“ನಮಗೆ ಈ ಪೆಂಶನ್ ಸುಧಾರಣೆ ಬೇಡ !!” – ಫ್ರೆಂಚ್ ಒಕ್ಕೊರಲ ಕೂಗು

ವಸಂತರಾಜ ಎನ್.ಕೆ.

ಅಧ್ಯಕ್ಷ ಮ್ಯಾಕ್ರಾನ್ ಅವರ ಫ್ರೆಂಚ್ ಸರಕಾರ ದೇಶದ ಪೆಂಶನ್ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಗಳನ್ನು ತರಲು ಪ್ರಯತ್ನಿಸುತ್ತಿದೆ. ಅದನ್ನು ‘ಸುಧಾರಣೆ’ ಎನ್ನುತ್ತಿದೆ. ಆದರೆ ಫ್ರೆಂಚ್ ಕಾರ್ಮಿಕರು ಮತ್ತು ಜನತೆ ಅದನ್ನು ತಿರಸ್ಕರಿಸಿದ್ದಾರೆ. ಅದರ ವಿರುದ್ಧ ಇಡೀ ಜನತೆ ಎದ್ದು ನಿಂತಂತಿದೆ. ಅದರ ವಿರುದ್ಧ ಜನವರಿ 19ರಂದು ಸಾರ್ವತ್ರಿಕ ಮುಷ್ಕರ ನಡೆದು ಅಂದು ಇಡೀ ದೇಶ ಸ್ತಬ್ಧವಾಯಿತು. ಸಾರ್ವಜನಿಕ ಸಾರಿಗೆಯಿಂದ, ಶಾಲಾ ಕಾಲೇಜುಗಳು ಸೇರಿದಂತೆ ತೈಲ ಸಂಸ್ಕರಣಾ ಘಟಕಗಳ ವರೆಗೆ ಎಲ್ಲವೂ ಸ್ತಬ್ಧವಾಗಿತ್ತು. ಅದರ ನಂತರವೂ ಜನವರಿ 20, 21 ಮತ್ತು 23ರಂದು ದೇಶದಾದ್ಯಂತ ವ್ಯಾಪಕ ಪ್ರತಿಭಟನೆಗಳು ನಡೆದಿವೆ.

ಇದನ್ನು ಓದಿ: ಅ-ಡಾಲರೀಕರಣದತ್ತ ಬಿರುಸು ನಡೆ ಆರಂಭ?

ಜನವರಿ 19ರಂದು ನಡೆದ ಸಾರ್ವತ್ರಿಕ ಮುಷ್ಕರದಲ್ಲಿ ಎಡಪಂಥೀಯ ಸಿಜಿಟಿ ಸೇರಿದಂತೆ ಎಲ್ಲ ಕೇಂದ್ರೀಯ ಟ್ರೇಡ್ ಯೂನಿಯನುಗಳು ಭಾಗವಹಿಸಿದ್ದವು. ಅದೇ ದಿನ ಸರಕಾರದ ‘ಪೆಂಶನ್ ಸುಧಾರಣೆ’ ತಿರಸ್ಕರಿಸಿ ದೇಶದಾದ್ಯಂತ ವ್ಯಾಪಕ ಪ್ರತಿಭಟನೆಗಳು ನಡೆದಿವೆ. ಇಂತಹ ಪ್ರತಿಭಟನೆಗಳಲ್ಲಿ ಇಪ್ಪತ್ತು ಲಕ್ಷಕ್ಕೂ ಹೆಚ್ಚು ಎಲ್ಲ ವರ್ಗಗಳ ಕಾರ್ಮಿಕರಲ್ಲದೆ, ಪ್ರಗತಿಪರ ಪಕ್ಷಗಳ ಮತ್ತು ಯುವಜನ ಸಂಘಟನೆಗಳ ಬೆಂಬಲಿಗರು ಭಾಗವಹಿಸಿದ್ದರು.  ರಾಜಧಾನಿ ಪ್ಯಾರೀಸ್ ಒಂದರಲ್ಲೇ 5 ಲಕ್ಷಕ್ಕೂ ಹೆಚ್ಚು ಜನ ಭಾಗವಹಿಸಿದ್ದರು ಎಂದು ವರದಿಯಾಗಿದೆ.

ನಿವೃತ್ತರಿಗೆ ಕೊಡುವ ಪೆಂಶನ್ ವ್ಯವಸ್ಥೆಯಲ್ಲಿ ಜನವರಿ 10ರಂದು ಅಧ‍್ಯಕ್ಷ ಮ್ಯಾಕ್ರಾನ್ ಪ್ರಮುಖ ಬದಲಾವಣೆಗಳನ್ನು ಘೋಷಿಸಿದ್ದು ಜನತೆಯಲ್ಲಿ ತೀವ್ರ ಆಕ್ರೋಶವುಂಟು ಮಾಡಿತ್ತು. ನಿವೃತ್ತಿ ವಯಸ್ಸನ್ನು 62ರಿಂದ 64ಕ್ಕೆ ಹೆಚ್ಚಿಸಿದ್ದು, ಪೂರ್ಣ ಪೆಂಶನ್ ಪಡೆಯಬೇಕಾದರೆ ಕನಿಷ್ಠ 43 ವರ್ಷ ಕೆಲಸ ಮಾಡಿರಬೇಕು ಎಂಬ ಹೊಸ ಷರತ್ತು 2027ರಿಂದ ಲಗಾವಾಗುವುದು – ಪ್ರಮುಖ ಬದಲಾವಣೆಗಳು. ಅಭಿವೃದ್ಧ ದೇಶಗಳ ಸಂಪತ್ತು, ಸಮೃದ್ಧಿಗಳನ್ನು ಕಾರ್ಮಿಕರೊಂದಿಗೆ ಹೆಚ್ಚೆಚ್ಚಾಗಿ ಹಂಚಿಕೊಳ್ಳಬೇಕು. ಇದಕ್ಕನುಗುಣವಾಗಿ ನಿವೃತ್ತಿ ವಯಸ್ಸು 60ಕ್ಕೆ ಕಡಿಮೆಯಾಗಬೇಕು ಹೆಚ್ಚಲ್ಲ. ಅದೇ ರೀತಿ ಪೂರ್ಣ ಪೆಂಶನ್ ಪಡೆಯಲು ಬೇಕಾದ ಕನಿಷ್ಠ ಕೆಲಸದ ವರ್ಷಗಳು ಕಡಿಮೆಯಾಗಬೇಕು, ಹೆಚ್ಚಲ್ಲ ಎಂಬುದು ಕಾರ್ಮಿಕರ ವಾದ.

ಇದನ್ನು ಓದಿ: ಸುನಕ್ ಗೆ 27 ಲಕ್ಷ ಯು.ಕೆ ಕಾರ್ಮಿಕರ ಸರಣಿ ಮುಷ್ಕರಗಳ ಸವಾಲು

ಕಷ್ಟದ ಕೆಲಸ, ಕೆಲಸದ ಕಠಿಣ ಪರಿಸ್ಥಿತಿಗಳಿಂದಾಗಿ ಮತ್ತು ಆರೋಗ್ಯ ಸಮಸ್ಯೆಗಳ ಕಾರಣಗಳಿಂದಾಗಿ ಹಲವು ಕಾರ್ಮಿಕರು (ಪ್ರಮುಖವಾಗಿ ಮಹಿಳೆಯರು) ಬೇಗ ನಿವೃತ್ತಿ ಪಡೆಯಬೇಕಾಗುತ್ತದೆ. ಮಹಿಳಾ ಕಾರ್ಮಿಕರು ಕುಟುಂಬದ ಪೋಷಣೆಗೆ ಮಧ್ಯೆ ಕೆಲವು ಅವಧಿಗಳ ಕಾಲ ಕೆಲಸ ಬಿಡಬೇಕಾಗುತ್ತದೆ. ಹಾಗಾಗಿ ಈ ಬದಲಾವಣೆಗಳು ಒಟ್ಟಾರೆಯಾಗಿ ಕಾರ್ಮಿಕ-ವಿರೋಧಿಯೆಂಬುದು  ಕಾರ್ಮಿಕರ ಆಕ್ರೋಶಕ್ಕೆ ಕಾರಣವಾಗಿತ್ತು.  ನಿವೃತ್ತಿ ವಯಸ್ಸನ್ನು ಏರಿಸುವುದರಿಂದ ಯುವಜನರಿಗೆ ಉದ್ಯೋಗಾವಕಾಶ ಕಡಿಮೆಯಾಗುತ್ತದೆ. ಅಲ್ಲದೆ ಹಿಂದಿನ ಪೀಳಿಗೆಗಿಂತ ಮುಂದಿನ ಪೀಳಿಗೆ ಹೆಚ್ಚಿನ ವರ್ಷಗಳ ಕಾಲ ದುಡಿಯಬೇಕಾಗುವುದು ಪ್ರಗತಿ, ಅಭಿವೃದ್ಧಿಯ ಲಕ್ಷಣವಲ್ಲವೆಂಬುದು ಪ್ರಜ್ಞಾವಂತ ಯುವಜನರ ಆಕ್ರೋಶಕ್ಕೆ ಕಾರಣವಾಗಿತ್ತು.

ಫ್ರಾನ್ಸಿನ ಪೆಂಶನ್ ವ್ಯವಸ್ಥೆಯನ್ನು ಮುಂದುವರೆಸಲು ಸಾಧ್ಯವಾಗಿಸಲು ಅದರಲ್ಲಿ ಕೆಲವು ಬದಲಾವಣೆಗಳು ಅಗತ್ಯವೆಂದು ಅಧ್ಯಕ್ಷ ಮ್ಯಾಕ್ರಾನ್ ಅವರ ಹಿಂದಿನ ಅಧ್ಯಕ್ಷಾವಧಿಯ ಪ್ಸಸ್ತಾವವಾಗಿತ್ತು. ಈ ಬದಲಾವಣೆಗಳನ್ನು ಮಾಡದಿದ್ದರೆ ಪೆಂಶನ್ ವ್ಯವಸ್ಥೆ ಮುರಿದು ಬೀಳುತ್ತದೆಯೆಂಬುದು ಅವರ ವಾದವಾಗಿತ್ತು. 2019ರಲ್ಲಿ ಅದನ್ನು ಜಾರಿ ಮಾಡಲು ಹೊರಟಾಗ ಈಗಿನಂತೆ ತೀವ್ರ ವಿರೋಧದಿಂದಾಗಿ ಅದನ್ನು ಹಿಂದೆಗೆಯಬೇಕಾಗಿತ್ತು. ಈ ಬದಲಾವಣೆಗಳನ್ನು ಸರಕಾರ ಮಾಡಹೊರಟಿರುವುದು ಪ್ರಮುಖವಾಗಿ ಕಾರ್ಮಿಕರ ವೇತನದ ಭಾಗ (ಮತ್ತು ಉದ್ಯೋಗದಾತರ ಭಾಗ) ಗಳನ್ನು ಒಂದು ನಿಧಿಯಲ್ಲಿ ಹೂಡಿಕೆ ಮಾಡಿ ಅದರಿಂದ ಕೊಡಲಾಗಿವ ಪೆಂಶನ್ ನಲ್ಲಿ.  ಇದು ಪ್ರಮುಖವಾಗಿ ಕಾರ್ಮಿಕರದ್ದೇ ಹಣ ಎಂಬುದನ್ನು ಗಮನಿಸಬೇಕು.

ಇದನ್ನು ಓದಿ: ಚಿಲಿಯ ಜನ ಅತ್ಯಂತ ಪ್ರಗತಿಪರ ಸಂವಿಧಾನವನ್ನು ಏಕೆ ತಿರಸ್ಕರಿಸಿದರು?

 “ಪೆಂಶನ್ ವ್ಯವಸ್ಥೆ ಮುರಿದು ಬೀಳುತ್ತದೆಯೆಂಬುದು ಬೊಗಳೆ. ಈಗಿರುವಂತೆ ಪೆಂಶನ್ ವ್ಯವಸ್ಥೆಯನ್ನು ಮುಂದುವರೆಸಲು ಮಾತ್ರವಲ್ಲ,  ನಿವೃತ್ತಿ ವಯಸ್ಸನ್ನು 60ಕ್ಕೆ ಇಳಿಸಲು ಸಹ, ಹಲವು ವಿಧಾನಗಳಿವೆ. ಈ ಕುರಿತು ನಾವು ಸರಕಾರದ ಜತೆ  ಚರ್ಚೆಗೆ ಸಿದ್ಧ.  ಆದರೆ ಸರಕಾರ ಅದಕ್ಕೆ ಸಿದ್ಧವಿಲ್ಲ. ಈ ಅನ್ಯಾಯಯುತ ಕ್ರೂರ ಬದಲಾವಣೆಗಳನ್ನು ಹೊರಿಸಲು ಪ್ರಯತ್ನಿಸುತ್ತಿದೆ” ಎಂದು ಪ್ರಮುಖ ಕೇಂದ್ರೀಯ ಟ್ರೇಡ್ ಯೂನಿಯನ್ ಸಿಜಿಟಿ ಹೇಳಿದೆ. ಕಾರ್ಮಿಕರು, ಯುವಜನರು ಮತ್ತು ಜನತೆಯಲ್ಲಿ ಕಂಡು ಬಂದ ಅಭೂತಪೂರ್ವ ಐಕ್ಯತೆಗೆ, ಮ್ಯಾಕ್ರಾನ್ ಅವರ ಪೆಂಶನ್ ಯೋಜನೆ “ಎಲ್ಲರ ಆತಂಕ, ಅಸಮಾಧಾನಗಳನ್ನು ಒಟ್ಟಾಗಿ ಕಟ್ಟಿಟ್ಟದ್ದು ಕಾರಣ” ವೆಂದೂ ಸಿಜಿಟಿ ಹೇಳಿದೆ.

“ಮ್ಯಾಕ್ರಾನ್ ಫ್ರಾನ್ಸಿನ ಜನತೆಗೆ ಸವಾಲೆಸೆದಿದ್ದರು. ಅದಕ್ಕೆ ಫ್ರಾನ್ಸಿನ ಜನತೆ ಸ್ಪಷ್ಟ ಮತ್ತು ಪ್ರಬಲ ಉತ್ತರ ಕೊಟ್ಟಿದ್ದಾರೆ.  ‘ನಮಗೆ ಈ ಪೆಂಶನ್ ಸುಧಾರಣೆ ಬೇಡ !’ ಎಂಬುದೇ ಆ ಉತ್ತರ” ಕಾರ್ಮಿಕರು ಈ ‘ಸುಧಾರಣೆ’ಗಳಿಂದ ತಮಗಾಗಲಿರುವ ನಷ್ಟವನ್ನು ಮನಗಂಡಿದ್ದಾರೆ.” ಎಂದು ವ್ಯಾಪಕ ಪ್ರದರ್ಶನಗಳ ನಂತರ ಜನತೆಯನ್ನು ಅಭಿನಂದಿಸಿ ಹೇಳಿಕೆ ನೀಡಿದ ಫ್ರೆಂಚ್ ಕಮ್ಯುನಿಸ್ಟ್ ಪಕ್ಷ, “ಅಧ್ಯಕ್ಷ ಮ್ಯಾಕ್ರಾನ್ ಈ ಪೆಂಶನ್ ಬದಲಾವಣೆಗಳನ್ನು ಹಿಂತೆಗೆದುಕೊಳ್ಳಬೇಕು ಅಥವಾ ಇದನ್ನು ಜನಮತಸಂಗ್ರಹಕ್ಕೆ ಹಾಕಬೇಕು” ಎಂದು ಒತ್ತಾಯಿಸಿದೆ.

ಇದನ್ನು ಓದಿ: ಫ್ರಾನ್ಸಿನಲ್ಲೂ ಎಡ ಮುನ್ನಡೆ, ಅಧ್ಯಕ್ಷ ಮ್ಯಾಕ್ರಾನ್ ಕೂಟಕ್ಕೆ ಬಹುಮತ ನಷ್ಟ

ಸೋವಿಯೆಟ್ ಒಕ್ಕೂಟದ ನಾಯಕತ್ವದ ಸಮಾಜವಾದಿ ಬಣದ ಜತೆ ಬಂಡವಾಳಶಾಹಿ ಪಾಶ್ಚಿಮಾತ್ಯ ದೇಶಗಳ ಶೀತಲ ಸಮರದ ಪೈಪೋಟಿಯಿಂದಾಗಿ ಮೇಲುಗೈ ಸಾಧಿಸಿದ್ದ ಪಶ್ಚಿಮ ಯುರೋಪಿನ ಕಾರ್ಮಿಕರು ತಮ್ಮ ಹೋರಾಟಗಳಿಂದ ಗಳಿಸಿದ್ದ ಸಾಮಾಜಿಕ ಭದ್ರತಾ ಮತ್ತು ಕಲ್ಯಾಣ ಕ್ರಮಗಳನ್ನು, ಸೋವಿಯೆಟ್ ಪತನದ ನಂತರ ಒಂದೊಂದಾಗಿ ಕಳಕೊಳ್ಳಲಾರಂಭಿಸಿದ್ದರು. ಯುರೋ ಕೂಟದ ಹಲವು ದೇಶಗಳಲ್ಲಿ ‘ಆರ್ಥಿಕ ಬಿಕ್ಕಟ್ಟು ಪರಿಹಾರಕ್ಕಾಗಿ ಮಿತವ್ಯಯ’ದ ಹೆಸರಲ್ಲಿ ಕಳೆದ ಒಂದು ದಶಕದಲ್ಲಿ ಕಾರ್ಮಿಕರ ಆದಾಯ, ಸಾಮಾಜಿಕ ಭದ್ರತಾ ಮತ್ತು ಕಲ್ಯಾಣ ಕ್ರಮಗಳ ಮೇಲೆ ಭೀಕರ ದಾಳಿ ನಡೆಯುತ್ತಿದೆ.  ಫ್ರಾನ್ಸ್ ಮತ್ತು ಯುರೋಪಿಯನ್ ಕೂಟದ ಇತರ ಹಲವು ದೇಶಗಳಲ್ಲಿ ‘ಪೆಂಶನ್ ಸುಧಾರಣೆಗಳ’ ಹೆಸರಲ್ಲಿ  ಪೆಂಶನ್ ವ್ಯವಸ್ಥೆಯ ಮೇಲೆ ದಾಳಿ ನಡೆಯುತ್ತಿದೆ. ಫ್ರಾನ್ಸ್ ನಲ್ಲಿ ಕಾರ್ಮಿಕ ವರ್ಗ ಅತ್ಯಂತ ಸಂಘಟಿತವಾಗಿರುವುದರಿಂದ  ಅದರ ವಿರುದ್ಧ ಪ್ರತಿರೋಧ ಸಹ ಅಷ್ಟೇ ತೀವ್ರವಾಗಿದೆ. ಹಾಗಾಗಿಯೇ ಪೆಂಶನ್ ವ್ಯವಸ್ಥೆಯಲ್ಲಿ ಬದಲಾವಣೆಗಳನ್ನು ಧಿಕ್ಕರಿಸಿ ಹೋರಾಡುತ್ತಿರುವ ಫ್ರೆಂಚ್ ಕಾರ್ಮಿಕರು, ಯುವಜನ ಮತ್ತು ಜನತೆಗೆ, ಗ್ರೀಸ್, ಬೆಲ್ಜಿಯಂ, ಇಟಲಿ, ಯುಕೆ ಮತ್ತಿತರ ಯುರೋಪಿನ ಕಾರ್ಮಿಕರ, ಪ್ರಗತಿಪರ ಚಳುವಳಿಗಳಿಂದ ಜನತೆಯಿಂದ ಸೌಹಾರ್ದ ಬೆಂಬಲ ಹರಿದು ಬಂದಿದೆ.

ಇಲ್ಲಿ ಕ್ಲಿಕ್‌ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್‌ ಗುಂಪು ಸೇರಲು ಈ ಲಿಂಕ್‌ ಕ್ಲಿಕ್‌ ಮಾಡಿ

Donate Janashakthi Media

Leave a Reply

Your email address will not be published. Required fields are marked *