ಬೆಂಗಳೂರು: ಹಿರಿಯ ಕವಿ, ಸಾಹಿತಿ, ವಿಮರ್ಶಕ, ನಾಟಕಕಾರ, ಪ್ರೊ. ಚಂದ್ರಶೇಖರ ಪಾಟೀಲ ಅವರು ನಿಧನಕ್ಕೆ ಹಲವು ಗಣ್ಯರು-ರಾಜಕೀಯ ಮುಖಂಡರು ಸಂತಾಪವನ್ನು ಸೂಚಿಸಿದ್ದಾರೆ.
ಅನ್ಯಾಯ, ಅಸಮಾನತೆ, ಸರ್ವಾಧಿಕಾರದ ವಿರುದ್ಧ ಸಿಡಿಯುತ್ತಲೇ ಇದ್ದ ಹುಟ್ಟು ಬಂಡಾಯಗಾರ, ವೈಚಾರಿಕ ಗುರು, ನನ್ನ ದೀರ್ಘ ಕಾಲದ ಸ್ನೇಹಿತರಾಗಿದ್ದ ಪ್ರೊ. ಚಂದ್ರಶೇಖರ ಪಾಟೀಲ್ ನಿಧನದಿಂದ ದುಃಖಿತನಾಗಿದ್ದೇನೆ. ಇವರ ಕುಟುಂಬ ಹಾಗೂ ಅಭಿಮಾನಿಗಳ ಶೋಕದಲ್ಲಿ ನಾನು ಭಾಗಿಯಾಗಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ.
ಕನ್ನಡಪರ ಹೋರಾಟಗಾರ, ಕವಿ, ನಾಟಕಕಾರ, ಸಂಘಟನಕಾರ, ಪತ್ರಕರ್ತ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ವಿಶ್ರಾಂತ ಅಧ್ಯಕ್ಷರಾಗಿದ್ದ ಚಂದ್ರಶೇಖರ ಪಾಟೀಲ ಅವರ ನಿಧನ ಬಹಳ ದುಃಖ ಉಂಟು ಮಾಡಿದೆ. ಚಂಪಾ ಎಂದೇ ಸಾರಸ್ವತ ಲೋಕದಲ್ಲಿ ಹೆಸರಾಗಿದ್ದ, ಅವರು ಸಾಹಿತ್ಯ ಕೃಷಿಯ ಜತೆಗೆ ನಾಡು, ನುಡಿ, ನೆಲಕ್ಕಾಗಿ ತಮ್ಮ ಬದುಕನ್ನು ಮೀಸಲಿಟ್ಟಿದ್ದರು. ಚಂಪಾ ಅವರ ಅಗಲಿಕೆ ನಾಡಿಗೆ ದೊಡ್ಡ ನಷ್ಟ. ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಹಾಗೂ ದುಃಖವನ್ನು ಭರಿಸುವ ಶಕ್ತಿ ಅವರ ಕುಟುಂಬದ ಸದಸ್ಯರು, ಅಭಿಮಾನಿಗಳಿಗೆ ಆ ಭಗವಂತ ನೀಡಲಿ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರ್‌ಸ್ವಾಮಿ ಟ್ವೀಟ್ ಮಾಡಿದ್ದಾರೆ.
ಖ್ಯಾತ ಕವಿ, ಚಂಪಾ ಎಂದೇ ಸಾಹಿತ್ಯ ಲೋಕದಲ್ಲಿ ಚಿರಪರಿಚಿತರಾಗಿದ್ದ ಶ್ರೀ ಚಂದ್ರಶೇಖರ ಪಾಟೀಲರ ನಿಧನಕ್ಕೆ ಸಂತಾಪ ವ್ಯಕ್ತಪಡಿಸುತ್ತೇನೆ. ಸಂಘಟನಕಾರರಾಗಿ, ಹೋರಾಟಗಾರರಾಗಿ, ನಾಡಿನ ಸಾಮಾಜಿಕ, ಸಾಂಸ್ಕೃತಿಕ ಚಳುವಳಿಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುತ್ತಿದ್ದ ಚಂಪಾ ಅವರ ನಿಧನದಿಂದ ನಮ್ಮ ನಾಡು ಹಿರಿಯ ಚೇತನವೊಂದನ್ನು ಕಳೆದುಕೊಂಡಿದೆ. ಶ್ರೀಯುತರ ಆತ್ಮಕ್ಕೆ ಸದ್ಗತಿ ದೊರಕಲಿ, ಅವರ ಕುಟುಂಬ ಸದಸ್ಯರಿಗೆ, ಅಭಿಮಾನಿಗಳಿಗೆ ಈ ಅಗಲಿಕೆಯನ್ನು ಭರಿಸುವ ಶಕ್ತಿ ನೀಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದು ಆರೋಗ್ಯ ಸಚಿವ ಡಾ. ಸುಧಾಕರ್ ಕೆ. ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದಾರೆ.
ಗೃಹ ಸಚಿವ ಆರಗ ಜ್ಞಾನೇಂದ್ರ ಸಂತಾಪ ಸೂಚಿಸಿದ್ದು, ಚಂಪಾ ಎಂದೇ ಪ್ರಸಿದ್ಧರಾದ, ಚಂದ್ರಶೇಖರ್ ಪಾಟೀಲ್ ಅವರ ನಿಧನದಿಂದ ಕನ್ನಡ ಸಾರಸ್ವತ ಲೋಕ ಬಡವಾಗಿದೆ. ಕನ್ನಡ ನಾಡು-ನುಡಿಗೆ ಅವರು ಸಲ್ಲಿಸಿದ ಸೇವೆ ಅನುಪಮವಾದುದು. ಗೋಕಾಕ್ ಚಳುವಳಿ ಸೇರಿದಂತೆ ಕನ್ನಡಕ್ಕಾಗಿ ನಡೆದ ಹಲವಾರು ಹೋರಾಟಗಳನ್ನು ರೂಪಿಸಿದ್ದಲ್ಲದೆ ಅವುಗಳಲ್ಲಿ ಮುಂಚೂಣಿಯಾಗಿ ನಿಂತವರು, ಎಂದು ಸಚಿವರು, ಸ್ಮರಿಸಿದ್ದಾರೆ. ಮೃತರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬದವರಿಗೆ ನೀಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದಿದ್ದಾರೆ.
ಜಲಸಂಪನ್ಮೂಲ ಸಚಿವ ಗೋವಿಂದ್ ಕಾರಜೋಳ ಅವರು, ಚಂಪಾ ಅವರ ಅಕಾಲಿಕ ಅಗಲಿಕೆಯಿಂದ ಮನಸ್ಸಿಗೆ ತೀವ್ರ ದುಃಖವಾಗಿದೆ. ಅವರ ಅಗಲಿಕೆಯಿಂದ ಕನ್ನಡ ಸಾರಸ್ವತ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ. ಕನ್ನಡ ಸಾಹಿತ್ಯ ಕ್ಷೇತ್ರ ಬಡವಾಗಿದೆ. ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬದವರಿಗೆ ಹಾಗೂ ಅವರ ಅಭಿಮಾನಿಗಳಿಗೆ ಆ ದೇವರು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದಿದ್ದಾರೆ.