ಭಾವನ ಟಿ.
ಹೌದು ನಾ ಮೇಕಪ್ ಕಿಟ್ಟಿನ ಪ್ರೇಮಿ
ಆಗಾಗ ಬಣ್ಣ ಬಳಿದು ಸಂಭ್ರಮಿಸುವುದುಂಟು
ಆದರವ ನನ್ನೀ ಒಡಲ ಸೀಳಿ ಅಲ್ಲಿಯ ಕೆಂಬಣ್ಣದೊಂದಿಗೆ ಹೋಳಿಯಾಡಿಬಿಟ್ಟಿದ್ದ…
ನನ್ನದು ಅರೆ – ಬರೆ ಬೆಳೆದ ದೇಹ
ಆದರದೋ ನನ್ನೀ ಯೋನಿಯೊಳಗಣ ಹರಿವ ಸವಿಯಾದ ನೆತ್ತರಿನಿಂದ
ಅವನಾ ಸಂಪೂರ್ಣ ಹೊಟ್ಟೆ ತುಂಬಿಸಿಕೊಂಡಿದ್ದ
ಅದೇ ಅರೆ ಮಾನವ ಅಲ್ಲಲ್ಲ, ಬ್ರಹ್ಮ ರಕ್ಕಸ…
ಬರೀಯ ಬಾಯಲ್ಲಿ
ಪ್ರೀತಿ – ಪ್ರೇಮ ಎಂದವನವ
ಅದಕ್ಕರ್ಥ ನೀಡಿದ್ದು ನಾ…
ನಾನಲ್ಲಿಯೂ ಕಂಡದ್ದು
ಹೆಣ್ಣಾಗಿ ಮಾತ್ರ
ನಾನು ನಾನಾಗಿ, ಇಂದಿಗೂ – ಎಂದಿಗೂ
ಅವನೆದಿರು ಬದುಕಿ ಬಾಳಲಾರೆ…
ಕರಿಬಟ್ಟೆಯ ಮುಸುಕಿನೊಳಗಿನ ಬದುಕ
ಹುಡುಕಿ ಹೊರಟವಳಿಗೆ ದೊರೆತದ್ದು,
ಕಫನ್ ತೋಡಿಸಿದ ದಫನ್ ಮಾತ್ರ
ಈ ಲಾಯಕಲ್ಲದ ಸಮಾಜದೊಳಗೆ ಬದುಕಲು ನಾಲಾಯಕ್ಕಾದವಳು ನಾ
ಈ ನಡತೆ ಪದವನರಿಯದ ಜನತೆ ನೀಡಿದ ಹಣೆಪಟ್ಟಿ
‘ನಡತೆಗೆಟ್ಟವಳು’
ಆ ದೇವರೆಂಬ ದೆವ್ವ ಸಹ ರಕ್ಷಿಸಲು ಬರದೇ ಓಡಿಹೋದ..!
ಹೇಗೆ ತಾನೇ ಬಂದಿಯಾನು?
ಮಳೆ – ಗಾಳಿಗೆ ಸಿಲುಕಿ ದಾರಿಲೀ ಒದ್ದಾಡುತ್ತಾ ಬಿದ್ದವನನ್ನು
ನನ್ನೀ ಗುಡಿಸಲಿಗೆ ತಂದು ರಕ್ಷಿಸಿದವಳು ನಾನೇ ಅಲ್ಲವೇ?
ಇನ್ನೂ ಅವನವಲಂಬನೆ ಬರೀಯ ಸುಳ್ಳೇ ಸರಿ…
ಮನ ನೊಂದು ದೇಹ ಬೆಂದವಳಿಗೆಲ್ಲಿಯ ಬದುಕು?
ಹಿತವಾದ ತಂಗಾಳಿಯೂ ಸಹ ಸುಡುವ ಅಗ್ನಿಯಾದೀತು
ಈ ಕಾಮನ ಹಸಿವಿನ ಬಿಸಿಯಲ್ಲಿ ಬೂದಿಯಾಗಿ,
ಬದುಕಲ್ಲದ ಬದುಕಿನಲ್ಲಿ ಕಳೆದುಹೋಗುವುದೊಂದೆ ಬಾಕಿ…
ಹೆಣ್ಣೆಂದರೇ ಅಷ್ಟೇ
ಆ ಮಾರ್ಕೆಟ್ನಲ್ಲಿ ಸರಕಿನಂತೆ ಖರೀದಿಸಲು,
ಈ ಬಾಜಾರಿನಲ್ಲಿ ಹರಾಜ್ಗೆ ಕೂಗಿ,
ಸೇಲ್ ಮಾಡುವ ಹಳೆಯ ಗುಜರಿ ಅಂಗಡಿಯಂತೆ…!!!
ಕೊಂಡು ಬಳಸಿ ಬಿಸಾಡಲು
ಈ ಹುಚ್ಚೆದ್ದ ರಾಜಕೀಯ ನಾಯಕರುಗಳ,
ಜೇಬಿನಲ್ಲಿಯ ಹೆಚ್ಚಾದ ಹಣದಂತೆ…
ಅವಳೆಂದರೇ ಹೀಗೆಯೇ
ಮೊಲೆ ಯೋನಿಗಳಿರುವ ಮಾಂಸದ ಮುದ್ದೆಯಂತೆ
ಕುರುಡು ಜಗದಲ್ಲಿಯ ಪರಿಕರದಂತೆ
ಉಸಿರಾಡುವ ಶವದಂತೆ
ಇತರರ ದಾಹ – ಮೋಹಗಳಲ್ಲಿ ತನ್ನ ತಾನು ಕಳೆದುಕೊಳ್ಳುವವವಳು…
ಮೌಲ್ವಿ, ಪುರೋಹಿತ, ಪಾದ್ರಿ,
ಬೌದ್ಧ – ಜೈನ ಗುರುಗಳ ಯಾವ ಮಂತ್ರ – ತಂತ್ರಗಳು ಫಲಿಸಲಿಲ್ಲ…
ಕಾನೂನು – ಸಂವಿಧಾನ, ವಿಧಿ – ವಿಧಾನ
ನನ್ನ ಪಾಲಿಗೆ ನೇಣಿನ ಕುಣಿಕೆಯಾದವೇ ಹೊರತು,
ನೀರು ಸೇದುವ ಹಗ್ಗವಾಗಲಿಲ್ಲ…
ಈ ಎಲ್ಲಾ ನಿರ್ಜೀವಿಗಳಿಗೆ, ವ್ಯಭಿಚಾರಿ ಸಂಸ್ಥೆಗಳಿಗೆ
ನನ್ನದೊಂದು ಶ್ರದ್ಧಾಂಜಲಿ…
ಈ ಕೊಳಚೆ ವ್ಯವಸ್ಥೆಗೊಂದು ನನ್ನ ಶ್ರದ್ಧಾಂಜಲಿ..
ಎಚ್ಚರವಿದ್ದು ಸತ್ತಂತಿರುವ ಇಲ್ಲಿಯ ತತ್ವ – ಸಿದ್ಧಾಂತಗಳಿಗೊಂದು ಶ್ರದ್ಧಾಂಜಲಿ…
ತನ್ನ ಅಸ್ಮಿತೆಯ ಎತ್ತಿಹಿಡಿಯುವಲ್ಲಿ ಸೋಲುತ್ತಿರುವ,
ನನ್ನ ಕಳೆದುಹೋಗಿರುವ ಅಸ್ತಿತ್ವಕ್ಕೊಂದು ಶ್ರದ್ಧಾಂಜಲಿ…
ಒಂದು ಹೆಣ್ಣಿನ ಶೋಷಣೆ ವಿರುದ್ಧ ಮಾನವ ಸಂಕುಲಕ್ಕೆ ಎಚ್ಚರಿಸುವ ಸಂದೇಶವಾಗಿದೆ ಅದ್ಬುತ ಕವಿತೆ ಈಗೆ ಮುಂದುವರೆಯಲಿ ನಿಮ್ಮ ಹೋರಾಟದ ಕವಿತೆಗಳು
ಭಾವನ
Good poetess
ಅದ್ಬುತ ಕವಿತೆ ಸಾಹಿತ್ಯ ಬರವಣಿಗೆ ಈಗೆ ಮುಂದುವರಿಯಲಿ ನಿಮ್ಮ್ ಕವಿತೆಗಳು ಅಭಿನಂದನೆಗಳು ಭಾವನ