ಬೆಂಗಳೂರು: ನಾನು ರಾಜಕೀಯ ಜೀವನದಲ್ಲಿ ಸಾಕಷ್ಟು ಹಿನ್ನಡೆ ಅನುಭವಿಸಿದ್ದೇನೆ. ಆದರೂ ಪಕ್ಷಕ್ಕಾಗಿ ಸಾಕಷ್ಟು ದುಡಿದಿದ್ದೇನೆ. ಇದನ್ನು ಎಲ್ಲರೊಂದಿಗೆ ಹಂಚಿಕೊಳ್ಳಬೇಕೆಂದು ಈ ಸಭೆ ನಡೆಸುತ್ತಿರುವೆ. ಕಳೆದ 2008ರ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲುತ್ತಿರಲಿಲ್ಲ. ಆಗ ನಾಯಕರೇ ಸೋಲಿಸಿದರು. ನನ್ನ ಸೋಲಿಗೆ ನಮ್ಮ ನಾಯಕರೇ ಕಾರಣ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೆಸರಿಸದೇ ಪಕ್ಷದ ನಾಯಕರ ವಿರುದ್ಧ ಮಾಜಿ ಸಚಿವ ಎಂ.ಆರ್. ಸೀತಾರಾಂ ಪರೋಕ್ಷವಾಗಿ ಬೇಸರ ವ್ಯಕ್ತಪಡಿಸಿದರು.
2008ರ ನಂತರ, 2009ರಲ್ಲಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಕ್ಕೆ ಬಿ ಫಾರಂ ತಪ್ಪಿಸಲಾಯ್ತು. ವೀರಪ್ಪ ಮೊಯ್ಲಿ ದೆಹಲಿಯಿಂದಲೇ ಟಿಕೆಟ್ ಪಡೆದರು. 2019ರಲ್ಲಿ ಮತ್ತೆ ಚುನಾವಣೆಗೆ ಅವರೇ ನಿಂತರು. ಪಕ್ಷದಲ್ಲಿ ಚುಕ್ಕಾಣಿ ಹಿಡಿದವರಿಗಿಂತ ನಾನು ಹಿರಿಯ. ಅಂದು ಟಿಕೆಟ್ ತಪ್ಪಿಸಿದಾಗ ಸೌಜನ್ಯಕ್ಕೆ ಒಂದು ಮಾತೂ ಹೇಳಲಿಲ್ಲ… ನಾನು ಅದನ್ನು ನಿರೀಕ್ಷೆ ಮಾಡಿಯೂ ಇರಲಿಲ್ಲ. ಆದರೆ ಅವರ ವರ್ತನೆ ಎಷ್ಟು ಸರಿ ? ಈ ಸಮಯದಲ್ಲಿ ನನ್ನಂತೆಯೇ ಅನೇಕರ ಬಳಿಯೂ ಹೀಗೆ ನಡೆಸಿಕೊಂಡಿದ್ದಾರೆ. ಪಕ್ಷದ ಚುಕ್ಕಾಣಿ ಹಿಡಿದವರು ಮನುಷ್ಯತ್ವ, ಮಾನವೀಯತೆ ಇಟ್ಟು ನಡೆಯಬೇಕಾಗುತ್ತದೆ. ನಾನು ಕೈಗೊಳ್ಖುವ ತೀರ್ಮಾನಕ್ಕೆ ಬೆಂಬಲಿಗರು ಜೊತೆ ನಿಲ್ಲಲಿದ್ದಾರೆ ಎಂಬ ವಿಶ್ವಾಸವಿದೆ ಎಂದರು.
ಈ ಬಾರಿಯ ಪರಿಷತ್ ಚುನಾವಣೆಯಲ್ಲಿ 1 ಟಿಕೆಟ್ ಹಿಂದುಳಿದ ವರ್ಗಕ್ಕೆ, ಒಂದು ಟಿಕೆಟ್ ಅಲ್ಪಸಂಖ್ಯಾತ ಸಮುದಾಯಕ್ಕೆ ಕೊಡುವುದಿತ್ತು. ಪರಿಷತ್ ಚುನಾವಣೆ ಮುಗಿದು ಒಂದು ತಿಂಗಳು ಕಳೆದು ಹೋಗಿದೆ. ಒಂದು ತಿಂಗಳಾದರೂ ಸೌಜನ್ಯಕ್ಕಾದರೂ ಯಾರೂ ಮಾತಾಡಿಸಿಲ್ಲ ಎಂದರು.
ಸಭೆಯಲ್ಲಿ ಎಂ.ಆರ್. ಸೀತಾರಾಂ ಬೆಂಬಲಿಗ ನಾರಾಯಣಸ್ವಾಮಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ವಿರುದ್ಧ ಅದಕ್ಷ ಎಂದು ಆಕ್ರೋಶ ವ್ಯಕ್ತಪಡಿಸಿದರು. ಬಿಬಿಎಂಪಿ ಟಿಕೆಟ್ ಹಂಚುತ್ತಾರೆ. ಬಳಿಕ ವಿಧಾನಸಭೆ ಚುನಾವಣೆಗೆ ಟಿಕೆಟ್ ಹಂಚುತ್ತಾರೆ. ಪರೋಕ್ಷವಾಗಿ ವಸೂಲಿ ಮಾಡುತ್ತಾರೆ ಎಂದು ಆಕ್ರೋಶ ವ್ಯಕ್ತವಾಯಿತು.
ನನ್ನ ಮಗ ರಕ್ಷಾ ರಾಮಯ್ಯಗೂ ಪಕ್ಷದಿಂದ ಅನ್ಯಾಯವಾಗಿದೆ ಎಂದ ಎಂ.ಆರ್.ಸೀತಾರಾಂ, ಒಂದು ವರ್ಷದಲ್ಲಿ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನದಿಂದ ತೆಗೆದರು. ಕಾಂಗ್ರೆಸ್ ಪಕ್ಷದಿಂದ ನನಗೆ 4 ಬಾರಿ ಅನ್ಯಾಯವಾಗಿದೆ. ನನ್ನ ಆತ್ಮೀಯರು, ಹಿತೈಷಿಗಳ ಜತೆ ಸಮಾಲೋಚನೆ ಮಾಡಬೇಕು. ಮುಂದಿನ ತಿಂಗಳು ಸಮಾವೇಶ ನಡೆಸಿ ನಿರ್ಣಯ ಕೈಗೊಳ್ಳುತ್ತೇನೆ ಎಂದು ತಿಳಿಸಿದ್ದಾರೆ.
ಕಾಂಗ್ರೆಸ್ ಪಕ್ಷದಲ್ಲಿ 40 ವರ್ಷದ ರಾಜಕಾರಣ ಮಾಡಿರುವೆ. ನಾವು ಉಳಿಯಬೇಕೆಂದು ಅನೇಕರು ಹೇಳುತ್ತಾರೆ. ಈಗ ಬೇರೆ ಯೋಚನೆ ಮಾಡಬೇಡಿ ಎನ್ನುತ್ತಾರೆ. ನನ್ನನ್ನು ಸಿದ್ದರಾಮಯ್ಯ ಎರಡು ವರ್ಷ ಮಂತ್ರಿ ಮಾಡಿದ್ದರು. ನನಗೆ ಕೊಟ್ಟ ಖಾತೆಯನ್ನು ಸಮಾಧಾನಕರ ಸೇವೆಯನ್ನು ನೀಡಿದೆ. ಎಲ್ಲಿ ನಮಗೆ ಗೌರವ ಇರುತ್ತದೋ ಅಲ್ಲಿರುತ್ತೇವೆ. ಸದ್ಯಕ್ಕೆ ಪಕ್ಷದ ಬಗ್ಗೆ ನನಗೆ ಬೇಸರವಿಲ್ಲ. ಆದರೆ, ಪಕ್ಷದ ಚುಕ್ಜಾಣಿ ಹಿಡಿದ ನಾಯಕರ ಬಗ್ಗೆ ಬೇಸರವಿದೆ ಎಂದರು.