ಬೆಂಗಳೂರು : ” ರಾಜ್ಯದಲ್ಲಿ ನಮ್ಮ ಕ್ಲಿನಿಕ್ ಗಳು ಪ್ರಾರಂಭವಾಗಿ ಎರಡು ವರ್ಷಗಳಾಗಿವೆ. ಇದುವರೆಗೂ ಆರೋಗ್ಯ ಇಲಾಖೆಯಿಂದ 350 ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗಿದೆ. ಬಿಬಿಎಂಪಿಯ ಅಂಕಿ ಅಂಶಗಳ ಪ್ರಕಾರ 2,29,000 ರೋಗಿಗಳನ್ನು ಆರೈಕೆ ಮಾಡಲಾಗಿದ್ದು ಪ್ರತಿಯೊಬ್ಬರಿಗೂ 1800 ಗಳಂತೆ ವ್ಯಯ ಮಾಡುತ್ತಿದ್ದು ಕೋಟ್ಯಾಂತರ ರೂಪಾಯಿಗಳು ಭ್ರಷ್ಟಾಚಾರಿಗಳ ಪಾಲಾಗುತ್ತಿದೆ ” ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಕಾರ್ಯದರ್ಶಿ ಉಷಾ ಮೋಹನ್ ಟೀಕಿಸಿದರು.
ಕಳೆದ ಒಂಬತ್ತು ವರ್ಷಗಳಲ್ಲಿ ದೆಹಲಿ ರಾಜ್ಯದಲ್ಲಿ 550ಕ್ಕೂ ಹೆಚ್ಚು ಮೊಹಲ್ಲಾ ಕ್ಲಿನಿಕ್ ಗಳಲ್ಲಿ ಇದುವರೆಗೂ 7 ಕೋಟಿಗೂ ಹೆಚ್ಚು ರೋಗಿಗಳನ್ನು ಆರೈಕೆ ಮಾಡಲಾಗಿದೆ. ಪ್ರತಿಯೊಬ್ಬರಿಗೂ ಕೇವಲ 101 ರೂಪಾಯಿಗಳಷ್ಟು ಮಾತ್ರ ಖರ್ಚು ಬರುತ್ತಿದೆ. ರಾಜ್ಯದ ನಮ್ಮ ಕ್ಲಿನಿಕ್ ಗಳಲ್ಲಿ ಇಷ್ಟೊಂದು ಬೃಹತ್ ಮಟ್ಟದ ಖರ್ಚನ್ನು ತೋರಿಸಿ ರೋಗಿಗಳ ಹೆಸರಲ್ಲಿ ನೂರಾರು ಕೋಟಿ ರೂಪಾಯಿಗಳನ್ನು ಗುಳುಂ ಮಾಡುತ್ತಿರುವುದಕ್ಕೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಕೂಡಲೇ ಉತ್ತರ ನೀಡಬೇಕು ” ಎಂದು ಅಂಕಿ ಅಂಕಿ ಅಂಶಗಳನ್ನು ಬಿಡುಗಡೆ ಮಾಡಿ ಒತ್ತಾಯಿಸಿದರು.
ಇದನ್ನೂ ಓದಿ : ದೆಹಲಿ ವಿಧಾನಸಭಾ ಚುನಾವಣೆ: ಎಎಪಿ ತನ್ನ ಅಧಿಕಾರವನ್ನು ಉಳಿಸಿಕೊಳ್ಳುತ್ತದೆಯೇ?
“ಮಂತ್ರಿಗಳು ಮೂರು ದಿವಸ ತಮ್ಮ ಸಮಯವನ್ನು ಮೀಸಲಿಟ್ಟು ದೆಹಲಿಗೆ ಭೇಟಿ ನೀಡಿ ಅಲ್ಲಿನ ಆರೋಗ್ಯ ವ್ಯವಸ್ಥೆಯನ್ನು ತಿಳಿದುಕೊಂಡು ಅದೇ ರೀತಿಯ ಗುಣಮಟ್ಟದ ಚಿಕಿತ್ಸೆಗಳನ್ನು ಅಗ್ಗದ ದರದಲ್ಲಿ ಹೇಗೆ ನೀಡಬಹುದೆಂಬುದನ್ನು ತಿಳಿದುಕೊಳ್ಳಬೇಕು ” ಎಂದು ಸವಾಲೆಸದರು.
” ಇಲ್ಲದಿದ್ದಲ್ಲಿ ಆರೋಗ್ಯ ಮಂತ್ರಿಗಳಿಗೂ ನಮ್ಮ ಕ್ಲಿನಿಕ್ ಗಳಿಂದ ಬಹುಪಾಲು ಆಮದನಿ ಹೋಗುತ್ತಿದೆ ಎಂಬುದನ್ನು ರಾಜ್ಯದ ಜನ ಅರ್ಥಮಾಡಿಕೊಳ್ಳ ಬೇಕಾಗುತ್ತದೆ ” ಎಂದು ಉಷಾ ಮೋಹನ್ ಸರ್ಕಾರವನ್ನು ಟೀಕಿಸಿದರು. ಪತ್ರಿಕಾಗೋಷ್ಠಿಯಲ್ಲಿ ಬೆಂಗಳೂರು ನಗರ ಮಾಧ್ಯಮ ಉಸ್ತುವಾರಿ ಅನಿಲ್ ನಾಚಪ್ಪ ಸಹ ಭಾಗವಹಿಸಿದ್ದರು.