ಬೆಂಗಳೂರು: ಚಿಕ್ಕಬಳ್ಳಾಪುರದ ನಂದಿ ಬೆಟ್ಟ ಸಮೀಪದ ಅವಲಗುರ್ಕಿ ಗ್ರಾಮದಲ್ಲಿ ಸ್ಥಾಪಿತವಾಗುತ್ತಿರುವ ಆದಿಯೋಗಿ ಪ್ರತಿಮೆ ಸ್ಥಾಪನೆ ಕಾರ್ಯವನ್ನು ತಕ್ಷಣವೇ ನಿಲ್ಲಿಸಿ ಯಥಾಸ್ಥಿತಿ ಕಾಪಾಡುವಂತೆ ಇಶಾ ಯೋಗ ಕೇಂದ್ರಕ್ಕೆ ಕರ್ನಾಟಕ ಹೈಕೋರ್ಟ್ ತಡೆ ನೀಡಿದೆ.
ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಅಶೋಕ್ ಎಸ್. ಕಿಣಗಿ ಅವರ ನೇತೃತ್ವದ ವಿಭಾಗೀಯ ಪೀಠ ರಾಜ್ಯ ಸರ್ಕಾರ ಮತ್ತು ಇಶಾ ಫೌಂಡೇಷನ್ ಸಂಸ್ಥಾಪಕ ಜಗ್ಗಿ ವಾಸುದೇವ್ ನೇತೃತ್ವದ ಇಶಾ ಯೋಗ ಕೇಂದ್ರ ಸೇರಿದಂತೆ ಒಟ್ಟು 16 ಪ್ರತಿವಾದಿಗಳಿಗೆ ನೋಟಿಸ್ಸು ಜಾರಿಗೊಳಿಸಲಾಗಿದೆ.
ಇದನ್ನು ಓದಿ: ರಾಜ್ಯ ಬಿಜೆಪಿ ಸರ್ಕಾರದಿಂದ ಜಗ್ಗಿ ವಾಸುದೇವ್ಗೆ ಸರ್ಕಾರಿ ಜಮೀನು: ಕಾಂಗ್ರೆಸ್ ವಿರೋಧ
ರಾಜ್ಯ ಸರ್ಕಾರವು ಪ್ರತಿಮೆ ನಿರ್ಮಾಣಕ್ಕಾಗಿ 2019ರ ಮಾರ್ಚ್ 6ರಂದು ರಾಜ್ಯ ಸರ್ಕಾರವು ಇಶಾ ಯೋಗ ಕೇಂದ್ರಕ್ಕೆ ಭೂಮಿ ಮಂಜೂರು ಮಾಡಿ ಆದೇಶವನ್ನು ನೀಡಿದೆ. ಈ ಸ್ಥಳವು ಪರಿಸರ ಸೂಕ್ಷ್ಮ ವಲಯವಾಗಿದ್ದು, ಅದನ್ನು ವಾಣಿಜ್ಯ ಉದ್ದೇಶಕ್ಕೆ ಬಳಕೆ ಮಾಡುವಂತಿಲ್ಲ ಎಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಚಿಕ್ಕಬಳ್ಳಾಪುರದ ಚಂಬಳ್ಳಿಯ ಎಸ್ ಕ್ಯಾತಪ್ಪ ಮತ್ತಿತರರು ಸಲ್ಲಿಸಿದ್ದು, ಅರ್ಜಿದಾರರ ಪರ ವಕೀಲರು ವಾದ ಮಂಡಿಸಿದರು.
ಅವಲಗುರ್ಕಿಯ ಪ್ರಮುಖ ಪ್ರದೇಶ ಮತ್ತು ಹಸಿರು ವ್ಯಾಪ್ತಿ ಹೊಂದಿರುವ ಪ್ರದೇಶವಾಗಿದ್ದು, ನಿಯಮಗಳನ್ನು ಉಲ್ಲಂಘಿಸಲಾಗಿದೆ. ಇದನ್ನು ನೋಡಿಕೊಂಡು ಸ್ಥಳೀಯ ಪ್ರಾಧಿಕಾರಿಗಳು ಸುಮ್ಮನಿರುವುದನ್ನು ನೋಡಿದರೆ ಇಶಾ ಯೋಗ ಕೇಂದ್ರ ಎಷ್ಟು ಪ್ರಭಾವಿಯಾಗಿದೆ ಎಂಬುದು ತಿಳಿಯುತ್ತದೆ ಎಂದು ಅರ್ಜಿದಾರರು ಆಕ್ಷೇಪವನ್ನು ವ್ಯಕ್ತಪಡಿಸಿದ್ದಾರೆ.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ
ಕಾನೂನುಬಾಹಿರವಾಗಿ ಭೂಮೀ ನೀಡಿದ್ದು, ಅಲ್ಲದೆ, ಇದು ನಂದಿ ಬೆಟ್ಟಕ್ಕೆ ಸಮೀಪವಿದ್ದು, ಪರಿಸರದ ಮೇಲೆ ಪರಿಣಾಮ ಬೀರಬಹುದಾಗಿದೆ ಎಂದು ಅರ್ಜಿದಾರರ ವಾದ ಒಪ್ಪಬಹುದು ಎಂದು ಸರ್ಕಾರದ ಅಧಿಸೂಚನೆಯನ್ನು ಪ್ರಶ್ನಿಸಲು ಅವಕಾಶ ನೀಡಿದ ಉಚ್ಚ ನ್ಯಾಯಾಲಯ ಯಥಾಸ್ಥಿತಿ ಕಾಯ್ದುಕೊಳ್ಳಲು ಆದೇಶ ನೀಡಿದೆ.
ಅರ್ಜಿದಾರರ ಪರವಾಗಿ ವಕೀಲ ಎಂ ಶಿವಕುಮಾರ್ ಅವರು ವಾದಿಸಿದರು. ಸರ್ಕಾರದ ಪರವಾಗಿ ವಕೀಲೆ ಪ್ರತಿಮಾ ಹೊನ್ನಾಪುರ ಹಾಜರಿದ್ದರು.