-ಶರಣಪ್ಪ ಬಾಚಲಾಪುರ
ಮನೆಯ ಹಿತ್ತಲಿನಲೊಂದು
ಅರಳಿತ್ತೊಂದು ಘಮಿಸುವ ಸುಮ
ಬೀಜ ಬಿತ್ತಿದವರು ಖುಷಿಪಟ್ಟರು
ಅರಳಿರುವ ಈ ಹೂ ದೇವರ ಮುಡಿಗೇರಲೆಂದು..!
ಮನುಷ್ಯತ್ವವಿಲ್ಲದ ಮನಸುಗಳಿಂದಾಗಿ ನಾಡು ಕಾಡಾಗಿದೆ..!
ಭಾವನೆ ಅರಣ್ಯರೋಧನೆಯ ಹಾಡಾಗಿದೆ..!
ಅರಳಿದ ಸುಮವ ಕಂಡು
ಅರಸಿ ಬಂದಿತೊಂದು ದುಂಬಿ ಮಕರಂದ ಹೀರಲು..!
ಸುಮವೂ ನಾಚಿತು
ದುಂಬಿಯ ಝೇಂಕಾರದ ನಾದಕೆ..
ದುಂಬಿಯನು ಬಾಚಿ ತಬ್ಬಿತು
ಸರ್ವಸ್ವ ಅರ್ಪಿಸಿ ಶರಣಾಯ್ತು ಅದರ ಪಾದಕೆ
ಮಧುವ ಹೀರಿದ ದುಂಬಿಗೆ ಮದವೇರಿತು
ಜಾತಿ, ಧರ್ಮದ ಎಂಬ ಉದರದ ಹಸಿವಿನಿಂದ
ಹುರಿದು ಮುಕ್ಕಿ ದಕ್ಕಿಸಿಕೊಳ್ಳುವೆ ಎಂಬ ಕಸುವಿನಿಂದ
ಮೂಸುವಾಗ ಇದ್ದ ಜಾತಿಯನು ಸೋಸಲಿಲ್ಲ
ಆಸೆ ತೀರಿದ ಬಳಿಕ
ತಿಪ್ಪೆಯಲರಳಿದ ಹೂ ಎಂದು
ದುಂಬಿ ಹೇಳಲು ಹೇಸಲಿಲ್ಲ..!
ಜಾತಿ ಭೂತದ ದುಂಬಿಯ ಸಂತತಿ
ಇಟ್ಟ ಪಾಷಾಣಕೆ ಮುದುಡಿ
ಮಸಣದ ಹೂವಾಯ್ತು ಘಮಿಸಿದ ಸುಮ
ಇದನ್ನೂ ನೋಡಿ: ಮರಕುಂಬಿ ಪ್ರಕರಣ : ಗ್ರೌಂಡ್ ರಿಪೋರ್ಟ್ – ” ಉಳುಮೆಗೆ ಭೂಮಿ ಕೇಳಿದ್ದಕ್ಕೆ ಮನೆಗೆ ಬೆಂಕಿ ಹಚ್ಚಿದರು”