ಬೆಂಗಳೂರು: ಇದೇ ತಿಂಗಳು 22ರಿಂದ ದ್ವೀತೀಯ ಪಿಯುಸಿ ತರಗತಿಗಳು ಆರಂಭವಾಗಲಿದ್ದು, ಹಿಜಾಬ್ ಧರಿಸಿ ಪರೀಕ್ಷೆಗೆ ಹಾಜರಾಗಲು ಅವಕಾಶ ಮಾಡಿಕೊಡಬೇಕೆಂದು, ಇಂತಹ ನಿರ್ಧಾರ ರಾಜ್ಯದ ಮುಖ್ಯಮಂತ್ರಿ ತೆಗೆದುಕೊಳ್ಳಲು ಸಾಧ್ಯವಿದೆ ಎಂದು ಆಲಿಯಾ ಅಸ್ಸಾದಿ ಟ್ವೀಟ್ ಮೂಲಕ ಮನವಿ ಮಾಡಿದ್ದಾರೆ.
ಶಿಕ್ಷಣ ಸಂಸ್ಥೆಗಳಲ್ಲಿ ಧಾರ್ಮಿಕ ಉಡುಪುಗಳನ್ನು ನಿಷೇಧಿಸಿದ ರಾಜ್ಯ ಸರ್ಕಾರದ ಆದೇಶದ ವಿರುದ್ಧ ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದ ಮುಸ್ಲಿಂ ವಿದ್ಯಾರ್ಥಿಗಳಲ್ಲಿ ಒಬ್ಬರಾದ ಆಲಿಯಾ ಅಸ್ಸಾದಿ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಟ್ವೀಟ್ ಮೂಲಕ ಮನವಿ ಮಾಡಿಕೊಂಡಿದ್ದಾರೆ.
ಇದನ್ನು ಓದಿ: ಹಿಜಾಬ್ ಅರ್ಜಿ ವಜಾಗೊಳಿಸಿದ ಹೈಕೋರ್ಟ್
ಟ್ವೀಟ್ ನಲ್ಲಿ ಮನವಿ ಮಾಡಿದ ಆಲಿಯಾ ಅಸ್ಸಾದಿ, ‘ದ್ವಿತೀಯ ಪಿಯು ಪರೀಕ್ಷೆಗಳು ಈ ತಿಂಗಳ 22ರಿಂದ ಆರಂಭವಾಗಲಿವೆ. ಗೌರವಾನ್ವಿತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವ್ರೆ ನಮ್ಮ ಭವಿಷ್ಯ ಹಾಳಾಗದಂತೆ ತಡೆಯಲು ನಿಮಗೆ ಇನ್ನೂ ಅವಕಾಶವಿದೆ. ಹಿಜಾಬ್ ಧರಿಸಿ ಪರೀಕ್ಷೆಗಳನ್ನು ಬರೆಯಲು ನಮಗೆ ಅವಕಾಶ ನೀಡುವ ನಿರ್ಧಾರವನ್ನು ನೀವು ತೆಗೆದುಕೊಳ್ಳಬಹುದು. ದಯವಿಟ್ಟು ಇದನ್ನ ಪರಿಗಣಿಸಿ. ನಾವು ಈ ದೇಶದ ಭವಿಷ್ಯ’ ಎಂದಿದ್ದಾರೆ.
ಇದನ್ನು ಓದಿ: ತುರ್ತು ವಿಚಾರಣೆಗೆ ಸುಪ್ರೀಂ ನಿರಾಕರಣೆ; ‘ಹಿಜಾಬ್‌ಗೂ ಪರೀಕ್ಷೆಗೂ ಯಾವುದೇ ಸಂಬಂಧವಿಲ್ಲ’
ಇತ್ತೀಚಿಗೆ ರಾಜ್ಯದ ಶಿಕ್ಷಣ ಸಚಿವರು ಹಾಗೂ ಶಿಕ್ಷಣ ಇಲಾಖೆ ದ್ವಿತೀಯ ಪಿಯುಸಿ ಪರೀಕ್ಷೆಯ ಸಮಯದಲ್ಲಿ ಹಿಜಾಬ್ ಧರಿಸಿ ಬಂದರೆ, ಪರೀಕ್ಷೆಗೆ ಅವಕಾಶವಿಲ್ಲವೆಂದು ಸೂಚನೆಯನ್ನು ನೀಡಿದೆ. ಅಲ್ಲದೆ, ಈಗಾಗಲೇ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಸಂದರ್ಭದಲ್ಲಿ ಇಂತಹ ಆದೇಶವನ್ನು ಹೊರಡಿಸಲಾಗಿತ್ತು.
ಹಿಜಾಬ್ ವಿಚಾರಕ್ಕೆ ಸಂಬಂಧಿಸಿದಂತೆ, ಕರ್ನಾಟಕ ಹೈಕೋರ್ಟ್ ಶಿಕ್ಷಣ ಸಂಸ್ಥೆಗಳಿಗೆ ಯಾವುದೇ ಧಾರ್ಮಿಕ ಉಡುಪುಗಳನ್ನು ಧರಿಸುವುದನ್ನ ಪರಿಣಾಮಕಾರಿಯಾಗಿ ನಿಷೇಧಿಸುವ ಸರ್ಕಾರದ ಆದೇಶವನ್ನು ಎತ್ತಿಹಿಡಿದು, ಅರ್ಜಿಯನ್ನು ವಜಾಗೊಳಿಸಿತ್ತು. ಹೈಕೋರ್ಟ್ ತೀರ್ಪು ಪ್ರಶ್ನಿಸಿ ಸುಪ್ರೀಂ ಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಲಾಗಿದೆ.