ಬಿ. ಶ್ರೀಪಾದ ಭಟ್
ತಮ್ಮ ಹೈಕಮಾಂಡನ್ನು ಸಂತುಷ್ಟಿಗೊಳಿಸುವ ಉತ್ಸಾಹದಲ್ಲಿರುವ ಉನ್ನತ ಶಿಕ್ಷಣ ಸಚಿವ ಅಶ್ವತ್ಥನಾರಾಯಣ ಎನ್.ಇ.ಪಿ-2020ನ್ನು ಕರ್ನಾಟಕದಲ್ಲಿ ಜಾರಿಗೊಳಿಸುವ ಹಠ ತೊಟ್ಟಿದ್ದಾರೆ. “ಉನ್ನತ ಶಿಕ್ಷಣದಲ್ಲಿ ಪಠ್ಯಕ್ರಮದ ಸುಧಾರಣೆಗಾಗಿ ಕಾರ್ಯಪಡೆ (ಟಾಸ್ಕ್ ಫೋರ್ಸ್) ಉಪಸಮಿತಿ”ಯು ರಚಿಸಿದ 33 ಪುಟಗಳ ಕರಡನ್ನು ಸಚಿವ ಅಶ್ವತ್ಥನಾರಾಯಣ ಬಿಡುಗಡೆ ಮಾಡಿದ್ದಾರೆ. ಇದರಲ್ಲಿ 4 ವರ್ಷಗಳ ಪದವಿ ತರಗತಿಗಳ ಸ್ವರೂಪ, ಸಿ.ಬಿ.ಸಿ.ಎಸ್(Choice Based Credit System – ಆಯ್ಕೆ ಆಧಾರಿತ ಕ್ರೆಡಿಟ್ ವ್ಯವಸ್ಥೆ) ಪಠ್ಯಕ್ರಮದ ಕುರಿತು ವಿವರಿಸಲಾಗಿದೆ. ಈ ಕಾರ್ಯಪಡೆಯ ನಾಲ್ಕು ಜನ ಏಕಪಕ್ಷೀಯವಾಗಿ ಕರ್ನಾಟಕದ ಉನ್ನತ ಶಿಕ್ಷಣದ ಭವಿಷ್ಯವನ್ನು ನಿರ್ಧರಿಸುತ್ತಿರುವುದು ಇಲ್ಲಿನ ದುರಂತ. ಈ ನಾಲ್ಕು ವರ್ಷಗಳ ಬಹುಶಿಸ್ತೀಯ ಪದವಿ ಶಿಕ್ಷಣ ಮತ್ತು ಸಿ.ಬಿ.ಸಿ.ಎಸ್ ಪಠ್ಯಕ್ರಮದ ವಿವರಗಳನ್ನು ಅದರ ಸಾಧಕ-ಬಾಧಕಗಳನ್ನು ಇಲ್ಲಿ ಚರ್ಚಿಸಲಾಗಿದೆ. ಇದು ಈಗಿರುವ ಇದ್ದ ಬದ್ದ ಸಾಮಾಜಿಕ ನ್ಯಾಯವನ್ನೂ, ಕೆಳ ವರ್ಗಗಳ ಜನರಿಗೆ ಉನ್ನತ ಶಿಕ್ಷಣಕ್ಕೆ ಅವಕಾಶವಿರುವ ಅರೆಬರೆ ಸಮಾನ ವ್ಯವಸ್ಥೆಯನ್ನೂ ನಾಶ ಮಾಡಿ; ಪದವಿ ಶಿಕ್ಷಣವನ್ನು ಪೂರ್ಣವಾಗಿ ಖಾಸಗೀಕರಿಸಿ; ಕೆಲವೇ ದುಬಾರಿ, ‘ಗುಣಮಟ್ಟದ’ ಕಾಲೇಜು/ವಿ.ವಿಗಳಲ್ಲಿ ಕೇಂದ್ರೀಕರಿಸುವ ಮತ್ತು ಇದರ ಫಲವಾಗಿ ಕಾಲೇಜು ಶಿಕ್ಷಣ ವ್ಯವಸ್ಥೆ ಉತ್ತಮಗೊಳ್ಳುವ ಬದಲು ಬೆಂಕಿಯಿಂದ ಬಾಣಲೆಗೆ ಬೀಳುವ ಸಾಧ್ಯತೆಯೇ ಹೆಚ್ಚು ಎನ್ನುತ್ತಾರೆ ಲೇಖಕರು.
ರಾಜ್ಯದಲ್ಲಿ ಕೋವಿಡ್ ಮಹಾಸೋಂಕಿನ ಕಾರಣಕ್ಕೆ ಒಂದೂವರೆ ವರ್ಷ ಶಾಲಾ ಕಾಲೇಜುಗಳು ಕಾರ್ಯ ನಿರ್ವಹಿಸದಿದ್ದರೂ ಸಹ, ಈಗ ಉನ್ನತ ಶಿಕ್ಷಣದಲ್ಲಿ ದಿಢೀರನೆ ಅಮೂಲಾಗ್ರ ಬದಲಾವಣೆಯ ಚಟುವಟಿಕೆ ಪ್ರಾರಂಭವಾಗಿದೆ. ರಾಷ್ಟ್ರೀಯ ಶಿಕ್ಷಣ ನೀತಿ(ಎನ್.ಇ.ಪಿ-2020) ಜಾರಿಗೊಳಿಸುವ ತುದಿಗಾಲಲ್ಲಿರುವ ಉನ್ನತ ಶಿಕ್ಷಣ ಸಚಿವರು ‘ಇಟ್ಟ ಗುರಿ ಬಿಟ್ಟ ಬಾಣ’ ಎನ್ನುವಂತೆ ಮುನ್ನುಗ್ಗುತ್ತಿದ್ದಾರೆ. ತಮ್ಮ ಹೈಕಮಾಂಡನ್ನು ಸಂತುಷ್ಟಿಗೊಳಿಸುವ ಉತ್ಸಾಹದಲ್ಲಿರುವ ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್.ಅಶ್ವತ್ಥನಾರಾಯಣ ಎನ್.ಇ.ಪಿ-2020ನ್ನು ಕರ್ನಾಟಕದಲ್ಲಿ ಜಾರಿಗೊಳಿಸುವ ಹಠ ತೊಟ್ಟಿದ್ದಾರೆ. ಅವರು ಪ್ರಸಕ್ತ 2021-22ರ ವರ್ಷದಿಂದಲೇ 4 ವರ್ಷಗಳ ಪದವಿ ಕೋರ್ಸ್ ಪ್ರಾರಂಬಿಸುತ್ತೇವೆ ಮತ್ತು ಅದಕ್ಕಾಗಿ ಎಲ್ಲಾ ತಯಾರಿ ಮಾಡಿಕೊಳ್ಳಿ ಎಂದು ಉನ್ನತ ಶಿಕ್ಷಣ ಇಲಾಖೆಗೆ ಸೂಚಿಸಿದ್ದಾರೆ. ತಮ್ಮ ವೈಯಕ್ತಿಕ ಸ್ವಾರ್ಥಕ್ಕಾಗಿ ರಾಜ್ಯದ ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಮತ್ತಷ್ಟು ಹದಗೆಡಿಸಲು ಮುಂದಾಗಿದ್ದಾರೆ. ಏಕೆಂದರೆ ಯಾವುದೇ ಪೂರ್ವಸಿದ್ಧತೆಗಳಿಲ್ಲದೆ, ಸಮಾಲೋಚನೆಗಳಿಲ್ಲದೆ, ಇಲ್ಲಿನ ಶಿಕ್ಷಣ ವ್ಯವಸ್ಥೆಯನ್ನು ಬಲಪಡಿಸದೆ ದಿಢೀರನೆ ಈಗಿರುವ ವ್ಯವಸ್ಥೆಯನ್ನೇ ಬದಲಾಯಿಸುವುದು ಅಪಾಯಕಾರಿಯಾದ ನಿಲುವು ಎಂದು ಹೇಳಬೇಕಾಗುತ್ತದೆ.
ಮೋದಿ ನೇತೃತ್ವದ ಬಿಜೆಪಿ ಸರಕಾರವು ಈ 4 ವರ್ಷಗಳ ಪದವಿ ಕೋರ್ಸ್ ಭಾಗವಾಗಿರುವ ಎನ್.ಇ.ಪಿ-2020ಯನ್ನು ಜಾರಿಗೊಳಿಸುವ ಸಂಬಂಧ ರಾಜ್ಯಗಳೊಂದಿಗೆ, ಶಿಕ್ಷಣದ ಹಕ್ಕುದಾರರೊಂದಿಗೆ ಸಮಾಲೋಚನೆ ಮಾಡಲಿಲ್ಲ; ಸಂಸತ್ತಿನಲ್ಲಿ, ವಿಧಾನಸಭೆಯಲ್ಲಿ ಚರ್ಚೆ ನಡೆಸಲಿಲ್ಲ. ತಮ್ಮ ಸರ್ವಾಧಿಕಾರ ಪ್ರವೃತ್ತಿಯನ್ನು ಮುಂದುವರೆಸಿದ ಮೋದಿ ಸರಕಾರವು, ಅದನ್ನು ಏಕಪಕ್ಷೀಯವಾಗಿ ರಾಜ್ಯಗಳ ಮೇಲೆ ಹೇರಲು ಹೊರಟಿದೆ. ತಮಿಳುನಾಡು ಹಾಗೂ ಕೇರಳ ಸರಕಾರಗಳನ್ನು ಹೊರತುಪಡಿಸಿ ಮಿಕ್ಕ ರಾಜ್ಯ ಸರಕಾರಗಳು ಈ ನಿರಂಕುಶ ದಬ್ಬಾಳಿಕೆಯನ್ನು ಪ್ರಶ್ನಿಸುತ್ತಿಲ್ಲ. ಸಂವಿಧಾನದ ಶೆಡ್ಯೂಲ್ 7ರ ಪ್ರಕಾರ ಶಿಕ್ಷಣವು ಸಮವರ್ತಿ ಪಟ್ಟಿಯಲ್ಲಿ ಬರುತ್ತದೆ, ಶಿಕ್ಷಣದ ಜವಾಬ್ದಾರಿ ಮತ್ತು ಅಧಿಕಾರ ರಾಜ್ಯಗಳಿಗೂ ಸಂಬಂಧಿಸಿದೆ ಎಂದು ತಮ್ಮ ಹಕ್ಕುಗಳನ್ನು ಪ್ರತಿಪಾದಿಸುತ್ತಿಲ್ಲ. ಇಲ್ಲಿ ಶಿಕ್ಷಣದ ಭವಿಷ್ಯವು ಅಂಧಕಾರದಲ್ಲಿದೆ.
ಇದನ್ನು ಓದಿ: ಪದವಿಯಲ್ಲಿ ನಾಲ್ಕು ವರ್ಷವೂ ಕನ್ನಡ ಇರಲಿ : ಅಧ್ಯಾಪಕರ ಸಂಘದ ಒತ್ತಾಯ
ಎನ್.ಇ.ಪಿ-2020ಯ ಒಂದು ಭಾಗವಾಗಿ ಯುಜಿಸಿಯು ಶೇಕಡಾ 40 ದಲ್ಲಿ ಆನ್ಲೈನ್ ಕ್ಲಾಸ್ ತೆಗೆದುಕೊಳ್ಳುವ ಸಂಬಂಧ ಕರಡು ಪ್ರತಿಯನ್ನು ಎಲ್ಲಾ ವಿಶ್ವವಿದ್ಯಾಲಯಗಳಿಗೆ ಕಳಿಸಿತ್ತು. ಹೀಗಾಗಿ ಕರ್ನಾಟಕ ರಾಜ್ಯವು ರಾಜಕೀಯ ಕಾರಣಗಳಿಗಾಗಿ ದಿಢೀರನೆ ಹೊಸ ಮಾದರಿಯ ಶಿಕ್ಷಣ ವ್ಯವಸ್ಥೆಗೆ ಬಲಿಪಶುವಾಗಬೇಕಾದ ಸಂಕಷ್ಟಕ್ಕೆ ಸಿಲುಕಿದೆ.
ನಾಲ್ಕು ವರ್ಷಗಳ ಪದವಿ ಕೋರ್ಸ್ಗೆ ತರಾತುರಿ ಅಗತ್ಯವೇ?
ಇದಕ್ಕೆ ಪೂರಕವಾಗಿ ಬಿ.ತಿಮ್ಮೇಗೌಡ ಅಧ್ಯಕ್ಷರಾಗಿರುವ ಇಂದುಪ್ರಸಾದ್, ಮಾನಸ ನಾಗಭೂಷಣ್, ಪದ್ಮಾವತಿ ಸದಸ್ಯರಾಗಿರುವ “ಉನ್ನತ ಶಿಕ್ಷಣದಲ್ಲಿ ಪಠ್ಯಕ್ರಮದ ಸುಧಾರಣೆಗಾಗಿ ಕಾರ್ಯಪಡೆ (ಟಾಸ್ಕ್ಫೋರ್ಸ್) ಉಪಸಮಿತಿ”ಯು ರಚಿಸಿದ 33 ಪುಟಗಳ ಕರಡನ್ನು ಸಚಿವ ಅಶ್ವತ್ಥನಾರಾಯಣ ಬಿಡುಗಡೆ ಮಾಡಿದ್ದಾರೆ. ಇದರಲ್ಲಿ 4 ವರ್ಷಗಳ ಪದವಿ ತರಗತಿಗಳ ಸ್ವರೂಪ, ಸಿ.ಬಿ.ಸಿ.ಎಸ್(Choice Based Credit System – ಆಯ್ಕೆ ಆಧಾರಿತ ಕ್ರೆಡಿಟ್ವ್ಯವಸ್ಥೆ) ಪಠ್ಯಕ್ರಮದ ಕುರಿತು ವಿವರಿಸಲಾಗಿದೆ. ಆದರೆ ಈ ನಾಲ್ಕು ಜನ – ಕಾರ್ಯಪಡೆಯ ಅಧ್ಯಕ್ಷರು ಮತ್ತು ಸದಸ್ಯರು- ಏಕಪಕ್ಷೀಯವಾಗಿ ಕರ್ನಾಟಕದ ಉನ್ನತ ಶಿಕ್ಷಣದ ಭವಿಷ್ಯವನ್ನು ನಿರ್ಧರಿಸುತ್ತಿರುವುದು ಇಲ್ಲಿನ ದುರಂತ. ಈ ಕಾರ್ಯಪಡೆ ಸಿ.ಬಿ.ಸಿ.ಎಸ್ ಪಠ್ಯಕ್ರಮದ ಸ್ವರೂಪವನ್ನು ರಚಿಸಲು ಯಾರೊಂದಿಗೆ ಸಮಾಲೋಚನೆ ಮಾಡಿದ್ದಾರೆ, ಯಾವ ಮಾದರಿಗಳನ್ನು, ರೆಫೆರೆನ್ಸ್ಗಳನ್ನು ಬಳಸಿಕೊಂಡಿದ್ದಾರೆ ಎನ್ನುವ ವಿವರಗಳಿಲ್ಲ. ಯಾವ ಆಧಾರದಲ್ಲಿ ಇದನ್ನು ರಚಿಸಿದ್ದಾರೆ ಎನ್ನುವ ಬಗ್ಗೆ ಪಾರದರ್ಶಕತೆಯಿಲ್ಲ. ಈ ಕಾರಣಕ್ಕಾಗಿ ಕಾರ್ಯಪಡೆಯ ವಾಸ್ತವತೆಯನ್ನು ಅನುಮಾನಿಸಬೇಕಾಗುತ್ತದೆ, ಅದರ ವಿಶ್ವಾಸಾರ್ಹತೆಯನ್ನು ಪ್ರಶ್ನಿಸಬೇಕಾಗುತ್ತದೆ.
ಶಿಕ್ಷಣ ಸಚಿವರು ಈ ಕಾರ್ಯಪಡೆಯ ಶಿಫಾರಸ್ಸುಗಳನ್ನು ಅನುಷ್ಠಾನಗೊಳಿಸಲು ವಿಷಯವಾರು ತಜ್ಞರ ಸಮಿತಿಗಳನ್ನು ರಚಿಸಿದ್ದಾರೆ. ಭಾಷಾಶಾಸ್ತ್ರ, ಲಲಿತ ಕಲೆ ಮತ್ತು ದೃಶ್ಯ ಮಾಧ್ಯಮ, ಇತಿಹಾಸ, ವಿಜ್ಞಾನ ಮತ್ತು ಗಣಿತಶಾಸ್ತ್ರ, ರಾಸಾಯನಿಕ ಮತ್ತು ಜೀವವಿಜ್ಞಾನ ಶಾಸ್ತ್ರ, ಭೂ ವಿಜ್ಞಾನ, ವಾಣಿಜ್ಯ ಮತ್ತು ನಿರ್ವಹಣೆ, ಎಂಜಿನಿಯರಿಂಗ್, ಸಾಮಾಜಿಕ ವಿಜ್ಞಾನಗಳ ವಿಷಯವಾರು ತಜ್ಞರ ಸಮಿತಿಗಳ ಅಧ್ಯಕ್ಷರು ಮತ್ತು ಸದಸ್ಯರು ನೇಮಕಗೊಂಡಿದ್ದಾರೆ. ಈ ಸಮಿತಿಗಳು ಜೂನ್ 30, 2021ರ ಒಳಗೆ ತಮ್ಮ ವರದಿ ಕೊಡಬೇಕೆಂದು ಸೂಚಿಸಲಾಗಿದೆ. ಇದು ನಿಜಕ್ಕೂ ಆಘಾತಕಾರಿಯಾಗಿದೆ. ಸರಕಾರದಿಂದ ಆಯ್ಕೆಯಾದ ಈ ಸದಸ್ಯರು ಏಕಪಕ್ಷೀಯವಾಗಿ ರಾಜ್ಯದ ಉನ್ನತ ಶಿಕ್ಷಣದ ಭವಿಷ್ಯವನ್ನು ಕೇವಲ ಹತ್ತು ದಿನಗಳಲ್ಲಿ ನಿರ್ಧರಿಸುತ್ತಾರೆ ಎನ್ನುವ ಸಂಗತಿ ಕಳವಳಕಾರಿಯಾಗಿದೆ. ಈ ಕುರಿತು ಹಲವು ಪ್ರಶ್ನೆಗಳಿಗೆ ಸಚಿವರು ಉತ್ತರಿಸಲೇಬೇಕು.
- ಸಮಿತಿಗಳ ರಚನೆಯ ಸಂದರ್ಭದಲ್ಲಿ ಸಾಮಾಜಿಕ ನ್ಯಾಯ ಪಾಲಿಸಲಾಗಿದೆಯೇ ಎನ್ನುವುದು ಬಹಿರಂಗಗೊಳ್ಳಬೇಕಾಗಿದೆ.
- ಈ ಸಮಿತಿಗಳ ಕಾರ್ಯವಿಧಾನವೇನು ಎಂಬ ಸ್ಪಷ್ಟತೆಯಿಲ್ಲ. ಈ ಸದಸ್ಯರುಗಳು ತಮ್ಮೊಳಗೆ ಚರ್ಚಿಸಿ ಅಂತಿಮ ವರದಿಯನ್ನು ನೀಡುತ್ತಾರೆಯೇ? ಹಾಗಿದ್ದಲ್ಲಿ ಈ ಸದಸ್ಯರ ಅಕಡೆಮಿಕ್ ಹಿನ್ನೆಲೆ, ಅರ್ಹತೆ ಮುಖ್ಯವಾಗುತ್ತದೆ. ಇವರ ಶೈಕ್ಷಣಿಕೇತರ ಚಟುವಟಿಕೆಗಳು ಮತ್ತು ಯಾವ ಸಂಘಟನೆಗಳ ಜೊತೆ ಗುರುತಿಸಿಕೊಂಡಿದ್ದಾರೆ ಎನ್ನುವುದು ಸ್ಪಷ್ಟಗೊಳಿಸಬೇಕಾಗುತ್ತದೆ
- ಸಮಿತಿಗೆ ಶಿಕ್ಷಣ ಹಕ್ಕುದಾರರಾದ ವಿದ್ಯಾರ್ಥಿ ಸಂಘಟನೆಗಳು, ಶಿಕ್ಷಕ ಸಂಘಟನೆಗಳು, ಶಿಕ್ಷಣ ತಜ್ಞರೊಂದಿಗೆ ಸಮಾಲೋಚನೆ ನಡೆಸುವ ಯೋಜನೆಯಿದ್ದರೆ ಅದರ ವಿವರಗಳು ಸಹ ಸಾರ್ವಜನಿಕರಿಗೆ ಗೊತ್ತಾಗಬೇಕಿದೆ.
- ಸಮಿತಿಯ ಸದಸ್ಯರು ಸಮಾಲೋಚನೆ ಚರ್ಚೆ ನಡೆಸಲು ನಿರ್ಧರಿಸಿದರೆ ನಿಗದಿಪಡಿಸಿದ ಹತ್ತು ದಿನಗಳ ಗಡುವು ಸಾಕಾಗುವುದಿಲ್ಲ. ಇದಕ್ಕಾಗಿ ದಿನಕ್ಕೆ ನಾಲ್ಕು ಗಂಟೆಗಳನ್ನು ಮೀಸಲಿಟ್ಟರೂ ಸಹ ಕನಿಷ್ಟ ಒಂದು ತಿಂಗಳು ಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಇದರ ಅಂತಿಮ ವರದಿಯ ಸಲ್ಲಿಕೆಗೆ ಕಾಲಮಿತಿಯನ್ನು ನವೆಂಬರ್ 2021ವರಗೆ ವಿಸ್ತರಿಸಬೇಕಾಗುತ್ತದೆ.
- ಮತ್ತು ಈ ಸಮಿತಿಗಳ ಎಲ್ಲಾ ಚಟುವಟಿಕೆಗಳು ಪಾರದರ್ಶಕವಾಗಿರಬೇಕು ಮತ್ತು ಅದು ಆನ್ಲೈನ್ ಮೂಲಕ ನಡೆಸಬಾರದು. ಮುಖಾಮುಖಿಯಾಗಿ ಚರ್ಚಿಸಬೇಕು.
- ಮುಖ್ಯವಾಗಿ ಕೋವಿಡ್ ಮಹಾಸೋಂಕಿನ ಕಾರಣಕ್ಕೆ ಶೈಕ್ಷಣಿಕ ಚಟುವಟಿಕೆಗಳು ಸ್ಥಗಿತಗೊಂಡಿರುವ ಕಾರಣ ಉನ್ನತ ಶಿಕ್ಷಣ ಇಲಾಖೆಯು ಎನ್.ಇ.ಪಿ-2020 ಅನುಷ್ಠಾನಗೊಳಿಸುವ ತಮ್ಮ ನಿರ್ಧಾರವನ್ನು ಒಂದು ವರ್ಷ ಮುಂದೂಡುವುದು ಅಗತ್ಯವಾಗಿದೆ.
ಈಗ ನಾಲ್ಕು ವರ್ಷಗಳ ಬಹುಶಿಸ್ತೀಯ ಪದವಿ ಶಿಕ್ಷಣ ಮತ್ತು ಸಿ.ಬಿ.ಸಿ.ಎಸ್ (Choice Based Credit System – ಆಯ್ಕೆ ಆಧಾರಿತ ಕ್ರೆಡಿಟ್ ವ್ಯವಸ್ಥೆ) ಪಠ್ಯಕ್ರಮದ ವಿವರಗಳನ್ನು ಅದರ ಸಾಧಕ-ಬಾಧಕಗಳನ್ನು ಚರ್ಚಿಸೋಣ.
ನಾಲ್ಕು ವರ್ಷಗಳ ಪದವಿ ಶಿಕ್ಷಣ ವ್ಯವಸ್ಥೆಯ ಪ್ರಸ್ತಾವವೇನು?
ಸರಕಾರವು ಉನ್ನತ ಶಿಕ್ಷಣದ ವ್ಯವಸ್ಥೆಯನ್ನು ಪುನರ್ರಚಿಸುವ ಸಲುವಾಗಿ 4 ವರ್ಷಗಳ ಪದವಿ ಕೋರ್ಸನ್ನು ಶಿಫಾರಸ್ಸು ಮಾಡಿದೆ. ಇದು ಸೆಮಿಸ್ಟರ್ ಪದ್ಧತಿಯನ್ನು ಅಳವಡಿಕೊಳ್ಳಲು ಬಯಸಿದೆ. ಲಿಬರಲ್ ಆರ್ಟ್ಸ್ ಮಾದರಿಯಲ್ಲಿ ಮೇಜರ್ ಮತ್ತು ಮೈನರ್ ಎಂದು ವಿಂಗಡಿಸಿದೆ. ಇಲ್ಲಿ ನಿರ್ಗಮನ-ಪ್ರವೇಶ (ಎಕ್ಸಿಟ್ – ಎಂಟ್ರಿ) ನೀತಿಯನ್ನು ಪ್ರಸ್ತಾಪಿಸಿದೆ.
- ಇದರ ಅನುಸಾರ ಮೊದಲ ವರ್ಷ ಕೋರ್ಸ್ ಮುಗಿಸಿದರೆ ‘ಪ್ರಮಾಣ ಪತ್ರ’ ಕೊಡಲಾಗುವುದು, 2 ವರ್ಷಗಳ ಕೋರ್ಸ್ ಮುಗಿಸಿದರೆ ‘ಡಿಪ್ಲೊಮ ಪ್ರಮಾಣ ಪತ್ರ’ ಕೊಡಲಾಗುವುದು. 3 ವರ್ಷಗಳ ಕೋರ್ಸ್ ಮುಗಿಸಿದರೆ ‘ಪದವಿ ಪ್ರಮಾಣ ಪತ್ರ’ವನ್ನು ನಾಲ್ಕು ವರ್ಷಗಳ ಕೋರ್ಸ್ ಮುಗಿಸಿದರೆ ‘ಆನರ್ಸ್ ಪದವಿ ಪ್ರಮಾಣ ಪತ್ರ’ ನೀಡಲಾಗುವುದು. ಶಿಕ್ಷಣವನ್ನು ಮಧ್ಯದಲ್ಲಿ ಮೊಟಕುಗೊಳಿಸಿ ಡ್ರಾಪ್ ಆದ ವಿದ್ಯಾಥಿಗಳು ‘ನಿರ್ಗಮನ-ಪ್ರವೇಶ’ ಸೂತ್ರದ ಅನುಸಾರ ವರ್ಷ, ಎರಡು ವರ್ಷದ ನಂತರ ಬಂದು ವ್ಯಾಸಂಗ ಮುಂದುವರೆಸಬಹುದು. ಆದರೆ ಗರಿಷ್ಠ ಎರಡು ಬಾರಿ ಮಾತ್ರ ಈ ನಿರ್ಗಮನ-ಪ್ರವೇಶಕ್ಕೆ ಅವಕಾಶವಿದೆ. ಮತ್ತು ಪ್ರತಿ ವರ್ಷವೂ ವಿದ್ಯಾರ್ಥಿಯ ಖಾತೆಗೆ ಕ್ರೆಡಿಟ್ ಅಂಕಗಳನ್ನು ಕೊಡಲಾಗುತ್ತದೆ.
- ನಾಲ್ಕು ವರ್ಷದ ‘ಪದವಿ ಪ್ರಮಾಣ ಪತ್ರ (ಅನರ್ಸ್)’ ಪಡೆದವರು ಸೂಕ್ತ ಗ್ರೇಡ್ ಮತ್ತು ಸಂಶೋದನೆ ವಿಷಯದೊಂದಿಗೆ ‘ಪಿಎಚ್ಡಿ ಪ್ರೋಗ್ರಾಮ್’ಗೆ ಅಥವಾ ಎರಡು ಸೆಮಿಸ್ಟರ್ನ ‘ಸ್ನಾತಕೋತ್ತರ ವ್ಯಾಸಂಗ’ಕ್ಕೂ ಸೇರಿಕೊಳ್ಳಬಹುದು.
- ಇದಕ್ಕೆ ಪರ್ಯಾಯವಾಗಿ 5 ವರ್ಷಗಳ ‘ಸಂಯೋಜಿತ ಮಾಸ್ಟರ್ಸ್ ಕೋರ್ಸ್’ ಸಹ ಇರುತ್ತದೆ. ಇಲ್ಲಿ ಮೂರು ಮತ್ತು ನಾಲ್ಕು ವರ್ಷಗಳ ನಂತರ ‘ನಿರ್ಗಮನ-ಪ್ರವೇಶ’ ಸೂತ್ರವಿರುತ್ತದೆ.
- ಇದಕ್ಕೆ ಪರ್ಯಾಯವಾಗಿ 5 ವರ್ಷಗಳ ‘ಸಂಯೋಜಿತ ಡಾಕ್ಟರ್ಸ್ ಕೋರ್ಸ್’ ಸಹ ಇರುತ್ತದೆ. ಇಲ್ಲಿ ನಾಲ್ಕು ಮತ್ತು ಐದು ವರ್ಷಗಳ ನಂತರ ‘ನಿರ್ಗಮನ-ಪ್ರವೇಶ’ ಸೂತ್ರವಿರುತ್ತದೆ.
- ಬಹುಶಿಸ್ತೀಯ/ಅಂತರ ಶಿಸ್ತೀಯ ಪದವಿ ಕೋರ್ಸ್ಗಳಿರುತ್ತದೆ. ಪದವಿ ಕೋರ್ಸ್ಗಳನ್ನು – ಭಾಷೆಗಳು, ಬುನಾದಿ ಕೋರ್ಸ್ಗಳು, ಕೌಶಲ್ಯ ಅಭಿವೃದ್ದಿ/ವೃತ್ತಿಪರ ಕೋರ್ಸ್ಗಳು, ಪರಿಚಯಾತ್ಮಕ ಕೋರ್ಸ್ಗಳು, ಮೇಜರ್ ವಿಭಾಗದ ಮೂಲ ವಿಷಯಗಳು, ಮೈನರ್ ವಿಭಾಗದ ವಿಷಯಗಳು, ಮೇಜರ್ ವಿಭಾಗದ ಆಯ್ಕೆಯ ವಿಷಯಗಳು ಎಂದು ವಿಂಗಡಿಸಲಾಗಿದೆ.
- ಮೇಜರ್ ವಿಭಾಗದ ಮೂಲ ವಿಷಯಗಳನ್ನು ನಾಲ್ಕು ವರ್ಷ ಕಡ್ಡಾಯವಾಗಿ ಕಲಿಯಬೇಕು. ಮೈನರ್ ವಿಭಾಗದ ವಿಷಯಗಳು ಮತ್ತು ಮೇಜರ್ ವಿಭಾಗದ ಆಯ್ಕೆಯ ವಿಷಯಗಳನ್ನು, ಕೌಶಲ್ಯ ಅಭಿವೃದ್ದಿ/ವೃತ್ತಿಪರ ಕೋರ್ಸ್ಗಳನ್ನು, ಭಾಷೆಯನ್ನು ಎರಡು ವರ್ಷ ಕಲಿಯಬೇಕು.
- ಉದಾಹರಣೆಗೆ ನಾಲ್ಕು ವರ್ಷಗಳ ಕೋರ್ಸ್ನಲ್ಲಿ ವಿಜ್ಞಾನವನ್ನು ಮೇಜರ್ ಮೂಲ ವಿಷಯ ಆಯ್ಕೆ ಮಾಡಿಕೊಂಡರೆ ಅದಕ್ಕೆ ಸಂಬಂದಿಸಿದ ಪಠ್ಯಕ್ರಮವನ್ನು ನಾಲ್ಕು ವರ್ಷ ವ್ಯಾಸಂಗ ಮಾಡಬೇಕು. ಇದರ ಜೊತೆಗೆ ನಮ್ಮ ಆಸಕ್ತಿಯ ಸಮಾಜ ವಿಜ್ಞಾನ, ಇತಿಹಾಸ, ಸಂಗೀತ, ರಂಗಶಿಕ್ಷಣ, ಚಿತ್ರಕಲೆ, ಇತ್ಯಾದಿ ವಿಷಯಗಳಲ್ಲಿ ಯಾವುದಾದರೂ ಒಂದನ್ನು ಆಯ್ಕೆಯ ವಿಷಯ ಆಗಿ ವ್ಯಾಸಂಗ ಮಾಡಬೇಕು. ಜೊತೆಗೆ ಎರಡು ವರ್ಷ ಭಾಷೆಯನ್ನು, ಕೌಶಲ್ಯ ಅಭಿವೃದ್ದಿ/ವೃತ್ತಿಪರ ಕೋರ್ಸ್ಗಳನ್ನು ವ್ಯಾಸಂಗ ಮಾಡಬೇಕು.
ಸಿ.ಬಿ.ಸಿ.ಎಸ್ ಮಾದರಿಯ ಸಾಧಕಗಳು
ಈ ಸಿ.ಬಿ.ಸಿ.ಎಸ್ ಮಾದರಿ ಪಠ್ಯಕ್ರಮವನ್ನು ‘ಬೋಧನೆ ಆದಾರಿತ’ ಪ್ರಸ್ತುತ ಶಿಕ್ಷಣ ಪದ್ದತಿಯಿಂದ ‘ಕಲಿಕೆ ಆಧಾರಿತ’ ಶಿಕ್ಷಣ ಪದ್ದತಿಗೆ ಹೊರಳಿಕೊಳ್ಳುವುದು ಎಂದು ಬಣ್ಣಿಸಲಾಗುತ್ತದೆ. ಮೇಲ್ನೋಟಕ್ಕೆ ಕಾಣುವಂತೆ ಇದು ನಿಜ. ಸಿ.ಬಿ.ಸಿ.ಎಸ್ ಮಾದರಿಯಲ್ಲಿ ವಿದ್ಯಾರ್ಥಿಗಳಿಗೆ ಪಠ್ಯಗಳ, ವಿಷಯಗಳ ಆಯ್ಕೆಯಲ್ಲಿ ಸ್ವಾತಂತ್ರ್ಯವಿರುತ್ತದೆ. ಇಲ್ಲಿ ಮೇಲಿನಿಂದ ಹೇರಲ್ಪಡುವುದಿಲ್ಲ. ಮುಖ್ಯವಾಗಿ ಮುಂದಿನ ವರ್ಷಗಳಲ್ಲಿ ಉದ್ಯೋಗ ಮಾರುಕಟ್ಟೆಯು ಬದಲಾಗಲಿದೆ. ಆಯ್ಕೆಯ ಮಾನದಂಡಗಳು, ಉದ್ಯೋಗಗಳ ಬೇಡಿಕೆಗಳ ಸ್ವರೂಪವೂ ಸಹ ಬದಲಾಗಲಿದೆ. ಅಂದರೆ ವಿಜ್ಞಾನ ಅಥವಾ ಭಾಷೆ ವಿಷಯದಲ್ಲಿ ಸ್ನಾತಕ್ಕೋತ್ತರ ಪದವಿ ಪಡೆದು ಉದ್ಯೋಗ ಅರಸುವುದು ಅರ್ಥಹೀನ ಎನಿಸಿಕೊಳ್ಳಲಿದೆ. ಬದಲಿಗೆ ಈ ಮೂಲ ವಿಷಯದ ಜೊತೆಗೆ ಸಂಗೀತ, ಕೌಶಲ್ಯ, ಸಿನಿಮಾ ಸಂಕಲನ ಇತ್ಯಾದಿ ವಿಷಯಗಳಲ್ಲಿ ಸರ್ಟಿಫಿಕೇಟ್ ಪಡೆದುಕೊಂಡಿದ್ದರೆ ಉದ್ಯೋಗ ದೊರಕುವ ಸಾಧ್ಯತೆಗಳು ಇರುತ್ತವೆ ಎನ್ನುವ ವಾದವೂ ಇದೆ. ಇದನ್ನು ತಳ್ಳಿ ಹಾಕಲು ಬರುವುದಿಲ್ಲ. ಜೊತೆಗೆ ವಿದ್ಯಾರ್ಥಿಗಳಿಗೆ ಮೂಲ ವಿಷಯದ ಜೊತೆಗೆ ವೈವಿಧ್ಯ ವಿಷಯಗಳ ವ್ಯಾಸಂಗವೂ ಆತನ/ಅವಳ ವ್ಯಕ್ತಿತ್ವ ವಿಕಸನಕ್ಕೂ ಸಹಕಾರಿಯಾಗುತ್ತದೆ ಎನ್ನುವ ಅಂಶವೂ ಸಹ ನಿಜ. ಒಟ್ಟಾರೆಯಾಗಿ ಕಲಿಕೆಯ ಅವಕಾಶಗಳನ್ನು ಹೆಚ್ಚಿಸುತ್ತದೆ ಎನ್ನುವುದನ್ನು ಅಲ್ಲಗೆಳೆಯಲಾಗುವುದಿಲ್ಲ.
ಇದನ್ನು ಓದಿ: ನೂತನ ಶಿಕ್ಷಣ ನೀತಿ 2020: ಸದಾಶಯಗಳು ಮತ್ತು ಹುನ್ನಾರಗಳು
ಆದರೆ ಇದರಲ್ಲಿಯೂ ಹಲವು ಲೋಪದೋಷಗಳಿವೆ. ಉದಾಹರಣೆಗೆ ಇಲ್ಲಿ ಎಲೆಕ್ಟಿವ್(ಆಯ್ಕೆಯ) ವಿಷಯ ಆರಿಸಿಕೊಂಡ ವಿದ್ಯಾರ್ಥಿ ಅದರಲ್ಲಿ ಫೇಲಾದರೆ ಆ ವಿಷಯದಲ್ಲಿ ಮರಳಿ ಪೂರಕ ಪರೀಕ್ಷೆ ಬರೆಯಬೇಕೆಂದರೆ ಆತ/ಆಕೆ ಆರಿಸಿಕೊಂಡ ವಿಷಯದಲ್ಲಿ ಜ್ಯೂನಿಯರ್ಗಳು ಕಲಿಯುತ್ತಿರಬೇಕು. ಒಂದುವೇಳೆ ಆ ವಿಷಯಕ್ಕೆ ವಿದ್ಯಾರ್ಥಿಗಳಿಲ್ಲದೇ ಹೋದರೆ ಪೂರಕ ಪರೀಕ್ಷೆ ಬರೆಯಲು ಸಾಧ್ಯವಿಲ್ಲ. ಆ ವಿಷಯಕ್ಕೆ ಜ್ಯೂನಿಯರ್ ವಿದ್ಯಾರ್ಥಿಗಳನ್ನು ಕಾಯತ್ತಿರಬೇಕಾಗುತ್ತದೆ. ಇಂತಹ ಅನೇಕ ಮಿತಿಗಳನ್ನು ಸರಿಪಡಿಸುವವರಾರು ಎನ್ನುವ ಪ್ರಶ್ನೆಗೆ ಸಚಿವರ ಬಳಿ ಉತ್ತರವಿಲ್ಲ.
ಸಿ.ಬಿ.ಸಿ.ಎಸ್ ಮಾದರಿಯ ಬಾಧಕಗಳು
- ಅಸಮಾನತೆ, ಶ್ರೇಣೀಕೃತ ಜಾತಿ-ವರ್ಗ ವ್ಯವಸ್ಥೆಯಿರುವ ಭಾರತದಂತಹ ದೇಶದಲ್ಲಿ ಇಂದಿಗೂ ಸಮಾನ ಶಿಕ್ಷಣ ವ್ಯವಸ್ಥೆ ಇಲ್ಲ. ಸಾರ್ವಜನಿಕ ಶಿಕ್ಷಣವು ತನ್ನ ಆಸ್ತಿತ್ವವನ್ನು ಕಳೆದುಕೊಂಡು ಸಂಪೂರ್ಣ ಖಾಸಗೀಕರಣದ, ಬಂಡವಾಳಶಾಹಿ ಶಿಕ್ಷಣ ವ್ಯವಸ್ಥೆ ಪ್ರಭಾವಶಾಲಿಯಾಗಿ ಬೆಳೆಯುತ್ತಿದೆ.
- ಕೆಜಿಯಿಂದ ಪಿಜಿವರೆಗಿನ ಉಚಿತ, ಗುಣಮಟ್ಟದ ಕಡ್ಡಾಯ ಶಿಕ್ಷಣದ ಆಶಯಗಳು ಸಂಪೂರ್ಣವಾಗಿ ನಾಶಗೊಂಡಿವೆ.
- ಪರಿಚ್ಛೇದ 15(4) ಅನುಸಾರ ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳು ಮತ್ತು ಪರಿಶಿಷ್ಟ ಜಾತಿ/ಪಂಗಡಗಳಿಗೆ ಸಬಲೀಕರಣಕ್ಕೆ ಅಗತ್ಯವಾದ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲು ಪ್ರಭುತ್ವಕ್ಕೆ ಯಾವುದೇ ನಿರ್ಬಂಧಗಳಿಲ್ಲ. ಪರಿಚ್ಛೇದ 21ಎ, 45ರ ಅನುಸಾರ 0-14 ಉಚಿತ ಗುಣಮಟ್ಟದ ಕಡ್ಡಾಯ ಶಿಕ್ಷಣ ಕೊಡಬೇಕು. ಆದರೆ ಸಂವಿಧಾನದ ನೀತಿಸಂಹಿತೆಗಳನ್ನು ಉಲ್ಲಂಘಿಸಲಾಗಿದೆ ಮತ್ತು ಶಿಕ್ಷಣವು ಸಂಪೂರ್ಣವಾಗಿ ಖಾಸಗೀಕರಣಗೊಳ್ಳುತ್ತಿದೆ.
- ಶಿಕ್ಷಣ ನೀತಿಯು 54 ಪರಿಚ್ಛೇದಗಳನ್ನೊಳಗೊಂಡ ‘ಮಕ್ಕಳ ಹಕ್ಕಿಗಾಗಿ ವಿಶ್ವಸಂಸ್ಥೆಯ ಸಮಾವೇಶ’ (UNCRC)ದ ನೀತಿಗಳಿಗೆ ವಿರುದ್ದವಾಗಿದೆ. ಮಕ್ಕಳು ತಮ್ಮ ಹಕ್ಕನ್ನು ಸಂಪೂರ್ಣವಾಗಿ ಅನುಭವಿಸುವಂತೆ ಸರಕಾರ ಮತ್ತು ಪೋಷಕರು ಎಲ್ಲ ಬಗೆಯ ಕಾರ್ಯವಿಧಾನಗಳನ್ನು ಜಾರಿಗೊಳಿಸಬೇಕು ಎಂಬುದು ಅದರ ನೀತಿಯಾಗಿದೆ. ಅದರ ಪರಿಚ್ಛೇದ 28ರ ಅನುಸಾರ ಪ್ರತಿ ಮಗುವಿಗೂ ಶಿಕ್ಷಣ ಪಡೆಯುವ ಹಕ್ಕಿದೆ. ಪರಿಚ್ಛೇದ 3ರ ಅನುಸಾರ ಮಕ್ಕಳ ಹಿತಾಸಕ್ತಿಗೆ ಮೊದಲ ಆದ್ಯತೆ ಕೊಡಬೇಕು. ಪರಿಚ್ಛೇದ 12ರ ಅನುಸಾರ ತಮಗೆ ಪರಿಣಾಮ ಬೀರುವ ವಿಷಯಗಳಲ್ಲಿ ಮಕ್ಕಳ ಅಭಿಪ್ರಾಯ, ದೃಷ್ಟಿಕೋನವನ್ನು ಪರಿಗಣಿಸಬೇಕು. ಆದರೆ ಸರಕಾರದ ಶಿಕ್ಷಣದಲ್ಲಿ ಖಾಸಗೀಕರಣದ, ವ್ಯಾಪಾರೀಕರಣದ ಧೋರಣೆಯು UNCRC ನೀತಿಯ ಉಲ್ಲಂಘನೆಯಾಗಿದೆ.
- ಇಲ್ಲಿ ಅವೈಜ್ಞಾನಿಕ ವ್ಯಾಸಂಗಕ್ರಮವಿದೆ.
- ಕುಟುಂಬದ ಬಡತನದ ಕಾರಣಕ್ಕೆ, ಲಿಂಗ ತಾರತಮ್ಯದ ಕಾರಣಕ್ಕೆ, ಜಾತಿ, ಮತಧರ್ಮ ಕಾರಣಕ್ಕೆ, ಪೋಷಕರ ನಿರಾಸಕ್ತಿಯ ಕಾರಣದಿಂದ (ಗ್ರಾಮೀಣ ಭಾಗಗಳಲ್ಲಿ ಇದು ಹೆಚ್ಚು), ದುಬಾರಿ ಶುಲ್ಕದ ಕಾರಣದಿಂದ, ಮೂಲಭೂತ ಸೌಕರ್ಯಗಳ ಕೊರತೆಯ ಕಾರಣದಿಂದ ಮಕ್ಕಳು ಶಾಲೆಯಿಂದ ಹೊರಗುಳಿಯುತ್ತಾರೆ ಅಥವಾ dropout ಆಗುತ್ತಾರೆ. ಅಲ್ಲದೆ ತರಗತಿಯೊಳಗಿನ ಜಾತಿ, ಮತಧರ್ಮ, ವರ್ಗ ತಾರತಮ್ಯದ ಕಾರಣಕ್ಕೆ ಮಕ್ಕಳು ಶಾಲೆಯಿಂದ ಹೊರಗುಳಿಯುತ್ತಾರೆ.
ಇದನ್ನು ಓದಿ: ಸಿಬಿಸಿಎಸ್ ಪದ್ದತಿ ಕೈ ಬಿಡಲು ಸಾಹಿತಿಗಳ ಆಗ್ರಹ
- ಮುಖ್ಯವಾಗಿ 5 ರಿಂದ 6ನೇ ತರಗತಿಗೆ 7 ರಿಂದ 8ನೇ ತರಗತಿಗೆ ಮತ್ತು 9 ರಿಂದ 10ನೇ ತರಗತಿಗೆ ಪ್ರವೇಶಿಸುವ ಸಂಕ್ರಮಣ ಹಂತಗಳಲ್ಲಿನ ಗೊಂದಲಗಳು, ಶೈಕ್ಷಣಿಕ ಬಿಕ್ಕಟ್ಟುಗಳ ಕಾರಣಕ್ಕೆ ಶಾಲೆಯಿಂದ ಹೊರಗುಳಿಯುತ್ತಾರೆ.
- ಗುಣಮಟ್ಟ ಬೋಧನೆಯ, ಕಲಿಕೆಯ ಕೊರತೆಯ, ಶಿಕ್ಷಕರ ಕೊರತೆ, ಏಕೋಪಾಧ್ಯಾಯ ಶಾಲೆಗಳಿಂದ, ಅವೈಜ್ಞಾನಿಕ ಪಠ್ಯಪುಸ್ತಕಗಳ, ಪಠ್ಯಪುಸ್ತಕಗಳ ಕೊರತೆ, ಮೂಲಭೂತ ಸೌಕರ್ಯಗಳ ಕೊರತೆ, ಶಿಕ್ಷಕರ ಬೇಜವಾಬ್ದಾರಿ, ಅಪೌಷ್ಟಿಕತೆ, ಕುಟುಂಬದ ಪ್ರತಿಕೂಲ ಪರಿಸ್ಥಿತಿಗಳು ಇತ್ಯಾದಿಗಳ ಕಾರಣಕ್ಕೆ ಮಕ್ಕಳು ಫೇಲ್ ಆಗುತ್ತಾರೆ.
- ಶೇಕಡಾ 66 ಪ್ರಮಾಣದ ಜನಸಂಖ್ಯೆ ಹಳ್ಳಿಗಳಲ್ಲಿ ವಾಸಿಸುತ್ತಾರೆ. 80 ಕೋಟಿ ಜನಸಂಖ್ಯೆ ಬಡತನ ಮತ್ತು ಹಸಿವಿನಿಂದ ಬಾಧಿತರಾಗಿದ್ದಾರೆ. ಪ್ರಾಥಮಿಕ ಶಿಕ್ಷಣದಲ್ಲಿ ಶೇಕಡಾ 90ರಷ್ಟಿರುವ ದಾಖಲಾತಿಯು ಪದವಿ ಹಂತಕ್ಕೆ ಬರುವಷ್ಟರಲ್ಲಿ ಶೇಕಡಾ 56ಕ್ಕೆ ಕುಸಿಯುತ್ತದೆ, ಉನ್ನತ ಶಿಕ್ಷಣಕ್ಕೆ ತಲಪುವಷ್ಟರಲ್ಲಿ ಶೇಕಡಾ 26.7 ಪ್ರಮಾಣಕ್ಕೆ ಕುಸಿಯುತ್ತದೆ.
- ಮೇಲಿನ ಕಾರಣಗಳಿಂದಾಗಿ ಉನ್ನತ ಶಿಕ್ಷಣದಲ್ಲಿ ಶೇಕಡಾ 14.8 ಪ್ರಮಾಣದ ಪರಿಶಿಷ್ಟ ಜಾತಿ, ಶೇಕಡಾ 7.1 ಪ್ರಮಾಣದ ಪರಿಶಿಷ್ಟ ಪಂಗಡದ, ಶೇಕಡಾ 3.5 ಪ್ರಮಾಣದ ಮುಸ್ಲಿಂ ಸಮುದಾಯ, ಶೇಕಡಾ 36 ಪ್ರಮಾಣದ ಹಿಂದುಳಿದ ವರ್ಗದ ವಿದ್ಯಾರ್ಥಿಗಳು ದಾಖಲಾಗಿದ್ದಾರೆ.
- ಸರಕಾರಿ ಕಾಲೇಜುಗಳಲ್ಲಿ ಮೂಲಭೂತ ಸೌಕರ್ಯಗಳಿಲ್ಲ ಮತ್ತು ಪದವಿ ಕಾಲೇಜುಗಳಲ್ಲಿ, ವಿಶ್ವವಿದ್ಯಾಲಯಗಳಲ್ಲಿ ಶಿಕ್ಷಕರ ಕೊರತೆ ಇದೆ. ಕಳೆದ ನಾಲ್ಕು ವರ್ಷಗಳಿಂದ ಪದವಿ ಕಾಲೇಜುಗಳಿಗೆ ಶಿಕ್ಷಕರ ನೇಮಕಾತಿಯಾಗಿಲ್ಲ. ಬಹುತೇಕ ಕಾಲೇಜುಗಳಲ್ಲಿ ಮುಕ್ಕಾಲು ಭಾಗ ಅತಿಥಿ ಶಿಕ್ಷಕರಿದ್ದಾರೆ. ಅವರಿಗೆ ಉದ್ಯೋಗ ಭದ್ರತೆಯಿಲ್ಲ. ನ್ಯಾಯಯುತವಾದ ವೇತನವಿಲ್ಲ.
- ಕಲೆ-ವಾಣಿಜ್ಯ-ವಿಜ್ಞಾನ ಎನ್ನುವ ಸಾಂಪ್ರದಾಯಿಕ ಕಾಲೇಜುಗಳಲ್ಲಿ ಬಹುಶಿಸ್ತೀಯ, ಅಂತರಶಿಸ್ತೀಯ ಕೋರ್ಸ್ಗಳಿಗೆ ಅಗತ್ಯವಾದ ಶಿಕ್ಷಕರ ಕೊರತೆಯಿದೆ. ಕಲಾ ಕಾಲೇಜಿನಲ್ಲಿ ವಾಣಿಜ್ಯ, ವಿಜ್ಞಾನ, ಸಮಾಜಶಾಸ್ತ್ರ, ಸಂಗೀತ, ರಂಗಭೂಮಿ ಇತ್ಯಾದಿ ಶಿಕ್ಷಕರು ಇರುವುದಿಲ್ಲ. ಇದೇ ರೀತಿ ವಾಣಿಜ್ಯ, ವಿಜ್ಞಾನ ಕಾಲೇಜುಗಳಿಗೂ ಅನ್ವಯಿಸುತ್ತದೆ. ಸಿ.ಬಿ.ಸಿ.ಎಸ್ ಪಠ್ಯಕ್ರಮ ಜಾರಿಗೊಂಡರೆ ಈ ಸರಕಾರಿ ಕಾಲೇಜುಗಳಲ್ಲಿ ಬಹುಶಿಸ್ತೀಯ/ಅಂತರಶಿಸ್ತೀಯ ಕೋರ್ಸ್ಗಳಿಗೆ ಅಗತ್ಯವಾದ ಶಿಕ್ಷಕರಿಲ್ಲ ಎಂದು ಕಾಲೇಜುಗಳೇ ಮುಚ್ಚಿಹೋಗುವ ಅಪಾಯವಿದೆ.
- ಇದು ಮತ್ತೊಂದೆಡೆ ಖಾಸಗಿ ವಿಶ್ವವಿದ್ಯಾಲಯಗಳು ಮಾತ್ರ ಉಳಿದುಕೊಳ್ಳುವ ಸಾಧ್ಯತೆಗಳಿವೆ. ಅಲ್ಲಿ ನಾಲ್ಕು ವರ್ಷಗಳ ಈ ‘ಲಿಬರಲ್ ಆರ್ಟ್ಸ್’ ಕೋರ್ಸ್ಗಳಿಗೆ 7-10 ಲಕ್ಷ ಪ್ಯಾಕೇಜ್ ಇದೆ. ಬಡಕುಟುಂಬದ ಮಕ್ಕಳು ಈ ದುಬಾರಿ ಶುಲ್ಕ ಭರಿಸುವ ಸಾಧ್ಯತೆಗಳೇ ಇಲ್ಲ. ಆರ್ಥಿಕ ಮುಗ್ಗಟ್ಟಿನಿಂದಾಗಿ ಅವರು ಶಿಕ್ಷಣದಿಂದ ವಂಚಿತರಾಗುತ್ತಾರೆ.
- ಈ ಸಿ.ಬಿ.ಸಿ.ಎಸ್ ಪಠ್ಯಕ್ರಮವೆಂದರೆ ಅದು ‘ಕೆಫೆಟೇರಿಯಾ’ ಇದ್ದಂತೆ. ವಿದ್ಯಾರ್ಥಿಗಳು ತಮಗೆ ಬೇಕಾದ ಕೋರ್ಸ್ಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ದೀಪಂಕರ್ ಬಸು ಅವರು ’ಬಹುಶಃ ಶಿಕ್ಷಣ ಸಂಸ್ಥೆಗಳು ಅಂಗಡಿಗಳಂತೆಯೂ, ವಿದ್ಯಾರ್ಥಿಗಳು ಗ್ರಾಹಕರಂತೆಯೂ ರೂಪಿಸುವಲ್ಲಿ ಇದು ಯಶಸ್ವಿಯಾಗಿದೆ’ ಎಂದು ವ್ಯಂಗ್ಯವಾಡುತ್ತಾರೆ. ಇಲ್ಲಿ ಮುಕ್ತ ಮಾರುಕಟ್ಟೆ ಎಲ್ಲವನ್ನೂ ನಿಯಂತ್ರಿಸುತ್ತದೆ. ಕೆಫೆಟೇರಿಯಾದಲ್ಲಿ ಹಣವಿದ್ದವನು ಮಾತ್ರ ವಸ್ತುಗಳನ್ನು ಕೊಳ್ಳಲು ಸಾಧ್ಯ. ಹಾಗೆಯೇ ಸಿ.ಬಿ.ಸಿ.ಎಸ್ ಪಠ್ಯಕ್ರಮದ ವ್ಯವಸ್ಥೆಯಲ್ಲಿ ಹಣವುಳ್ಳವರೇ ತಮಗೆ ಬೇಕಾದ ಪದವಿಗಳನ್ನು ಕೊಳ್ಳುತ್ತಾರೆ.
- ಇಂದು ಭಾರತದಲ್ಲಿ ಶೇಕಡಾ 51 ಪ್ರಮಾಣದಲ್ಲಿ ಖಾಸಗಿ ವಿಶ್ವವಿದ್ಯಾಲಯಗಳು, ಶೇಕಡಾ 49 ಪ್ರಮಾಣದಲ್ಲಿ ಸಾರ್ವಜನಿಕ ವಿಶ್ವವಿದ್ಯಾಲಯಗಳಿವೆ. ಇವುಗಳಲ್ಲಿ ಶೇಕಡಾ 10 ಪ್ರಮಾಣದ ವಿಶ್ವವಿದ್ಯಾಲಯಗಳು ಮಾತ್ರ ಗುಣಮಟ್ಟ ಕಾಪಾಡಿಕೊಂಡು ಬಂದಿವೆ, ಉಳಿದ ಶೇಕಡಾ 90 ಪ್ರಮಾಣದ ವಿಶ್ವವಿದ್ಯಾಲಯಗಳಲ್ಲಿ ಕಳಪೆ ಗುಣಮಟ್ಟವಿದೆ.
- ಆದರೆ ಮೇಲೆ ವಿವರಿಸಿದ ಅವ್ಯವಸ್ಥೆಯನ್ನು ಆಮೂಲಾಗ್ರವಾಗಿ ಸುಧಾರಿಸುವ ಕಡೆಗೆ ಸರಕಾರಕ್ಕೆ ಆಸಕ್ತಿಯಿಲ್ಲ. ವಂಚಿತ ಸಮುದಾಯಗಳು ಎಲ್ಲಾ ಹಂತಗಳಲ್ಲಿ ಶಿಕ್ಷಣ ಪಡೆದುಕೊಳ್ಳುವಂತಹ ವ್ಯವಸ್ಥೆಯನ್ನು ಸ್ಥಾಪಿಸದೆ ನೇರವಾಗಿ ಈಗಿರುವ ಕಳಪೆ ಶಿಕ್ಷಣ ವ್ಯವಸ್ಥೆಯಲ್ಲಿ ಸಿ.ಬಿ.ಸಿ.ಎಸ್ ಪಠ್ಯಕ್ರಮ ಆಧಾರಿತ ನಾಲ್ಕು ವರ್ಷಗಳ ಶಿಕ್ಷಣ ನೀತಿಯನ್ನು ‘ನಿರ್ಗಮನ-ಪ್ರವೇಶ’ ಮಾದರಿಯನ್ನು ಅನುಸರಿಸಿದರೆ ಅದು ಅನಾಹುತಕ್ಕೆ ಎಡೆ ಮಾಡಿಕೊಡುತ್ತದೆ. ಬಡಕುಟುಂಬಗಳ, ಅಂಚಿನಲ್ಲಿರುವ ಸಮುದಾಯಗಳ ವಿದ್ಯಾರ್ಥಿಗಳು ಕುಟುಂಬ ನಿರ್ವಹಣೆಗಾಗಿ ಉದ್ಯೋಗ ದೊರಕುತ್ತದೆ ಎನ್ನುವ ಒಂದೇ ಕಾರಣಕ್ಕೆ ಒಂದು ವರ್ಷದ ‘ಪ್ರಮಾಣ ಪತ್ರ’ ಎರಡು ವರ್ಷದ ‘ಡಿಪ್ಲೋಮಾ ಪ್ರಮಾಣಪತ್ರ’ ಪಡೆದುಕೊಂಡು ವ್ಯಾಸಂಗವನ್ನು ಮಧ್ಯದಲ್ಲಿ ಮೊಟಕುಗೊಳಿಸಿ ಡ್ರಾಪ್ ಆಗುತ್ತಾರೆ ಮತ್ತು ಮರಳಿ ಬಂದು ಪದವಿ ಕೋರ್ಸನ್ನು ಮುಗಿಸುವುದಿಲ್ಲ. ಅಂದರೆ ಸಾಮರ್ಥ್ಯವಿದ್ದರೂ ಅವರು ಪದವೀಧರರಾಗುವುದಿಲ್ಲ. ವಿಜ್ಞಾನಿಗಳು, ಪ್ರೊಫೆಸರ್, ಉಪಕುಲಪತಿಗಳು ಆಗುವುದಿಲ್ಲ. ಬದಲಿಗೆ ನವ-ಉದಾರವಾದಿ ಉತ್ಪಾದನಾ-ಸೇವಾ ಉದ್ಯಮಗಳ ಕಡಿಮೆ ಕೂಲಿ ಮತ್ತು ಕೌಶಲ್ಯಗಳ ಅಭದ್ರ ಉದ್ಯೋಗಗಳಲ್ಲಿ ಗುಲಾಮರಾಗುತ್ತಾರೆ. ಕಡೆಗೂ ಉಳ್ಳವರು ಮಾತ್ರ ಪದವಿಧರರಾಗುತ್ತಾರೆ. ಇದು ಕಟುಸತ್ಯ.
- ಭಾರತದಲ್ಲಿ ಕೈಗಾರೀಕರಣವು ಹಿನ್ನಡೆ ಹೊಂದುತ್ತಿದೆ. ಇಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಪ್ರಗತಿ ಸಾಧಿಸುತ್ತಿಲ್ಲ. ಮತ್ತು ಈ ಉದ್ಯಮಗಳಲ್ಲಿ ಕೆಳಸ್ತರದ ಹುದ್ದೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರ ಅವಶ್ಯಕತೆಯಿದೆ. ಮೇಲಿನ ಸಿಬಿಎಸ್ ಮಾದರಿಯು ಈ ಉದ್ಯಮಗಳಿಗೆ “ಈ ಜೀತದಾಳುಗಳನ್ನು” ಯಶಸ್ವಿಯಾಗಿ ಪೂರೈಸುತ್ತದೆ.
- ‘ಎನ್.ಇ.ಪಿ-2020’ ರೂಪಿಸಿದವರಿಗೆ ಈ ಸಮಾಜೋ-ಆರ್ಥಿಕ ಬಿಕ್ಕಟ್ಟು ಅರ್ಥವಾಗಿಲ್ಲ ಎಂದಲ್ಲ. ಕಡೆಗೂ ಉಳಿದುಕೊಳ್ಳುವ ಪ್ರಶ್ನೆಯೆಂದರೆ ‘ಯಾವ ಕಾರಣಕ್ಕಾಗಿ, ಯಾವ ಬೆಲೆ ತೆತ್ತು ಈ ಬದಲಾವಣೆಗಳನ್ನು ಶಿಫಾರಸ್ಸು ಮಾಡುತ್ತಿದ್ದಾರೆ? ಈಗಿರುವ ಶಿಕ್ಷಣ ವ್ಯವಸ್ಥೆಯನ್ನು ಮತ್ತಷ್ಟು ಹದಗೆಡಿಸುವ ಈ ನಿರ್ಧಾರದ ಹಿಂದೆ ಯಾವ ಹುನ್ನಾರವಿದೆ?’. ಇದು ಈಗಿರುವ ಇದ್ದ ಬದ್ದ ಸಾಮಾಜಿಕ ನ್ಯಾಯವನ್ನೂ, ಕೆಳ ವರ್ಗಗಳ ಜನರಿಗೆ ಉನ್ನತ ಶಿಕ್ಷಣಕ್ಕೆ ಅವಕಾಶವಿರುವ ಅರೆಬರೆ ಸಮಾನ ವ್ಯವಸ್ಥೆಯನ್ನೂ ನಾಶ ಮಾಡಿ, ಪದವಿ ಶಿಕ್ಷಣವನ್ನು ಪೂರ್ಣವಾಗಿ ಖಾಸಗೀಕರಿಸಿ, ಕೆಲವೇ ದುಬಾರಿ, ‘ಗುಣಮಟ್ಟದ’ ಕಾಲೇಜು/ವಿ.ವಿಗಳಲ್ಲಿ ಕೇಂದ್ರೀಕರಿಸುವ ಹುನ್ನಾರದಂತೆ ಕಾಣುತ್ತದೆ. ಇದರ ಫಲವಾಗಿ ಕಾಲೇಜು ಶಿಕ್ಷಣ ವ್ಯವಸ್ಥೆ ಉತ್ತಮಗೊಳ್ಳುವ ಬದಲು ಬೆಂಕಿಯಿಂದ ಬಾಣಲೆಗೆ ಬೀಳುವ ಸಾಧ್ಯತೆಯೇ ಹೆಚ್ಚು.