ಬೆಂಗಳೂರು: ತಮ್ಮ ಸೇವೆ ಕಾಯಂ ಮಾಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪೌರ ಕಾರ್ಮಿಕರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರ ಇಂದು(ಜುಲೈ 4) ನಾಲ್ಕನೇ ದಿನಕ್ಕೆ ಮುಂದುವರೆದಿದೆ. ಜುಲೈ 1ರಿಂದ ತಮ್ಮೆಲ್ಲ ಕೆಲಸಗಳನ್ನು ಸ್ಥಗಿತಗೊಳಿಸಿರುವ ಕಾರ್ಮಿಕರು ರಾಜ್ಯ ಸರ್ಕಾರ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸುವವರೆಗೂ ಮುಷ್ಕರ ವಾಪಸ್ಸು ಪಡೆಯುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.
ರಾಜ್ಯದಲ್ಲಿ ಸುಮಾರು 54,512 ಗುತ್ತಿಗೆ ಪೌರ ಕಾರ್ಮಿಕರಿದ್ದು, ಈ ಪೈಕಿ 10,775 ಕಾರ್ಮಿಕರನ್ನು ಮಾತ್ರ ಕಾಯಂಗೊಳಿಸಲಾಗಿದೆ. ಉಳಿದ ಕಾರ್ಮಿಕರ ಕಾಯಂಗೊಳಿಸಬೇಕೆಂದು ಮುಷ್ಕರ ಹಮ್ಮಿಕೊಳ್ಳಲಾಗಿದೆ. ರಾಜ್ಯ ಸರ್ಕಾರ ಲಿಖಿತ ಭರವಸೆ ನೀಡಲೇಬೇಕು, ಇಲ್ಲವಾದಲ್ಲಿ ಮುಷ್ಕರ ಮುಂದುವರೆಯುತ್ತದೆ ಎಂದು ಕಾರ್ಮಿಕರು ತಿಳಿಸಿದ್ದಾರೆ.
ಪೌರಕಾರ್ಮಿಕರು ಅತ್ಯಂತ ಕಡಿಮೆ ಸಂಬಳದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ಬದುಕು ಇನ್ನೂ ಹಸನಾಗಿಲ್ಲ. ಸಫಾಯಿ ಕರ್ಮಾಚಾರಿ, ಸ್ವೀಪರ್ ಸೇರಿದಂತೆ ಪೌರಕಾರ್ಮಿಕರಿಗೆ ಮಾಸಿಕ ಸುಮಾರು 14 ಸಾವಿರ ರೂ. ಅಲ್ಪವೇತನ ನೀಡಲಾಗುತ್ತಿದೆ. ಇದರಿಂದ ಮೂಲ ಅಗತ್ಯಗಳನ್ನು ಪೂರೈಸಿಕೊಳ್ಳುವುದೇ ದುಸ್ತರವಾಗಿದೆ.
ಉದ್ಯಾನವನ, ಸ್ಮಶಾನ, ಘನ ತ್ಯಾಜ್ಯ ಘಟಕ, ಯುಜಿಡಿ ನೀರು ಸಂಸ್ಕರಣಾ ಘಟಕದ ಕಾರ್ಮಿಕರನ್ನು ನೀರು ಸರಬರಾಜು ನೌಕರರನ್ನು ಒಂದೇ ಬಾರಿಗೆ ಕಾಯಂಗೊಳಸಬೇಕು. ನೇರ ಪಾವತಿಯಡಿ 60 ವರ್ಷಗಳವರೆಗೂ ಕರ್ತವ್ಯ ನಿರ್ವಹಿಸಿ ನಿವೃತ್ತಿಯಾಗುತ್ತಾರೆ. ಸೇವೆಯಲ್ಲಿರುವಾಗ ಮರಣ ಹೊಂದಿದಾಗ ಸೇವೆಗೆ ತಕ್ಕ ಸೌಲಭ್ಯ ಸಿಗದೇ ಅವರನ್ನು ಅವಲಂಬಿತರು ಬೀದಿಗೆ ಬೀಳುತ್ತಿದ್ದಾರೆ. ಸೇವೆ ಸಲ್ಲಿಸಿ ನಿವೃತ್ತಿಯಾದರೆ ಸ್ವಚ್ಛತಾ, ಪೌರಕಾರ್ಮಿಕರು ಯಾವ ನಿವೃತ್ತಿ ಸೌಕರ್ಯಗಳಿಲ್ಲದೆ ಬರಿಗೈಯಲ್ಲಿ ಹೋಗುವಂತಹ ಪರಿಸ್ಥಿತಿ ಇದೆ.
ಬೆಂಗಳೂರಿನಲ್ಲಿಯೂ 18 ಸಾವಿರ ಪೌರಕಾರ್ಮಿಕರಲ್ಲಿ ಶೇ.70 ರಷ್ಟು ಕಾರ್ಮಿಕರು ಸ್ವಾತಂತ್ರ್ಯ ಉದ್ಯಾನವನದಲ್ಲಿ ಹಮ್ಮಿಕೊಂಡಿರುವ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ. ಪ್ರತಿಭಟನಾ ಸ್ಥಳಕ್ಕೆ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್(ಸಿಐಟಿಯು) ಸಂಘಟನೆ ಮುಖಂಡರು ಭಾಗವಹಿಸಿ ಮುಷ್ಕರಕ್ಕೆ ಬೆಂಬಲ ಸೂಚಿಸಿದರು.
ಪ್ರತಿಭಟನಾ ನಿರತ ಪೌರ ಕಾರ್ಮಿಕರನ್ನು ಉದ್ದೇಶಿಸಿ, ಸಿಐಟಿಯು ಅಖಿಲ ಭಾರತ ಅಧ್ಯಕ್ಷೆ ಡಾ.ಕೆ. ಹೇಮಲತಾ ಮತ್ತು ಸಿಐಟಿಯು ರಾಜ್ಯ ಅಧ್ಯಕ್ಷೆ ಎಸ್ ವರಲಕ್ಷ್ಮಿ ಮಾತನಾಡಿದರು. ಹೋರಾಟ ಬೆಂಬಲಿಸಿ ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸುಂದರಂ , ರಾಜ್ಯ ಕಾರ್ಯದರ್ಶಿ ಮಾಲಿನಿ ಮೇಸ್ತಾ, ಹೆಚ್ ಎಸ್ ಸುನಂದಾ, ರಾಜ್ಯ ಉಪಾಧ್ಯಕ್ಷರಾದ ಹರೀಶ್ ನಾಯಕ, ರಾಜಣ್ಣ, ಶೇಖರ್, ಬೆಂಗಳೂರು ಸಿಐಟಿಯು ಜಿಲ್ಲಾ ಮುಖಂಡರು ಭಾಗವಹಿಸಿ ಬೆಂಬಲ ಸೂಚಿಸಿದರು.