ಬೆಂಗಳೂರು: ಕಾಂತಾರ ಸಿನಿಮಾ ಮತ್ತು ದೈವಕ್ಕೆ ಸಂಬಂಧಿಸಿದಂತೆ ಪದೇಪದೇ ಸುದ್ದಿಗಳು ಹರಿದಾಡುತ್ತಿದೆ. ಸಿನಿಮಾ ಒಂದಲ್ಲ ಒಂದು ಸಂದರ್ಭದಲ್ಲಿ ಅದರ ವ್ಯಾಪ್ತಿಯನ್ನು ಮೀರಿ ಕೆಲವು ವಿಚಾರಗಳಿಗಾಗಿ ಸುದ್ದಿಯಾಗುತ್ತವೆ. ಹಾಗೆ ಪ್ರಸಕ್ತ ಹರಿದಾಡುತ್ತಿರುವ ವಿಡಿಯೋ ಬಗ್ಗೆ ಪ್ರತಿಕ್ರಿಯೆ ನೀಡಿರುವ ನಟ ಕಿಶೋರ್ ʻನಂಬಿಕೆ ಇರಲಿ ಮೂಢನಂಬಿಕೆ ಬೇಡʼ ಎಂದು ಬರೆದಿದ್ದಾರೆ.
ತಮ್ಮ ಸಾಮಾಜಿಕ ಜಾಲತಾಣದಲ್ಲಿ ಸಂದೇಶವೊಂದನ್ನು ಹಂಚಿಕೊಂಡಿರುವ ನಟನಾ ಚಾತುರ್ಯತೆಯಿಂದ ಜನಮಾನಸದಲ್ಲಿ ವಿಶಿಷ್ಟ ಛಾಪು ಮೂಡಿರಿಸಿ, ಪ್ರೇಕ್ಷಕರ ಪ್ರೀತಿಯನ್ನುಗಳಿಸಿರುವ ಬಹುಭಾಷಾ ನಟ ಕಿಶೋರ್, ‘ಕೊಲ್ಲುವ ದೈವ, ಮನಸ್ಸನ್ನು ಪರಿವರ್ತಿಸಲಾರದೇ? ಕಾಂತಾರದ ದೈವವನ್ನು ಅವಮಾನಿಸಿದ ಯುವಕ ರಕ್ತಕಾರಿ ಸಾವು ಅನ್ನೋ ವೈರಲ್ ವಿಡಿಯೋ ವಾಟ್ಸಾಪ್‌ನಲ್ಲಿ ಹರಿದು ಬಂತು. ಆ ಸಿನಿಮಾದ ಭಾಗವಾಗಿ ಈ ಥರದ ತಪ್ಪು ತಿಳುವಳಿಕೆಗಳನ್ನು ತಿದ್ದುವುದು ನನ್ನ ಬಾಧ್ಯತೆ ಎಂದು ನಂಬಿ ಬರೆಯುತ್ತಿದ್ದೇನೆ…’ ಎಂದಿದ್ದಾರೆ.
ದೈವವೋ ದೆವ್ವವೋ ನಮ್ಮ ನಮ್ಮ ನಂಬಿಕೆಯಷ್ಟೇ. ನಂಬಿದರೆ ಉಂಟು ನಂಬದಿದ್ದರೆ ಇಲ್ಲ. ಹಾಗೆಂದು ಕಷ್ಟಕಾಲದಲ್ಲಿ ಮನಸ್ಥೈರ್ಯ ಕೊಡುವ ನಂಬಿಕೆಗಳನ್ನು ಅವಮಾನಿಸುವ ಅವಶ್ಯಕತೆಯೂ ಇಲ್ಲ. ಕಿಡಿಗೇಡಿಗಳನ್ನು ಶಿಕ್ಷಿಸಲು ಕಾನೂನಿದೆ. ಅವರವರ ನಂಬಿಕೆ ಅವರಿಗೆ. ನಂಬಿಕೆ ಇರಲಿ ಮೂಢನಂಬಿಕೆ ಬೇಡ ಎಂದು ಬರೆದಿದ್ದಾರೆ.
ಮನರಂಜನೆಯ ಮೂಲಕವೇ ಹಲವು ಸಾಮಾಜಿಕ ಸಮಸ್ಯೆಗಳ ಬಗ್ಗೆ ಜನರನ್ನು ಜಾಗೃತಗೊಳಿಸುತ್ತಿದೆ. ಅಂಥ ಸಿನಿಮಾವನ್ನು ಬಳಸಿ ಮೂಢನಂಬಿಕೆಯನ್ನೊ ಧರ್ಮಾಂಧತೆಯನ್ನೊ ಪ್ರಚೋದಿಸಿ ಜನಗಳನ್ನು ವಿಭಜಿಸುವ ಮಟ್ಟಕ್ಕೆ ಇಳಿದು ಬಿಟ್ಟರೆ ಇಂಥಾ ದೊಡ್ಡ ಗೆಲುವೂ ಮನುಷ್ಯತ್ವದ ದೊಡ್ಡ ಸೋಲಾಗಿಹೋದೀತು ಎಂದಿದ್ದಾರೆ.
ಕೊಲ್ಲುವ ಶಕ್ತಿಯಿರುವ ದೈವಕ್ಕೆ ಅದರ ಬದಲು ಮನಃಪರಿವರ್ತನೆ ಮಾಡುವ ಶಕ್ತಿ ಏಕೆ ಏಕೆ ಇರುವುದಿಲ್ಲ? ಏಕೆಂದರೆ ಕತೆಗಾರನಿಗೆ ಕಥೆ ಮುಂದೆ ಸಾಗುವುದಿಲ್ಲ. ಅವನ ಮಟ್ಟಿಗೆ ಒಂದು ಕಥೆಯನ್ನು ಪರಿಣಾಮಕಾರಿಯಾಗಿ ಹೇಳುವ ತನ್ನ ಉದ್ದೇಶ ಸಾಧನೆಗೆ ದೈವವೊ, ದೆವ್ವವೊ ಒಂದು ಸಾಧನವಷ್ಟೆ, ಸಿನಿಮಾವಾಗಲಿ ಪುರಾಣವಾಗಲಿ ಎಂದು ಬರೆದುಕೊಂಡಿದ್ದಾರೆ.
‘ಕಾಂತಾರ’ ಸಿನಿಮಾದಲ್ಲಿ ಅರಣ್ಯ ಅಧಿಕಾರಿ ಮುರಳಿಧರ್ ಎಂಬ ಪಾತ್ರದಲ್ಲಿ ಕಿಶೋರ್ ನಟಿಸಿದ್ದಾರೆ.
ಟ್ವಿಟ್ಟರ್ ಖಾತೆ ಅಮಾನತು
ನಟ ಕಿಶೋರ್ ಅವರ ಟ್ವಿಟರ್ ಖಾತೆಯನ್ನು ಅಮಾನತುಗೊಳಿಸಲಾಗಿದೆ. ಅವರ ಖಾತೆಯನ್ನು ಟ್ವಟಿರ್ ಅಮಾನತು ಮಾಡಲಾಗಿದ್ದು, ಸಂಸ್ಥೆಯ ನಿಯಮ ಉಲ್ಲಂಘಿಸಿದ ಕಾರಣಕ್ಕಾಗಿ ಅಮಾನತುಗೊಳಿಸಲಾಗಿದೆ ಎಂದು ಟ್ವಿಟರ್ ಹೇಳಿದೆ.
‘ಕಿಶೋರ್ ಮಾಡಿದ ತಪ್ಪೇನು..? ಖಾತೆಯನ್ನು ಅಮಾನತು ಮಾಡುವಷ್ಟರ ಮಟ್ಟಿಗೆ ಅವರು ಯಾವ ಪೋಸ್ಟ್ ಹಂಚಿಕೊಂಡರು?’ ಎಂದು ಅಭಿಮಾನಿಗಳು ಪ್ರಶ್ನಿಸುತ್ತಿದ್ದಾರೆ. ಟ್ವಿಟ್ಟರ್ ಖಾತೆ ಅಮಾನತು ಆಗಿರುವ ಬಗ್ಗೆ ಕಿಶೋರ್ ಅವರು ಇನ್ನೂ ಪ್ರತಿಕ್ರಿಯಿಸಿಲ್ಲ.
ಕಿಶೋರ್ ಅವರ ಕೆಲವು ಅಭಿಮಾನಿಗಳು ಟ್ವಿಟ್ಟರ್ ಮುಖ್ಯಸ್ಥ ಎಲಾನ್ ಮಸ್ಕ್ ಅವರಿಗೂ ಟ್ಯಾಗ್ ಮಾಡಿ ಟ್ವಿಟ್ಟರ್ ಖಾತೆಯನ್ನು ಅಮಾನತು ಮಾಡಿರುವ ಬಗ್ಗೆ ಸ್ಪಷ್ಟ ಕಾರಣವನ್ನು ನೀಡಿ ಎಂದು ಒತ್ತಾಯಿಸುತ್ತಿದ್ದಾರೆ.
ಕಿಶೋರ್ ಅವರು ಸರಕಾರದ ಜನ ವಿರೋಧಿ ನೀತಿಯನ್ನು ಖಂಡಿಸಿ ಜನರನ್ನು ಎಚ್ಚರಿಸುವಂತಹ ಪೋಸ್ಟ್ ಗಳನ್ನು ಹಂಚಿಕೊಳ್ಳುತ್ತಿದ್ದರು. ಕರ್ನಾಟಕದ ನಂದಿನಿಯನ್ನು ಗುಜರಾತಿನ ಅಮುಲ್ ಜೊತೆ ವಿಲೀನ ಮಾಡಲು ಹೊರಟಿದ್ದ ಕೇಂದ್ರ ಸರ್ಕಾರದ ನೀತಿಯನ್ನು ಕೂಡಾ ಕಿಶೋರ್ ಖಂಡಿಸಿದ್ದರು. ಇದೇ ಕಾರಣಕ್ಕೆ ಈ ರೀತಿ ಆಗಿರಬಹುದು ಎಂದು ಕೆಲ ಅಭಿಮಾನಿಗಳು ಹೇಳುತ್ತಿದ್ದಾರೆ.