ಅವ್ವ ನಮ್ಮ ಕೈಯ ಊಟ ತುಂಬಿದ ತಾಟು
ರಂಟೆ ಹೊಡೆದ ಸಾಲುಗಳಲ್ಲಿ ಬಿತ್ತಿದ ಬೀಜ
ಹಸಿರು ಬೆಳೆಯಾಗುವ ಮೊಳಕೆ
ಮೊಣಕಾಲ ತನಕದ ಕೆಸರಲಿ ನಿಂತು
ನೆಟ್ಟಿ ಮಾಡುವ ಕಳೆ ತೆಗೆವ
ಸಂಜೆ ಕಪ್ಪಾದರೂ ನಿಲಿಸದೆ ಗೇಯುವ
ನನ್ನವ್ವ ಅವಳು.
ನನ್ನವ್ವ ಗದ್ದೆ ಬದುಗಳಲಿ ಗೇಯುತ್ತ ಹಾಡುವಳು
ಅವಳ ಹಾಡೇ ಬೀದಿಬೀದಿ ಬೆಳಗುವ ಬೆಳಕು
ಗೇಯುವ ಅವಳ ಬೆವರು
ಚಿಮ್ಮುವ ಮರಳುಗಾಡಿನ ಚಿಲುಮೆ
ಸದಾ ಉರಿವ ಮಣ್ಣೊಲೆಯ ಬೆಂಕಿ ಅವಳು.
ಅವ್ವನ ಸೊಂಟ ಏರಿ ಕೂತ ಸವಿ ನೆನಪುಗಳು ನನಗಿಲ್ಲ
ನನಗಾಗಿ ಜೋಗುಳ ಹಾಡಿದ್ದು ಕೇಳಲಿಲ್ಲ
ಮಸಿ ಹಿಡಿದ ಒರಟು ಕೈಗಳಲಿ
ತುತ್ತುಣಿಸುತ್ತ ಕತೆ ಹೇಳಲೂ ಇಲ್ಲ
ಆಕಳಿಸುತ್ತ ಅವಳ ಮಡಿಲಲಿ
ತಲೆಯಿಟ್ಟು ಮಲಗುವ ಕಾಲ ಬರಲೇ ಇಲ್ಲ
ನೆಗ್ಗಿದ ಸಿಲವಾರು ತಾಟು ಹಿಡಿದು
ಕೂಳು ಹಾಕೆಂದು ಕಿರುಚಿದ ನನ್ನ ಕೀರಲು ದನಿ
ಇನ್ನೂ ಹಸಿಹಸಿ.
ನನ್ನವ್ವ ಒಡೆದ ತಮಟೆಯ ನಾದ
ಹೂಬಿಡಲು ಹಣ್ಣಾಗಲು ಮಣ್ಣಿಗೇ ಕಲಿಸಿದವಳು
ನನ್ನವ್ವ, ದುಃಖದ ಬಣವೆ
ಅವ್ವ ನನ್ನವ್ವ
ಗೋಡೆ ಗೂಡಲ್ಲಿ ಹಚ್ಚಿಟ್ಟ ಬುಡ್ಡಿದೀಪ ಅಲ್ಲ
ಆಕಾಶ ಕಂಬಳಿಯಲ್ಲಿ ಹಾದಿತಪ್ಪಿ ಅಲೆವ ಸೂರ್ಯ
ಭೂಮ್ತಾಯಿ ಬಿಚ್ಚಿ ಹರಡಿದ
ಸೆರಗಿನ ಬರಗಾಲ
ಅವ್ವ, ಯಾವತ್ಗೂ ಹುಣಿವಿ ಚಂದ್ರ
ಮುಗಿಯದ ಹೋರಾಟದ ಸಾಕಾರ ರೂಪ
ಒರಳಲಿ ಹಾಕಿ ಕುಟ್ಟಿದರೂ ತಲೆ ಮೇಲೆತ್ತಿ
ಒನಕೆ ಎದುರು ಸಿಡಿವ ದವಸದ ಹೊಟ್ಟು
ಕೋಳಿ ಕೂಗಿದ್ದೇ ಏರತೊಡಗುವ ಸೂರ್ಯ
ಅವ್ವನ ಕಣ್ಣ ಬೆಂಕಿ ಕಾಯಿಸಿ ಬೆಚ್ಚಗಾಗುತ್ತಾನೆ
ಬೆಳಗಾತ ಅವ್ವ ನಕ್ಷತ್ರ ಗುಡಿಸುತ್ತಾಳೆ
ಅಂಗಳಕೆ ಸಗಣಿ ನೀರು ಸಾರಿಸಿ
ನಮ್ಮನೆಚ್ಚರಿಸಿ, ತಿನಿಸಿ ಕೂಲಿಗೆ ಹೊರಡುತಾಳೆ
ಅಡವಿಯಲಿ ಹಸು ಕೊಟ್ಟಿಗೆಯ ಕರು
ಒಬ್ಬರನೊಬ್ಬರ ಕೂಗಿ ಕರೆವಂತಿಲ್ಲ,
ಸಂಜೆವರೆಗೆ ಕರೆಯುವುದೂ ಇಲ್ಲ
ಅವ್ವ
ಮತ್ತೆಮತ್ತೆ ಅಯ್ಯನ ಕುಲುಮೆಯಲ್ಲಿ ಬೇಯುವವಳು
‘ಊಟ ಹೊಟ್ಟೆ ತುಂಬ್ಲಿಲ್ಲ, ಅನ್ನದಾಗೆ ಕಲ್ಲು ಸಿಗತು
ಸಾರಿನಲ್ಲಿ ಕೂದ್ಲು ಸಿಗತು, ಹಡ್ಬೆ ಮುಂಡೆ,
ದುಡದ್ ದುಡ್ನ ಎಲ್ಲಿ ಅಡಗ್ಸಿದೆ?
ತತ್ತಾ ಇಲ್ಲಿ, ಹೆಂಡದಂಗ್ಡಿಗೆ ಕೊಡ್ಬೇಕು…
‘ಹಿಂಗೇ’
ಅವ್ವನ ಮೇಲೆ ಅಯ್ಯನ ಯಾವ್ಯಾವುದೋ ಸಿಟ್ಟು,
ಚಪ್ಪಲಿಗೆಂದು ಚರ್ಮವಾದವಳು
ಒಡೆಯರೆಂಬ ಚಾವಟಿಗೆ
ಬುಗುರಿಯಾಗಿರುವ ಕಡು ದುಃಖಿ
ಬೂಮ್ತಾಯಿಗೆ ತನ್ನೆದೆ ಹಾಲ ನೀಡಿ
ಸುಗ್ಗಿ ಕಣದಿಂದಾಚೆ ನೂಕಲ್ಪಟ್ಟ ಪರದೇಶಿ
ನನ್ನವ್ವ
ಚರಿತ್ರೆಯೆಂಬ ಬಣವೆಯ ದುಃಖಗಳೆಲ್ಲ ರಾಶಿಯಾಗಿ
ಅದುವೆ ತಾನಾಗಿ, ಬಾಗಿಲ ಚಪ್ಪಡಿ ಹಾಸಾಗಿ ಬಿದ್ದಿರುವವಳು
ಸೊಂಟದ ಸುತ್ತ ಸೆರಗು ಬಿಗಿದ
ಕೈಯಲಿ ಕುಡುಗೋಲು ಹಿಡಿದ ನನ್ನವ್ವ
ನನ್ನವ್ವ ಅಲೆದ, ನಡೆದ, ಕುಸಿದ ನೆಲಗಳಲಿ
ಒಂದು ಪ್ರಶ್ನೆ.
ನನ್ನವ್ವ ಅಲೆದ, ನಡೆದ, ಕುಸಿದ ನೆಲಗಳಲಿ
ಎಂದೂ ಕಾಲಿಡದ ಭಾಷೆಗಳೆಲ್ಲ ಸರ್ವನಾಶವಾಗಲಿ..
ಜನಶಕ್ತಿ ಮೀಡಿಯಾ ವಾರದ ಕವಿತೆ ಜೂಪಾಕ ಸುಭದ್ರ ರವರ ಕವಿತೆ (ತೆಲುಗು) “ನನ್ನವ್ವ, ದುಃಖದ ಬಣವೆ” ಇಂಗ್ಲಿಷ್ ಅನುವಾದ ಪ್ರೊ. ಕೆ. ಪುರುಷೋತ್ತಮ ಕನ್ನಡಕ್ಕೆ ಡಾ. ಎಚ್. ಎಸ್. ಅನುಪಮಾ ವಾಚನ – ಪ್ರೀತಂ ವಿಶ್ಲೇಷಣೆ – ಸುಧಾ ಆಡುಕಳ
ವಾರದ ಕವಿತೆ ವಾಚನ ಮತ್ತು ವಿಶ್ಲೆಷಣೆ ಕೇಳಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ
ವಾರದ ಕವಿತೆ ಜೂಪಾಕ ಸುಭದ್ರ ರವರ ಕವಿತೆ (ತೆಲುಗು)”ನನ್ನವ್ವ,ದುಃಖದ ಬಣವೆ” ವಾಚನ – ಪ್ರೀತಂ ವಿಶ್ಲೇಷಣೆ – ಸುಧಾ ಆಡುಕಳ