ಬೆಂಗಳೂರು : ನಮ್ಮ ಮೆಟ್ರೋ ಕಾಮಗಾರಿ ನಡೆಸುತ್ತಿದ್ದ ವೇಳೆ 33 ಅಡಿ ಆಳದಲ್ಲಿ ಕಸದ ರಾಶಿಯನ್ನು ಎದುರಿಸಿದೆ. ಡೈರಿ ಸರ್ಕಲ್ನಿಂದ ಲಕ್ಕಸಂದ್ರದ ಮಾರ್ಗ ನಡುವೆ ನಡೆಯುತ್ತಿದ್ದ ಕಾಮಗಾರಿ ವೇಳೆ ಈ ಘಟನೆ ಜರುಗಿದೆ.
ಸುರಂಗ ಮಾರ್ಗ ಕೊರೆಯುವ ವೇಳೆ ನಮ್ಮ ಮೆಟ್ರೋಗೆ ದೊಡ್ಡ ಸಮಸ್ಯೆ ಎದುರಾಗಿತ್ತು. ಆರಂಭದಲ್ಲಿ ಬಿಎಂಆರ್ ಸಿಎಲ್ ಸಿಬ್ಬಂದಿ ದೊಡ್ಡ ಗಾತ್ರದ ಬಂಡೆ ಇರಬಹುದು ಎಂದು ತಿಳಿದುಕೊಂಡಿದ್ದರು. ಕಾಮಗಾರಿ ಮುಂದುವರಿಯುತ್ತಿದ್ದಂತೆ ಅದು ಬಂಡೆ ಅಲ್ಲ. ಅಲ್ಲಿರೋದು ಕಸದ ರಾಶಿ ಎಂಬುವುದು ತಿಳಿದು ಬಂದಿದೆ.
ಮೆಟ್ರೋ ಯೋಜನೆಯ IIನೇ ಹಂತದ ಅಡಿಯಲ್ಲಿ ಬರುವ 14 ಕಿಮೀ ಜಾಲದ ಮೂಲಕ ಸುರಂಗ ಮಾರ್ಗದ ಕಾರ್ಯ ನಡೆಯುತ್ತಿದೆ. ಆದರೆ ಡೈರಿ ಸರ್ಕಲ್ ಮತ್ತು ಲಕ್ಕಸಂದ್ರದ ನಡುವೆ ಕಸದ ಅಡಚಣೆ ಉಂಟಾಗಿತ್ತು ಎಂದು ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (BMRCL)ಎಂಡಿ ಅಂಜುಮ್ ಪರ್ವೇಜ್ ಹೇಳಿದರು. ಸುಮಾರು 10 ವರ್ಷಗಳ ಹಿಂದೆಯೇ ಈ ಭಾಗದಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ನಡೆದಿತ್ತು. ನಂತರ ಕಲ್ಲು ಗಣಿಗಾರಿಕೆ ಕ್ವಾರಿಯನ್ನು ಡಂಪಿಂಗ್ ಯಾರ್ಡ್ ಆಗಿ ಬದಲಾಗಿಸಲಾಗಿತ್ತು. ಆದ್ದರಿಂದ ಸುಮಾರು ಕಸ ಈ ಭಾಗದಲ್ಲಿ ಪತ್ತೆಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕಸದ ರಾಶಿಯಲ್ಲಿ ಪ್ಲಾಸ್ಟಿಕ್ ಬಕೆಟ್, ಚೀಲ, ಮೂಳೆಗಳ ಸಂಗ್ರಹ ಕಂಡು ಬಂದಿದೆ. ಕಸದ ರಾಶಿ ಎಂದು ತಿಳಿಯದೇ ಯಂತ್ರಕ್ಕೆ ಮುಂದಕ್ಕೆ ಹೋಗಿತ್ತು. ಆದ್ರೆ ಯಂತ್ರ ಮುಂದೆ ಚಲಿಸಲು ಆಗದೇ ಸಿಲುಕಿಕೊಂಡಿತ್ತು ಎಂದು ಎಂಆರ್‌ಸಿಎಲ್‌ನ ಕಾರ್ಯನಿರ್ವಾಹಕ ನಿರ್ದೇಶಕ ಹೆಗ್ಗಾ ರೆಡ್ಡಿ ತಿಳಿಸಿದ್ದಾರೆ. ಯಂತ್ರ ಸಿಲುಕಿದ ಪ್ರದೇಶ ಮಣ್ಣು ಪರೀಕ್ಷೆ ನಡೆಸಿದಾಗ ಇಲ್ಲಿ ಕಲ್ಲು ಗಣಿಗಾರಿಕೆ ನಡೆದಿರೋದು ತಿಳಿದು ಬಂದಿದೆ. ಮಣ್ಣು ಕಾಂಕ್ರಿಟ್ ಮಿಶ್ರಣದಿಂದ ಕೂಡಿದೆ ಎಂದು ವರದಿಯಾಗಿದೆ. ಈ ಕಸದ ರಾಶಿಯನ್ನು ತೆಗೆಯಲು ಮೂರು ತಿಂಗಳ ಸಮಯ ಬೇಕಾಗುತ್ತದೆ ಎಂದು ವರದಿಯಾಗಿದೆ.