ಮಾಲೂರು | ಶಾಸಕರಾಗಿ ನಂಜೇಗೌಡ ಮುಂದುವರಿಕೆ : ಮರು ಎಣಿಕೆಯಲ್ಲೂ ಮತ್ತೊಮ್ಮೆ ಜಯ

ಕೋಲಾರ : ಮಾಲೂರು ವಿಧಾನಸಭಾ  ಮರುಎಣಿಕೆ ನಡೆಸಿ ಸುಪ್ರೀಂಕೋರ್ಟ್​ಗೆ ಅಧಿಕಾರಿಗಳು ಸಲ್ಲಿಸಿದ್ದ ಮಾಹಿತಿಯೀಗ ಬಹಿರಂಗಗೊಂಡಿದ್ದು ಮರು ಎಣಿಕೆಯಲ್ಲಿ ಕಾಂಗ್ರೆಸ್​ನ ನಂಜೇಗೌಡಗೆ 50,957 ಮತಗಳು ಬಂದಿದ್ದರೆ, ಬಿಜೆಪಿ ಅಭ್ಯರ್ಥಿಯಾಗಿದ್ದ ಮಂಜುನಾಥಗೌಡಗೆ 50,707  ಮತಗಳು ಬಂದಿವೆ.

ಹೀಗಾಗಿ ನಂಜೇಗೌಡ ಅವರೇ ಮಾಲೂರು ಕ್ಷೇತ್ರದ ಶಾಸಕರಾಗಿ ಮುಂದುವರಿಯುತ್ತಾರೆ ಎಂದು ಸುಪ್ರೀಂಕೋರ್ಟ್ ತಿಳಿಸಿದೆ.

ಇದನ್ನೂ ಓದಿ : ಬೆಂಗಳೂರು | ಕರ್ನಾಟಕದ ಶಾಲಾ ಶಿಕ್ಷಣಕ್ಕೆ ಬಿಕ್ಕಟ್ಟು: ಶಿಕ್ಷಕರ ಕೊರತೆ–ವಿದ್ಯಾರ್ಥಿಗಳ ಭವಿಷ್ಯ ಅತಂತ್ರ

ಮತ ಎಣಿಕೆಯಲ್ಲಿ ಲೋಪವಾಗಿದೆ ಎಂದು ಆರೋಪಿಸಿದ್ದ ಮಂಜುನಾಥ್ ಗೌಡ ನಂಜೇಗೌಡ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಬೇಕೆಂದು ಕೋರ್ಟ್​​ ಮೆಟ್ಟಿಲೇರಿದ್ದರು. 2023ರಲ್ಲಿ ನಡೆದಿದ್ದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಮಂಜುನಾಥಗೌಡ ವಿರುದ್ಧ ಕಾಂಗ್ರೆಸ್​​ನ ಕೆ.ವೈ.ನಂಜೇಗೌಡ 248 ಮತಗಳ ಅಂತರದಲ್ಲಿ ಗೆದ್ದಿದ್ದರು. ಆ ಬಳಿಕ ಕೋರ್ಟ್​​ ಸೂಚನೆಯಂತೆ ಕೋಲಾರದ ತೋಟಗಾರಿಕೆ ವಿಶ್ವವಿದ್ಯಾಲಯದಲ್ಲಿ ನವೆಂಬರ್ 11ರಂದು ಒಟ್ಟು 18 ಸುತ್ತು ಮರುಮತ ಎಣಿಕೆ ಕಾರ್ಯ ನಡೆದಿತ್ತು. ಬಳಿಕ ಫಲಿತಾಂಶವನ್ನು ಚುನಾವಣಾ ಆಯೋಗ ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಿತ್ತು.ʼ

ಆದರೆ ಮಾಜಿ ಶಾಸಕ ಮಂಜುನಾಥಗೌಡ ಮರು ಎಣಿಕೆಯ ಬಗ್ಗೆಯೂ ಅಸಮಾಧಾನ ಹೊರಹಾಕಿದ್ದರು. ಇನ್ನೂ ಕೆಲವೊಂದು ಪ್ರಶ್ನೆಗಳಿಗೆ ನನಗೆ ಉತ್ತರ ಸಿಕ್ಕಿಲ್ಲ. ಅಧಿಕಾರಿಗಳ ಪ್ರೊಸಿಜರ್ ಲ್ಯಾಪ್ಸ್ ಇದೆ. ಸಂಪೂರ್ಣ ವಿವಿ ಪ್ಯಾಟ್ ಗಳನ್ನು ಎಣಿಸಬೇಕಿತ್ತು. ಆದರೆ ಕೇವಲ ಐದು ವಿವಿ ಪ್ಯಾಟ್ ಮಾತ್ರ ಎಣಿಕೆ ಮಾಡಲಾಗಿದೆ. ಚುನಾವಣೆ ಮರುಎಣಿಕೆ ವಿರುದ್ದ ನನ್ನ ಕಾನೂನು ಹೋರಾಟ ಮುಂದುವರೆಯಲಿದೆ. ಸುಪ್ರೀಂ ಕೋರ್ಟ್ ಅರ್ಜಿದಾರರ ಮನವಿಯನ್ನು ಪರಿಗಣಿಸಿ ಎಂದು ಹೇಳಿತ್ತು. ಆದರೆ ನನ್ನ ಕೆಲವೊಂದು ಮನವಿಗೆ ಪ್ರಾಧಾನ್ಯತೆ ಸಿಕ್ಕಿಲ್ಲ ಎಂದು ಆರೋಪಿಸಿದ್ದರು. ಇತ್ತ ನಂಜೇಗೌಡ ಮಾತ್ರ ಮರು ಎಣಿಕೆಯಲ್ಲಿಯೂ ತಾವೇ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ದರು.

ಇದನ್ನೂ ನೋಡಿ : ಬೆಂಗಳೂರು ಚಲನಚಿತ್ರೋತ್ಸವ| ಪ್ಯಾಲೆಸ್ತೀನ್‌ ಸಿನಿಮಾಗಳಿಗೆ ನಿರ್ಬಂಧ -ಸಿನಿಮಾಸಕ್ತರ ಆಕ್ರೋಶ Janashakthi Media

Donate Janashakthi Media