ನಮ್ಮ ಮೆಟ್ರೋ ಪ್ರಯಾಣ ದರ ಶೇ.5 ರಷ್ಟು ಹೆಚ್ಚಳ ; ಸಿ.ಪಿ.ಐ(ಎಂ) ಖಂಡನೆ

ಬೆಂಗಳೂರು: ನಗರದ ನಮ್ಮ ಮೆಟ್ರೋ ಪ್ರಯಾಣ ದರಗಳನ್ನು ಮತ್ತೆ ಶೇ. 5 ರಷ್ಟು ಹೆಚ್ಚಿಸಿ ಜನರ ಮೇಲೆ ಹೊರೆ ಹಾಕುವ ಬಿ.ಎಂ.ಆರ್.ಸಿ.ಎಲ್. ಕ್ರಮವನ್ನು ಸಿಪಿಐ(ಎಂ) ಬೆಂಗಳೂರು ಜಿಲ್ಲಾ ಸಮಿತಿ ತೀವ್ರವಾಗಿ ಖಂಡಿಸಿದೆ. ಕೂಡಲೇ ಮೆಟ್ರೋ ಪ್ರಯಾಣ ದರ ಏರಿಕೆ ಪ್ರಸ್ತಾಪವನ್ನು ಹಿಂಪಡೆಯಬೇಕೆಂದು ಆಗ್ರಹಿಸಿ ಶಾಂತಿನಗರದಲ್ಲಿರುವ ಬಿಎಂಟಿಸಿ ಕಾಂಪ್ಲೆಕ್ಸ್‌ನಲ್ಲಿರುವ ಬಿಎಂಆರ್‌ಸಿಎಲ್‌ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.

ಸತತವಾಗಿ ಲಾಭದಲ್ಲಿಯೇ ನಮ್ಮ ಮೆಟ್ರೋ ಕಾರ್ಯಾಚರಣೆ ನಡೆಸುತ್ತಿದ್ದರು ಸಹ ಪ್ರಯಾಣ ದರ ಏರಿಕೆ ಮಾಡುವ ಪ್ರಸ್ತಾಪ ಜನ ವಿರೋಧಿ ಕ್ರಮವಾಗಿದೆ. ಕಳೆದ ವರ್ಷದಲ್ಲಷ್ಟೆ ಅತ್ಯಂತ ದುಬಾರಿಯಾಗಿ ಮೆಟ್ರೋ ಪ್ರಯಾಣ ದರಗಳನ್ನು ಏರಿಸಿ ದೇಶದಲ್ಲಿಯೇ ಅತ್ಯಂತ ದುಬಾರಿ ಮೆಟ್ರೋ ಪ್ರಯಾಣ ದರಗಳನ್ನು ಹೊಂದಿರುವ ಕುಖ್ಯಾತಿಗೆ ಬೆಂಗಳೂರು ಗುರಿಯಾಗಿತ್ತು. ಈಗ ಮತ್ತೆ ಮೆಟ್ರೋ ರೈಲ್ವೆ ದರ ಏರಿಕೆ ಬಿಸಿ ಬೆಂಗಳೂರು ನಿವಾಸಿಗಳಿಗೆ ತೀವ್ರ ಹೊಡೆತವನ್ನು ನೀಡಲಿದೆ ಎಂದು ಸಿಪಿಐಎಂ ಆರೋಪಿಸಿದೆ.

ಮೆಟ್ರೋ ರೈಲ್ವೆ ಕಾಯ್ದೆ 2002 ರ ಅನ್ವಯ ದರ ನಿಗದಿ ಸಮಿತಿ (ಎಫ್.ಎಫ್.ಸಿ) ರಚಿಸಲಾಗಿದೆ, ಈ ಸಮಿತಿ ಕಳೆದ ವರ್ಷ ಅವೈಜ್ಞಾನಿಕವಾಗಿ ಮೆಟ್ರೋ ಪ್ರಯಾಣ ದರ ಏರಿಕೆಗೆ ಶಿಫಾರಸ್ಸನ್ನು ಮಾಡಿದೆ. ಸಾರ್ವಜನಿಕವಾಗಿ ತೀವ್ರ ವಿರೋಧ ವ್ಯಕ್ತವಾಗಿತ್ತು. ಈ ಸಮಿತಿ ಶಿಫಾರಸ್ಸಿನಂತೆ ಪ್ರತಿ ವರ್ಷ ಶೇ.೫ ರಷ್ಟು ಮೆಟ್ರೋ ಪ್ರಯಾಣ ದರ ಏರಿಕೆ ಮಾಡಲು ಕೇಂದ್ರ ಮತ್ತು ರಾಜ್ಯ ಎರಡು ಸರ್ಕಾರಗಳ ಪ್ರತಿನಿಧಿಗಳು ಇರುವ ಬಿ.ಎಂ.ಆರ್.ಸಿ.ಎಲ್ ತೀರ್ಮಾನಕ್ಕೆ ಬಂದಿರುವುದನ್ನು ಸಿಪಿಐ(ಎಂ) ಬಲವಾಗಿ ಖಂಡಿಸಿದೆ.

ಇದನ್ನೂ ಓದಿ: ಬೆಂಗಳೂರು ಚಿತ್ರೋತ್ಸವ – ನಾನು ನೋಡಿದ ಚಿತ್ರಗಳು

ಯಾವುದೇ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಸಾಮಾಜಿಕ ಕಳಕಳಿಗಳೊಂದಿಗೆ ದರ ನಿಗದಿ ಮಾಡಬೇಕು. ವಾಣಿಜ್ಯ ನಗರಿಯಾದ ಬೆಂಗಳೂರಿಗೆ ಪ್ರತಿದಿನ ಸಾವಿರಾರು ಜನ ನಗರಕ್ಕೆ ವಲಸೆ ಬರುತ್ತಿದ್ದಾರೆ. ಮೆಟ್ರೋ ರೈಲುಗಳಲ್ಲಿ ಪ್ರಯಾಣ ಮಾಡುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಿದೆ. ಸಾರ್ವಜನಿಕ ಸಾರಿಗೆ ಜನರಿಗೆ ಸೇವೆ ಸಲ್ಲಿಸಲು ಇರಬೇಕೆ ಹೊರತು ಲಾಭವೇ ಪ್ರಧಾನವಾಗಬಾರದು. ಆದರೆ ಕೇಂದ್ರದ ಬಿಜೆಪಿ ಸರ್ಕಾರ ಮತ್ತು ರಾಜ್ಯದ ಕಾಂಗ್ರೆಸ್ ಸರ್ಕಾರಗಳೆರಡು ಸಾರ್ವಜನಿಕ ಸಾರಿಗೆಯನ್ನು ಬಲಪಡಿಸುವ ಬದಲಾಗಿ ಹಂತ ಹಂತವಾಗಿ ಖಾಸಗೀಕರಣ ಮಾಡಿ ಸಾರ್ವಜನಿಕ ಸೇವೆಯಿಂದ ನುಣಚಿಕೊಂಡು ಜನರ ಮೇಲೆಯೇ ಹೊರೆ ಹೇರುತ್ತಿವೆ. ಕಾರ್ಪೊರೇಟ್ ಬಂಡವಾಳಗಾರರ ಲಾಭ ಹೆಚ್ಚಿಸಲು ಕೆಲಸ ಮಾಡುತ್ತಿವೆ.

ಇಲ್ಲಿಯವರೆಗೆ ನಮ್ಮ ಮೆಟ್ರೊದಲ್ಲಿ ಹಿರಿಯ ನಾಗರೀಕರಿಗೆ, ಅಂಗವಿಕಲರಿಗೆ ದರ ರಿಯಾಯಿತಿಯನ್ನು ಘೋಷಿಸಿಲ್ಲ. ಈ ಹಿಂದೆ ಮೆಟ್ರೊ ಕಾರ್ಡ್ ದಾರರಿಗಿದ್ದ ಶೇ. 15% ರಿಯಾಯಿತಿಯನ್ನು ಸಹ ಈಗಾಗಲೇ ಶೇ.೫ಕ್ಕೆ ಇಳಿಸಲಾಗಿದೆ. ಇನ್ನು ದಿನನಿತ್ಯ ಮೆಟ್ರೋ ಟೋಕನ್ ಪಡೆದು ಪ್ರಯಾಣಿಸುವ ಸಾವಿರಾರು ಸಾಮಾನ್ಯ ಜನರಿಗೆ ಯಾವುದೇ ರಿಯಾಯಿತಿ ಸಿಗುತ್ತಿಲ್ಲ. ಅಗತ್ಯ ವಸ್ತುಗಳ ಬೆಲೆ ಏರಿಕೆ, ನಿರುದ್ಯೋಗದಿಂದ ಜನತೆ ತತ್ತರಿಸುತ್ತಿರುವಾಗ ಪ್ರಯಾಣ ದರ ಹೆಚ್ಚಳವು ಗಾಯದ ಮೇಲೆ ಬರೆ ಎಳೆಯುವ ಕ್ರಮವಾಗಿದೆ.

ಅತ್ಯಂತ ಜನ ವಿರೋಧಿಯಾದ ಮೆಟ್ರೋ ಪ್ರಯಾಣ ದರ ಶೇ.5 ರಷ್ಟು ಏರಿಕೆ ಪ್ರಸ್ತಾಪವನ್ನು ಬಿ.ಎಂ.ಆರ್.ಸಿ.ಎಲ್ ಕೈಬಿಡಬೇಕು ಹಾಗೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ದರ ಏರಿಕೆಗೆ ಒಪ್ಪಿಗೆ ನೀಡಬಾರದೆಂದು ಸಿ.ಪಿ.ಐ(ಎಂ) ಜಿಲ್ಲಾ ಸಮಿತಿ ಒತ್ತಾಯಿಸಿದೆ. ಮೆಟ್ರೋ ಪ್ರಯಾಣ ದರ ಏರಿಕೆ ಜಾರಿ ಮಾಡಿದರೆ ಬಿ.ಎಂ.ಆರ್.ಸಿ.ಎಲ್. ಮುಂದೆ ಹೋರಾಟ ಮಾಡುವುದಾಗಿ ಎಚ್ಚರಿಸಲಾಗಿದೆ ಎಂದು  ಸಿಪಿಐ(ಎಂ)  ಬೆಂಗಳೂರು ದಕ್ಷಿಣಾ ಜಿಲ್ಲಾ ಕಾರ್ಯದರ್ಶಿ ಬಿ.ಎನ್‌ ಮಂಜುನಾಥ ತಿಳಿಸಿದ್ದಾರೆ.

ನಿಯೋಗದಲ್ಲಿ ಸಿಪಿಐ(ಎಂ)  ಮುಖಂಡರಾದ ಗೌರಮ್ಮ, ಕೆ.ಎಸ್.‌ ವಿಮಲಾ, ರಾಜಣ್ಣ, ದೇವಿಕಾ, ರವಿಚಂದ್ರ, ಸುನೀಲ್‌ ಇದ್ದರು.

ಇದನ್ನೂ ನೋಡಿ: ಇದು ಜನರ ಬಜೆಟ್ ಅಲ್ಲ- ಕಾರ್ಪೊರೇಟ್ ಲಾಭಕ್ಕೆ ಬಜೆಟ್! | ಟಿಆರ್‌ಸಿ | ಗುರುರಾಜ ದೇಸಾಯಿ Janashakthi Media

Donate Janashakthi Media

Leave a Reply

Your email address will not be published. Required fields are marked *