರು, ಸಿಖ್ಖರು, ಜೈನರು ಎಲ್ಲರೂ ಇದ್ದಾರೆ. ಅನಕ್ಷರಸ್ಥ ಗುಲಾಮರು ನಮ್ಮನ್ನು ಆಳಿದರು. ಮಹಮದ್ ಘೋರಿಯಂಥವರೆಲ್ಲ ಸೋಮನಾಥಪುರದಂಥ ದೇವಸ್ಥಾನಗಳಲ್ಲಿ ಅಡಗಿಸಿಟ್ಟಿದ್ದ ಕಪ್ಪುಹಣವನ್ನು ಲೂಟಿ ಮಾಡಿದರು ಎಂದು ಹೇಳಿದರು.

ಬಿಸ್ಮಿಲ್ಲಾಖಾನ್, ರಫೀಖ್ ಅಹಮ್ಮದ್ ಅಂತಹ ಭಾರತ ನಮಗೆ ಬೇಕು. ರಾಘವೇಂದ್ರ ಶ್ರೀಗಳ ಬೃಂದಾವನಕ್ಕೆ ಜಾಗ ಕೊಟ್ಟವರು ಮುಸ್ಲಿಮರು. ಇಂತಹ ಸಾಮರಸ್ಯದ ಬದಕು ನಮ್ಮದಾಗಬೇಕು. ಹಿಜಾಬ್ ಆಗಲಿ, ಹಲಾಲ್ ಆಗಲಿ ಸಮಸ್ಯೆ ಅಲ್ಲ ಎಂದು ಹೇಳಿದರು.

ಮುಸ್ಲಿಮರು ವ್ಯವಹರ ಮಾಡಬಾರದು ಎಂದರೆ, ಅವರು ಎಲ್ಲಿಗೆ ಹೋಗಬೇಕು? ಬೆಂಗಳೂರಲ್ಲಿ ಕಸ ಹೊಡೆಯುವವರು ಕನ್ನಡೇತರ ಬಡವರು. ಇವೆಲ್ಲ ಸರ್ವಾಧಿಕಾರಿ ಶಕ್ತಿಗಳ ಮೊದಲನೇ ಹೆಜ್ಜೆಗಳು. ಸರ್ವಾಧಿಕಾರಿ ಶಕ್ತಿಗಳನ್ನ ನಾವು ಪ್ರತಿಭಟಿಸಿ ತಡೆಯಬೇಕು. ವರ್ತಮಾನದಲ್ಲಿ ಬದುಕುತ್ತಿಲ್ಲ, ಭೂತಕಾಲಕ್ಕೆ ಹೋಗುತ್ತಿದ್ದೇವೆ ಹೋರಾಟ ಮಾಡುತ್ತಿರುವವರೆಲ್ಲ ಮೇಲ್ವರ್ಗದವರಲ್ಲ. ಹೋರಾಟ ಮಾಡುತ್ತಿರುವವರೆಲ್ಲ ಶೂದ್ರ ಯುವಕರು ಎಂದು ವಿವರಿಸಿದರು.

ಹಲಾಲ್ ಒಂದು ಸಮಸ್ಯೆಯೇ ಎಂದು ಪ್ರಶ್ನಿಸಿದ ಅವರು, ಹಿಜಾಬ್ ಒಂದು ವಸ್ತ್ರ ಅಷ್ಟೇ ಎಂದು ವಿಶ್ಲೇಷಿಸಿದರು. ಹಿಜಾಬ್ ಗಲಾಟೆ ಆದ ಕಾಲೇಜಲ್ಲಿ ಜನವರಿ ಮೊದಲ ವಾರ ನಾನು ಭಾಷಣ ಮಾಡಿದ್ದೆ. ಆಗ ಏನೂ ಗೊಂದಲ ಇರಲಿಲ್ಲ. ಆಮೇಲೆ‌‌ ಏಕಾಏಕಿ ಇಡೀ ರಾಜ್ಯ-ರಾಷ್ಟ್ರಕ್ಕೆ ಹರಡಿಬಿಟ್ಟಿತು. ಸರ್ವಾಧಿಕಾರಿ ಶಕ್ತಿಗಳ ವಿರುದ್ದ ನಾವು ಪ್ರತಿಭಟಿಸಿ ಅದನ್ನು ತಡೆಯಬೇಕು. ಶೂದ್ರ ಯುವಕರನ್ನು ವಾಪಸ್ ಕರೆತರಬೇಕು ಎಂದು ಸಲಹೆ ಮಾಡಿದರು.

ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನದಾಸ್, ಆದಿಚುಂಚನಗಿರಿ ಶಾಖಾ ಮಠದ ಶ್ರೀ ಸೌಮ್ಯನಾಥ ಸ್ವಾಮೀಜಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಧಾರ್ಮಿಕ ಮುಖಂಡರಾದ ಮುಕ್ತಿಮಹಮ್ಮದ್ ಆಲಿ ನಿಸ್ಸಾಹಿ ಜಮಾಲಿ, ಡಾ.ಸಿವಿಲ್ ವಿಕ್ಟರ್ ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡಿದ್ದರು.

Donate Janashakthi Media

One thought on “ನಾನೊಬ್ಬ ಲಿಂಗಾಯತ-ಆದರೆ ಹಿಂದೂ ಅಲ್ಲ: ಸಾಹಿತಿ ಕುಂ ವೀರಭದ್ರಪ್ಪ

Leave a Reply

Your email address will not be published. Required fields are marked *