ಯೋಗ ದಿನಾಚರಣೆ: ನಾನಾ ಭಂಗಿಯ ಯೋಗಸನ ಮಾಡಿದ ಪ್ರಧಾನಿ ಮೋದಿ

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರು ಅರಮನೆ ಅವರಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಸಮ್ಮುಖದಲ್ಲಿ ನಡೆದ ಅಂತರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ವಿವಿಧ ಭಂಗಿಗಳಲ್ಲಿ ಯೋಗಾಸನಗಳನ್ನು ಮಾಡಿದರು. ಅರಮನೆಗಳ ನಗರಿಯಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ಯೋಗಪಟುಗಳು ಒಂದೇ ಸೇರಿದ್ದು ಹೆಚ್ಚಿನ ಖ್ಯಾತಿಯನ್ನು ಗಳಿಸಿತು.

‘ಮಾನವೀಯತೆಗಾಗಿ ಯೋಗ’ ಘೋಷವಾಕ್ಯದಡಿ ನಡೆದ ಅಂತರರಾಷ್ಟ್ರೀಯ ಯೋಗ ದಿನಾಚರಣೆಗೆ ಪ್ರಧಾನಿ ಮೋದಿ‌ ಸಾಕ್ಷಿಯಾದರು. ಕುತ್ತಿಗೆ ಸಡಿಲಗೊಳಿಸುವ, ಕುತ್ತಿಗೆ ತಿರುಗಿಸುವ ಮತ್ತು ಇತರ ಸರಳ ಉಸಿರಾಟದ ವ್ಯಾಯಾಮಗಳೊಂದಿಗೆ ಯೋಗಾಭ್ಯಾಸ ಆರಂಭವಾಯಿತು. ನಂತರ ತಾಡಾಸನ, ವೃಕ್ಷಾಸನ, ಅರ್ಧ ಚಕ್ರಾಸನ, ವೃಕ್ಷಾಸನ ಸೇರಿದಂತೆ ಹಲವು ಯೋಗಾಸನಗಳನ್ನು ಸಾವಿರಾರು ಮಾಡಿದರು.

ಸುಮಾರು 45 ನಿಮಿಷಕ್ಕೂ ಹೆಚ್ಚು ಕಾಲ ಯೋಗಾಭ್ಯಾಸ ಮಾಡಿದರು. ನಿಂತು, ಕುಳಿತು ಮತ್ತು ಮಲಗಿ ಮಾಡುವ ಹಲವು ಆಸನಗಳನ್ನು ಹಾಗೂ ಪ್ರಾಣಾಯಾಮವನ್ನು ನಿರಾಯಾಸವಾಗಿ ಮಾಡಿದರು. ಕಾರ್ಯಕ್ರಮದ ಕೊನೆಯ ಘಟ್ಟದಲ್ಲಿ ಕಪಾಲಭಾತಿ, ಪ್ರಾಣಾಯಾಮಗಳ ಅಭ್ಯಾಸದೊಂದಿಗೆ ಕೊನೆಗೊಂಡಿತು.

‘ಯೋಗ ಈಗ ವ್ಯಕ್ತಿಗಷ್ಟೇ ಅಲ್ಲ, ಸಮಾಜಕ್ಕೆ, ಇಡೀ ವಿಶ್ವದ ಮಾನವಕುಲಕ್ಕಾಗಿ ಎಂಬಂತೆ ಇದೆ. ಈ ಬಾರಿಯ ಘೋಷವಾಕ್ಯವೂ ಮಾನವೀಯತೆಗಾಗಿ ಯೋಗ ಎಂಬುದೇ ಆಗಿದೆ.  ವಿಶ್ವದ ಎಲ್ಲ ನಾಗರಿಕರಿಗೆ ಎಲ್ಲ ಭಾರತೀಯರ ಪರವಾಗಿ ಅಭಿನಂದನೆಗಳನ್ನು ಹೇಳುವೆ. ಯೋಗ ಈಗ ಸಹಜ, ಸ್ವಾಭಾವಿಕ, ಮಾನವೀಯ ಚೈತನ್ಯದ ಸಂಕೇತವಾಗಿದೆ. ಕೊರೊನಾ ಆತಂಕದ ಎರಡು  ವರ್ಷಗಳ ಬಳಿಕ ಯೋಗದ ಪರ್ವ ಆರಂಭವಾಗಿದೆ ‘ ಎಂದು ಮೋದಿ ಹೇಳಿದರು.

ಸ್ವಾತಂತ್ರ್ಯದ‌ ಅಮೃತ ಮಹೋತ್ಸವದ ಅಂಗವಾಗಿ ದೇಶದ 75 ಚಾರಿತ್ರಿಕ ಸ್ಥಳಗಳಲ್ಲಿ ಸಾಮೂಹಿಕ ಯೋಗಾಭ್ಯಾಸ ನಡೆದಿದೆ. ಇತಿಹಾಸದಲ್ಲಿ ವಿಶೇಷ ಸ್ಥಾನವುಳ್ಳ ಮೈಸೂರು ಅರಮನೆ ಆವರಣದಲ್ಲಿ ನಡೆದಿರುವ ಅಭ್ಯಾಸವು ದೇಶದ ವೈವಿಧ್ಯತೆಯನ್ನು ಯೋಗದ ಒಂದೇ ಸೂತ್ರದಲ್ಲಿ ಕೂಡಿಸುತ್ತದೆ. ಯೋಗವನ್ನು ಅರಿಯುವುದಷ್ಟೇ ಅಲ್ಲ, ಅದನ್ನು ಜೀವಿಸಬೇಕು. ಆತ್ಮೀಯವನ್ನಾಗಿಸಿಕೊಳ್ಳಬೇಕು. ಯೋಗದಿನ ಮಾತ್ರವಲ್ಲ. ಎಲ್ಲ ದಿನವೂ ಯೋಗದ ಮೂಲಕ ಸ್ವಾಸ್ಥ್ಯ, ಸುಖ ಮತ್ತು ಶಾಂತಿಯನ್ನು ಅನುಭವಿಸಬೇಕು’ ಎಂದು‌ ಸಲಹೆ ನೀಡಿದರು.

ಬೆಳಗಿನ ಜಾವ 4 ಗಂಟೆಯಿಂದಲೇ ಯೋಗಾಭ್ಯಾಸಿಗಳು ನಗರದ ಮೂಲೆಮೂಲೆಗಳಿಂದ ಅರಮನೆಯತ್ತ ನಡೆದು‌ ಬಂದರು. ಬಾಲಕ-ಬಾಲಕಿಯರು, ಯುವಜನ,‌ ಮಧ್ಯ ವಯಸ್ಕರು,‌ ವೃದ್ಧರು ಸೇರಿದಂತೆ ವಿವಿಧ ವಯೋಮಾನದವರ ಉತ್ಸಾಹ ಎದ್ದು ಕಂಡಿತು. ಯೋಗಾಭ್ಯಾಸಿಗಳು ಸೂರ್ಯಾಭಿಮುಖವಾಗಿ ಕುಳಿತು ಕಾಯುತ್ತಿರುವಾಗ,‌ ಬೆಳಿಗ್ಗೆ 6.34 ಕ್ಕೆ ಪ್ರಧಾನಿ ನರೇಂದ್ರ ಮೋದಿ ವೇದಿಕೆಗೆ ಆಗಮಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಸರ್ಬಾನಂದ್ ಸೋನಾವಲ್, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್‌, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಸಂಸದ ಪ್ರತಾಪ ಸಿಂಹ, ಪ್ರಮೋದಾದೇವಿ ಒಡೆಯರ್, ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಶಾಸಕರಾದ ಎಲ್.ನಾಗೇಂದ್ರ, ಎಸ್.ಎ.ರಾಮದಾಸ್, ಮುಡಾ ಅಧ್ಯಕ್ಷ ಎಂ.ವಿ.ರಾಜೀವ ಮತ್ತಿತರರು ಸಹ ಯೋಗಾಭ್ಯಾಸದಲ್ಲಿ ಪಾಲ್ಗೊಂಡರು.

Donate Janashakthi Media

Leave a Reply

Your email address will not be published. Required fields are marked *