ಕಲಬುರಗಿ: ಅಗ್ನಿಪಥ್ ಯೋಜನೆ ಕುರಿತು ಪ್ರತಿಕ್ರಿಯೆ ನೀಡಿದ ರಾಜ್ಯಸಭೆ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು, ರಕ್ಷಣಾ ಇಲಾಖೆಯಲ್ಲಿ ಗುತ್ತಿಗೆಯಾಗಲಿ, ದಿನಗೂಲಿಯಾದರದಲ್ಲಿ ತೆಗೆದುಕೊಳ್ಳುವುದು ಸರಿಯಲ್ಲ. ರಕ್ಷಣಾ ಇಲಾಖೆಯಲ್ಲಿ ಉದ್ಯೋಗಾಕಾಂಕ್ಷಿಗಳಿಗೆ ತಿಳಿದುಕೊಳ್ಳಲು ಬೇಕಾದ ವಿಚಾರಗಳು ಸಾಕಷ್ಟು ಇವೆ. ಅದಕ್ಕೆ ಹಲವು ವರ್ಷಗಳೇ ಬೇಕಾಗುತ್ತದೆ. ನೀವು ಕೇವಲ ನಾಲ್ಕೇ ವರ್ಷಕ್ಕೆ ಮನೆಗೆ ಹೋಗಿ ಅಂದರೆ ಹೇಗೆ ಎಂದು ಪ್ರಶ್ನಿಸಿದರು.
ಭಾರತೀಯ ಸೇನೆಯಲ್ಲಿ ದಾಖಲಾಗುವವರು ದೇಶದ ರಕ್ಷಣೆಗಾಗಿ ತಮ್ಮ ಸರ್ವಸ್ವವನ್ನು ತ್ಯಾಗ ಮಾಡಿ ಹೋಗುತ್ತಾರೆ. ಅಂತಹವರನ್ನೂ ನೀವು ಗುತ್ತಿಗೆ ಕಾರ್ಮಿಕರ ರೀತಿಯಲ್ಲಿ ತರಬೇತಿಗೊಳಿಸಿದರೇ ಯಾವುದೇ ಪ್ರಯೋಜನವಾಗುವುದಿಲ್ಲ. ಸೇನೆಗೆ ಸೇರ್ಪಡೆಗೊಳ್ಳುವ ಮೊದಲು ಹಣ ಪಾವತಿಸಿ ತರಬೇತಿ ಕೇಂದ್ರಗಳಲ್ಲಿಯೂ ಸಿದ್ಧತೆ ಮಾಡಿಕೊಳ್ಳುವವರಿಗೆ, ನಾಲ್ಕು ವರ್ಷದಲ್ಲಿ ಅಷ್ಟು ಹಣ ವಾಪಸ್ ಬರೋದಿಲ್ಲ. ಇದನ್ನು ದೇಶದ ಯುವಕರು ಒಪ್ಪೋದಿಲ್ಲ ಎಂದರು.
ದೇಶದ ರಕ್ಷಣಾ ವಿಚಾರದಲ್ಲಿಯೂ ರಾಜಕಾರಣ ಮಾಡೋದು ಸರಿ ಅಲ್ಲ. ಇಂತಹ ಯೋಜನೆ ತಂದು ಯುವಕರನ್ನು ಪ್ರಚೋದಿಸುತ್ತಿದ್ದಾರೆ. ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗುತ್ತಿದೆ. ನಾಳೆ ಕಾಂಗ್ರೆಸ್ ವತಿಯಿಂದ ಜಂತರ್ ಮಂತರ್ನಲ್ಲಿ ಸತ್ಯಾಗ್ರಹ ಮಾಡುತ್ತೇವೆಂದು ತಿಳಿಸಿದರು.
ಕೇಂದ್ರ ಸರ್ಕಾರ ಇತ್ತೀಚೆಗೆ ಯಾವ ಹುದ್ದೆಗಳನ್ನು ಭರ್ತಿ ಮಾಡಿಲ್ಲ. ರಕ್ಷಣಾ ಇಲಾಖೆಯಲ್ಲಿಯೂ ಲಕ್ಷಾಂತರ ಹುದ್ದೆಗಳು ಖಾಲಿ ಇವೆ. ರಾಜ್ಯದಲ್ಲಿ ಕೇಂದ್ರ ಸರ್ಕಾರದ ಅನೇಕ ಹುದ್ದೆಗಳು ಇವೆ. ಅದಕ್ಕೂ ಕೂಡ ಕೇಂದ್ರ ಸರ್ಕಾರ ಸಹಾಯ ಮಾಡಿಲ್ಲ. ಹಾಗಾಗಿ, ರಾಜ್ಯ ಸರ್ಕಾರ ಕೂಡ ಖಾಲಿ ಹುದ್ದೆಗಳನ್ನು ಭರ್ತಿ ಮಾಡದೇ ಇರುವುದು ನೋಡಬಹುದು. ಜನರಿಗೆ ಸುಳ್ಳು ಹೇಳಬೇಡಿ, ಮೋಸ ಮಾಡಬೇಡಿ ಎಂದು ಕೇಂದ್ರದ ವಿರುದ್ಧ ಹರಿಹಾಯ್ದರು.
ಇನ್ನು ಪ್ರಧಾನಿ ಮೋದಿ ತಲೆಯಲ್ಲೇನಿದೆ ಅಂತಾ ನನಗೆ ಚೆನ್ನಾಗಿ ಗೊತ್ತು. ಎರಡೆರಡು ಕಡೆ ಸ್ಪರ್ಧೆ ಮಾಡಿದ್ದಾರೆ. ರಾಹುಲ್ ಗಾಂಧಿ ಎರಡು ಕಡೆ ಸ್ಪರ್ಧೆ ಮಾಡಿರೋದನ್ನು ತಲೆಯಲ್ಲಿಟ್ಟುಕೊಂಡು ಹೀಗೆ ಮಾಡಿದ್ದಾರೆಂದರು.
ಇಡಿ ವಿಚಾರಣೆ
ನ್ಯಾಷನಲ್ ಹೆರಾಲ್ಡ್ ಕಾಂಗ್ರೆಸ್ ಪಕ್ಷದ ಆಸ್ತಿಯಾಗಿದೆ. ಅದನ್ನು ಉಳಿಸಿಕೊಳ್ಳಲಿಲ್ಲ ಅಂದರೆ, ನೆಹರು ಯಾವ ಉದ್ದೇಶಕ್ಕಾಗಿ ಪತ್ರಿಕೆ ಹುಟ್ಟುಹಾಕಿದ್ದರೋ ಅದು ವಿಫಲವಾಗುತ್ತದೆ. ನಮ್ಮ ತತ್ವ, ಸಿದ್ಧಾಂತಗಳನ್ನು ಉಳಿಸಿಕೊಳ್ಳಲು ಈ ಹೋರಾಟ ಅನಿವಾರ್ಯ. ಜನರ ಮುಂದೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ವರ್ಚಸ್ಸು ಕುಗ್ಗಿಸುವುದಕ್ಕೆ ಈ ರೀತಿ ಕುತಂತ್ರ ಮಾಡಲಾಗುತ್ತಿದೆ. ಕೇಂದ್ರವು ಇಡಿ, ಐಟಿಯಂತಹ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳಲು ಮುಂದಾಗಿದ್ದಾರೆ ಎಂದರು.